Saturday, 23rd November 2024

ಕೃಷಿ ಮಸೂದೆ ವಿರೋಧದಲ್ಲಿ ವಿಪಕ್ಷಗಳ ಎಡವಟ್ಟು

ಪ್ರಸ್ತುತ
ಬೈಜಯಂತ್ ಜೇ ಪಾಂಡಾ, ಬಿಜೆಪಿ ಉಪಾಧ್ಯಕ್ಷ, ಮಾಜಿ ಸಂಸದ

ಸತ್ಯಕ್ಕೆ ಬೆನ್ನು ತೋರಿಸುವ ಸಿನಿಕತನ, ಬದಲಾವಣೆಯ ಭೀತಿ ಹಾಗೂ ಅಬ್ಬರದ ಭಾವನಾತ್ಮಕ ಪ್ರತಿಕ್ರಿಯೆಗಳು ಯಾವುದೇ ಹೊಸ ಸುಧಾರಣೆಗೆ ಅವಕಾಶ ನೀಡದಿರಲು ಜನರನ್ನು ಪ್ರಚೋದಿಸಬಹುದು.

ಇಂದು ಆಗುತ್ತಿರುವುದೂ ಅದೇ. ಕೆಲವರು ರೈತರ ಅಭದ್ರತೆಯ ಜೊತೆಗೆ ಆಟವಾಡುತ್ತಿದ್ದರೆ, ಇನ್ನು ಕೆಲವರು ಅವರಲ್ಲಿ ಭಯ ಹುಟ್ಟಿಸಲು ಯತ್ನಿಸುತ್ತಿದ್ದಾರೆ. ಪರಿಣಾಮ, ತಾವೇ ಮೊದಲು ಒಪ್ಪಿಕೊಂಡಿದ್ದನ್ನೂ ಈಗ ವಿರೋಧಿಸುವ ಹಂತಕ್ಕೆ ಅವರು ಬಂದಿದ್ದಾರೆ. ಸಂಕಷ್ಟದಲ್ಲಿರುವ ರೈತರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಇದ್ದ ಹಳೆಯ ವ್ಯವಸ್ಥೆಯನ್ನು ಹಾಗೇ
ಉಳಿಸಿಕೊಂಡು ಹೊಸತೊಂದು ಮಾರ್ಗವನ್ನು ತೋರಿಸುವುದು ಅವರ ಹಿತಾಸಕ್ತಿಗೆ ವಿರುದ್ಧ ಹೇಗಾಗುತ್ತದೆ? ಆದರೂ
ಇದೇ ಭಾವನೆಯನ್ನು ಬಿತ್ತಲು ಕಾಂಗ್ರೆಸ್ ಹಾಗೂ ಕೆಲ ರಾಜಕೀಯ ಪಕ್ಷಗಳು ಯತ್ನಿಸುತ್ತಿವೆ. ತನ್ಮೂಲಕ ರೈತರನ್ನು ಪ್ರತಿಭಟನೆ ನಡೆಸುವಂತೆ ಹಾಗೂ ಇತರ ಪಕ್ಷಗಳೂ ತಮ್ಮ ವಾದವನ್ನು ಒಪ್ಪಿಕೊಳ್ಳುವಂತೆ ಪ್ರಚೋದಿಸುತ್ತಿವೆ.

ಈ ಸಿನಿಕ ತಂತ್ರಗಾರಿಕೆ ಕಳೆದ ಆರು ವರ್ಷಗಳಿಂದ ಕಾಂಗ್ರೆಸ್ ಪಕ್ಷ ಏನು ಮಾಡಿಕೊಂಡು ಬಂದಿದೆಯೋ ಅದರ ಮುಂದುವರಿದ ಭಾಗವಷ್ಟೆ. ಮೋದಿ ಸರಕಾರ ಜಾರಿಗೆ ತಂದಿದ್ದನ್ನೆಲ್ಲ ಕುರುಡಾಗಿ ವಿರೋಧಿಸುವುದು. ಆ ಪಕ್ಷದ ನಾಯಕತ್ವಕ್ಕೆ ಪ್ರಧಾನಿ ಮೋದಿ ವಿರುದ್ಧ ಇರುವ ವೈಯಕ್ತಿಕ ದ್ವೇಷ ಕೂಡ ಇದಕ್ಕೆ ಒಂದು ಕಾರಣ. ಅದರಿಂದ ದೇಶಕ್ಕೆ ಎಷ್ಟೇ ಹಾನಿಯಾದರೂ ಅವರಿಗೆ ಚಿಂತೆಯಿಲ್ಲ. ಗಡಿಯಲ್ಲಿ ನಡೆಯುವ ಭಯೋತ್ಪಾದನೆಯ ವಿರುದ್ಧ ನಮ್ಮ ಸೇನಾ ಪಡೆಗಳು ನಡೆಸುವ ಕಾರ್ಯಾಚರಣೆಯ ವಿಷಯದಲ್ಲೂ ಚೀನಾ ಹಾಗೂ ಪಾಕಿಸ್ತಾನದ ನಿಲುವನ್ನೇ ಈ ರಾಜಕೀಯ ಪಕ್ಷ ಬೆಂಬಲಿಸುತ್ತದೆಯಾದರೆ ದೇಶದೊಳಗಿನ ಸುಧಾರಣಾ ನೀತಿಗಳ ವಿಷಯದಲ್ಲಿ ಇಂತಹ ವಿರೋಧ ನಿರೀಕ್ಷಿತವೇ ಬಿಡಿ.

ಕೃಷಿ ಮಸೂದೆಗಳ ಬಗ್ಗೆೆ ಅಲ್ಪಸ್ವಲ್ಪ ಓದಿಕೊಂಡವರಿಗೆ ಅಥವಾ ತಿಳಿದುಕೊಂಡವರಿಗೂ ಈ ಮಸೂದೆಗಳ ವಾಸ್ತವ ಏನೆಂಬುದು ಗೊತ್ತಿದೆ. ಈಗ ಜಾರಿಗೊಳಿಸುತ್ತಿರುವ ಸುಧಾರಣೆಗಳಿಗಿಂತ ಮುಂಚೆ ದೇಶದ ಕೃಷಿ ನೀತಿಗಳು ಅರ್ಧ ಶತಮಾನಕ್ಕಿಂತ ಹಳೆಯ ದಾಗಿದ್ದವು. ಆಗ ನಮ್ಮ ದೇಶದಲ್ಲಿ ಆಹಾರದ ತೀವ್ರ ಕೊರತೆಯಿತ್ತು. ವಿದೇಶಗಳ ನೆರವಿನೊಂದಿಗೆ ದೇಶಕ್ಕೆ ಆಹಾರ ಸಾಮಗ್ರಿ ಗಳನ್ನು ಆಮದುಮಾಡಿಕೊಂಡು ಇಲ್ಲಿನ ಹೊಟ್ಟೆಗಳನ್ನು ತುಂಬಿಸಬೇಕಿತ್ತು.

ಹಾಗಾಗಿ ರೈತರು ತಮ್ಮ ಬೆಳೆಗಳನ್ನು ಯಾರಿಗೆ ಮಾರಾಟ ಮಾಡಬೇಕು ಎಂಬುದನ್ನೂ ಸರಕಾರದ ನೀತಿಯೇ ನಿರ್ಧರಿಸುತ್ತಿತ್ತು. ಹೀಗಾಗಿ ಕೃಷಿ ಮಾರುಕಟ್ಟೆಯೆಂಬುದು ಖರೀದಿದಾರರ ಪರವಾಗಿದ್ದ ಮಾರುಕಟ್ಟೆಯಾಗಿತ್ತು. ಖರೀದಿದಾರರ ಏಕಸ್ವಾಮ್ಯವಿರುವ ಆ ವ್ಯವಸ್ಥೆಯಿಂದಾಗಿ ಕೃಷಿ ಕ್ಷೇತ್ರದ ಸಮತೋಲನ ತಪ್ಪಿ ಮಧ್ಯವರ್ತಿಗಳು ದಿನೇದಿನೇ ಬೆಳೆಯುತ್ತಾ ಹೋದರು, ರೈತರು
ಸೊರಗುತ್ತಾ ಹೋದರು. ಹೀಗಾಗಿ ದೇಶದ ಆರ್ಥಿಕತೆ ಬೆಳೆದರೂ ಅದಕ್ಕೆ ತಕ್ಕಂತೆ ಕೃಷಿಕರ ಆದಾಯ ಹೆಚ್ಚಲಿಲ್ಲ. ನಮ್ಮ ದೇಶದಲ್ಲಿ ಬೇರೆ ಬೇರೆ ಕ್ಷೇತ್ರಗಳ ಮೇಲೆ ಇದ್ದನಿರ್ಬಂಧಗಳನ್ನು ಬಹಳ ಹಿಂದೆಯೇ ತೆಗೆದುಹಾಕಲಾಗಿದೆ.

ಹೀಗಿರುವಾಗ ಕೃಷಿ ಕ್ಷೇತ್ರಕ್ಕೆ ಮಾತ್ರ ಅಂತಹ ನಿರ್ಬಂಧಗಳನ್ನು ಮುಂದುವರೆಸುವುದು ಸರಿಯೇ? ಇತ್ತೀಚಿನ ವರ್ಷಗಳಲ್ಲಿ ಭಾರತವು ತನ್ನ ಅಗತ್ಯಕ್ಕಿಂತ ಹೆಚ್ಚು ಆಹಾರ ಧಾನ್ಯಗಳನ್ನು ಉತ್ಪಾದಿಸುತ್ತಿದೆ. ವಾಸ್ತವವಾಗಿ ನಮಗೀಗ ಇರುವುದು ದಾಸ್ತಾನು ಸಮಸ್ಯೆ. ಬಹಳ ವರ್ಷಗಳಿಂದ ಎಡಪಂಥೀಯರೊಬ್ಬರನ್ನು ಬಿಟ್ಟು ಇನ್ನೆಲ್ಲರೂ ಕೃಷಿ ಕ್ಷೇತ್ರದಲ್ಲಿ ಈಗ ಮಾಡಿದಂತಹ
ಬದಲಾವಣೆಗಳನ್ನು ಕೇಳುತ್ತಲೇ ಬಂದಿದ್ದರು. ಅಷ್ಟೇ ಅಲ್ಲ, ಇದು ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯ ಭಾಗ ಕೂಡ ಆಗಿತ್ತು.

ಪ್ರಸಿದ್ಧ ಕೃಷಿ ಅರ್ಥಶಾಸ್ತ್ರಜ್ಞ ಅಶೋಕ್ ಗುಲಾಟಿ ಬರೆದಿರುವಂತೆ, ಇತ್ತೀಚೆಗೆ ಜಾರಿಗೊಳಿಸಿರುವ ಮೂರು ತಿದ್ದುಪಡಿ ಶಾಸನಗಳು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ (ಎಪಿಎಂಸಿ) ಏಕಸ್ವಾಮ್ಯವನ್ನು ಕಡಿತಗೊಳಿಸುವ ಮೂಲಕ ರೈತರಿಗೆ ಹೆಚ್ಚಿನ ಆಯ್ಕೆ ಮತ್ತು ಸ್ವಾತಂತ್ರ್ಯ ನೀಡುತ್ತವೆ. ಹೀಗಾಗಿ ರೈತರು ಯಾರಿಗೆ ಬೇಕಾದರೂ ತಮ್ಮ ಉತ್ಪನ್ನಗಳನ್ನು ಮಾರಲು ಸ್ವತಂತ್ರರಾಗುತ್ತಾರೆ. ಅಷ್ಟೇ ಪ್ರಮುಖ ವಿಚಾರವೆಂದರೆ, ರೈತರಿಂದ ಸರ್ಕಾರ ಕನಿಷ್ಠ ಬೆಂಬಲ ಬೆಲೆಯಡಿ ಉತ್ಪನ್ನಗಳನ್ನು ಖರೀದಿಸುವ ಸುರಕ್ಷತಾ ಕವಚ ಹಾಗೇ ಮುಂದುವರೆಯುತ್ತದೆ. ಹೀಗಾಗಿ ಹಳೆಯ ವ್ಯವಸ್ಥೆಯಲ್ಲೇ ಮುಂದುವರೆಯುವವರಿಗೆ ಆ ವ್ಯವಸ್ಥೆ ಯಥಾರೂಪ ದಲ್ಲಿ ಲಭ್ಯವಿರುತ್ತದೆ. ಈ ಎಲ್ಲ ಬದಲಾವಣೆಗಳು ತಕ್ಕಡಿಯನ್ನು ರೈತರ ಪರ ತೂಗುವಂತೆ ಮಾಡುತ್ತವೆ.

ಈ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಆಷಾಢಭೂತಿ ತನವನ್ನು ನಾಚಿಕೆಯಿಲ್ಲದೆ ಪ್ರದರ್ಶಿಸುತ್ತಿದೆ. ತಾನು ಯಾವ  ಸುಧಾರಣೆ ಯನ್ನು ಜಾರಿಗೆ ತರುತ್ತೇನೆ ಎಂದು ಭರವಸೆ ನೀಡಿದ್ದೆನೋ ಆ ಭರವಸೆಗೆ ವಿರುದ್ಧವಾದ ಪರಿಣಾಮಗಳನ್ನು ಈಗಿನ ಸುಧಾರಣೆಗಳು ಉಂಟು ಮಾಡುತ್ತವೆ ಎಂದು ಕಾಂಗ್ರೆಸಿಗರು ಹೇಳುತ್ತಿರುವುದು ಅಪ್ಪಟ ಸುಳ್ಳು. ಹೀಗಾಗಿ ಸಂಸತ್ತಿನಲ್ಲಿ ಅವರು ತರ್ಕಬದ್ಧ ವಾದಗಳನ್ನು ಮಂಡಿಸದೆ ಕೇವಲ ಭಾವನಾತ್ಮಕವಾಗಿ ಭಾಷಣ ಬಿಗಿಯುತ್ತಿದ್ದರು. ಅದಕ್ಕಾಗಿ ಅವರ ತಂತ್ರಗಾರಿಕೆಯೇ ಬದಲಾಯಿತು. ಕನಿಷ್ಠ ಬೆಂಬಲ ಬೆಲೆಯ ವ್ಯವಸ್ಥೆಯನ್ನು ಶಾಸನಬದ್ಧಗೊಳಿಸಬೇಕು ಎಂದು ಕೇಳತೊಡಗಿದರು. ಕನಿಷ್ಠ ಬೆಂಬಲ ಬೆಲೆಯ ವ್ಯವಸ್ಥೆ ಯಾವಾಗಲೂ ಅಸ್ತಿತ್ವದಲ್ಲಿ ಇದ್ದಿದ್ದೇ ಆಡಳಿತಾತ್ಮಕ ಆದೇಶಗಳ ರೂಪದಲ್ಲಿ. ಈಗ ಅದಕ್ಕೆ ಶಾಸನದ
ರೂಪ ನೀಡಬೇಕಂತೆ. ಹಾಗೆ ಮಾಡಿದರೆ ಮಾತ್ರ ಹೊಸ ಖರೀದಿದಾರರೆಲ್ಲ ಕನಿಷ್ಠ ಬೆಂಬಲ ಬೆಲೆಗಿಂತ ಹೆಚ್ಚು ಹಣ ನೀಡಿ ರೈತರ ಉತ್ಪನ್ನಗಳನ್ನು ಖರೀದಿ ಮಾಡುತ್ತಾರಂತೆ.

ಇದೊಂದು ಭಾವನಾತ್ಮಕ ಹಳಹಳಿಕೆಯೇ ಹೊರತು ಇದರ ಹಿಂದೆ ಯಾವುದೇ ತಾರ್ಕಿಕ ಕಾರಣವಿಲ್ಲ. ಪಕ್ಷ ಅಸ್ತಿತ್ವಕ್ಕೆ ಬಂದ ನಂತರ ಬಹುತೇಕ ಅವಧಿಯನ್ನು ದೇಶವನ್ನು ಆಳುವುದರಲ್ಲೇ ಕಳೆದವರಿಗೆ ಇಷ್ಟು ವರ್ಷಗಳ ಕಾಲ ಕನಿಷ್ಠ ಬೆಂಬಲ ಬೆಲೆ ಎಂಬುದು ಆಡಳಿತಾತ್ಮಕ ಆದೇಶದ ಚೌಕಟ್ಟಿನಲ್ಲೇ ಅನೂಚಾನವಾಗಿ ನಡೆದುಕೊಂಡು ಬಂದಿರುವುದು ಗೊತ್ತಿಲ್ಲವೇ? ಆದರೂ ಅದಕ್ಕೀಗ ಶಾಸನದ ರೂಪ ಕೊಡಬೇಕು ಎಂದು ಕೇಳುತ್ತಿರುವುದು ಭಂಡತನವಲ್ಲದೇ ಮತ್ತೇನು. ಕನಿಷ್ಠ ಬೆಂಬಲ ಬೆಲೆಯೆಂಬುದು ಈ ಹಿಂದೆಯೂ ರೈತರಿಗೆ ಸುರಕ್ಷತೆಯ ಬಲೆಯಂತೆ ಇತ್ತು, ಇನ್ನುಮುಂದೆಯೂ ಇರುತ್ತದೆ. ಬೇರೆ ಯಾವುದೇ
ಮಾರ್ಗವಿಲ್ಲದಿದ್ದರೆ ಯಾವಾಗಲೂ ಅವರು ಕನಿಷ್ಠ ಬೆಂಬಲ ಬೆಲೆಗೆ ತಮ್ಮ ಉತ್ಪನ್ನಗಳನ್ನು ಮಾರಲು ಸಾಧ್ಯವಿದೆ.

ಅದನ್ನೇ ಮೊದಲ ಮಾರ್ಗವೆಂಬಂತೆ ಶಾಸನದ ರೂಪದಲ್ಲಿ ಜಾರಿಗೊಳಿಸುವ ಬಯಕೆಯಾಗಲೀ ಉದ್ದೇಶವಾಗಲೀ ಯಾರಿಗೂ ಇರಲಿಲ್ಲ. ಏಕೆಂದರೆ ಹಾಗೆ ಮಾಡಿದರೆ ರೈತರ ಉತ್ಪನ್ನಗಳಿಗೆ ಶಾಶ್ವತವಾಗಿ ಗರಿಷ್ಠ ಬೆಲೆಯ ಮಿತಿ ನಿಗದಿಪಡಿಸಿದಂತಾಗಿಬಿಡುತ್ತದೆ. ಅದಕ್ಕಿಂತ ಹೆಚ್ಚಿನ ಬೆಲೆ ರೈತರಿಗೆ ದೊರಕುವುದೇ ಕಷ್ಟವಾಗುತ್ತದೆ. ಖಾಸಗಿ ಖರೀದಿದಾರರಿಗೂ ರೈತರ ಉತ್ಪನ್ನಗಳನ್ನು ಖರೀದಿಸಲು ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂಬ ಇನ್ನೊೊಂದು ಬೇಡಿಕೆಯನ್ನು ವಿರೋಧ ಪಕ್ಷಗಳು ಮುಂದಿಟ್ಟಿವೆ. ಅದಂತೂ ಅನಾಹುತಕಾರಿ ಬೇಡಿಕೆ. ಹಾಗೆ ಮಾಡಿದರೆ ಹೊಸ ಖರೀದಿದಾರರು ಮಾರುಕಟ್ಟೆಗೆ ಪ್ರವೇಶವನ್ನೇ ಮಾಡುವುದಿಲ್ಲ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಹಾಗೇನಾದರೂ ಮಾಡಿದರೆ, ಕೃಷಿ ಮಾರುಕಟ್ಟೆಯಲ್ಲಿ ಈಗಿರುವ ರಾಜಕೀಯ ಸಂಪರ್ಕದ ಮಧ್ಯವರ್ತಿಗಳ ಪ್ರಭಾವ ಹೀಗೇ ಮುಂದುವರೆಯುತ್ತದೆ.

ಅವರೇ ಖರೀದಿಯ ಮೇಲೆ ಏಕಸ್ವಾಮ್ಯ ಸಾಧಿಸುತ್ತಾರೆ. ಗುಲಾಟಿ ಹೇಳುವಂತೆ, ಸರ್ಕಾರ ಕನಿಷ್ಠ ಬೆಂಬಲ ಬೆಲೆಯಡಿ ಕೃಷ್ಯುತ್ಪನ್ನ ಗಳನ್ನು ಖರೀದಿಸುವುದು ಶೇ.6ರಷ್ಟು ರೈತರಿಂದ ಮಾತ್ರ. ಅದರ ವ್ಯಾಪ್ತಿಯನ್ನು ಎಲ್ಲಾ ರೈತರಿಗೂ ವಿಸ್ತರಿಸುವುದು ಸಾಧ್ಯವೇ ಇಲ್ಲ. ಹೀಗಾಗಿ ಬಹುಕಾಲದಿಂದ ಬಾಕಿಯುಳಿದಿದ್ದ ಈ ಸುಧಾರಣೆಗಳನ್ನು ಜಾರಿಗೆ ತರದೆ ಹೋಗಿದ್ದರೆ ಇನ್ನುಳಿದ ಶೇ.94ರಷ್ಟು ರೈತರನ್ನು ಅಸಮರ್ಪಕ ಮಾರುಕಟ್ಟೆೆಯಲ್ಲೇ ಕೊಳೆಯಲು ಬಿಟ್ಟಂತಾಗುತ್ತಿತ್ತು.

ಪ್ರಧಾನಿಯ ಕುರಿತಾದ ದ್ವೇಷದ ಹೊರತಾಗಿ ಕಾಂಗ್ರೆಸ್ ನಾಯಕತ್ವ ಕೃಷಿ ಸುಧಾರಣೆಗಳಿಗೆ ವಿರೋಧ ವ್ಯಕ್ತಪಡಿಸುತ್ತಿರುವುದರ ಹಿಂದೆ ಇನ್ನೆರಡು ದೋಷಪೂರಿತ ತಂತ್ರಗಾರಿಕೆಗಳಿವೆ. ಅವೆರಡೂ ಅಪ್ಪಟ ಪ್ರೊಪಗ್ಯಾಂಡಾ ಸಿದ್ದಾಂತಗಳು. ಈಗಿನ ಕಾಲಘಟ್ಟದ ವಾಸ್ತವಕ್ಕೆ ಅವು ಯಾವ ರೀತಿಯಲ್ಲೂ ಹೊಂದುವುದಿಲ್ಲ ಎಂಬುದು ಬೇರೆ ವಿಚಾರ. ಮೊದಲನೆಯದು ಏನೆಂದರೆ,  ಪ್ರಧಾನಿ ಯನ್ನು ಸುಧಾರಣೆಗಳ ಹರಿಕಾರ ಅಲ್ಲ ಎಂದು ಬ್ರ‍್ಯಾಂಡ್ ಮಾಡುವುದು. ಇವರು ಕೇವಲ ಮಾತನಾಡುತ್ತಾರೆಯೇ ಹೊರತು ಕೆಲಸ ಮಾಡುವುದಿಲ್ಲ ಎಂದು ಪ್ರಚಾರ ಮಾಡುವುದು. ಕಳೆದ ಆರು ವರ್ಷಗಳ ಆಡಳಿತದ ಮೇಲೆ ಒಂದು ಕ್ಷಣ ಕಣ್ಣು ಹಾಯಿಸಿ ದರೂ ಸಾಕು, ಈ ಪ್ರಯತ್ನ ಎಷ್ಟು ಅರ್ಥಹೀನ ಎಂಬುದು ತಿಳಿಯುತ್ತದೆ. ನೀತಿ ಆಯೋಗದ ಮಾಜಿ ಉಪಾಧ್ಯಕ್ಷ ಅರವಿಂದ್ ಪನಗಾರಿಯಾ ಟ್ವೀಟ್ ಮಾಡಿದಂತೆ, ಪ್ರಧಾನಿ ಸುಧಾರಣೆಗಳ ಪರ ಇರುವ ವ್ಯಕ್ತಿಯಲ್ಲ ಎಂದು ಯಾರಾದರೂ ಯೋಚಿಸಿದ್ದರೆ ಅವರು ಕಳೆದ ಎರಡು ವಾರದಲ್ಲಿ ಉಂಟಾದ ಬದಲಾವಣೆಗಳನ್ನು ನೋಡಿ ಆಶ್ಚರ್ಯಚಕಿತರಾಗಬೇಕು.

ವೈದ್ಯಕೀಯ ಶಿಕ್ಷಣ, ಕೃಷಿ ಹಾಗೂ ಕಾರ್ಮಿಕ ಕಾನೂನುಗಳಲ್ಲಿ ಎರಡು ದಶಕಗಳಿಂದಲೂ ಬಾಕಿಯಿದ್ದ ಸುಧಾರಣೆಗಳು ಈ ಎರಡು ವಾರದಲ್ಲಿ ಉಂಟಾಗಿವೆ. ಇನ್ನು, ಒಂದೇ ಸುಳ್ಳನ್ನು ಪದೇಪದೇ ಹೇಳಿ ಪ್ರಧಾನಿಯ ಜನಪ್ರಿಯತೆಯನ್ನು ಕುಂದಿಸುವ ಕಾಂಗ್ರೆಸ್ ಪಕ್ಷದ ಎರಡನೇ ತಂತ್ರಗಾರಿಕೆ ಯಂತೂ ಯಾವ ರೀತಿಯಲ್ಲೂ ಕೆಲಸಕ್ಕೆ ಬರುವುದಿಲ್ಲ. ಮುಕ್ತ ಮಾಹಿತಿಯ ಈ ಯುಗದಲ್ಲಿ ಯಾವ ಸುಳ್ಳೂ ಬಹಳ ಕಾಲ ಉಳಿಯುವುದಿಲ್ಲ. ಇದಕ್ಕೆ ತಾಜಾ ಉದಾಹರಣೆಯೆಂದರೆ ಹೊಸ ಕನಿಷ್ಠ ಬೆಂಬಲ ಬೆಲೆಯನ್ನು ಕಳೆದ ವಾರವೇ ಕೇಂದ್ರ ಸರ್ಕಾರ ಘೋಷಿಸಿರುವುದು.

ಕನಿಷ್ಠ ಬೆಂಬಲ ಬೆಲೆಯೇ ಇನ್ನುಮುಂದೆ ಇರುವುದಿಲ್ಲ ಎಂದು ಪ್ರಚಾರ ಮಾಡಿದವರಿಗೆ ಹೇಗಾಗಿರಬೇಡ!