Wednesday, 11th December 2024

ಎಚ್ಚರ! ವಾಟ್ಸಾಪ್ ಚಾಟ್ ಸುರಕ್ಷಿತವಲ್ಲ !

ದೇಶ ಹಾಗೂ ರಾಜ್ಯದ ಹಲವಾರು ಸೆಲೆಬ್ರಿಟಿಗಳ ಹೆಸರು ಡ್ರಗ್ಸ್‌ ಹಗರಣದಲ್ಲಿ ಕೇಳಿಬರುತ್ತಿದೆ. ಇವರು ನಡೆಸಿರುವರೆನ್ನಲಾದ ವಾಟ್‌ಸ್‌ ಆಪ್ ಚಾಟ್‌ಗಳು ಎಲ್ಲೆಡೆ ಹರಿದಾಡಿವೆ. ಈ ಪ್ರಕರಣದ ವಿಷಯ ಹೇಗಾದರೂ ಇರಲಿ. ಆದರೆ ವಾಟ್ಸ್‌ ಆಪ್ ಚಾಟ್‌ಗಳ ವಿವರ ಬಹಿರಂಗಗೊಳ್ಳುವುದು ಎಂದರೇನು. ಹಾಗಾದರೆ ಯಾರ ಚಾಟ್ ಗಳನ್ನು ಯಾರು ಬೇಕಾದರೂ ನೋಡಬಹುದೆ? ಅವು
ರಹಸ್ಯ ಮತ್ತು ಸುರಕ್ಷಿತವಲ್ಲವೆ? ಏಕೆಂದರೆ ಇವತ್ತು ವಾಟ್ಸ್ಆಪ್, ನಮ್ಮ ಬದುಕಿನ ಅವಿಭಾಜ್ಯ ಅಂಗ. ನಾವು ಏನೇನೋ
ವೈಯಕ್ತಿಕ, ರಹಸ್ಯ ವಿಷಯಗಳನ್ನು, ವಿವರಗಳನ್ನು ವಾಟ್ಸ್ ಆಪ್‌ನಲ್ಲಿ ಷೇರ್ ಮಾಡುತ್ತೇವೆ.

ಅವು ಸೇಫಾ? ಎಂಡ್ ಟು ಎಂಡ್ ಎನ್ಕ್ರಿಪ್ಷನ್ ಇರುವುದರಿಂದ ಸಂಪೂರ್ಣ ಸುರಕ್ಷಿತ ಎಂಬ ವಾಟ್ಸ್ ಆಪ್ ಮಾತನ್ನು ನಂಬ ಬಹುದೆ? ನಮ್ಮನ್ನು ಕಾಡುವ ಈ ರೀತಿಯ ಪ್ರಶ್ನೆಗಳು ಮತ್ತುಸಂದೇಹಗಳಿಗೆ ಇಲ್ಲಿವೆ ಉತ್ತರಗಳು…

ವಾಟ್ಸ್‌‌ಆ್ಯಪ್ ಕಂಪನಿಗೆ ನಮ್ಮ ಚಾಟ್‌ಗಳು ನೋಡಲು ಸಿಗುತ್ತವೆಯೇ?

ಇಲ್ಲ. 2016ರಿಂದ ಈಚೆಗೆ ವಾಟ್ಸ್‌‌ಆ್ಯಪ್ ಕಂಪನಿ ಎಂಡ್ -ಟು-ಎಂಡ್ ಎನ್‌ಕ್ರಿಪ್ಷನ್ ವ್ಯವಸ್ಥೆ ಅಳವಡಿಸಿಕೊಂಡಿದೆ. ವಾಟ್ಸ್‌ ‌ಆ್ಯಪ್‌ನ ಎಫ್‌ಎಕ್ಯು (ಪದೇ ಪದೆ ಕೇಳುವ ಪ್ರಶ್ನೆಗಳು) ಹೇಳುವ ಪ್ರಕಾರ, ಎಂಡ್-ಟು-ಎಂಡ್ ಎನ್‌ಕ್ರಿಪ್ಷನ್‌ನಿಂದಾಗಿ ನೀವು ಮತ್ತು ನಿಮ್ಮ ಜೊತೆಗೆ ಚಾಟ್ ಮಾಡುತ್ತಿರುವವರು ಮಾತ್ರ ನಿಮ್ಮ ನಡುವೆ ವಿನಿಮಯವಾದ ಸಂದೇಶಗಳನ್ನು ನೋಡಬಹುದು. ಬೇರೆ ಯಾರಿಗೂ ಅದು ಸಾಧ್ಯವಿಲ್ಲ. ವಾಟ್ಆ್ಯಪ್ ಕಂಪನಿ ಕೂಡ ನೋಡಲು ಸಾಧ್ಯವಿಲ್ಲ. ಜಗತ್ತಿನಾದ್ಯಂತ ಸರ್ಕಾರಗಳಿಗೆ ತಲೆನೋವಾಗಿರುವುದೇ ಈ ವಿಷಯ. ತನಿಖೆಯ ಸಂದರ್ಭದಲ್ಲಿ ಎಂಡ್-ಟು-ಎಂಡ್ ಎನ್‌ಕ್ರಿಪ್ಷನ್ ನಿಂದಾಗಿ ತನಿಖಾ ಸಂಸ್ಥೆಗಳಿಗೆ ಆರೋಪಿ ಹಾಗೂ ಸಂತ್ರಸ್ತರ ನಡುವೆ ವಿನಿಮಯವಾದ ವಾಟ್ಸ್‌‌ಆ್ಯಪ್ ಸಂದೇಶಗಳು ಸಿಗುವುದಿಲ್ಲ. ಆದರೆ, ವಾಟ್ಸ್‌ಆ್ಯಪ್ ಕಂಪನಿ ತಾನು ತನಿಖಾ ಸಂಸ್ಥೆಗಳಿಗೆ ಕಾನೂನುಬದ್ಧವಾಗಿ ಅವುಗಳು ಕೋರಿದ ಮಾಹಿತಿಗೆ ಅನುಗುಣವಾಗಿ ಪ್ರತಿಕ್ರಿಯಿಸುತ್ತೇನೆ ಎಂದು
ಹೇಳಿಕೊಳ್ಳುತ್ತದೆ. ಆದರೆ, ವಾಟ್ಸ್‌‌ಆ್ಯಪ್ ಕಂಪನಿ ಯಾವ ರೀತಿಯ ಮಾಹಿತಿಗಳನ್ನು ತನಿಖಾ ಸಂಸ್ಥೆಗೆ ನೀಡುತ್ತದೆ  ಎಂಬುದು ಸ್ಪಷ್ಟವಿಲ್ಲ. ವರದಿಗಳ ಪ್ರಕಾರ ವಾಟ್ಸ್‌‌ಆ್ಯಪ್ ಕಂಪನಿ ಮೊಬೈಲ್ ನಂಬರ್, ಐಪಿ ಅಡ್ರೆಸ್, ಸ್ಥಳ ಇತ್ಯಾದಿ ಮೆಟಾಡೇಟಾ ಮಾಹಿತಿ ಯನ್ನು ತನಿಖಾ ಸಂಸ್ಥೆಗಳಿಗೆ ನೀಡುತ್ತದೆ.

ಬಳಕೆದಾರರ ನಡುವೆ ವಿನಿಮಯವಾಗುವ ಸಂದೇಶಗಳು ಗೌಪ್ಯವಾಗಿರುವಂತೆ ವಾಟ್ಸ್ ಅಪನ್ನುಹೇಗೆ ವಿನ್ಯಾಸಗೊಳಿಸಲಾಗಿದೆ?

ಓಪನ್ ವಿಸ್ಪರ್ ಸಿಸ್ಟಮ್‌ನವರು ಅಭಿವೃದ್ಧಿಪಡಿಸಿರುವ ಎನ್‌ಕ್ರಿಪ್ಷನ್ ತಂತ್ರಜ್ಞಾನವನ್ನು ವಾಟ್ಸ್‌‌ಆ್ಯಪ್ ಕಂಪನಿ ಬಳಸುತ್ತದೆ. ಸಿಗ್ನಲ್ ಆ್ಯಪ್‌ನಲ್ಲಿ ಬಳಸುವ ತಂತ್ರಜ್ಞಾನವೂ ಇದೇ ಆಗಿದೆ. ಇದರಲ್ಲಿ ಓಪನ್ ಸೋರ್ಸ್ ಫ್ರೇಮ್‌ವರ್ಕ್ ಬಳಸಿ ಬಳಕೆದಾರರ ಖಾಸಗಿತನವನ್ನು ರಕ್ಷಿಸಲಾಗುತ್ತದೆ. ವಿಷಲ್ ಬ್ಲೋವರ್ ಎಡ್ವರ್ಡ್ ಸ್ನೋಡೆನ್ ನಾನು ಪ್ರತಿದಿನ ಸಿಗ್ನಲ್ ಬಳಸುತ್ತೇನೆ
ಎಂದು ಹೇಳಿದ್ದನ್ನು ನೀವು ಕೇಳಿರಬಹುದು. ಈ ಹೇಳಿಕೆ ಸಿಗ್ನಲ್ ಆ್ಯಪ್‌ನ ಹೋಮ್‌ಪೇಜ್‌ನಲ್ಲಿ ಯಾವಾಗಲೂ ಡಿಸ್‌ಪ್ಲೇ ಆಗಿರುತ್ತದೆ. ಬಹಳಷ್ಟು ಖಾಸಗಿ ಮೆಸೇಜಿಂಗ್ ಆ್ಯಪ್‌ಗಳು ಈಗ ಸಿಗ್ನಲ್ ಆ್ಯಪ್‌ನಲ್ಲಿ ಬಳಕೆಯಾದ ತಂತ್ರಜ್ಞಾನವನ್ನೇ ಬಳಸುತ್ತವೆ.

ಈಗಲೂ ಮಾಹಿತಿ ಸೋರಿಕೆಯಾಗಬಹುದೇ?

ಇಬ್ಬರ ನಡುವೆ ನಡೆದ ಸಂದೇಶ ವಿನಿಮಯವನ್ನು ಕದ್ದು ನೋಡಲು ಬಯಸುವ ವ್ಯಕ್ತಿಗೆ ಈ ಸಂದೇಶಗಳು ಶೇಖರಣೆಯಾಗಿರುವ ಉಪಕರಣ ಸಿಕ್ಕರೆ (ಅಂದರೆ ಒಬ್ಬರ ಮೊಬೈಲ್ ಫೋನ್ ಸಿಕ್ಕರೆ) ಎಂಡ್-ಟು-ಎಂಡ್ ಎನ್‌ಕ್ರಿಪ್ಷನ್ ನಿಂದಲೂ ಮಾಹಿತಿ ಸೋರಿಕೆಯಾಗುವುದನ್ನು ತಡೆಯಲು ಸಾಧ್ಯವಿಲ್ಲ. ಸಂದೇಶ ಸ್ವೀಕರಿಸಿದ ವ್ಯಕ್ತಿ ಅದನ್ನು ಇನ್ನೊಬ್ಬರಿಗೆ ಕಳುಹಿಸಿದರೆ ಅಥವಾ ಒಂದು ಗ್ರೂಪ್‌ನಲ್ಲಿರುವ ಒಬ್ಬ ಸದಸ್ಯ ಇನ್ನೊಂದು ಗ್ರೂಪ್‌ಗೆ ಆ ಸಂದೇಶ ಕಳುಹಿಸಿದರೆ ಅಥವಾ ಸಂದೇಶ ವಿನಿಮಯ ಮಾಡಿಕೊಂಡ ವ್ಯಕ್ತಿಗಳ ಉಪಕರಣದಲ್ಲಿ ಬೇರೊಂದು ಅಪ್ಲಿಕೇಶನ್ ಮೂಲಕ ಈ ಸಂದೇಶಗಳನ್ನು ಬೇರೆ ಫಾರ್ಮಾಟ್‌ನಲ್ಲಿ ಶೇಖರಿಸಿಟ್ಟಿದ್ದರೆ ಆಗಲೂ ಎಂಡ್ -ಟು-ಎಂಡ್ ಎನ್‌ಕ್ರಿಪ್ಷನ್‌ನಿಂದ ಪ್ರಯೋಜನವಿಲ್ಲ.

ಸರ್ವರ್ ಯಾರ ಬಳಿ ಇದೆಯೋ ಅವರು ಸಂದೇಶ ಓದಬಹುದೇ?

ಈ ಸಾಧ್ಯತೆಯನ್ನೂ ಎಂಡ್-ಟು-ಎಂಡ್ ಎನ್‌ಕ್ರಿಪ್ಷನ್ ಇನ್ನಿಲ್ಲವಾಗಿಸುತ್ತದೆ. ಜೊತೆಗೆ, ವಾಟ್ಸ್‌‌ಆ್ಯಪ್ ಕಂಪನಿ ತನ್ನ ಬಳಕೆದಾರ ರಿಗೆ ಸಂದೇಶವನ್ನು ಡೆಲಿವರಿ ಮಾಡಿದ ನಂತರ ಅದನ್ನು ತಾನು ಸರ್ವರ್‌ನಲ್ಲಿ ಶೇಖರಿಸಿಡುವುದಿಲ್ಲ ಎಂದು ಹೇಳುತ್ತದೆ. ಮೊದಲು ಇದ್ದ ಎನ್‌ಕ್ರಿಪ್ಷನ್ ವ್ಯವಸ್ಥೆಯಲ್ಲಿ ಸಂಪೂರ್ಣ ಸುರಕ್ಷತೆ ಸಾಧ್ಯವಿರಲಿಲ್ಲ. ಬಳಕೆದಾರ ಮತ್ತು ಸರ್ವರ್ ನಡುವೆ ನಡೆದ ಸಂದೇಶದ ವಿನಿಮಯ ಮಾತ್ರ ಅಲ್ಲಿ ಸುರಕ್ಷಿತವಾಗಿರುತ್ತಿತ್ತು. ಇನ್ನೊಬ್ಬ ವ್ಯಕ್ತಿಗೆ ಕಳುಹಿಸಬೇಕಿರುವ ಸಂದೇಶ ಸರ್ವರ್‌ಗೆ ಬಂದಾ ಕ್ಷಣ ಅದು ಆ ಸಂದೇಶವನ್ನು ಡೀಕ್ರಿಪ್ಟ್‌ ಮಾಡಿ, ನಂತರ ಮತ್ತೆ ಎನ್‌ಕ್ರಿಪ್ಟ್‌ ಮಾಡಿ ಆ ಸಂದೇಶವನ್ನು ಸ್ವೀಕರಿಸಬೇಕಾದ ವ್ಯಕ್ತಿಗೆ ಕಳುಹಿಸುತ್ತಿತ್ತು. ಆದರೆ, ಆ ವ್ಯವಸ್ಥೆಯಲ್ಲಿ ಸರ್ವರ್‌ನ ಮಟ್ಟದಲ್ಲಿ ಸಂದೇಶ ಅಸುರಕ್ಷಿತವಾಗುವ ಸಾಧ್ಯತೆಯಿರುತ್ತಿತ್ತು.

ಈ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ?
ಎಂಡ್-ಟು-ಎಂಡ್ ಎನ್‌ಕ್ರಿಪ್ಷನ್ ವ್ಯವಸ್ಥೆಯ ಹಿಂದಿರುವ ಮೂಲ ತಂತ್ರಜ್ಞಾನವನ್ನು ‘ಡಿಫಿ-ಹೆಲ್‌ಮನ್ ಕೀ ಎಕ್ಸ್‌ಚೇಂಜ್’ ಎಂದು ಕರೆಯುತ್ತಾರೆ. 1976ರಲ್ಲಿ ವೈಟ್‌ಫೀಲ್ಡ್‌ ಡಿಫಿ ಹಾಗೂ ಮಾರ್ಟಿನ್ ಇ.ಹೆಲ್ ಮನ್ ಎಂಬ ತಂತ್ರಜ್ಞರು ‘ನ್ಯೂ ಡೈರೆಕ್ಷನ್ಸ್ ಇನ್ ಕ್ರಿಪ್ಟೋಗ್ರಫಿ’ ಎಂಬ ಪ್ರಬಂಧ ಮಂಡಿಸಿದ್ದರು. ಅದರಲ್ಲಿ, ಅಲ್ಲಿಯವರೆಗಿದ್ದ ಹಳೆಯ ಸಂದೇಶ ವಿನಿಮಯ ವ್ಯವಸ್ಥೆಯಲ್ಲಿ ಹೇಗೆ ಯಾರ ಖಾಸಗಿತನಕ್ಕೂ ಭದ್ರತೆಯಿಲ್ಲ ಎಂಬುದನ್ನು ಹೇಳಿದ್ದರು. ಮುಖ್ಯವಾಗಿ, ದಿನೇದಿನೇ ಅಭಿವೃದ್ಧಿ ಹೊಂದುತ್ತಿರುವ ಡಿಜಿಟಲ್ ಜಗತ್ತಿನಲ್ಲಿ ಹೇಗೆ ಇಲ್ಲಿಯವರೆಗಿರುವ ಸುರಕ್ಷತಾ ವ್ಯವಸ್ಥೆಗಳೆಲ್ಲ ವ್ಯರ್ಥವಾಗುತ್ತವೆ ಎಂಬುದನ್ನು ತೋರಿಸಿದ್ದರು. ಇದಕ್ಕಾಗಿ ಖಾಸಗಿ ಕೊರಿಯರ್ ಅಥವಾ ರಿಜಿಸ್ಟರ್ಡ್ ಅಂಚೆಯಲ್ಲಿ ಮೊದಲೇ ಕೀಲಿಕೈಯನ್ನು ಕಳಿಸಿಕೊಳ್ಳುವ ರೀತಿಯ ಸುರಕ್ಷಿತ ತಂತ್ರಜ್ಞಾನ ಬೇಕೆಂದು ಪ್ರತಿಪಾದಿಸಿದ್ದರು. ಅದೇ ಪ್ರಬಂದಲ್ಲಿ ಅವರು ಅಷ್ಟೇನೂ ಸುರಕ್ಷಿತವಲ್ಲದ ಮಾಧ್ಯಮದಲ್ಲಿ ಇಬ್ಬರು ಸಂವಹನ ನಡೆಸಬೇಕಾದರೆ ಅವರಿಬ್ಬರ ನಡುವೆ ರಹಸ್ಯ ಕೀಲಿಯೊಂದರ ವಿನಿಮಯ ಮಾಡಿಕೊಳ್ಳುವಂತಹ ಸುರಕ್ಷಿತ ವ್ಯವಸ್ಥೆ ಯೊಂದನ್ನು ಕೂಡ ತೋರಿಸಿಕೊಟ್ಟಿದ್ದರು.

ಈ ವಿಧಾನ ಗಣಿತದ ಲೆಕ್ಕಾಚಾರದಲ್ಲಿದೆ. ಸುಲಭಕ್ಕೆ ಜನಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ಆದರೆ, ತಜ್ಞರು ಇದನ್ನು ಅರ್ಥ
ಮಾಡಿಸಲು ಸ್ಥೂಲ ಚಿತ್ರಣವೊಂದನ್ನು ಬಳಸುತ್ತಾರೆ. ಅದು ಬಣ್ಣಗಳ ರೂಪದಲ್ಲಿದೆ. ನೀವು ಇಬ್ಬರು ದೂರದಿಂದ ಪರಸ್ಪರ ಸಂವಹನ ನಡೆಸುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಆ ಸಂವಹನಕ್ಕೂ ಮೊದಲು ನೀವು ನಿರ್ದಿಷ್ಟವಾದ ರಹಸ್ಯ ಬಣ್ಣವೊಂದರ ಹೆಸರನ್ನು ಕೋಡ್ ರೂಪದಲ್ಲಿ ಪರಸ್ಪರರಿಗೆ ಹೇಳಿಕೊಳ್ಳುತ್ತೀರಿ. ಉದಾಹರಣೆಗೆ, ಎ ಮತ್ತು ಬಿ ಎಂಬ ಇಬ್ಬರು ವ್ಯಕ್ತಿಗಳು ಸಂಭಾಷಣೆ ನಡೆಸುತ್ತಿದ್ದಾರೆ. (ಇಂತಹ ಹಲವು ರೂಪದ ಉದಾಹರಣೆಗಳು ಇಂಟರ್ನೆಟ್‌ನಲ್ಲಿವೆ). ಎ ಮತ್ತು ಬಿಗೆ ತಮ್ಮ ಸಂಭಾಷಣೆ ಯಾರಿಗೂ ಕಾಣಿಸದ ರೀತಿಯಲ್ಲಿ ನಡೆಯಬೇಕು.

ಹೀಗಾಗಿ ಅದಕ್ಕೂ ಮೊದಲು ಅವರು ಸಾರ್ವಜನಿಕವಾಗಿ ಒಂದು ಬಣ್ಣದ ಹೆಸರನ್ನು ಹೇಳಿಕೊಳ್ಳುತ್ತಾರೆ. ಅದು ಹಳದಿ ಬಣ್ಣ ಎಂದಿಟ್ಟುಕೊಳ್ಳೋಣ. ನಂತರ ಇಬ್ಬರೂ ತಮ್ಮದೇ ಆದ ಖಾಸಗಿ ಬಣ್ಣವೊಂದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅದನ್ನು ಯಾರಿಗೂ ಹೇಳುವಂತಿಲ್ಲ. ಎ ವ್ಯಕ್ತಿಯು ಕೆಂಪು ಬಣ್ಣವನ್ನೂ, ಬಿ ವ್ಯಕ್ತಿಯು ನೀಲಿ ಬಣ್ಣವನ್ನೂ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದಿಟ್ಟುಕೊಳ್ಳಿ. ನಂತರ ಅವರು ತಮ್ಮ ಖಾಸಗಿ ಬಣ್ಣವನ್ನು ಮೊದಲೇ ಬಹಿರಂಗವಾಗಿ ಹೇಳಿಕೊಂಡಿದ್ದ ಬಣ್ಣದ ಜೊತೆಗೆ
ಮಿಶ್ರಣ ಮಾಡಿ ಇಬ್ಬರಿಗೂ ಕಳಿಸಿಕೊಳ್ಳುತ್ತಾರೆ. ಕದ್ದು ನೋಡುವವರಿಗೆ ಬಹಿರಂಗವಾಗಿ ಹೇಳಿಕೊಂಡಿದ್ದ ಬಣ್ಣ ಯಾವುದೆಂದು ಗೊತ್ತು ಮತ್ತು ಅವರು ಮಿಶ್ರಣಗೊಂಡ ಬಣ್ಣವನ್ನೂ ಪತ್ತೆಹಚ್ಚಬಲ್ಲರು. ಆದರೆ, ಇಲ್ಲಿ ಇನ್ನೂ ಒಂದು ಹೆಜ್ಜೆಯಿದೆ. ಬಿ ಕಳಿಸಿದ ಮಿಶ್ರಣವು (ಒಂದು ರೀತಿಯ ಹಸಿರು) ಎ ಕೈಗೆ ಬಂದಾಗ ಎ ವ್ಯಕ್ತಿಯ ಖಾಸಗಿ ಬಣ್ಣ (ಕೆಂಪು)ದ ಜೊತೆಗೆ ಮಿಶ್ರಣವಾಗುತ್ತದೆ. ಹಾಗೆಯೇ, ಎ ವ್ಯಕ್ತಿಯ ಮಿಶ್ರಣ (ಒಂದು ರೀತಿಯ ಕಿತ್ತಳೆ) ಬಣ್ಣವು ಬಿ ಕೈಗೆ ಹೋದಾಗ ಬಿ ಬಳಿಯಿರುವ ಖಾಸಗಿ ಬಣ್ಣ (ನೀಲಿ)ದ ಜೊತೆಗೆ ಮಿಶ್ರಣವಾಗುತ್ತದೆ. ಈ ಅಂತಿಮ ಹಂತದ ವಿನಿಮಯ ಪ್ರಕ್ರಿಯೆ ಮುಗಿದಾಗ ಇಬ್ಬರ ಕೈಲೂ ಒಂದೇ ರಹಸ್ಯ ಬಣ್ಣವಿರು ತ್ತದೆ! ಇದೇ ಇಬ್ಬರ ನಡುವೆ ವಿನಿಮಯಗೊಂಡ ರಹಸ್ಯ ಬಣ್ಣದ ಕೀಲಿ.

ಇನ್ನೇನಾದರೂ ಅಪಾಯಗಳಿವೆಯೇ?
ಇವೆ. ಉದಾಹರಣೆಗೆ, ಒಬ್ಬನ ಮೊಬೈಲ್ ಫೋನನ್ನೇ ನಿಯಂತ್ರಿಸಲು ಸಾಧ್ಯವಿರುವಂತಹ ಬಗ್‌ಗಳು ಇದ್ದರೆ ಆಗ ಮೊಬೈಲ್ ಫೋನ್‌ನಲ್ಲಿರುವ ಮಾಹಿತಿ ಸುರಕ್ಷಿತವಲ್ಲ. ಉದಾಹರಣೆಗೆ, ಇಸ್ರೇಲ್‌ನ ಎನ್‌ಜಿಒವೊಂದು ವಿಚಕ್ಷಣ ವ್ಯವಸ್ಥೆಯೊಂದನ್ನು ಅಭಿವೃದ್ಧಿಪಡಿಸಿತ್ತು. ಆ ವ್ಯವಸ್ಥೆಯನ್ನು ಬಳಸಿ ಕಳೆದ ವರ್ಷ ಜಗತ್ತಿನಾದ್ಯಂತ ಮಾನವ ಹಕ್ಕುಗಳ ಹೋರಾಟಗಾರರು ಹಾಗೂ
ಭಾರತದ ಪತ್ರಕರ್ತರೂ ಸೇರಿದಂತೆ 1400 ಜನರ ಮಾಹಿತಿಯನ್ನು ಕದಿಯಲಾಗಿದೆ ಎಂದು ವಾಟ್ಸ್‌‌ಆ್ಯಪ್ ಹೇಳಿತ್ತು.