Saturday, 23rd November 2024

ಎನ್ಕೌಂಟರಿನಲ್ಲಿ ಲಷ್ಕರ್-ಎ-ತಯ್ಬಾ ಭಯೋತ್ಪಾದಕನ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರಿನಲ್ಲಿ ಲಷ್ಕರ್-ಎ-ತಯ್ಬಾ (ಎಲ್ಇಟಿ) ಉಗ್ರ ಸಂಘಟನೆಗೆ ಸೇರಿದ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ.

ಲಭ್ಯವಾದ ನಿರ್ದಿಷ್ಟ ಗುಪ್ತಚರ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಗುರುವಾರ ಆ ಪ್ರದೇಶದಲ್ಲಿ ಗಸ್ತು ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ, ಅಡಗಿಕೊಂಡಿದ್ದ ಭಯೋತ್ಪಾದಕ ಭದ್ರತಾ ಪಡೆಗಳ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾನೆ. ಅದಕ್ಕೆ ಪ್ರತೀಕಾರವಾಗಿ ಭದ್ರತಾ ಪಡೆಗಳು ಎನ್ಕೌಂಟರ್ ನಡೆಸಿವೆ ಎಂದು ಅವರು ಹೇಳಿದರು. ಪಿಂಜೂರ ಶೋಪಿಯಾನ್ನ ನಿವಾಸಿ ಮತ್ತು ನಿಷೇಧಿತ ಭಯೋತ್ಪಾ ದಕ ಸಂಘಟನೆ ಎಲ್ಇಟಿಯೊಂದಿಗೆ ಸಂಬಂಧ ಹೊಂದಿರುವ ಕಿಫಾಯತ್ ಅಯೂಬ್ ಅಲಿ ಎಂದು ಗುರುತಿಸಲಾದ ಉಗ್ರನನನ್ನು ಸೆದೆಬಡಿಯಲಾಗಿದೆ.

ಎನ್ಕೌಂಟರ್ ಸ್ಥಳದಿಂದ ಆತನ ಮೃತದೇಹವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ. ಎನ್ಕೌಂಟರ್ ಸ್ಥಳದಿಂದ ಪಿಸ್ತೂಲ್, ಎರಡು ಮ್ಯಾಗಜೀನ್ಗಳು, ಐದು ರೌಂಡ್ಸ್ಗಳು, ಎರಡು ಗ್ರೆನೇಡ್ ಸೇರಿದಂತೆ ನಿಷೇಧಿತ ವಸ್ತುಗಳು ಮತ್ತು ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.