ಗುಬ್ಬಿ: ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸುಸಂಸ್ಕೃತವಂತರನ್ನಾಗಿ ಮಾಡಿ ಎಂದು ಶ್ರೀ ಕ್ಷೇತ್ರ ಕೆಲ್ಲೋಡು ಕನಕ ಗುರು ಪೀಠದ ಈಶ್ವರನಂದಪುರಿ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಚೇಳೂರು ಹೋಬಳಿ ಇರುಕಸಂದ್ರ ಮಜರೆ ತಿಮ್ಮಣ್ಣನ ಪಾಳ್ಯ ಗ್ರಾಮದಲ್ಲಿ ಶ್ರೀರಾಮ ಲಕ್ಷ್ಮಣ ಸೀತಾ ಆಂಜನೇಯ ಸ್ವಾಮಿಯವರ ಸ್ಥಿರ ಮೂರ್ತಿ ಪ್ರತಿಷ್ಠಾಪನಾ, ನೂತನ ದೇವಾಲಯದ ಜೀರ್ಣೋದ್ಧಾರ ವಿಮಾನ ಗೋಪುರ ಕಳಸ ಸ್ಥಾಪನೆ, ಮಹಾ ಕುಂಭಾಭಿಷೇಕ ಮಹೋತ್ಸವದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು ಹಿಂದುಳಿದ ಸಮುದಾಯಗಳು ಭಕ್ತಿಯ ಜೊತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅಪಾರಜ್ಞಾನವನ್ನು ಸಂಪಾದಿಸಬೇಕು. ದುಂದು ವೆಚ್ಚವನ್ನು ಕಡಿಮೆ ಮಾಡಿ ಮಕ್ಕಳನ್ನು ಸಂಸ್ಕೃತವಂತರನ್ನಾಗಿ ಮಾಡಬೇಕೆಂದು ತಿಳಿಸಿದರು.
ಬೆಳ್ಳಾವಿ ಕಾರದ ಮಠದ ಕಾರದವೀರಬಸವ ಸ್ವಾಮಿಜಿ ಮಾತನಾಡಿ ಯುವಜನತೆ ಮೊಬೈಲ್ ಬಳಕೆ ಕಡಿಮೆ ಮಾಡಿ ದುಶ್ಚಟ ದಿಂದ ದೂರವಿದ್ದು ಸ್ವಚ್ಛತೆ ಶಿಸ್ತು ಉತ್ತಮ ಪರಿಸರದಿಂದ ದೇವರನ್ನು ಕಾಣಬೇಕು. ಕ್ಷಣಿಕ ಸುಖಕ್ಕೋಸ್ಕರ ಜೀವನ ಹಾಳು ಮಾಡಿ ಕೊಳ್ಳಬಾರದು. ಆಸ್ತಿ ಅಂತಸ್ತು ಗಳಿಸುವುದರಲ್ಲಿ ಮಗ್ನನಾಗದೆ, ಅನ್ನದಾನ, ಪರಿಸರ, ನೀರು ಸಂರಕ್ಷಣೆ, ಸಾಮಾಜಿಕ ಕಳಕಳಿ ಯೊಂದಿಗೆ ಸತ್ ಪ್ರಜೆಯಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅರ್ಚಕ ಪೂಜಾ ಸಿದ್ದಲಿಂಗಯ್ಯ, ಗ್ರಾ ಪಂ ಅಧ್ಯಕ್ಷ ಐ ಜಿ ಲಿಂಗರಾಜು, ಉಪಾಧ್ಯಕ್ಷೆ ಪಾವನಗಂಗಾ, ಆರ್ ಐ ನಾಗಭೂಷಣ್, ಚೇಳೂರು ಸಬ್ ಇನ್ಸ್ಪೆಕ್ಟರ್ ಜೆ ಆರ್ ನಾಗರಾಜು, ಬೆಸ್ಕಾಂ ಎಸ್ ಓ ವಿಜಯಲಕ್ಷ್ಮಿ, ದಯಾನಂದ್, ಮೋಹನ್ ಕುಮಾರ್, ಗ್ರಾ ಪಂ ಸದಸ್ಯ ದಯಾನಂದ್, ಮಹಾಲಕ್ಷ್ಮಿ ತಿಮ್ಮಪ್ಪ, ಲತಾ ಮೋಹನ್ ಕುಮಾರ್, ಪಿಡಿಒ ಶ್ಯಾಮಲ, ಮುಖಂಡ ರಾದ ಕೃಷ್ಣಪ್ಪ, ನಂಜುಂಡಪ್ಪ ದೊಡ್ಡಯ್ಯ ಚಿಕ್ಕಣ್ಣ, ಶಿವಣ್ಣ, ಹಾಗೂ ಸಿತಾ ರಾಮಾಂಜನೇಯ ಸ್ವಾಮಿ ಭಜನಾ ಮಂಡಳಿಯ ಸರ್ವ ಸದಸ್ಯರು ಹಾಜರಿದ್ದರು.