Thursday, 12th December 2024

ಮೂರನೇ ಮಹಾಯುದ್ದವಾದರೆ ವಿಶ್ವನಾಶ ಖಾತ್ರಿ

ಚರ್ಚಾ ವೇದಿಕೆ

ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ

ಇಸ್ರೇಲ್-ಹಮಾಸ್ ಯುದ್ಧಭೂಮಿ. ತಾಯಿಯ ಮಡಿಲಲ್ಲಿ ಮಲಗಿದ್ದ ಕೂಸು ತಾಯಿಯ ಜತೆಯಲ್ಲೇ ಹಾಗೇ ಚಿರನಿದ್ರೆಗೆ
ಜಾರಿದೆ. ಬಾಂಬ್ ಬಿದ್ದ ಮನೆಗಳ ಅವಶೇಷಗಳ ಅಡಿಯಿಂದ ಮಕ್ಕಳನ್ನು ಎತ್ತಿ ಓಡುತ್ತಿರುವ, ಭುಜದ ಮೇಲೆ ಕಂದಮ್ಮಗಳ ಕಳೇಬರವನ್ನು ಹೊತ್ತು ಕೂತಿರುವ ತಂದೆ-ತಾಯಂದಿರು ದೃಶ್ಯಗಳು ಮುಖಕ್ಕೆ ರಾಚುತ್ತವೆ.

ವಿಶ್ವಕ್ಕೆ ಇವು ಬೇಕೇ ಅಥವಾ ವಿಶ್ವಶಾಂತಿ ಬೇಕೇ? ಮಕ್ಕಳನ್ನು ಗುರಿಮಾಡಿ ಯುದ್ಧಮಾಡಬಾರದೆಂಬ ನಿಯಮವಿರುವುದು ತಿಳಿದಿಲ್ಲವೇ? ಯುದ್ಧ ಶುರುವಾಗಿ ಸಾಕಷ್ಟು ದಿನ ಗಳಾಗಿದ್ದರೂ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಯುದ್ಧಪೀಡಿತ ಗಾಜಾಪಟ್ಟಿಯಲ್ಲಿ ಮಕ್ಕಳು ವಯಸ್ಕರಾಗುವ ಮುನ್ನವೇ ಅವರ ಬದುಕು ಮುಗಿದುಹೋಗಿದೆ. ಮಾನವ ಜನಾಂಗಕ್ಕೆ ಈ ದುಃಖ-ದುಮ್ಮಾನ ಶೋಭೆ ತರುವುದೇ? ವಿಜ್ಞಾನ ಕಂಡುಹಿಡಿದದ್ದೆಲ್ಲವನ್ನೂ ಉಪಯೋಗಿಸುವುದು ಮೂರ್ಖತನವಾದೀತು.

ವಿಶ್ವಶಾಂತಿಯ ಮಂತ್ರ ಜಪಿಸುತ್ತಿರುವ ರಾಷ್ಟ್ರಗಳು ಅಪಾರ ಅಣ್ವಸಗಳನ್ನು ಹೊಂದಿದ್ದು ಪರಸ್ಪರ ಪೈಪೋಟಿಗಿಳಿದಿವೆ. ಅಮೆರಿಕ ಮತ್ತು ರಷ್ಯಾ ದೇಶಗಳು ತಕ್ಷಣ ಬಳಸಲು ಅನುವಾಗುವಂತೆ ಗಮನಾರ್ಹ ಪ್ರಮಾಣದಲ್ಲಿ ಅಣ್ವಸಗಳನ್ನು ಸನ್ನದ್ಧ ಸ್ಥಿತಿ
ಯಲ್ಲಿರಿಸಿವೆ. ಹೀಗಾಗಿ ಯಾವುದೇ ಕ್ಷಣದಲ್ಲಿ ಯುದ್ಧ ಸಂಭವಿಸಬಹುದೆಂಬ ಭೀತಿ ವಿಶ್ವವನ್ನೇ ಆವರಿಸಿದೆ. ಪ್ರಪಂಚದಲ್ಲಿ ಮಾನವ ಚೆನ್ನಾಗಿ ಬದುಕಬೇಕೇ ಹೊರತು, ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿ ಮಾನವ ಕುಲವನ್ನು ನಾಶಮಾಡುವುದು ಅವನ ಗುರಿಯಾಗಬಾರದು.

ಆದರೆ, ಒಂದೆಡೆ ಪ್ರಸಕ್ತ ಯುದ್ಧದಲ್ಲಿ ನಿರತವಾಗಿರುವ ಇಸ್ರೇಲ್ -ಹಮಾಸ್‌ಗಳ ನಡುವಿನ ಶಾಂತಿ ಒಪ್ಪಂದಕ್ಕೆ ಹೊರಟಿರುವ
ಅಮೆರಿಕ, ಮತ್ತೊಂದೆಡೆ ತನ್ನದೇ ಅತ್ಯಾಧುನಿಕ ಅಣ್ವಸ್ತ್ರಗಳನ್ನು ಹೆಚ್ಚಿಸಿಕೊಳ್ಳುತ್ತಿದೆ. ಎರಡನೆಯ ಮಹಾಯುದ್ಧದ ವೇಳೆ ಜಪಾನಿನ ಹಿರೋಶಿಮಾ ಮೇಲೆ ಅಣುಬಾಂಬ್ ಬೀಳುವುದಕ್ಕೂ ಮುಂಚೆ ಅಲ್ಲಿದ್ದ ಜನಸಂಖ್ಯೆ ೩.೨೦ ಲಕ್ಷ; ಅದು ಬಿದ್ದ
ಮೇಲೆ ಬದುಕುಳಿದವರು ೧.೪ ಲಕ್ಷ ಮಂದಿ. ಅಮೆರಿಕದ ಅಂದಿನ ಅಧ್ಯಕ್ಷ ಹ್ಯಾರಿ ಟ್ರೂಮನ್ ಅವರು ಬ್ರಿಟನ್‌ನ ಸಮ್ಮತಿ ಪಡೆದು ಬಾಂಬ್ ಸೋಟಿಸಲು ಆದೇಶಿಸಿದರು.

೧೯೪೫ರ ಆಗಸ್ಟ್ ೬ ಮತ್ತು ೯ರಂದು ಅಮೆರಿಕ ಹಾಕಿದ ಬಾಂಬ್‌ನಿಂದಾಗಿ ಹಿರೋಶಿಮಾ ಮತ್ತು ನಾಗಾಸಾಕಿ ಪಟ್ಟಣಗಳು ಅಕ್ಷರಶಃ ಸಮಾಧಿಯಾದವು. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಹಿರೋಶಿಮಾದ ೯೦,೦೦೦ ಕಟ್ಟಡಗಳ ಪೈಕಿ ೨೫,೦೦೦ ಕಟ್ಟಡಗಳಷ್ಟೇ ಉಳಿದವು. ಅಲ್ಲಿಯವರೆಗೆ ವೀರಾವೇಶದಿಂದ ಹೋರಾಡುತ್ತಿದ್ದ ಜಪಾನ್ ಶಸ್ತ್ರಾಸ್ತ್ರವನ್ನು ತ್ಯಜಿಸಿತು. ಈ ದುರಂತ ದಿಂದಾಗಿ ಮಹಾಯುದ್ಧ ಕೊನೆಗೊಂಡಿತು, ಪ್ರಪಂಚವು ಕಣ್ಣೀರ ಕಡಲಲ್ಲಿ ಮುಳುಗಿತು. ಇದನ್ನೆಲ್ಲಾ ನೆನಪಿಸಿಕೊಂಡರೆ ಈ ಮನುಕುಲಕ್ಕೆ ಅಣ್ವಸ್ತ್ರಗಳ ಸಹವಾಸವೇ ಬೇಡ ಎನಿಸುವುದಿಲ್ಲವೇ? ಯುದ್ಧಗಳಿಂದಾಗಿ ಪ್ರಪಂಚದ ನಿದ್ರೆ ಹಾಳಾಗಿದೆ; ಆದರೆ ‘ಬಿ-೬೧-೧೩’ ಎಂಬ ಹೊಸ ಪರಮಾಣು ಬಾಂಬ್ ತಯಾರಿಕೆಗೆ ಅಮೆರಿಕ ಸಿದ್ಧತೆ ನಡೆಸುತ್ತಿದೆ.

ಹಿರೋಶಿಮಾ – ನಾಗಾಸಾಕಿ ಮೇಲೆ ಬೀಳಿಸಿದ ಬಾಂಬ್‌ಗಿಂತ ೨೪ ಪಟ್ಟು ಹೆಚ್ಚು ಅಪಾಯಕಾರಿ ಎನ್ನಲಾಗುವ ಈ ಬಾಂಬು ಬಿದ್ದರೆ
ಕೆಲವೇ ಗಂಟೆಗಳಲ್ಲಿ ೧೦ ಲಕ್ಷಕ್ಕೂ ಹೆಚ್ಚು ಸಾವು ಸಂಭವಿಸಬಹುದು. ಯುದ್ಧಪೋಷಕ ರಾಷ್ಟ್ರವಾದ ಅಮೆರಿಕ ತನ್ನ ರಕ್ಷಣೆಗೆ ಬಾಂಬ್ ಸಂಗ್ರಹಿಸುತ್ತಿದೆ; ಆದರೆ ಈ ದುಸ್ಸಾಹಸವೇ ಮುಂದೊಂದು ದಿನ ಅದಕ್ಕೆ ತಿರುಗುಬಾಣ ವಾಗಬಹುದು. ಅಮೆರಿಕಕ್ಕಿಂತ ಹೆಚ್ಚು ಅಣುಬಾಂಬು ಗಳನ್ನು ಹೊಂದಿರುವ ರಷ್ಯಾ ಈ ನಿಟ್ಟಿನಲ್ಲಿ ತಾನು ಬಲಿಷ್ಠ ಎಂಬ ಹೆಗ್ಗಳಿಕೆ ಪಡೆಯಲು ಹವಣಿಸುತ್ತಿದೆ. ಒಂದೇ ಒಂದು ಅಣುಬಾಂಬ್ ಸಿಡಿದರೂ ಕಟ್ಟಡಗಳು, ಪ್ರಾಣಿ- ಸಸ್ಯವರ್ಗ ಮತ್ತು ಇತರ ನೈಸರ್ಗಿಕ ಸಂಪತ್ತುಗಳೆಲ್ಲವೂ ನಾಶ ವಾಗುವುದರ ಜತೆಗೆ, ಬಾಂಬ್ ಸ್ಫೋಟದಿಂದಾಗಿ ಹೊಮ್ಮುವ ವಿಕಿರಣಗಳು ಹಲವು ಕಾಯಿಲೆಗಳಿಗೆ ಆಹ್ವಾನ ನೀಡುತ್ತವೆ.

ಹೀಗಾಗಿ ಬಾಂಬ್ ದಾಳಿಯಿಂದ ಆ ಕ್ಷಣಕ್ಕೆ ಬದುಕಿದವರಿಗೂ ಮುಂದೊಮ್ಮೆ ಸಂಚಕಾರ ತಪ್ಪಿದ್ದಲ್ಲ. ಹಮಾಸ್ ಉಗ್ರರ ಜತೆಗಿನ ಇಸ್ರೇಲ್ ಸಂಘರ್ಷದಲ್ಲಿ ಪ್ಯಾಲೆಸ್ತೀನ್‌ನಲ್ಲಿ ಈಗಾಗಲೇ ಅಜಮಾಸು ೪,೦೦೦ ಮಕ್ಕಳು ಸೇರಿದಂತೆ ೧೦,೦೦೦ಕ್ಕೂ ಹೆಚ್ಚಿನ ಜನ ಮೃತಪಟ್ಟಿದ್ದಾರೆ. ಇತ್ತ ಗಾಜಾಪಟ್ಟಿ ಸ್ಮಶಾನವಾಗಿ ಮಾರ್ಪಟ್ಟಿದೆ. ಹಸುಗೂಸುಗಳ ಬಲಿ, ಅಮಾಯಕರ ಮೇಲಿನ ಚಿತ್ರಹಿಂಸೆ
ಅವ್ಯಾಹತವಾಗಿವೆ. ಅಮೆರಿಕವಾಗಲೀ, ವಿಶ್ವದ ಮಿಕ್ಕ ಶ್ರೀಮಂತ ರಾಷ್ಟ್ರಗಳಾಗಲೀ ಯುದ್ಧ ನಿಲ್ಲಿಸಲು ಯತ್ನಿಸುತ್ತಿಲ್ಲ. ಇಸ್ರೇಲ್‌ಗೆ ಶಸಾಸಗಳ ಜತೆಗೆ ಆರ್ಥಿಕ ನೆರವನ್ನೂ ನೀಡುತ್ತಿದೆ ಅಮೆರಿಕ. ಭಯೋತ್ಪಾದನೆಯ ವಿರುದ್ಧ ಕ್ರಮ ಕೈಗೊಳ್ಳದಿರುವುದೇ ಈ ಯುದ್ಧಕ್ಕೆ ಕಾರಣವಲ್ಲವೇ? ಉಗ್ರವಾದದ ಸಮಸ್ಯೆಯ ಮೂಲೋತ್ಪಾಟನೆಗೆ ಎಲ್ಲರೂ ಒಟ್ಟಾಗಿ ಶ್ರಮಿಸುತ್ತಿಲ್ಲ.

ಪರಸ್ಪರ ಸಮಾಲೋಚನೆ- ಸಂವಾದದಿಂದ ಸಮಸ್ಯೆ ಬಗೆಹರಿಸುವ ಬದಲು ಬೆಂಕಿಗೆ ತುಪ್ಪ ಸುರಿಯುವ ಕೆಲಸವಾಗುತ್ತಿದೆ.
ಉಕ್ರೇನ್ ಮೇಲೆ ದಾಳಿ ನಡೆಸಿದ ರಷ್ಯಾ ವಿರುದ್ಧ ಅಮೆರಿಕ ಆಕ್ರೋಶ ವ್ಯಕ್ತಪಡಿಸಿದ್ದರಿಂದ, ಅದನ್ನೇ ನೆಪವಾಗಿಟ್ಟುಕೊಂಡು ರಷ್ಯಾದ ಅಧ್ಯಕ್ಷ ಪುಟಿನ್ ಅಣ್ವಸ್ತ್ರ ದಾಳಿಗೆ ಮುಂದಾಗಬಹುದು ಎಂಬ ಭಯ ಅಮೆರಿಕನ್ನರಿಗೆ ಉಂಟಾಗಿದೆ. ‘ರಷ್ಯಾ ನೇರವಾಗಿ ಅಮೆರಿಕವನ್ನು ಗುರಿಯಾಗಿಸಿಕೊಂಡು ಪರಮಾಣು ದಾಳಿ ನಡೆಸುವ ಸಾಧ್ಯತೆಯಿದೆ’ ಎಂದು ಅಮೆರಿಕದ ಪಬ್ಲಿಕ್ ಅಫರ‍್ಸ್
ರಿಸರ್ಚ್ ಸಂಸ್ಥೆ ತನ್ನ ಸಮೀಕ್ಷೆಯಲ್ಲಿ ವಿಶ್ಲೇಷಿಸಿದೆ.

ರಷ್ಯಾ ಮತ್ತು ಅಮೆರಿಕ ಮಧ್ಯೆ ಶೀತಲಸಮರ ನಡೆಯುತ್ತಿದೆ. ಅಮೆರಿಕ, ವಿಶ್ವಸಂಸ್ಥೆ ಹಾಗೂ ನ್ಯಾಟೋ ಪಡೆಗಳ ಎಚ್ಚರಿಕೆಯ ನಡುವೆಯೂ ರಷ್ಯಾ ದೇಶವು ಉಕ್ರೇನ್ ಮೇಲಿನ ದಾಳಿ ಮುಂದುವರಿಸಿರುವುದು, ಈ ರಾಷ್ಟ್ರ ಉಂಟುಮಾಡಬಹುದಾದ ತೊಂದ ರೆಯ ಭೀತಿಯನ್ನು ಮತ್ತಷ್ಟು ಹೆಚ್ಚಿಸಿದೆ. ವಿಶ್ವದ ಬಹುತೇಕ ರಾಷ್ಟ್ರಗಳಿಗೆ ಈಗಲೂ ಈ ಭೀತಿಯಿದೆ. ಅತಿಹೆಚ್ಚಿನ ಪರಮಾಣು ಶಸಾಸ ಸಂಗ್ರಹವನ್ನು ಹೊಂದಿರುವ ರಷ್ಯಾ ಮತ್ತು ಅಮೆರಿಕದ ನಡುವೆ ಯುದ್ಧ ನಡೆದರೆ ೧೦ ಕೋಟಿಗೂ ಹೆಚ್ಚು ಜನ ಸಾವನ್ನಪ್ಪಬಹುದು.

ಅಳಿದುಳಿದವರಿಗೆ ಕ್ಯಾನ್ಸರ್, ಹೃದಯಾಘಾತ, ಶ್ವಾಸಕೋಶ ಸಮಸ್ಯೆಗಳು ತಗುಲಿಕೊಳ್ಳುವುದರ ಜತೆಗೆ ಮುಂದೆ ಜನಿಸುವ ಮಕ್ಕಳೂ ಅಂಗವಿಕಲರಾಗುವ ಅಪಾಯವಿರುತ್ತದೆ. ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಬ್ಲಿಂಕೆನ್ ಅವರು ಜೋರ್ಡಾನ್, ಕತಾರ್, ಸೌದಿ, ಈಜಿಪ್ಟ್, ಯುಎಇ ಮತ್ತು ಟರ್ಕಿ ನಾಯಕರ ಜತೆ ಮಾತುಕತೆಗೆ ಇಳಿದಿದ್ದಾರೆ. ಇಸ್ರೇಲ್‌ನ ಒತ್ತೆಯಾಳುಗಳ ಬಿಡುಗಡೆಗೂ ಅವರು ಪ್ರಯತ್ನಿಸುತ್ತಿದ್ದರೂ, ಅದು ಸಾಧ್ಯವೇ? ಎಂಬ ಪ್ರಶ್ನೆ ತಲೆದೋರಿದೆ. ಒಂದೊಮ್ಮೆ ಈ ಯುದ್ಧ ನಿಂತರೂ
ಇಸ್ರೇಲನ್ನು ಅಮೆರಿಕವು ಹಲವಾರು ಒಪ್ಪಂದಗಳಿಗೆ ಒಪ್ಪಿಸಬೇಕಾಗುತ್ತದೆ.

ಹಾಗೊಮ್ಮೆ ಇಸ್ರೇಲ್ ಒಪ್ಪಿದರೂ, ಅಮೆರಿಕ-ಇಸ್ರೇಲ್-ಅರಬ್ ರಾಷ್ಟ್ರಗಳು ಒಂದಾಗಿ ನಿಂತು ಬಿಕ್ಕಟ್ಟು ಬಗೆಹರಿಸಿಕೊಳ್ಳುವುದನ್ನು ಇರಾನ್, ಟರ್ಕಿ, ರಷ್ಯಾ ಮತ್ತು ಚೀನಾ ಸಹಿಸಲಾರವು. ಹೀಗಾಗಿ, ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಸಮರವು ದೇಶ- ದೇಶಗಳ ನಡುವಿನ ವೈಮನಸ್ಸಾಗಿ ರೂಪಾಂತರಗೊಂಡು, ಎರಡು ಪಂಗಡಗಳಾಗಿ, ಮೂರನೆಯ ಮಹಾಯುದ್ಧಕ್ಕೆ ಮುನ್ನುಡಿ ಬರೆದೀತು ಎಂಬ ಭಯ ಕಾಡುತ್ತಿದೆ. ಅಣ್ವಸ್ತ್ರಗಳನ್ನು ಹೊಂದಿರುವುದು ಇಂದು ದೇಶಗಳ ಪಾಲಿಗೆ ಪ್ರತಿಷ್ಠೆಯ ವಿಷಯವಾಗಿದೆ. ನಿಶ್ಶಸ್ತ್ರೀಕರಣದ ಹೊರತಾಗಿಯೂ ರಷ್ಯಾ ಮತ್ತು ಅಮೆರಿಕ ದೇಶಗಳ ಬಳಿ ಭಾರಿ ಅಣ್ವಸ ಸಂಗ್ರಹವಿದೆ.

ಮಿಕ್ಕಂತೆ ಫ್ರಾನ್ಸ್, ಚೀನಾ, ಬ್ರಿಟನ್, ಪಾಕಿಸ್ತಾನ ದೇಶಗಳು ಯಥೋಚಿತ ಪ್ರಮಾಣದಲ್ಲಿ ಅಣ್ವಸ್ತ್ರಗಳನ್ನು ಹೊಂದಿವೆ. ವಿಶ್ವಸಂಸ್ಥೆಯು ಯುದ್ಧ ಮತ್ತು ಅಂತಾರಾಷ್ಟ್ರೀಯ ಬಿಕ್ಕಟ್ಟನ್ನು ನಿವಾರಿಸುವ ಹೊಣೆ ಹೊತ್ತಿರುವಂಥದ್ದು; ಆದರೆ ಇದು ಇಡೀ ಮಾನವ ಜನಾಂಗಕ್ಕೆ ಶಾಂತಿ ನೀಡುವ ಮಹತ್ವಾಕಾಂಕ್ಷೆಯ ಸಂಸ್ಥೆಯಾಗುವುದೆಂಬ ಎಲ್ಲಾ ರಾಷ್ಟ್ರಗಳ ಕನಸು ನನಸಾಗದಿರು
ವುದು ದುರಂತ. ಇದು ವಿಶ್ವಸಂಸ್ಥೆಯು ವಿಫಲವಾಗುತ್ತಿರುವುದರ ಸಂಕೇತ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ವಿವಿಧ ರಾಷ್ಟ್ರಗಳಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ ಹಾಗೂ ತನ್ನ ಅವೈಜ್ಞಾನಿಕ ವಿಟೋ ಪವರ್‌ನಿಂದಾಗಿ ಅಸಮರ್ಥ ಸಂಸ್ಥೆಯಾಗಿದೆ.

‘ಅಣ್ವಸಗಳು ವಿಜ್ಞಾನದ ಶಾಪ’ ಎಂದು ದೂರಲಾಗುತ್ತಿದೆ. ಅಣುಬಾಂಬ್ ಬಳಕೆಯು ಎರಡನೆಯ ಮಹಾಯುದ್ಧದಲ್ಲಿ ಅಮೆರಿಕಕ್ಕೆ ಗೆಲುವು ತಂದುಕೊಟ್ಟಿರಬಹುದು, ಯುದ್ಧದ ನಂತರ ಅಮೆರಿಕವು ಜಗತ್ತಿನಲ್ಲಿ ಒಂದು ಶಕ್ತಿಶಾಲಿ ದೇಶವಾಗಿರ ಬಹುದು. ಆದರೆ ಅದು ತನ್ನ ಸಂಪತ್ತನ್ನು ವಿನಾಶಕಾರಿ ಕೃತ್ಯಗಳಿಗೆ ಖರ್ಚು ಮಾಡುತ್ತಿರುವ ಮತ್ತು ಅಣುಬಾಂಬ್ ತಯಾರಿಕೆಗೆ ಮೀಸಲಿಡುತ್ತಿರುವ ಬಗ್ಗೆ ಇತರ ದೇಶಗಳಿಗೆ ವಿಷಾದವಿದೆ. ಇದು ರಷ್ಯಾಕ್ಕೂ ಅನ್ವಯವಾಗುವ ಮಾತು.

ಪ್ರಸ್ತುತ ವಿವಿಧ ದೇಶಗಳಲ್ಲಿರುವ ಒಟ್ಟು ಅಣ್ವಸಗಳು, ಇಡೀ ವಿಶ್ವವನ್ನು ೧೫ಕ್ಕೂ ಹೆಚ್ಚು ಬಾರಿ ನಾಶ ಮಾಡ ಬಹುದಾದಷ್ಟು ಪ್ರಮಾಣದಲ್ಲಿವೆ ಎಂಬ ಅಂದಾಜಿದೆ. ಎಂಥಾ ವಿಪರ್ಯಾಸ! ವಿಶ್ವನಾಶಕ್ಕಾಗಿ ನಾವು ಲಕ್ಷಾಂತರ ಕೋಟಿ ಹಣವನ್ನು ಖರ್ಚು ಮಾಡಬೇಕೇ?! ಹೀಗಾಗಿ ಈ ವಿಷಯದಲ್ಲಿ ಮರುಚಿಂತನೆಯ ಮತ್ತು ಆತ್ಮಾವಲೋಕನದ ಅಗತ್ಯವಿದೆ. ಅಣ್ವಸಗಳಿಗಾಗಿ ಪೈಪೋಟಿ
ಮಾಡುವುದನ್ನು ಮತ್ತು ಅವುಗಳ ತಯಾರಿಯನ್ನು ದೇಶಗಳು ಸರ್ವಥಾ ನಿಲ್ಲಿಸಬೇಕು. ಪರಸ್ಪರ ಚರ್ಚಿಸಿ ವಿಶ್ವಶಾಂತಿಗಾಗಿ ಪಣ ತೊಡಬೇಕು. ಪರಿವರ್ತನೆ ಜಗದ ನಿಯಮ, ವೈಜ್ಞಾನಿಕ ಪರಿವರ್ತನೆಗಳು ಅನಿವಾರ್ಯವೂ ಹೌದು.

ಆದರೆ ಇಂಥ ಪರಿವರ್ತನೆಗಳು ವಿನಾಶಕಾರಿ ಆಗಿರಬಾರದು. ಮೂರನೆಯ ಮಹಾಯುದ್ಧವಾಗಿ ಅಣುಬಾಂಬ್‌ನ ಅಟ್ಟಹಾಸ ನಡೆದರೆ ಇಡೀ ಜಗತ್ತೇ ವಿನಾಶವಾಗುತ್ತದೆ ಎಂಬ ಅಪ್ರಿಯಸತ್ಯವನ್ನು ಎಲ್ಲ ದೇಶಗಳೂ ಮನಗಾಣಬೇಕು. ಭಾರತಕ್ಕೆ ಆಕ್ರಮಣ ಕಾರಿ ಧೋರಣೆಗಳಿಲ್ಲ. ಯಾವತ್ತೂ ಶಾಂತಿಯನ್ನೇ ಬಯಸುವ ಭಾರತವು ನೆರೆರಾಷ್ಟ್ರಗಳು ಸೇರಿದಂತೆ ಜಗತ್ತಿನ ಮಿಕ್ಕ ರಾಷ್ಟ್ರಗಳ ಜತೆಗೂ ಸ್ನೇಹ- ಸೌಹಾರ್ದ-ಸಹಕಾರದ ಭಾವವನ್ನು ಮೆರೆಯುತ್ತಾ ಬಂದಿದೆ.

ಸತ್ಯ-ಅಹಿಂಸೆ-ಶಾಂತಿ-ಸೌಹಾರ್ದಗಳನ್ನು ಸಾರ್ವಕಾಲಿಕ ಮೌಲ್ಯಗಳಾಗಿ ಜಗತ್ತಿಗೇ ತೋರಿಸಿಕೊಟ್ಟಿದೆ. ಆದರೆ ನಿರ್ಣಾಯಕ ಸ್ಥಾನದಲ್ಲಿರುವ ವಿಶ್ವಸಂಸ್ಥೆಯು ಒಣಮಂತ್ರಕ್ಕೆ ಮಾತ್ರ ಸೀಮಿತವಾದಂತಿದೆ. ವಿಟೋ ಪವರ್ ಎಂಬುದು ಹಾಸ್ಯಾಸ್ಪದ ವಾಗಿರುವುದು, ವಿಟೋ ದೇಶಗಳೇ ಶಾಂತಿಯನ್ನು ಕದಡುವುದು ವಿಶ್ವಸಂಸ್ಥೆಗೂ ಸವಾಲಾಗಿದೆ. ಗಾಜಾಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯ ೮೮ ಸಿಬ್ಬಂದಿ ಅಸುನೀಗಿದ್ದಾರೆ. ಇಸ್ರೇಲ್ -ಹಮಾಸ್ ಉಗ್ರರ ನಡುವಿನ ಕಿತ್ತಾಟ ಎಲ್ಲಿಯವರೆಗೆ
ಮುಂದುವರಿಯುತ್ತದೆ, ಜಗತ್ತನ್ನು ಎಲ್ಲಿಗೆ ತಂದು ನಿಲ್ಲಿಸುತ್ತದೆ ಎಂಬುದನ್ನು ಮುನ್ನುಡಿಯಲಾಗದು.

(ಲೇಖಕರು ವಿಜಯಾ ಬ್ಯಾಂಕ್‌ನ
ನಿವೃತ್ತ ಮುಖ್ಯ ಪ್ರಬಂಧಕರು)