Friday, 22nd November 2024

ಉಗ್ರರೊಂದಿಗೆ ನಂಟು: ನಾಲ್ವರು ಸರ್ಕಾರಿ ನೌಕರರ ವಜಾ

ಶ್ರೀನಗರ: ಉಗ್ರರೊಂದಿಗೆ ನಂಟು ಹೊಂದಿದ್ದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಆಡಳಿತ ಮಂಡಳಿಯು ವೈದ್ಯರು, ಪೊಲೀಸರು ಸೇರಿ ನಾಲ್ವರು ಸರ್ಕಾರಿ ನೌಕರರನ್ನು ವಜಾಗೊಳಿಸಿದೆ.
ಈ ನಾಲ್ವರು ಸರ್ಕಾರಿ ನೌಕರರು ಉಗ್ರಗಾಮಿ ಸಂಘಟನೆಗಳಿಗೆ ಹಣಕಾಸು ಸಂಗ್ರಹಿಸಿರುವುದಲ್ಲದೆ ಅವರ ಸಿದ್ಧಾಂತವನ್ನು ಪ್ರಚಾರ ಮಾಡಿದ್ದಾರೆಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂವಿಧಾನದ 11ನೇ ವಿಧಿಯ ಪ್ರಕಾರ ಶ್ರೀನಗರದ ಎಸ್ಎಂಎಚ್ಎಸ್ ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕ (ವೈದ್ಯ ಕೀಯ), ನಿಸಾರ್-ಉಲ್-ಹಸನ್, ಕಾನ್ಸ್ಟೇಬಲ್ ಅಬ್ದುಲ್ ಮಜೀದ್ ಭಟ್, ಉನ್ನತ ಶಿಕ್ಷಣ ಇಲಾಖೆಯಲ್ಲಿ ಲ್ಯಾಬೋರೇಟರಿ ಬೇರರ್ ಅಬ್ದುಲ್ ಸಲಾಂ ರಾಥರ್ ಮತ್ತು ಶಿಕ್ಷಣ ಇಲಾಖೆಯ ಶಿಕ್ಷಕ ಫಾರೂಕ್ ಅಹ್ಮದ್ ಮಿರ್ ಅವರನ್ನು ವಜಾಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆಗಳೊಂದಿಗೆ ಕೆಲಸ ಮಾಡುವುದು, ಉಗ್ರಗಾಮಿಗಳಿಗೆ ಲಾಜಿಸ್ಟಿಕ್ಸ್ ಒದಗಿಸುವುದು, ಉಗ್ರಗಾಮಿ ಸಿದ್ಧಾಂತ ವನ್ನು ಪ್ರಚಾರ ಮಾಡುವುದು, ಉಗ್ರಗಾಮಿತ್ವಕ್ಕೆ ಹಣಕಾಸು ಸಂಗ್ರಹಿಸುವುದು ಮತ್ತು ಪ್ರತ್ಯೇಕತಾವಾದಿ ಕಾರ್ಯಸೂಚಿ ಹೆಚ್ಚಿಸುವುದು ಸೇರಿದಂತೆ ಹಲವು ಆರೋಪಗಳ ಕಾರಣ ಅವರನ್ನು ಸರ್ಕಾರಿ ಸೇವೆಗಳಿಂದ ವಜಾ ಮಾಡಲಾಗಿದೆ.