ಇಂಡಿ: ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಜಿಲ್ಲಾ ಹಾಲು ಸಹಕಾರ ಪ್ರಕೋಷ್ಟ ಹಾಗೂ ಹಾಲು ಪ್ರಕೋಷ್ಠದ ಸಂಚಾಲಕರಾಗಿ ಸೇವೆ ಮಾಡಿದ ನಾನು ಪ್ರಭಲ ಆಕಾಂಕ್ಷಿಯಾಗಿದ್ದೇನೆ. ವೃತ್ತಿಯಲ್ಲಿ ವಕೀಲರಾಗಿರುವ ನಾನು ಸುಮಾರು ೭ ವರ್ಷಗಳ ವರೆಗೆ ಬಿಜೆಪಿ ಸಹಕಾರ ಹಾಗೂ ಹಾಲು ಪ್ರಕೋಷ್ಠದ ಜಿಲ್ಲಾ ಸಂಚಾಲಕರಾಗಿ ಸೇವೆ ಮಾಡಿದ್ದು, ಪಕ್ಷದ ತತ್ವ, ಸಿದ್ದಾಂತದ ತಳಹದಿಯ ಮೇಲೆ ನೇರ ನುಡಿಯ ಮೂಲಕ ಪಕ್ಷ ಸಂಘಟನೆ ಮಾಡುವ ಕಾರ‍್ಯದಲ್ಲಿ ಮುಂಚೂಣಿಯಲ್ಲಿ ಇದ್ದೇನೆ ಎಂದು ಅಂಜುಟಗಿ ಗ್ರಾಮದ ಬಿಜೆಪಿ ಜಿಲ್ಲಾ ಮುಖಂಡ ಹಣಮಂತ್ರಾಯಗೌಡ ಪಾಟೀಲ ಹೇಳಿದರು.
ಅವರು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ,ನಾನು ರಾಜಕೀಯ ಮನೆತನದಿಂದ ಬಂದವನಾಗಿದ್ದು, ಪಕ್ಷ ಸಂಘಟನೆಯ ಸಂಪರ‍್ಣ ಅನುಭವ ನನಗಿದೆ. ನಮ್ಮ ತಂದೆ ಬಿ.ಆರ್.ಪಾಟೀಲ ಅವರು ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿದ್ದರು. ನಂತರ ಇಂಡಿ ಮತಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ೨ ಬಾರಿ ಸ್ಪರ್ಧಿಸಿದ್ದರು. ಜಾತ್ಯಾತೀತ ನಿಲುವು ಹೊಂದಿರುವ ನಾನು, ಎಲ್ಲ ಜಾತಿ,ಮತ,ಪಂಥದ ಸಮುದಾಯವನ್ನು ಒಗ್ಗೂಡಿಸಿಕೊಂಡು ಬಿಜೆಪಿ ಪಕ್ಷ ಸಂಘಟಿಸುತ್ತ ರಾಜಕಾರಣ ಮಾಡುತ್ತಿದ್ದೇನೆ. ಸಂಸದ ರಮೇಶ ಜಿಗಜಿಣಗಿ ಹಾಗೂ ಮಾಜಿ ಸಚಿವ ಗೋವಿಂದ ಕಾರಜೋಳ ಅವರ ಜೊತೆ ನಿಕಟ ಸಂರ‍್ಕ ಹೊಂದಿದ್ದು, ಸಂಘ ಪರಿವಾರದ ಮುಖಂಡರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದಾಗಿ ಹಣಮಂತ್ರಾಯಗೌಡ ಪಾಟೀಲ ತಿಳಿಸಿದ್ದಾರೆ.
ಸಿಂದಗಿ,ನಾಗಠಾಣ,ಚಡಚಣ,ಇಂಡಿ ಮತಕ್ಷೇತ್ರದ ಕರ‍್ಯರ‍್ತರು ನನ್ನ ಪರವಾಗಿ ಧ್ವನಿ ಎತ್ತಿದ್ದು, ಅಲ್ಲದೆ ವಿಜಯಪುರ ಹಾಗೂ ಬಾಗಲಕೋಟ ಜಿಲ್ಲೆಯಲ್ಲಿ ಗಾಣಿಗ ಸಮುದಾಯದ ಶಾಸಕರು ಇರದೇ ಇರುವುದರಿಂದ ಹಾಗೂ ಮಾಜಿ ಸಚಿವ,ಶಾಸಕ ಲಕ್ಷ್ಮಣ ಸವದಿ ಅವರ ಪ್ರಭಾವ ಜಿಲ್ಲೆಯಲ್ಲಿ ತಡೆಗಟ್ಟ ಬೇಕಾದರೆ ಗಾಣಿಗ ಸಮುದಾಯದ ಬಿಜೆಪಿ ಪಕ್ಷದ ಮುಖಂಡರನ್ನೇ ಬಿಜೆಪಿ ಜಿಲ್ಲಾಧ್ಯಕ್ಷರನ್ನಾಗಿ ಮಾಡಿದರೆ ಸೂಕ್ತ ಎಂಬ ಅಭಿಪ್ರಾಯ ಕೆಲ ಬಿಜೆಪಿ ಕಾರ್ಯಕರ್ತರದ್ದಾಗಿದೆ.
ಸಿಂದಗಿ,ಇಂಡಿ ಹಾಗೂ ಚಡಚಣ ಭಾಗದಲ್ಲಿ ಬಿಜೆಪಿ ಶಾಸಕರು ಇರದೇ ಇರುವುದರಿಂದ ಪಕ್ಷ ಸಂಘಟನೆ ಮಾಡಲು ಗಾಣಿಗ ಸಮುದಾಯದ ವ್ಯಕ್ತಿಯಾದ ನನಗೆ ಜಿಲ್ಲಾಧ್ಯಕ್ಷ ನೀಡಿದರೆ ಪಕ್ಷ ಜಿಲ್ಲೆಯಲ್ಲಿ ಮತ್ತಷ್ಟು ಬಲಿಷ್ಠಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.