ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ದುಬೈಗೆ ಭೇಟಿ ನೀಡಿದ್ದು, ವಿಶ್ವಸಂಸ್ಥೆಯ ಕಾನ್ಫರೆನ್ಸ್ ಆಫ್ ಪಾರ್ಟೀಸ್(ಸಿಒಪಿ-28) ಜೊತೆಗೆ ನಡೆಯಲಿರುವ ವಿಶ್ವ ಹವಾಮಾನ ಕ್ರಿಯಾ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
ಯುಎಇ ಉಪ ಪ್ರಧಾನಿ ಶೇಖ್ ಸೈಫ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಮೋದಿ ಅವರನ್ನು ದುಬೈ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ದುಬೈ ಭೇಟಿ ಬಳಿಕ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮೋದಿಯವರು, ‘ಸಿಒಪಿ–28 ಶೃಂಗಸಭೆಯಲ್ಲಿ ಭಾಗವಹಿಸಲು ದುಬೈಗೆ ಬಂದಿಳಿ ದಿದ್ದೇನೆ. ಸಭೆಯ ಕಾರ್ಯಕಲಾಪಗಳನ್ನು ಎದುರು ನೋಡುತ್ತಿದ್ದೇನೆ’ ಎಂದು ಪೋಸ್ಟ್ ಮಾಡಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಮಾತನಾಡಿ, ‘ಪ್ರಧಾನಿ ಮೋದಿ ಜಾಗತಿಕ ನಾಯಕರೊಂದಿಗೆ ಸಭೆ ನಡೆಸುತ್ತಾರೆ ಮತ್ತು ಹವಮಾನ ಕ್ರಮವನ್ನು ಹೆಚ್ಚಿಸುವ ಗುರಿ ಹೊಂದಿರುವ ವಿಶೇಷ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ’ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಹೋಟೆಲಿಗೆ ಆಗಮಿಸುತ್ತಿದ್ದಂತೆ ದುಬೈನಲ್ಲಿರುವ ಭಾರತೀಯ ಸಮುದಾಯದ ಪ್ರಧಾನಿ ಮೋದಿಯವರನ್ನು ಆತ್ಮೀಯವಾಗಿ ಸ್ವಾಗತಿಸಿ ದ್ದಾರೆ. ‘ಅವರ ಸ್ವಾಗತದಿಂದ ನಾನು ತೀವ್ರ ಭಾವುಕನಾಗಿದ್ದೇನೆ. ಅವರ ಬೆಂಬಲ ಮತ್ತು ಉತ್ಸಾಹ ನಮ್ಮ ಸಂಸ್ಕೃತಿ ಮತ್ತು ಬಂಧಗಳಿಗೆ ಸಾಕ್ಷಿಯಾಗಿದೆ’ ಎಂದು ಪ್ರಧಾನಿ ಪೋಸ್ಟ್ ಮಾಡಿದ್ದಾರೆ. ಯುಎಇ ಅಧ್ಯಕ್ಷತೆಯಲ್ಲಿ ವಿಶ್ವಸಂಸ್ಥೆ ಸಿಒಪಿ–28ನೇ ಶೃಂಗ ಸಭೆ ನಡೆಸುತ್ತಿದೆ.
ಈ ವೇಳೆ ಪ್ರಧಾನಿ ಮೂರು ಉನ್ನತ ಮಟ್ಟದ ಸಭೆಗಳಲ್ಲಿ ಭಾಗಿಯಾಗಲಿದ್ದಾರೆ. ಶೃಂಗ ಸಭೆ ನ.30ರಿಂದ ಡಿ.12ರವರೆಗೆ ನಡೆಯಲಿದೆ. ವಿಶ್ವ ಹವಾಮಾನ ಕ್ರಿಯಾ ಶೃಂಗಸಭೆ ಸಿಒಪಿ 28ರ ಉನ್ನತ ಮಟ್ಟದ ವಿಭಾಗವಾಗಿದೆ.