ತುಮಕೂರು: ಜಗಳ ಬಿಡಿಸಲು ಬಂದ ಪೊಲೀಸರ ಜೀಪಿನೊಂದಿಗೆ ಕಿಲಾಡಿಯೊಬ್ಬ ಪರಾರಿಯಾಗಿ ಕೊನೆಗೆ ಪೊಲೀಸರ ಅತಿಥಿಯಾಗಿರುವ ಘಟನೆ ನಡೆದಿದೆ.
ಜಿಲ್ಲೆಯ ಗುಬ್ಬಿ ತಾಲೂಕಿನ, ಸಿ.ಎಸ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಾರಾನಹಳ್ಳಿಯಲ್ಲಿ ಘಟನೆ ಸಂಭವಿಸಿದ್ದು, ಮುನಿಯ ಎಂಬಾತ ಪೊಲೀಸರ 112 ವಾಹನದೊಂದಿಗೆ ಪರಾರಿಯಾಗಿದ್ದ ಕಿಲಾಡಿ.
ಮುನಿಯ ಮತ್ತು ಆತನ ಸಹೋದರನ ನಡುವೆ ಜಗಳ ನಡೆಯುತ್ತಿತ್ತು. ಆಗ ಮುನಿಯನ ಸಹೋದರ 112 ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಸ್ಥಳಕ್ಕೆ ಬರುವಂತೆ ಮನವಿ ಮಾಡಿದ್ದಾನೆ. ಸ್ಥಳಕ್ಕೆ ಬಂದ 112 ಪೊಲೀಸರು ಜಗಳ ಬಿಡಿಸಿ ಮುನಿಯನಿಗೆ ತಿಳಿ ಹೇಳಿದ್ದಾರೆ.
ಇದರಿಂದಾಗಿ ಕುಪಿತಗೊಂಡ ಮುನಿಯ ಪೊಲೀಸರು ಬಂದಿದ್ದ 112 ವಾಹನದ ಹಿಂಬದಿಯ ಗಾಜು ಹೊಡೆದು ಹಾಕಿದ್ದಾನೆ. ಪೊಲೀಸರು ಕಾರಿನಿಂದ ಇಳಿದು ಗಾಜು ಪರಿಶೀಲನೆ ಮಾಡುತ್ತಿದ್ದಾಗ. ಏಕಾಏಕಿ ಕಾರು ಹತ್ತಿದ ಮುನಿಯ ಕಾರನ್ನು ಚಲಾಯಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ಅನಿರೀಕ್ಷಿತ ಘಟನೆಯಿಂದ ಕಕ್ಕಾಬಿಕ್ಕಿಯಾದ ಪೊಲೀಸರು ಇಡೀ ರಾತ್ರಿ ಮುನಿಯ ಹಾಗೂ 112 ವಾಹನವನ್ನು ಹುಡುಕಿದ್ದಾರೆ. ಕೊನೆಗೆ ಸತತ ಮೂರ್ನಾಲ್ಕು ಗಂಟೆಗಳ ಹುಡುಕಾಟದ ಬಳಿಕ ತಾಲೂಕಿನ ಹೆಬ್ಬರು ಬಳಿ ವಾಹನ ಸಮೇತವಾಗಿ ಮುನಿಯ ಪತ್ತೆಯಾಗಿದ್ದಾನೆ. ಕೊನೆಗೂ ಮುನಿಯ ನನ್ನು ಪತ್ತೆ ಮಾಡಿದ ಪೊಲೀಸರು 112 ವಾಹನವನ್ನು ಸುಪರ್ದಿಗೆ ಪಡೆದು, ಮುನಿಯನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.