ತುಮಕೂರು: ಜಿಲ್ಲೆಯಲ್ಲಿ 333 ಕಳ್ಳತನದ ಪ್ರಕರಣಗಳನ್ನು ಜಿಲ್ಲೆಯ ಪೊಲೀಸರು ಭೇದಿಸಿ ಸುಮಾರು 4ಕೋಟಿ 9ಲಕ್ಷದ 46ಸಾವಿರದ 441 ರೂಪಾಯಿ ಗಳಷ್ಟು ಮೌಲ್ಯದ ಕಳವು ಮಾಲುಗಳನ್ನು ವಶಪಡಿಸಿಕೊಂಡು ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾಗಿರುವುದಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರಶಂಸಿಸಿದರು.
ಪೊಲೀಸ್ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಕಳವು ಮಾಲನ್ನು ವಾರಸುದಾರರಿಗೆ ವಿತರಿಸಿ ಮಾತನಾಡಿ, 2 ದರೋಡೆ, 28 ಸುಲಿಗೆ, 19 ಸರಗಳ್ಳ ತನ, 93 ಮನೆಗಳ್ಳತನ ಮತ್ತು 190 ಸಾಮಾನ್ಯ ಕಳ್ಳತನಗಳನ್ನು ಪೊಲೀಸರು ಪತ್ತೆ ಹಚ್ಚಿ ಕಳ್ಳರನ್ನು ಬಂಧಿಸಿರುವುದಾಗಿ ತಿಳಿಸಿದರು.
ಆಂಧ್ರದ ಮೊಬೈಲ್ ಕಳ್ಳರು ಕದ್ದಿದ್ದ 101 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಗುಬ್ಬಿ ತಾಲ್ಲೂಕು ಸಿ.ಎಸ್.ಪುರದಲ್ಲಿ ಜ್ಯುವೆಲರಿ ಅಂಗಡಿಯ 4 ಲಕ್ಷಕ್ಕೂ ಹೆಚ್ಚಿನ ಬೆಲೆ ಬಾಳುವ ಬೆಳ್ಳಿ ಸಾಮಾನುಗಳನ್ನು ವಶಕ್ಕೆ ಪಡೆದು ನಟೋರಿಯಸ್ 7 ಮಂದಿ ಕಳ್ಳರನ್ನು ಬಂಧಿಸಿ, ಕಳ್ಳತನಕ್ಕೆ ಬಳಸಿದ್ದ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳ್ಳರನ್ನು ಹಿಡಿದ ಪೊಲೀಸ್ ಸಿಬ್ಬಂದಿಗೆ ಇಲಾಖೆಯಿಂದ ಬಹುಮಾನ ನೀಡಲಾಗುವುದು ಎಂದರು.
ಶಿರಾ ವಲಯದ ಡಿವೈಎಸ್ಪಿ ಮತ್ತು ಚಿಕ್ಕನಾಯಕನಹಳ್ಳಿ ಸಿಪಿಐ ಕಾರ್ಯ ದಕ್ಷತೆಗೆ ಸಚಿವರು ಪ್ರಶಂಸನಾ ಪತ್ರಗಳನ್ನು ನೀಡಿ ಗೌರವಿಸಿದರು. ಈ ವೇಳೆ ಎಸ್ಪಿ ಅಶೋಕ್.ಕೆ.ವಿ., ಎಎಸ್ಪಿ ಮರಿಯಪ್ಪ, ಎಡಿಜಿಪಿ ರವಿಕಾಂತೇಗೌಡ ಉಪಸ್ಥಿತರಿದ್ದರು.