ಮೈಸೂರು: ಜಿಲ್ಲೆಗೊಂದು ವಿವಿ ಸ್ಥಾಪನೆಯಾದ ಪರಿಣಾಮ ಈ ವರ್ಷ ಮೈಸೂರು ವಿಶ್ವವಿದ್ಯಾಲಯದಲ್ಲಿ 10 ಸಾವಿರ ಪ್ರವೇಶಾತಿ ಕುಸಿತ ಕಂಡಿದೆ.
ಮೈಸೂರು ವಿವಿ ವ್ಯಾಪ್ತಿಯಲ್ಲಿ ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಗಳು ಸೇರ್ಪಡೆ ಆಗಿದ್ದವು. ಆದರೆ, ಈ ಮೂರು ಜಿಲ್ಲೆಗಳಲ್ಲಿ ಪ್ರತ್ಯೇಕ ವಿವಿ ತೆರೆದ ಕಾರಣ ಈ ವರ್ಷ ಮೈಸೂರು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಪ್ರವೇಶಾತಿ ಕಡಿಮೆ ಆಗಿದೆ. ಆಯಾ ಜಿಲ್ಲೆಯ ವಿದ್ಯಾರ್ಥಿಗಳು ಹೊಸ ವಿವಿಯಲ್ಲೇ ಪ್ರವೇಶ ಪಡೆದುಕೊಂಡಿದ್ದಾರೆ.
ಕಳೆದ ವರ್ಷ ವಿವಿಧ ಸ್ನಾತಕ ಪದವಿ ಕೋರ್ಸ್ಗಳಿಗೆ 36 ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಈ ಶೈಕ್ಷಣಿಕ ಸಾಲಿನಲ್ಲಿ 26 ಸಾವಿರ ವಿದ್ಯಾರ್ಥಿ ಗಳು ಪ್ರವೇಶ ಪಡೆದಿದ್ದು, 10 ಸಾವಿರ ವಿದ್ಯಾರ್ಥಿಗಳು ಕಡಿಮೆ ಆಗಿದ್ದಾರೆ. ಈ ಹಿಂದೆ ಮೈಸೂರು ವಿವಿ ವ್ಯಾಪ್ತಿಯಲ್ಲಿ 232 ಕಾಲೇಜುಗಳು ಬರುತ್ತಿದ್ದವು. ಈಗ ಆ ಸಂಖ್ಯೆ 111ಕ್ಕೆ ಇಳಿದಿದೆ. ಬೋಧಕ-ಬೋಧಕೇತರ ಸೇರಿದಂತೆ ಕಾಯಂ ನೌಕರರಿಗೆ ಸರಕಾರದಿಂದಲೇ ವೇತನ ಬರುತ್ತದೆ. ಅತಿಥಿ ಉಪನ್ಯಾಸಕರು ಸೇರಿದಂತೆ ಕಾಯಂ ಅಲ್ಲದ ಸಿಬ್ಬಂದಿಗೆ ವಿವಿಯೇ ವೇತನ ಭರಿಸಬೇಕಿದೆ.
ಮೈಸೂರು ವಿವಿಗೆ 665 ಕಾಯಂ ಪ್ರಾಧ್ಯಾಪಕರು ಆಗತ್ಯ. ಆದರೆ, ಪ್ರಸ್ತುತ ಕೇವಲ 245 ಕಾಯಂ ಅಧ್ಯಾಪಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 420 ಹುದ್ದೆ ಖಾಲಿ ಉಳಿದಿದೆ. ಮೈಸೂರು ವಿವಿ 900 ಅತಿಥಿ ಉಪನ್ಯಾಸಕರಿಂದಲೇ ನಡೆಯುತ್ತಿದೆ. ಇದು ಗುಣಮಟ್ಟದ ಶಿಕ್ಷಣಕ್ಕೂ ಕಂಟಕಪ್ರಾಯವಾಗಿದೆ.