Friday, 22nd November 2024

ದೇವಭಾಷೆಯ ಬೆಡಗನ್ನು ಬಳಸುವ ಬೋಧಕ ಬೆಡಗುಗಳು

ತಿಳಿರು ತೋರಣ

srivathsajoshi@yahoo.com

‘ಅಪದೋ ದೂರಗಾಮೀ ಚ ಸಾಕ್ಷರೋ ನ ಚ ಪಂಡಿತಃ| ಅಮುಖಃ ಸುಟವಕ್ತಾ ಚ ಯೋ ಜಾನಾತಿ ಸ ಪಂಡಿತಃ||’ ಕನ್ನಡದಲ್ಲಿ ಹೇಳುವುದಾದರೆ- ‘ಕಾಲು
ಗಳಿಲ್ಲದೆಯೂ ಬಲುದೂರ ಸಾಗಬಲ್ಲದು; ಅಕ್ಷರಸ್ಥ ಆಗಿದ್ದರೂ ವಿದ್ಯೆ ಕಲಿತಿಲ್ಲ; ಬಾಯಿಯೇ ಇಲ್ಲದಿದ್ದರೂ ಅತ್ಯಂತ ಸ್ಪಷ್ಟವಾಗಿ ಅಭಿಪ್ರಾಯ ತಿಳಿಸಬಲ್ಲದು; ಏನಿದೆಂದು ಯಾರು ತಿಳಿದಿದ್ದಾರೋ ಅವರು ಪಂಡಿತರು.’

ಹೌದು, ಏನಿದು? ಇದೊಂದು ಒಗಟು. ಹಾಂ… ಒಗಟು ಅಂತ ಗೊತ್ತುಂಟು ಮಾರಾಯ್ರೇ, ಒಗಟಿನ ಉತ್ತರ ಏನು ಎಂದು ನಿಮ್ಮನ್ನು ಕೇಳಿದ್ದು. ಓಹ್ ಅದಾ? ಅದು… ಪತ್ರ, ಅಂದರೆ ಪೋಸ್ಟ್‌ಕಾರ್ಡು, ಇನ್‌ಲ್ಯಾಂಡ್ ಲೆಟರ್ರು, ಅಥವಾ ಲಕೋಟೆಯಲ್ಲಿಟ್ಟು ಅಂಚೆಯಲ್ಲಿ ಕಳುಹಿಸುವ ಪತ್ರ ಇರಬೇಕಲ್ಲವೇ? ಸರಿಯಾಗಿ ಹೇಳಿದ್ರಿ! ಕಾಲುಗಳಿಲ್ಲದೆಯೂ ಬಲುದೂರ ಸಾಗಬಲ್ಲದ್ದು, ಅಕ್ಷರಸ್ಥನಾಗಿಯೂ ವಿದ್ಯೆಯಿಲ್ಲದ್ದು, ಬಾಯಿಲ್ಲದೆಯೂ ಮಾತಾಡಬಲ್ಲದ್ದು ಎಂದರೆ ಪತ್ರವೇ. ಆದರೆ ಈಗ
ಅಂತರಜಾಲದ ಮೂಲಕ ಸಂವಹನ ಕ್ರಾಂತಿಯಿಂದಾಗಿ ಪತ್ರ ಲೇಖನ ಅಳಿವಿನ ಅಂಚಿನಲ್ಲಿದೆ ಎನ್ನುವುದು ವಿಷಾದಕರ ಸಂಗತಿ.

ಈಗ, ಇನ್ನೊಂದು ಒಗಟು: ‘ಕೃಷ್ಣಮುಖೀ ನ ಮಾರ್ಜಾರೀ ದ್ವಿಜಿಹ್ವಾ ನ ಚ ಸರ್ಪಿಣೀ| ಪಂಚಭರ್ತ್ರೀ ನ ಪಾಂಚಾಲೀ ಯೋ ಜಾನಾತಿ ಸ ಪಂಡಿತಃ||’ ಸಂಸ್ಕೃತ ಅರ್ಥವಾಗದವರಿಗೆ ಕನ್ನಡದಲ್ಲಿ- ‘ಕಪ್ಪುಮುಖವುಳ್ಳದ್ದು ಆದರೆ ಬೆಕ್ಕು ಅಲ್ಲ. ಎರಡೆಳೆ ನಾಲಗೆಯುಳ್ಳದ್ದು ಆದರೆ ನಾಗರಹಾವಲ್ಲ. ಐದು ಜನ ಗಂಡಂದಿರು ಆದರೆ
ದ್ರೌಪದಿಯಲ್ಲ. ಏನಿದೆಂದು ತಿಳಿದವ ಪಂಡಿತ.’ ಒಗಟಿನ ಉತ್ತರ ಗೊತ್ತಿದ್ದರೆ ಮಾತ್ರ ಪಂಡಿತ ಅಂತ ಸೇರಿಸುವುದು ಉತ್ತರ ಕಂಡು ಕೊಳ್ಳುವುದಕ್ಕೆ ಒಂದು ಕೆಣಕು-ತಿಣುಕು ಅಷ್ಟೇ. ಸರಿ, ಈ ಒಗಟಿನ ಉತ್ತರ? ಲೇಖನಿ. ಶಾಯಿಯಲ್ಲದ್ದಿ ಅಥವಾ ಶಾಯಿ ತುಂಬಿಸಿ ಬರೆಯಲಿಕ್ಕೆ ಬಳಸುವ ಪೆನ್.

ಅಚ್ಚಕನ್ನಡದಲ್ಲಿ ‘ಲೆಕ್ಕಣಿಕೆ’ ಎಂಬ ಪದ. ಈಗ ಶಾಯಿ ತುಂಬಿಸಿ ಬರೆಯುವ ಲೆಕ್ಕಣಿಕೆ ಮತ್ತು ಅಂತಹ ಅಚ್ಚಕನ್ನಡ ಪದ ಎರಡೂ ಅಳಿವಿನ ಅಂಚಿನಲ್ಲಿವೆಯೆನ್ನಿ. ಇದರಲ್ಲಿ ಕಪ್ಪು ಮುಖ ಮತ್ತು ಎರಡೆಳೆ ನಾಲಗೆ ಅಂದರೆ ಇಂಕ್‌ಪೆನ್ನಿನ ನಿಬ್ ಬಗ್ಗೆ ಹೇಳ್ತಿರೋದು ಅಂತ ಗೊತ್ತಾಗುತ್ತದೆ. ಐದು ಗಂಡಂದಿರು ಹೇಗೆ? ಲೇಖನಿ ಯನ್ನು ಹಿಡಿದುಕೊಳ್ಳುವ ಭಂಗಿಯಲ್ಲಿ ನಮ್ಮ ಕೈಯ ಐದೂ ಬೆರಳುಗಳು ಸುತ್ತುವರಿದಿರುತ್ತವಲ್ಲ, ಅವು ಲೇಖನಿಯ ಐದು ಗಂಡಂದಿರು ಎಂಬ ಕಲ್ಪನೆ!
ಹಾಗಾದರೆ, ಕೈಬೆರಳುಗಳೆಲ್ಲ ಗಂಡು ಎಂದೇ? ಇಲ್ಲ, ಹೆಬ್ಬೆಟ್ಟು ಮಾತ್ರ ಗಂಡು, ಉಳಿದ ನಾಲ್ಕೂ ಹೆಣ್ಣು. ದ್ರೌಪದಿಯೂ ಭೀಮಸೇನನನ್ನಷ್ಟೇ ತಾನೆ ನಿಜವಾದ ಗಂಡು ಎಂದುಕೊಂಡಿದ್ದು? ಲೇಖನಿಯೆಂಬ ದ್ರೌಪದಿಗೆ ಹೆಬ್ಬೆಟ್ಟೆಂಬ ಭೀಮಸೇನನ ವಿಶೇಷ ರಕ್ಷಣೆ.

ಸಾಮಾನ್ಯವಾಗಿ ಅರ್ಜುನನನ್ನು ನರ ಎನ್ನುವುದಾದರೂ ಇಲ್ಲೊಂದು ಒಗಟಿನಲ್ಲಿ ಭೀಮಸೇನನೇ ನರ. ಅರ್ಥಾತ್ ಕೈ ಬೆರಳುಗಳ ಪೈಕಿ ಹೆಬ್ಬೆಟ್ಟೊಂದೇ ನರ. ಉಳಿದುವೆಲ್ಲ ನಾರಿಯರು. ಒಗಟು ಹೀಗಿದೆ- ‘ನರನಾರೀ ಸಮುತ್ಪನ್ನಾ ಸಾ ಸ್ತ್ರೀ ದೇಹ ವಿವರ್ಜಿತಾ| ಅಮುಖೀ ಕುರುತೇ ಶಬ್ದಂ ಜಾತಮಾತ್ರಾ ವಿನಶ್ಯತೀ||’ ಕನ್ನಡ ಅನುವಾದ: ನರ-ನಾರೀ ಸಂಯೋಗದಿಂದ ಹುಟ್ಟಿದವಳೀಕೆ. ದೇಹವೇ ಇಲ್ಲದವಳು. ದೇಹವಿಲ್ಲವೆಂದ ಮೇಲೆ ಮುಖ/ಬಾಯಿ ಸಹ ಇಲ್ಲ. ಹಾಗಿದ್ದರೂ ಶಬ್ದ ಮಾಡುವಳು. ಹುಟ್ಟುತ್ತಲೇ ಸಾಯುವಳು! ಉತ್ತರ ಗೊತ್ತಾಯಿತೇ? ಚಿಟಿಕೆ ಹೊಡೆಯುವ ಪ್ರಕ್ರಿಯೆ. ಸಂಸ್ಕೃತದಲ್ಲಿ ಚಿಟಿಕೆಗೆ ‘ಛೋಟಿಕಾ’ ಎಂದು ಹೆಸರು. ಚಿಟಿಕೆ ಹೊಡೆಯಲಿಕ್ಕೆ ಹೆಬ್ಬೆರಳು ಮತ್ತು ಇತರ ನಾಲ್ಕು ಬೆರಳುಗಳ ಪೈಕಿ ಒಂದು (ಮಧ್ಯದ ಬೆರಳು ಅತಿ ಪ್ರಶಸ್ತ) ಸೇರಬೇಕು. ಸಂಸ್ಕೃತದಲ್ಲಿ ‘ಅಂಗುಷ್ಠ’ (ಹೆಬ್ಬೆರಳು) ಮಾತ್ರ ಪುಲ್ಲಿಂಗ ಪದ.

ಉಳಿದ ನಾಲ್ಕು ಬೆರಳುಗಳಿಗೆ ಅನುಕ್ರಮವಾಗಿ ತರ್ಜನೀ, ಮಧ್ಯಮಾ, ಅನಾಮಿಕಾ, ಮತ್ತು ಕನಿಷ್ಠಿಕಾ- ಇವೆಲ್ಲ ಸ್ತ್ರೀಲಿಂಗ ಪದಗಳು. ಆದ್ದರಿಂದಲೇ ನರ-ನಾರೀ ಸಮಾಗಮದಿಂದ ಚಿಟಿಕೆ ಹುಟ್ಟುವುದು ಎಂದಿದ್ದು. ಎಷ್ಟು ಮುದ್ದಾದ ಕಲ್ಪನೆ! ಒಗಟುಗಳು ಎಲ್ಲ ಭಾಷೆಗಳಲ್ಲೂ ಇವೆ. ಸಂಸ್ಕೃತದ್ದೇ ವಿಶೇಷವೇನಲ್ಲ. ಕನ್ನಡದಲ್ಲೂ ಎಂಥೆಂಥ ಚಾಲಾಕಿನ ಒಗಟುಗಳಿವೆ! ‘ಕಲ್ಲರಳಿ ಹೂವಾಗಿ ಎಲ್ಲರಿಗೆ ಬೇಕಾಗಿ ಮಲ್ಲಿಕಾರ್ಜುನನ ಶಿಖರಕ್ಕೆ ಬೆಳಕಾಗಿ ಬಲ್ಲವರು ಪೇಳಿ’, ‘ನೆತ್ತಿಯಲಿ ಉಂಬುವುದು ಸುತ್ತಲೂ ಸುರಿಸುವುದು ಎತ್ತಿದರೆ ಎರಡು ಹೋಳಹುದು ಕವಿ ತಿಳಿದರುತ್ತರವ ಪೇಳಿ’ಯಂತಹ ಸರ್ವಜ್ಞ ವಚನಗಳೂ ಒಗಟಿನ ರೂಪದವು ಇವೆ.

‘ಬಿನ್ನಣದ ಚೌಪದನ ಬೆಡಗಿಲೋದುವೆನು ಕನ್ನಡದ ಜಾಣ ತಾ ತಿಳಿದು ಪೇಳುವನು…’ ಎಂದು ಬೆಡಗಿನ ಹಾಡು ನಮಗೆ ನಾಲ್ಕನೆಯ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿತ್ತು. ಕಹಳೆ, ಚೇಳು, ಗಾಳಿಪಟ, ಅಂಗಿ, ತೆಂಗು ಉತ್ತರವಾಗಿದ್ದ ಒಗಟುಗಳು ಅದರ ಒಂದೊಂದು ಚರಣದಲ್ಲಿ. ತಂದೆಮಕ್ಕಳು ಚಿತ್ರಕ್ಕಾಗಿ ಆರ್.
ಎನ್.ಜಯಗೋಪಾಲ್ ಬರೆದ ‘ಮುಗಿಲೆತ್ತ ಓಡುತಿದೆ ಗಿರಿಗಳ ಕಡೆಗೆ…’ ಚಿತ್ರಗೀತೆಯ ಮೂರೂ ಚರಣಗಳಲ್ಲಿ ಒಂದೊಂದು ಒಗಟು ಇರುವಂತೆ. ‘ಮಗುವೆ ನನ್ನ ಒಗಟು ಕೇಳು ಅದೇನೆಂದು ಹೇಳು…’ (ಚಿರಂಜೀವಿ), ‘ ನಿನ್ನ ಒಗಟಿಗೆ ಉತ್ತರ ಕೊಡುವೆ ಬಾರೇ ಹತ್ತಿರ…’(ಬೆಳ್ಳಿಮೋಡ) ಹೀಗೆ ಹುಡುಕಿದರೆ ಕನ್ನಡದವೂ
ಬೇರೆ ಭಾಷೆಗಳವೂ ಒಗಟು ಹಾಡುಗಳು ಬೇಕಾದಷ್ಟು ಸಿಗಬಹುದು. ಆದರೆ ಸಂಸ್ಕೃತ ಒಗಟುಗಳನ್ನೇ ಇಂದಿನ ತೋರಣಕ್ಕೆ ಆಯ್ದುಕೊಂಡಿದ್ದು ಅವು ಸಂಸ್ಕೃತ ಭಾಷೆಯ ಶ್ರೀಮಂತಿಕೆಯನ್ನು ಹೇಗೆ ಸಮರ್ಥವಾಗಿ ಬಳಸುತ್ತವೆ ಎಂಬ ಅಚ್ಚರಿಯನ್ನು ನಿಮ್ಮಲ್ಲೂ ಮೂಡಿಸುವುದಕ್ಕಾಗಿ.

ಸಂಸ್ಕೃತದಲ್ಲಿ ಒಗಟುಗಳನ್ನು ‘ಪ್ರಹೇಲಿಕಾ’ ಎನ್ನುತ್ತಾರೆ. ವಾತ್ಸ್ಯಾಯನನ ಕಾಮಸೂತ್ರದಲ್ಲಿ ಹೆಸರಿಸಲ್ಪಟ್ಟ ೬೪ ಕಲೆಗಳಲ್ಲಿ ೨೮ನೆಯದು ಪ್ರಹೇಲಿಕಾ. ಒಗಟು ರಚಿಸುವ ಮತ್ತು ಬಿಡಿಸುವ ಸಾಮರ್ಥ್ಯ. ಪ್ರಹೇಲಿಕಾ ಎಂಬುದು ಸ್ಥೂಲ ಪ್ರಕಾರ ಅಷ್ಟೇ. ಅದರಲ್ಲೇ ಅಪಹ್ನುತಿ, ಕೂಟ, ಗುಪ್ತಪದ, ಅಂತರಾಲಾಪ, ಬಹಿರಾ
ಲಾಪ, ಪ್ರಶ್ನೋತ್ತರ ಮುಂತಾದ ಉಪಪ್ರಭೇದಗಳೂ, ಅವುಗಳೊಳಗೆ ಮತ್ತಷ್ಟು ವಿಂಗಡನೆಗಳೂ ಇವೆ. ಆ ಶೈಕ್ಷಣಿಕ ವಿವರಗಳತ್ತ ಹೆಚ್ಚು ತಲೆಕೆಡಿಸಿಕೊಳ್ಳದೆ, ಸರಳವಾಗಿ ಅರ್ಥವಾಗುವ ಕೆಲವು ಒಗಟು ಗಳನ್ನಷ್ಟೇ ಇಲ್ಲಿ ಆಯ್ದುಕೊಂಡಿದ್ದೇನೆ. ಕಚಗುಳಿಯಿಡುವ ಕಲ್ಪನೆಗಳು, ಊಹಿಸಲಸದಳ ಯೋಚನಾ ಸಾಧ್ಯತೆಗಳು, ಅದರಲ್ಲೇ ಭರಪೂರ ಮನೋರಂಜನೆ- ಇವೆಲ್ಲ ನನಗೆ ಸದಾ ಬೆರಗು. ಪದ- ಕಸರತ್ತುಗಳಿಗೆ ಅದ್ಭುತವಾಗಿ ಒದಗಿಬರುವ, ಬಾಗಿ-ಬಳುಕುವ ಸಂಸ್ಕೃತ ಭಾಷೆಯಂತೂ ಅನುದಿನದ ಅಚ್ಚರಿ. ಅಭಿಮಾನದ ಮಂಜರಿ.

ಒಂದು ಸರಳ ಉದಾಹರಣೆಯನ್ನು ನೋಡೋಣ: ‘ನ ತಸ್ಯಾದಿರ್ನ ತಸ್ಯಾಂತೋ ಮಧ್ಯೇ ಯಸ್ತಸ್ಯ ತಿಷ್ಠತಿ| ತವಾಪ್ಯಸ್ತಿ ಮಮಾಪ್ಯಸ್ತಿ ಯದಿ ಜಾನಾಸಿ ತದ್ವದ||’- ಕನ್ನಡಕ್ಕೆ ಅನುವಾದಿಸಿದರೆ ‘ಅದಕ್ಕೆ ಆರಂಭವೆಂಬುದಿಲ್ಲ, ಅಂತ್ಯವೆಂಬುದೂ ಇಲ್ಲ. ಮಧ್ಯದಲ್ಲಿ ಯಾರೋ ಒಬ್ಬ ನಿಂತುಕೊಂಡಿದ್ದಾನೆ. ನಿನಗೂ ಇದೆ ನನಗೂ ಇದೆ.
ತಿಳಿದಿದೆಯಾದರೆ ಹೇಳು’. ಏನಿರಬಹುದೆಂದು ಗೊತ್ತೇ ಆಗುವುದಿಲ್ಲ! ಈಗ ಅದನ್ನೇ ಇನ್ನೊಂದು ರೀತಿಯಲ್ಲಿ ಅಥೆ ಸಿ ಕೊಂಡು ಅನುವಾದಿಸೋಣ: ‘ಆರಂಭದಲ್ಲಿ ನ, ಅಂತ್ಯದಲ್ಲಿ ನ, ಮತ್ತು ಮಧ್ಯದಲ್ಲಿ ಯ ಯಾವುದಕ್ಕಿದೆಯೋ ಅದು ನಿನಗೂ ಇದೆ, ನನಗೂ ಇದೆ.

ತಿಳಿದಿದೆಯಾದರೆ ಹೇಳು.’ ಈಗ ಸುಲಭ! ‘ನಯನ’ ಉತ್ತರ. ಈ ರೀತಿ ಅಕ್ಷರಗಳನ್ನು ಜೋಡಿಸಿ ಉತ್ತರ ಕಂಡುಕೊಳ್ಳುವ ಒಗಟುಗಳು ಕನ್ನಡದಲ್ಲಿ ಇಲ್ಲವೆಂದಲ್ಲ. ‘ಬಾನಿನ ಮೊದಲಲಿ ಕವನದ ನಡುವಲಿ ಬೇಲಿಯ ಕೊನೆಯಲ್ಲಿ’ ಅಂದರೆ ‘ಬಾವಲಿ’ ಎಂದು ಉತ್ತರವಿರುವ ಒಗಟು ನೆನಪಾಗುತ್ತದೆ. ಆದರೆ ಸಂಸೃತದಲ್ಲಿ ಪದಗಳ ಲಾಸ್ಯ-ಲಾಲಿತ್ಯಗಳ ಮಟ್ಟವೇ ಬೇರೆ. ಉದಾಹರಣೆಗೆ- ‘ಪಾನೀಯಂ ಪಾತುಮಿಚ್ಛಾಮಿ ತ್ವತ್ತಃ ಕಮಲಲೋಚನೇ| ಯದಿ ದಾಸ್ಯಸಿ ನೇಚ್ಛಾಮಿ ನ ದಾಸ್ಯಸಿ ಪಿಬಾಮ್ಯಹಮ್||’ ಅಂದರೆ ‘ಕಮಲದಂಥ ಕಣ್ಣುಳ್ಳವಳೇ, ನಿನ್ನಿಂದ ನೀರು ಪಡೆಯಲಿಚ್ಛಿಸುತ್ತೇನೆ.

ಒಂದು ವೇಳೆ ಕೊಡುತ್ತಿಯಾದರೆ ನನಗೆ ಬೇಕಾಗಿಲ್ಲ. ಕೊಡುವುದಿಲ್ಲವಾದರೆ ಕುಡಿಯಬಯಸುತ್ತೇನೆ’ ಇದೆಂಥ ವಿರೋಧಾಭಾಸ! ಇಲ್ಲಿ ಬೆಡಗಿನ ಪದ ‘ದಾಸ್ಯಸಿ’. ಕೊಡುತ್ತೀಯೆ ಎಂದರ್ಥ. ಅದನ್ನೇ ‘ದಾಸಿ + ಅಸಿ’ ಎಂದು ಯಣ್‌ಸಂಧಿ ಎಂದುಕೊಂಡರೆ ಅರ್ಥ ಬದಲಾಗುತ್ತದೆ, ವಿರೋಧಾಭಾಸ ಮಾಯವಾಗುತ್ತದೆ. ನೀರು
ಬೇಕು, ಆದರೆ ನೀನು ದಾಸಿ ಅಂತಾದರೆ ನಿನ್ನಿಂದ ಬೇಡ, ದಾಸಿ ಅಲ್ಲವಾದರೆ ಬೇಕು! ಇನ್ನೊಂದು ಉದಾಹರಣೆ: ‘ಹತೇ ಹನುಮತಾ ರಾಮಃ ಸೀತಾ ಹರ್ಷಮುಪಾಗತಾ| ರುದಂತಿ ರಾಕ್ಷಸಾಃ ಸರ್ವೇ ಹಾ ಹಾ ರಾಮೋ ಹತೋ ಹತಃ||’ ಹನುಮಂತನಿಂದ ರಾಮ ಕೊಲ್ಲಲ್ಪಟ್ಟಾಗ ಸೀತೆಗೆ ಹರ್ಷವಾಯಿತು.

ಅಯ್ಯೋ ರಾಮ ಸತ್ತನಲ್ಲ ಎಂದು ರಾಕ್ಷಸರೆಲ್ಲ ಅಳತೊಡಗಿದರು! ಎಲ್ಲಾದರೂ ಉಂಟೇ? ಅದು, ಹನುಮಂತನು ಲಂಕೆಯಲ್ಲಿ ವನವನ್ನು ಸುಟ್ಟ ಕಥೆ. ಸಂಸ್ಕೃತದಲ್ಲಿ ‘ಆರಾಮ’ ಎಂಬ ಪದಕ್ಕೆ ಉದ್ಯಾನ ಎಂಬ ಅರ್ಥವಿದೆ (‘ಜನಕನ ಹೋಲುವ ದೊರೆಗಳ ಧಾಮ, ಗಾಯಕ ವೈಣಿಕರಾರಾಮ…’ ಎಂದು ಕುವೆಂಪು ಕನ್ನಡದಲ್ಲೂ ‘ಆರಾಮ’ ಬಳಸಿದ್ದಾರೆ). ಸವರ್ಣದೀರ್ಘ ಸಂಧಿ ಬಳಸಿ ಹನುಮತಾ+ಆರಾಮ ಮತ್ತು ಹಾ+ಆರಾಮ ಎಂದು ವಿಂಗಡಿಸಿದರೆ ಒಗಟಿಗೆ ಉತ್ತರ ಸಿಗುತ್ತದೆ. ಹನುಮಂತನಿಂದ ಉದ್ಯಾನವು ಭಸ್ಮವಾದಾಗ ಸೀತೆ ಹರ್ಷಗೊಂಡಳು. ರಾಕ್ಷಸರೆಲ್ಲ ಕಣ್ಣೀರಿಟ್ಟರು. ಸರಿ ತಾನೆ? ಪ್ರಶ್ನೆಯೇ ಉತ್ತರವೂ ಆಗುವುದು ಇನ್ನೊಂದು ಸೋಜಿಗ.

‘ಕಾ ಕಾಲೀ? ಕಾ ಮಧುರಾ? ಕಾ ಶೀತಲವಾಹಿನೀ ಗಂಗಾ? ಕಂ ಸಂಜಘಾನ ಕೃಷ್ಣಃ? ಕಂ ಬಲವಂತಂ ನ ಬಾಧತೇ ಶೀತಮ್?’ ಪ್ರಶ್ನೆಗಳ ಸರಮಾಲೆ. ಕಪ್ಪು ಬಣ್ಣದ್ದಾವುದು? ಸಿಹಿಯಾದ್ದು ಯಾವುದು? ತಣ್ಣಗೆ ಹರಿಯುವ ಗಂಗೆ ಎಲ್ಲಿ? ಕೃಷ್ಣನು ಯಾರನ್ನು ಕೊಂದನು? ಯಾವ ಬಲವಿದ್ದವನನ್ನು ಚಳಿಯು ಬಾಧಿಸುವುದಿಲ್ಲ?
‘ಕಾಕಾಲೀ ಕಾಮಧುರಾ ಕಾಶೀತಲವಾಹಿನೀ ಗಂಗಾ| ಕಂಸಂ ಜಘಾನ ಕೃಷ್ಣಃ ಕಂಬಲವಂತಂ ನ ಬಾಧತೇ ಶೀತಮ್’ ಎಂದು ಜೋಡಿಸಿಕೊಂಡರೆ, ಅನುಕ್ರಮ ವಾಗಿ ಕಾಗೆಗಳ ಗುಂಪು, ಕಾಮ ರೂಪೀ ಸರೋವರದ ನೀರು, ಕಾಶೀಕ್ಷೇತ್ರದಲ್ಲಿ ಹರಿಯುವ ಗಂಗೆ, ಕಂಸನನ್ನು ಕೊಂದ ಕೃಷ್ಣ, ಕಂಬಳಿ ಹೊದ್ದವನಿಗೆ ಚಳಿಯ ಬಾಧೆಯಿಲ್ಲ’ ಎಂಬ ಉತ್ತರಗಳು ಸಿಗುತ್ತವೆ.

ಇನ್ನೊಂದು, ‘ಸೀಮಂತಿ ನೀಷು ಕಾ ಶಾಂತಾ| ರಾಜಾ ಕೋಧಿಭೂತ್ ಗುಣೋತ್ತಮಃ| ವಿದ್ವದ್ಭಿಃ ಕಾ ಸದಾ ವಂದ್ಯಾ| ಅತ್ರೈವೋಕ್ತಂ ನ ಬುಧ್ಯತೇ||’ ಮೂರು
ಪ್ರಶ್ನೆಗಳು ಮತ್ತು ಉತ್ತರ ಇಲ್ಲೇ ಇದೆಯೆಂಬ ಸೂಚನೆ. ಸ್ತ್ರೀಯರಲ್ಲಿ ಅತ್ಯಂತ ಶಾಂತಳಾದವಳಾರು? ಸದ್ಗುಣಸಂಪನ್ನ ರಾಜ ಯಾರು? ವಿದ್ವಾಂಸರು ಯಾವುದನ್ನು ಸದಾ ಗೌರವಿಸುತ್ತಾರೆ? ಉತ್ತರಗಳು: ಸೀತಾ, ರಾಮಃ, ವಿದ್ಯಾ. ಪ್ರತಿ ಚರಣದ ಮೊದಲ ಮತ್ತು ಕೊನೆಯ ಅಕ್ಷರಗಳ ಜೋಡಣೆಯಿಂದ ಸಿಕ್ಕಂಥವು! ಕಲ್ಪನೆಯ ರಮ್ಯತೆಯಿಂದಾಗಿ ಇಷ್ಟವಾಗುವಂಥವು ಕೆಲವಿವೆ: ‘ತರುಣ್ಯಾಲಿಂಗಿತಃ ಕಂಠೇ ನಿತಂಬಸ್ಥಲಮಾಶ್ರಿತಃ| ಗುರೂಣಾಂ ಸನ್ನಿಧಾನೇಧಿಪಿ ಕಃ ಕೂಜತಿ ಮುಹುರ್ಮುಹುಃ||’ ತರುಣಿಯು ಕುತ್ತಿಗೆಯ ಸುತ್ತ ಆಲಿಂಗಿಸಿಕೊಂಡಿರಲು, ಅವಳ ಸೊಂಟವನ್ನೇ ಆಶ್ರಯಿಸಿ ಆನಂದಿಸುತ್ತ, ಸುತ್ತಮುತ್ತ ದೊಡ್ಡವರೆಲ್ಲ ಇರುವುದನ್ನೂ ಲೆಕ್ಕಿಸದೆ ಸುಖೋದ್ರೇಕದಲ್ಲಿ ಮುಲುಗುತ್ತಿರುವವನು ಯಾರು? ಓಹೋ! ಶೃಂಗಾರಭರಿತ ಚಿತ್ರಣ ಕಣ್ಮುಂದೆ ಬಂತೇ?

ಉತ್ತರ: ಜಲಕುಂಭ ಅರ್ಥಾತ್ ಕೊಡಪಾನ. ತರುಣಿಯು ಅದರ ಕುತ್ತಿಗೆಯನ್ನು ಹಿಡಿದು ಸೊಂಟದ ಮೇಲೆ ತಾನೆ ಇಟ್ಟುಕೊಳ್ಳುವುದು? ಅದು ತುಂಬಿದ ಕೊಡ ಅಲ್ಲವಾದ್ದರಿಂದ ತುಳುಕುವ ಮೆಲುಕಾಟ ದೊಡನೆ ತಾನೆ ಸಾಗುವುದು? ಇದನ್ನು ಇಷ್ಟು ಸುಸಂಸ್ಕೃತವಾಗಿ ಶೃಂಗಾರಮಯವಾಗಿ ಬೇರೆ ಭಾಷೆಗಳಲ್ಲಿ ಬಣ್ಣಿಸುವುದು ಕಷ್ಟವಿದೆ.

ಇನ್ನೊಂದು, ‘ಏಕಚಕ್ಷುರ್ನ ಕಾಕೋಧಿಯಂ ಬಿಲಮಿಚ್ಛನ್ನ ಪನ್ನಗಃ| ಕ್ಷೀಯತೇ ವರ್ಧತೇ ಚೈವ ನ ಸಮುದ್ರೋ ನ ಚಂದ್ರಮಾಃ||’- ಒಂದೇ ಕಣ್ಣುಳ್ಳದ್ದು ಆದರೆ ಕಾಗೆಯಲ್ಲ, ಬಿಲವನ್ನು ಇಷ್ಟಪಡುತ್ತದೆ ಆದರೆ ಹಾವಲ್ಲ, ಕುಗ್ಗುತ್ತದೆ ಮತ್ತು ಹಿಗ್ಗುತ್ತದೆ ಆದರೆ ಸಮುದ್ರವೂ ಅಲ್ಲ ಚಂದ್ರಮನೂ ಅಲ್ಲ! ಉತ್ತರ: ಸೂಜಿ. ಬರೀ ಸೂಜಿ ಎಂದರಷ್ಟೇ ಸಾಲದು, ಸೂಜಿಗೆ ದಾರ ಹಾಕಿ ಕೈಯಿಂದ ಬಟ್ಟೆಯನ್ನು ಹೊಲಿಯುವ ಪ್ರಕ್ರಿಯೆಯನ್ನು ಊಹಿಸಿ. ಬಟ್ಟೆಯಲ್ಲಿ ತೂತುಮಾಡಿ ಒಳಹೊಕ್ಕ ಸೂಜಿ ಅಲ್ಲೊಮ್ಮೆ ಕುಗ್ಗುತ್ತದೆ; ಹೊಲಿಗೆ ಗಟ್ಟಿಯಾಗಬೇಕಾದರೆ ಹೊಲಿಯುವವನು ದಾರಸಮೇತ ಸೂಜಿಯನ್ನು ಮೇಲಕ್ಕೆಳೆಯುತ್ತಾನಲ್ಲ, ಅಲ್ಲಿ ಹಿಗ್ಗುತ್ತದೆ!

ವೃಕ್ಷಾಗ್ರವಾಸೀ ನ ಚ ಪಕ್ಷಿರಾಜಸ್ತ್ರಿನೇತ್ರಧಾರೀ ನ ಚ ಶೂಲಪಾಣಿಃ| ತ್ವಗ್ವಸ್ತ್ರಧಾರೀ ನ ಚ ಸಿದ್ಧಯೊಗೀ| ಜಲಂ ಚ ಬಿಭ್ರನ್ನ ಘಟೋ ನ ಮೇಘಃ||’ – ನೀನು ಹೇಳಿದ ಬೆಡಗು ತೆಂಗು ಕಾಣಣ್ಣ ಕನ್ನಡದ ಜಾಣ ತಾ ತಿಳಿದು ಪೇಳ್ದಣ್ಣ. ಈ ಧಾಟಿಯದೇ ಇನ್ನೊಂದು: ‘ಜಾತ್ಯಾ ವಿಹಂಗೋ ನ ಪರಂ ಸಪಕ್ಷಃ ಶಬ್ದಾಯ ಮಾನೋ ಗಗನೇ ವಿಹಾರೀ| ಯುದ್ಧಾನುಕೂಲೋ ನ ಗಜೋ ನ ಚಾಶ್ವಃ ವಿವಿಚ್ಯ ನಾಮ್ನಾ ವದ ಕಿಂ ತದೇತತ್||’ ಪಕ್ಷಿ ಜಾತಿಯದು, ರೆಕ್ಕೆಗಳೂ ಇವೆ, ಆದರೆ ಗರಿಗಳಿಲ್ಲ; ಶಬ್ದ ಮಾಡುತ್ತ ಗಗನದಲ್ಲಿ ಸಂಚರಿಸುತ್ತದೆ; ಯುದ್ಧ ಮಾಡಲಿಕ್ಕೂ ನೆರವಾಗುತ್ತದೆ ಆದರೆ ಆನೆಯಾಗಲೀ ಕುದುರೆಯಾಗಲೀ ಅಲ್ಲ.

ಚೆನ್ನಾಗಿ ಯೋಚಿಸಿ ಹೇಳು ಅದೇನೆಂದು. ಉತ್ತರ ವಿಮಾನ ಎಂದಷ್ಟೇ ಹೇಳಿದರೆ ಸ್ವಾರಸ್ಯ ಕಡಿಮೆ. ಮೊನ್ನೆ ಪ್ರಧಾನಿ ಮೋದಿಯವರು ಬೆಂಗಳೂರಿನಲ್ಲಿ ಪ್ರಾಯೋಗಿಕ ಹಾರಾಟ ನಡೆಸಿಕೊಂಡು ಬಂದರಲ್ಲ, ಅಂತಹ ‘ತೇಜಸ್’ ರೀತಿಯ ಯುದ್ಧವಿಮಾನ! ರೋಚಕ ನಿರೂಪಣೆಯ ಇನ್ನೊಂದು ಉದಾಹರಣೆ ‘ಪೀಠಾಃ
ಕಚ್ಛಪವತ್ತರಂತಿ ಸಲಿಲೇ ಸಮ್ಮಾರ್ಜನೀ ಮೀನವತ್| ದರ್ವೀ ಸರ್ಪವಿಚೇಷ್ಟಿತಂ ಚ ಕುರುತೇ ಸಂತ್ರಾಸಯಂತೀ ಶಿಶೂನ್| ಶೂರ್ಪಾರ್ಧಾವೃತಮಸ್ತಕಾ ಚ ಗೃಹಿಣೀ ಭಿತ್ತಿಃ ಪ್ರಪಾತೋ ನ್ಮುಖೀ|

ರಾತ್ರೌ ಪೂರ್ಣತಡಾಗಸನ್ನಿಭಮಭೂತ್ ರಾಜನ್ ಮದೀಯಂ ಗೃಹಮ್||’ ಕನ್ನಡದಲ್ಲಿ ಭಾವಾರ್ಥ: ‘ಪೀಠೋಪಕರಣಗಳು ಆಮೆಯಂತೆ ಈಜಾಡಿದುವು. ಪೊರಕೆಗಳು ಮೀನಿನಂತೆ ತೇಲಾಡಿದುವು. ಸಟ್ಟುಗಗಳು ಸರ್ಪಗಳಂತೆ ಹರಿದಾಡಿ ಚಿಕ್ಕಮಕ್ಕಳನ್ನೆಲ್ಲ ಹೆದರಿಸಿದುವು. ಬೀಸಣಿಗೆಯನ್ನು ತಲೆಗೆ ಆಶ್ರಯವಾಗಿ
ಹಿಡಿದ ಹೆಂಡತಿಯು ಗೋಡೆ ಬಿದ್ದೇಬಿಟ್ಟಿತೇನೋ ಎಂದು ಭೀತಳಾದಳು.’ ಏನದು ಅಂತಹ ವಿಚಿತ್ರ ಸನ್ನಿವೇಶ? ಒಮ್ಮೆ ನಗರದಲ್ಲಿ ರಾತ್ರಿಯಿಡೀ ಧೋ ಎಂದು ಮುಸಲಧಾರೆ ಮಳೆ ಸುರಿಯಿತು.

ಮಾರನೆ ದಿನ ಬೆಳಗ್ಗೆ ಅಲ್ಲಿಯ ಅರಸನು ಪ್ರಜೆಗಳ ಯೋಗಕ್ಷೇಮ ವಿಚಾರಿಸುತ್ತ ನಗರದರ್ಶನ ಮಾಡಿದನು. ಒಬ್ಬ ಬಡಪಾಯಿ ಪ್ರಜೆಯು ರಾತ್ರಿಯಲ್ಲಿ ಸುರಿದ ಮಳೆಯಿಂದಾಗಿ ತನ್ನ ಮನೆಯು ಅಕ್ಷರಶಃ ಒಂದು ಸರೋವರವೇ ಆಗಿಹೋದ ಪರಿಸ್ಥಿತಿಯನ್ನು ರಾಜನಲ್ಲಿ ಕಾವ್ಯಾತ್ಮಕವಾಗಿ ತೋಡಿಕೊಂಡನು, ಮೇಲೆ ಹೇಳಿದ
ಒಗಟಿನ ರೀತಿಯಲ್ಲಿ! ಇಷ್ಟೊಂದು ಕಾವ್ಯಾತ್ಮಕ ಅಲ್ಲದಿದ್ದರೂ, ಮಳೆ-ಗಾಳಿ ಪರಿಣಾಮದ ಇನ್ನೊಂದು ರೋಚಕ ಬಣ್ಣನೆ ನನಗಿಲ್ಲಿ ನೆನಪಾಗುತ್ತಿದೆ. ದಶಕಗಳ ಹಿಂದೆ ಹಳ್ಳಿಯಲ್ಲಿ ನಮ್ಮನೆಯಲ್ಲೇ ನಡೆದದ್ದು. ನಮ್ಮಲ್ಲಿ ತೋಟದ ಕೆಲಸಕ್ಕೆ ಬರುತ್ತಿದ್ದ ಕೋಟಿ ಗೌಡ ಎಂಬವನ ಉಕ್ತಿ. ಹಾಗಾಗಿ ಅಪ್ಪಟ ಜನಪದ. ಒಮ್ಮೆ ಮುಂಗಾರು ಮಳೆಯ ಅಬ್ಬರಕ್ಕೆ ಗಾಳಿಯ ಜೋಡಾಟವೂ ಸೇರಿ ರಾತ್ರಿಯೆಲ್ಲ ಭೀಕರ ವಾತಾವರಣ ಉಂಟಾಗಿತ್ತು.

ಮಾರನೆ ದಿನ ಬೆಳಗ್ಗೆ ತೋಟವನ್ನೆಲ್ಲ ಸುತ್ತಿಕೊಂಡು ಬಂದ ಕೋಟಿ ಗೌಡ ತುಳು ಭಾಷೆಯಲ್ಲಿ ಹೇಳಿದ್ದಿಷ್ಟೇ: ‘ಬೊಂಡೊಲು ಪಿರೆಡ್ಡುವೊ. ಕುಕ್ಕುಲೆಡ್ ಕಾರ್ ದೀವಾರಾ ಆಪುಜಿ!’ ಅಂದರೆ, ತೆಂಗಿನಮರಗಳಿಂದ ಬಿದ್ದಿರುವ ಸಿಯಾಳಗಳೆಲ್ಲ ನೆಲದಲ್ಲಿ ಹೊರಳಾಡುತ್ತಿವೆ. ಮಾವಿನಹಣ್ಣುಗಳಿಂದಂತೂ ನೆಲದ ಮೇಲೆ ಕಾಲಿಡಲಿಕ್ಕೇ ಜಾಗವಿಲ್ಲ! ಕೋಟಿಯ ಆ ಕಾಮೆಂಟರಿಯನ್ನು ನಮ್ಮನೆಯಲ್ಲಿ ಈಗಲೂ ಕೆಲವೊಮ್ಮೆ ನೆನಪಿಸಿಕೊಳ್ಳುವುದಿದೆ. ಮಳೆ-ನೀರು-ಪ್ರವಾಹಕ್ಕೆ ಸಂಬಂಽಸಿದಂತೆ, ಜಲವೃಷ್ಟಿ ಎಂಬ ಉತ್ತರದ ಒಂದು ರೋಚಕ ಒಗಟಿನಿಂದಲೇ ಸಮಾಪ್ತಿಗೊಳಿಸುತ್ತೇನೆ.

‘ಜಾತಾ ಶುದ್ಧಕುಲೇ ಜಘಾನ ಪಿತರಂ ಹತ್ವಾಪಿ ಶುದ್ಧಾಂ ಪುನಃ| ಸ್ತ್ರೀ ಚೈಷಾ ವನಿತಾ ಪಿತೈವ ಸತತಂ ವಿಶ್ವಸ್ಯ ಯಾ ಜೀವನಮ್| ಸಂಗಂಪ್ರಾಪ್ಯ ಪಿತಾಮಹೇನ ಜನಕಂ ಪ್ರಾಸೂತ ಯಾ ಕನ್ಯಕಾ| ಸಾ ಸರ್ವೈರಪಿ ವಂದಿತಾ ಕ್ಷಿತಿತಲೇ ಸಾ ನಾಮ ಕಾ ನಾಯಿಕಾ||’ ಶುದ್ಧಕುಲದಲ್ಲಿ ಜನಿಸಿದವಳು, ತಂದೆಯನ್ನೇ ಕೊಂದಳು. ಆದರೂ ಶುದ್ಧಳೆನಿಸಿದಳು. ವನಿತೆಯಾಗಿದ್ದೂ ಲೋಕಪಾಲನೆ ಮಾಡಿ ಒಬ್ಬ ತಂದೆಯ ಜವಾಬ್ದಾರಿ ತೋರಿದಳು. ಈ ಕನ್ನಿಕೆಯು ಅಜ್ಜನೊಡನೆ ಸಮಾಗಮಿಸಿ ತಂದೆಯನ್ನು ಹೆತ್ತಳು! ಅಂಥವಳನ್ನು ಭೂಮಿಯಲ್ಲಿ ಎಲ್ಲರೂ ನಾಯಕಿಯೆಂದು ವಂದಿಸುತ್ತಾರೆ. ಇದರ ವಿವರಣೆ ಹೀಗೆ: ಮೋಡಗಳಿಂದ ಹುಟ್ಟುವ ಜಲಬಿಂದುಗಳು ಮಳೆಯಾದಾಗ ಆ ಮೋಡಗಳನ್ನೇ ಇಲ್ಲವಾಗಿಸುತ್ತದೆ (ತಂದೆಯನ್ನು ಕೊಲ್ಲುವುದು); ಆದರೂ ಪರಿಶುದ್ಧ ಜಲ ಎಂದೆನಿಸಿಕೊಳ್ಳುತ್ತದೆ.

ಜಗತ್ತಿಗೆಲ್ಲ ಜೀವನಕ್ಕೆ ಆಧಾರವಾಗುತ್ತದೆ (ತಂದೆಯಂತೆ ಜವಾಬ್ದಾರಿ); ನದಿ ಯಾಗಿ ಹರಿದು ಸಮುದ್ರವನ್ನು ಸೇರುತ್ತದೆ. ಸಮುದ್ರವೆಂದರೆ ಮೋಡಗಳ ಜನಕ, ಜಲಬಿಂದುಗಳಿಗೆ ಅಜ್ಜ. ಸಮುದ್ರದಿಂದ ಮತ್ತೊಮ್ಮೆ ಮೋಡ ಹುಟ್ಟುವುದಕ್ಕೆ (ಅಜ್ಜನೊಡನೆ ಸಮಾಗಮದಿಂದ ತಂದೆಯನ್ನು ಹೆರುವುದು) ಕಾರಣವಾಗುತ್ತದೆ. ಯೋಚಿಸಿದರೆ ಈ ಜಗ ಎಂತಹ ಸೋಜಿಗ! ಸಂಸ್ಕೃತದ ಹಿರಿಮೆಯೂ ಅಷ್ಟೇ ಸೋಜಿಗ !