ಆಗ್ರಾ: ಮಧ್ಯಪ್ರದೇಶದ ಭೋಪಾಲ್ನಿಂದ ದೆಹಲಿಯ ಹಜರತ್ ನಿಜಾಮುದ್ದೀನ್ಗೆ ಸಂಪರ್ಕ ಕಲ್ಪಿಸುವ ರೈಲಿನ ಮೇಲೆ ಮತ್ತೆ ಕಲ್ಲು ತೂರಲಾಗಿದೆ.
ಈ ಘಟನೆಯಿಂದ ಕಿಟಕಿಯ ಗಾಜುಗಳಿಗೆ ಹಾನಿಯಾಗಿದ್ದು, 12 ನೇ ಬಾರಿಗೆ ಈ ರೈಲಿನ ಮೇಲೆ ದಾಳಿ ನಡೆದಿರುವುದು ಆತಂಕದ ಸಂಗತಿಯಾಗಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ದೆಹಲಿಯ ಹಜರತ್ ನಿಜಾಮುದ್ದೀನ್ ನಿಲ್ದಾಣದಿಂದ ಮಧ್ಯಪ್ರದೇಶದ ಭೋಪಾಲ್‌ಗೆ ಹೊರಟಿತ್ತು. ಮಥುರಾದ ಭೂತೇಶ್ವರ ಮತ್ತು ಮಥುರಾ ಕ್ಯಾಂಟ್ ನಿಲ್ದಾಣದ ನಡುವೆ ರೈಲು ಚಲಿಸುತ್ತಿದ್ದಾಗ ಸಂಜೆ 4 ಗಂಟೆ ಸುಮಾರಿನಲ್ಲಿ ಕಲ್ಲು ಹೊಡೆಯಲಾಗಿದೆ. ಹೆಚ್ಚಿನ ಕಲ್ಲುಗಳು ಎಂಜಿನ್‌ನ ಲುಕಿಂಗ್ ಗ್ಲಾಸ್ ಮತ್ತು ಕೋಚ್ ನಂಬರ್ ಸಿ-12 ರ ಕಿಟಕಿಗಳಿಗೆ ಬಂದು ಬಿದ್ದಿವೆ. ಇಂಜಿನ್‌ನ ಮುಂಭಾಗದ ಗಾಜಿಗೆ ಕಲ್ಲು ಬಿದ್ದ ಬಳಿಕ ಲೋಕೋ ಪೈಲಟ್ ರೈಲನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಮಥುರಾದ ಜಂಕ್ಷನ್ ಸಿಗ್ನಲ್ ಬಳಿ ನಿಲ್ಲಿಸಿದ್ದರು.
ವೇಗದಲ್ಲಿದ್ದ ರೈಲು ದಿಢೀರ್ ನಿಂತಿದ್ದು ಮತ್ತು ಕಲ್ಲಿನ ದಾಳಿಯಿಂದಾಗಿ ಪ್ರಯಾಣಿಕರು ಆತಂಕಕ್ಕೀಡಾದರು. 15 ನಿಮಿಷಗಳ ಕಾಲ ರೈಲು ಇಲ್ಲಿಯೇ ನಿಂತಿತ್ತು. ಬಳಿಕ ರೈಲು ಆಗ್ರಾದ ಕ್ಯಾಂಟ್ ನಿಲ್ದಾಣಕ್ಕೆ ಬಂದಾಗ ತಪಾಸಣೆ ನಡೆಸಲಾಯಿತು. ಕೋಚ್ನ ಗಾಜುಗಳು ಒಡೆದಿರುವುದು ಕಂಡುಬಂತು. ಕಲ್ಲು ತೂರಾಟದಲ್ಲಿ ಅದೃಷ್ಟವಶಾತ್ ಯಾವುದೇ ಪ್ರಯಾಣಿಕರು ಗಾಯಗೊಂಡಿಲ್ಲ.