Sunday, 24th November 2024

ಆಹಾರ ಉತ್ಪನ್ನಗಳ ಮೇಲಿನ ಹಲಾಲ್ ಚಿಹ್ನೆಗಳ ತೆರವು: 15 ದಿನಗಳ ಗಡುವು

ಕ್ನೊ: ದನದ ಮಾಂಸ ಹಾಗೂ ರಫ್ತು ಉದ್ದೇಶದ ಉತ್ಪನ್ನಗಳನ್ನು ಹೊರತುಪಡಿಸಿ ಉಳಿದ ಆಹಾರ ಉತ್ಪನ್ನಗಳ ಮೇಲಿನ ಹಲಾಲ್ ಚಿಹ್ನೆಗಳನ್ನು ತೆರವುಗೊಳಿಸಲು ಮಳಿಗೆಗಳು ಹಾಗೂ ಸೂಪರ್ ಮಾರ್ಕೆಟ್‌ಗಳಿಗೆ ಉತ್ತರ ಪ್ರದೇಶ ಸರಕಾರ 15 ದಿನಗಳ ಗಡುವನ್ನು ನೀಡಿದೆ.

ಪ್ರಮಾಣೀಕೃತವಲ್ಲದ ಸಂಸ್ಥೆಗಳಿಂದ ಹಲಾಲ್ ಪ್ರಮಾಣ ಪತ್ರ ಪಡೆಯುತ್ತಿರುವ 92 ಉತ್ತರ ಪ್ರದೇಶ ಮೂಲದ ಆಹಾರ ಉತ್ಪಾದಕರಿಗೆ ತಮ್ಮ ಉತ್ಪನ್ನ ಗಳಿಗೆ ಉತ್ತರ ಪ್ರದೇಶದಲ್ಲೇ ಪ್ರಮಾಣ ಪತ್ರ ಪಡೆಯಬೇಕು ಎಂದು ಆದೇಶಿಸಿದೆ.

ಹಲಾಲ್‌ ಚಹ್ನೆಗಳು ಇರುವ ಉತ್ಪನ್ನಗಳ ಮರು ಬ್ರ್ಯಾಂಡಿಂಗ್ ಅಥವಾ ಮರು ಪ್ಯಾಕೇಜಿಂಗ್ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತನ್ನ ಆದೇಶದಲ್ಲಿ ಹೇಳಿದೆ. ನ.18ರಂದು ಉತ್ತರ ಪ್ರದೇಶದಲ್ಲಿ ಹಲಾಲ್ ಸರ್ಟಿಫಿಕೇಟ್‌ ಇರುವ ಆಹಾರ ಉತ್ಪನ್ನಗಳ ಮೇಲೆ ನಿಷೇಧ ಜಾರಿಯಾದಾಗಿನಿಂದ 92 ದಾಳಿಗಳನ್ನು ನಡೆಸಲಾಗಿದೆ.

81 ಆಹಾರ ಮಾದರಿಗಳನ್ನು ಪರೀಕ್ಷೆಗಾಗಿ ತೆಗೆದುಕೊಂಡು ಹೋಗಲಾಗಿದೆ ರಾಜ್ಯ ಆಹಾರ ಸುರಕ್ಷತೆ ಹಾಗೂ ಔಷಧ ಆಡಳಿತ ಇಲಾಖೆಯ ಆಯುಕ್ತೆ ಅನಿತಾ ಸಿಂಗ್ ತಿಳಿಸಿದ್ದಾರೆ.