ತುಮಕೂರು: ನಗರದ ಬಾಲ ಭವನದಲ್ಲಿ ಜಿಲ್ಲಾ ಪ್ರಧಾನ ಅಂಚೆ ಕಚೇರಿ ಅಧಿಕಾರಿಗಳು ಸಿಬ್ಬಂದಿಗಳು ಶ್ರೀ ಕೃಷ್ಣ ರಾಯಬಾರಿ ಪೌರಾಣಿಕ ನಾಟಕದ ಅಭಿನಯ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಅಂಚೆ ಅಧೀಕ್ಷಕ ಬಿ .ಎಂ ಶಂಕರಪ್ಪ ಮಾತನಾಡಿ, ಆಧುನಿಕತೆಯ ಭರಾಟೆಯಲ್ಲಿ ಪೌರಾಣಿಕ ನಾಟಕಗಳು ಮೂಲೆ ಗುಂಪಾಗುತ್ತಿವೆ. ಅವುಗಳನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಅಂಚೆ ಉಪ ಅಧೀಕ್ಷಕ ಮಾತನಾಡಿ, ಯುವಕರು ಸಾಮಾಜಿಕ ಜಾಲತಾಣದಿಂದ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಹೆಚ್ಚಾಗಿ ಪುಸ್ತಕಗಳನ್ನು ಓದುವ ಮೂಲಕ ನಾಟಕಗಳನ್ನು ಅಭಿನಯಿಸುವ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಬೇಕಾಗಿದೆ ಎಂದರು.
ಪ್ರಧಾನ ಅಂಚೆ ಕಚೇರಿ ಅಂಚೆಪಾಲಕ ಓಂಕಾರ ಮೂರ್ತಿ ಮಾತನಾಡಿ, ಮಕ್ಕಳು ಮೊಬೈಲ್ ಬಿಟ್ಟು ಪುಸ್ತಕದ ಕಡೆ ಹೆಚ್ಚು ಜ್ಞಾನವನ್ನು ಹರಿಸಬೇಕು. ನಾಡು ನುಡಿ ಸಂಸ್ಕೃತಿಯನ್ನು ಯುವಜನತೆ ಉಳಿಸಿ , ಬೆಳೆಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು ಎಂದರು.
ಶ್ರೀ ಕೃಷ್ಣ ರಾಯಭಾರಿ ಪೌರಾಣಿಕ ನಾಟಕದಲ್ಲಿ ಪ್ರಧಾನ ಅಂಚೆ ಕಚೇರಿ ಸಿಬ್ಬಂದಿಗಳಾದ ಹನುಮಂತರಾಯಪ್ಪ, ರಾಮಸ್ವಾಮಿ ನಾಯಕ್, ಮಂಜು ನಾಥ್, ಮುತ್ತುರಾಜ್ ನರಸಿಂಹ ಮೂರ್ತಿ, ವಿನಯ್, ಸತೀಶ್ , ಕೀರ್ತಿ , ದಾದಾಪೀರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದರು.