ಸಂವಿಧಾನ ಸಿರಿ
ಡಾ.ಸುಧಾಕರ ಹೊಸಳ್ಳಿ
ಸಂವಿಧಾನ ರಚನೆ ಸಂಬಂಽತ ಸಭೆಯ ತಮ್ಮ ಸುದೀರ್ಘ ಪಯಣದಲ್ಲಿ, ನಿಯಮಕ್ಕೆ ಕೊಟ್ಟ ಸ್ಥಾನಮಾನವನ್ನು ನೈತಿಕತೆಗೂ ಹಂಚಿದ ಕೀರ್ತಿ ಅಂಬೇಡ್ಕರ್ ಅವರದ್ದು. ಕಾನೂನುಗಳ ಅಳವಡಿಕೆಗೆ ಹೊಂದಿದ್ದ ಕಟಿಬದ್ಧತೆಯನ್ನು ಅವರು ರಾಷ್ಟ್ರದ ಸ್ಥಿರತೆಗೂ ವಿಸ್ತರಿಸಿದ್ದು ವಿಶೇಷ. ಸಂವಿಧಾನ ರಚನಾ ಸಭೆಯಲ್ಲಿನ ತಮ್ಮ ಮೊದಲ ಭಾಷಣದಲ್ಲಿ ಅವರು ಉಲ್ಲೇಖಿಸಿದ ಅನೇಕಾನೇಕ ಸಂಗತಿಗಳು ರಾಷ್ಟ್ರಪ್ರೇಮದ ಸೆಲೆಯನ್ನು ಅನಾವರಣ ಮಾಡುತ್ತವೆ.
ಅಂಬೇಡ್ಕರ್ ಅವರನ್ನು ‘ಸಂವಿಧಾನ ಶಿಲ್ಪಿ’ ಎಂದಷ್ಟೇ ಅಲ್ಲದೆ, ಸಮಾನತೆಯ ಹರಿಕಾರ, ನಿಯಮಗಳ ಅನುಷ್ಠಾನಕಾರ, ಮೀಸಲಾತಿ ನೀಡಿಕೆಯ ಮಹಾ ತಪಸ್ವಿ ಎಂದೆಲ್ಲ ವರ್ಣಿಸುವುದುಂಟು, ವಿಶ್ಲೇಷಿಸಿ ವಿಮರ್ಶಿಸುವುದುಂಟು. ಮಾತ್ರವಲ್ಲ, ಅವರ ಜನ್ಮದಿನ ವಾದ ಏಪ್ರಿಲ್ ೧೪ರಂದು, ‘ಸಂವಿ ಧಾನ ದಿನ’ವಾದ ನವೆಂಬರ್ ೨೬ರಂದು ಹಾಗೂ ಅವರ ಮಹಾಪರಿನಿರ್ವಾಣದ ದಿನವಾದ ಡಿಸೆಂಬರ್೬ರಂದು ರಾಷ್ಟ್ರಾದ್ಯಂತ ಅಂಬೇಡ್ಕರರ ಸ್ಮರಣೆ ಮುಗಿಲು ಮುಟ್ಟುತ್ತದೆ. ‘ನಮ್ಮ ಉಸಿರ ಬಿಸಿ ತಗ್ಗಿದ್ದು ಕೂಡ ಅಂಬೇಡ್ಕರ ರಿಂದಲೇ’ ಎಂಬ ಕೃತಜ್ಞತಾಭಾವವು ಶೋಷಿತ ವರ್ಗದಿಂದ ಕಾಲಾನು ಕಾಲಕ್ಕೆ ಹೊಮ್ಮುವುದಿದೆ.
ಅಂಬೇಡ್ಕರರ ಕುರಿತಾದ ಅಭಿಮಾನ, ಶ್ಲಾಘನೆಗಳು ಮಾತ್ರವಲ್ಲದೆ, ಅವರು ಕೊಡ ಮಾಡಿದ ಹಕ್ಕುಗಳು, ನ್ಯಾಯಿಕ ನಿಯಮಗಳು, ಪೌರತ್ವದ
ಪರಿಕಲ್ಪನೆಯ ಸುತ್ತಲೇ ಬಹುತೇಕ ಅಭಿಪ್ರಾಯಗಳು ಗಿರಕಿ ಹೊಡೆಯುತ್ತವೆ. ಸಂವಿಧಾನದ ಕರಡು ರಚನೆಯ ಸಂದರ್ಭದಲ್ಲಿ ಅಂಬೇಡ್ಕರರು ವಹಿಸಿದ
ಅಪಾರ ಶ್ರಮದ ಕುರಿತೂ ಹತ್ತು ಹಲವು ಚರ್ಚೆ ಗಳಾಗುತ್ತವೆ. ಸಂವಿಧಾನದ ರಚನೆಯ ನಿಟ್ಟಿನಲ್ಲಿ ಅವರು ವಿಶ್ವದ ಹಲವು ಸಂವಿಧಾನಗಳನ್ನು
ಅಧ್ಯಯನ ಮಾಡಿದ್ದು, ಮೀಸ ಲಾತಿಯ ವಿಸ್ತರಣೆಯ ಕುರಿತ ಚಿಂತನೆ ಇವು ಚರ್ಚೆಯ ಹೃದಯ ಭಾಗವಾಗುತ್ತವೆ.
ಇವೆಲ್ಲವೂ ಸ್ವೀಕೃತವೇ ಹೌದು. ಅಂಬೇಡ್ಕರರನ್ನು ಹೊರತುಪಡಿಸಿದ ಸಂವಿಧಾನ ರಚನೆಯ ಕಸರತ್ತನ್ನು ಕಲ್ಪಿಸಿಕೊಳ್ಳಲೂ ಆಗದು. ಈ ಎಲ್ಲ ಕಾರಣ ಗಳಿಂದಾಗಿ ಅಂಬೇಡ್ಕರರನ್ನು ಒಬ್ಬ ಶ್ರೇಷ್ಠ ಸಂವಿಧಾನ ತಜ್ಞ, ಅರ್ಥಶಾಸ್ತ್ರಜ್ಞ ಎಂದೆಲ್ಲ ಕೆಲವರು ವ್ಯಾಖ್ಯಾನಿಸುವು ದುಂಟು. ಆದರೆ ಅಂಬೇಡ್ಕರರನ್ನು ಮತ್ತೊಂದು ಆಯಾಮದಲ್ಲಿ ನೋಡುವ ಅನಿವಾರ್ಯವಿದೆ. ಅದೆಂದರೆ-ಅವರೊಳಗಿನ ರಾಷ್ಟ್ರೀಯ ಪ್ರಜ್ಞೆ. ಅದು ನಿಜಾರ್ಥದಲ್ಲಿ ಜಾಗೃತಜ್ಯೋತಿ ಆಗಿತ್ತು. ಆದರೆ ಈ ಅದಮ್ಯ ಧ್ಯೇಯವನ್ನು ಸಾರ್ವತ್ರಿಕವಾಗಿ ವಿಮರ್ಶೆಗೆ ಹಚ್ಚಿದ್ದು ತೀರಾ ವಿರಳ ಎನ್ನಬೇಕು. ಅಂಬೇಡ್ಕರರ ಈ ನೈಜ ರಾಷ್ಟ್ರ ಪ್ರೇಮ ವನ್ನು ಒರೆಗೆ ಹಚ್ಚುವ ಅವಶ್ಯಕತೆಯಿದೆ.
ಸಂವಿಧಾನ ರಚನೆ ಸಂಬಂಧಿತ ಸಭೆಯ ತಮ್ಮ ಸುದೀರ್ಘ ಪಯಣದಲ್ಲಿ, ನಿಯಮಕ್ಕೆ ಕೊಟ್ಟ ಸ್ಥಾನಮಾನವನ್ನು ನೈತಿಕತೆಗೂ ಹಂಚಿದ ಕೀರ್ತಿ
ಅವರದ್ದು. ಕಾನೂನುಗಳ ಅಳವಡಿಕೆಗೆ ಹೊಂದಿದ್ದ ಕಟಿಬದ್ಧತೆಯನ್ನು ಅವರು ರಾಷ್ಟ್ರದ ಸ್ಥಿರತೆಗೂ ವಿಸ್ತರಿಸಿದ್ದು ವಿಶೇಷ. ೧೯೪೯ರ ಡಿಸೆಂಬರ್ ೧೭ರ
ಸಂವಿಧಾನ ರಚನಾ ಸಭೆಯಲ್ಲಿನ ತಮ್ಮ ಮೊದಲ ಭಾಷಣದಲ್ಲಿ ಅವರು ಉಲ್ಲೇಖಿಸಿದ ಅನೇಕಾನೇಕ ಸಂಗತಿಗಳು ರಾಷ್ಟ್ರಪ್ರೇಮದ ಸೆಲೆಯನ್ನು ಅನಾವ
ರಣ ಮಾಡುತ್ತವೆ. ಉದಾಹರಣೆಗೆ, ನೆಹರುರವರು ಮಂಡಿಸಿದ ಗಣರಾಜ್ಯದ ನಿರ್ಣಯವನ್ನು ಕುರಿತು, ‘ರಾಷ್ಟ್ರಗಳ ಗಂತವ್ಯಗಳನ್ನು ನಿರ್ಧರಿಸುವಾಗ ವ್ಯಕ್ತಿಗಳ, ಪಕ್ಷಗಳ ಗಂತವ್ಯಗಳನ್ನು ಪರಿಗಣನೆಗೆ ತೆಗೆದುಕೊಳ್ಳ ಬಾರದು; ಎಲ್ಲದರಲ್ಲೂ ರಾಷ್ಟ್ರ ವನ್ನೇ ಆದ್ಯತೆಯಾಗಿ ಪರಿಗಣಿಸಬೇಕು’ ಎಂದು
ಅಂಬೇಡ್ಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಂತೆಯೇ ಸಂವಿಧಾನ ರಚನಾ ಸಭೆಯಲ್ಲಿ, ಮುಸ್ಲಿಂ ಲೀಗ್ ಅನ್ನು ಸಭೆಯೊಳಗೆ ಬರುವಂತೆ ಮಾಡಬೇಕೆಂಬ ಸಲಹೆ ನೀಡುತ್ತಾ, ‘ಒಂದು ತಿದ್ದುಪಡಿ ಯನ್ನು ಸದಾ ಬಲಾ ತ್ಕಾರವಾಗಿ ಹೇರುತ್ತಾ ಭೀತಿಯನ್ನುಂಟುಮಾಡುವುದು ವಿಜಯವಲ್ಲ. ನೀವು ಯಶಸ್ವಿಯಾಗದಿದ್ದರೆ ನಿಮಗೆ ಯಾವ ಆಕಾರವೂ ಉಳಿಯುವುದಿಲ್ಲ. ಶಾಂತಿ-ಸಂಧಾನ ವಿಫಲವಾದರೆ ಬಲಪ್ರಯೋಗ ಉಳಿಯುತ್ತದೆ; ಆದರೆ ಬಲಪ್ರಯೋಗವು ವಿಫಲ ವಾದರೆ ಶಾಂತಿ- ಸಂಧಾನದ ಯಾವ ನಿರೀಕ್ಷೆಯೂ ಉಳಿಯುವುದಿಲ್ಲ’ ಎಂದಿದ್ದಾರೆ. ಈ ಹೇಳಿಕೆಯು ಅಂಬೇಡ್ಕರರು ಐಕ್ಯ ರಾಷ್ಟ್ರವನ್ನು ಎಷ್ಟು ಗಟ್ಟಿಯಾಗಿ ಪ್ರತಿಪಾದಿಸುತ್ತಿದ್ದರು ಎಂಬುದರ ದ್ಯೋತಕವಾಗಿದೆ.
‘ರಾಷ್ಟ್ರ ಕಟ್ಟುವಾಗ ಜನಗಳನ್ನು ಭೀತಿಗೀಡುಮಾಡುವಂಥ ಶಬ್ದಗಳನ್ನು ಪಕ್ಕಕ್ಕಿಡೋಣ. ನಾವು ಬರೀ ಘೋಷ ವಾಕ್ಯಗಳಿಂದ ದೇಶ ಕಟ್ಟಲಾಗು ವುದಿಲ್ಲ ಎಂದು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ’ ಎಂಬ ಅವರ ಅಭಿಪ್ರಾಯವು, ಸಮಚಿತ್ತದ ರಾಷ್ಟ್ರವನ್ನು ಕಟ್ಟುವಾಗ ಸಂವಿಧಾನ ರಚನಾ ಸಭೆಯ ಜವಾಬ್ದಾರಿ ಏನೆಂಬುದನ್ನು ಸೂಚಿಸುತ್ತದೆ. ಮತ್ತೊಂದು ಸಂದರ್ಭದಲ್ಲಿ, ‘ನಮ್ಮಲ್ಲಿ ಜಾತಿ ಮತಗಳ ನಡುವೆಯೂ ನಾವು ಯಾವುದೋ ಒಂದು
ರೂಪದಲ್ಲಿ ಸಂಯುಕ್ತ ಜನಾಂಗವಾಗುತ್ತೇವೆ ಎನ್ನುವುದರಲ್ಲಿ ನನಗೆ ಕಿಂಚಿತ್ತೂ ಅನುಮಾನವೇ ಇಲ್ಲ’ ಎನ್ನುತ್ತಾರೆ.
ಬಹುತ್ವದಲ್ಲೂ ಏಕತೆ ಸಾಧ್ಯವೆಂಬ ಆಶಾವಾದ ಇಟ್ಟುಕೊಂಡಿದ್ದಕ್ಕೆ ಸದರಿ ದೃಷ್ಟಿಕೋನ ಸಾಕ್ಷೀಭೂತವಾಗಿ ನಿಲ್ಲುತ್ತದೆ. ‘ಸಮಯ ಮತ್ತು ಸನ್ನಿವೇಶ ಒಟ್ಟುಗೂಡಿದರೆ ಈ ದೇಶವು ಒಂದಾಗುವುದನ್ನು ಜಗತ್ತಿನ ಯಾವುದೇ ಶಕ್ತಿಯೂ ತಡೆಯಲಾರದು’ ಎನ್ನುವ ಅವರ ಮಾತು ಕೇವಲ ಅಭಿವ್ಯಕ್ತತೆ ಅಲ್ಲ, ಅದು ಅಚಲವಾದ ನಂಬಿಕೆಯಾಗಿ ಉಳಿದದ್ದು. ‘ಈ ಸಭೆಯು ಸಾರ್ವಭೌಮ ಅಧಿಕಾರ ವನ್ನು ತನ್ನದನ್ನಾಗಿ ಮಾಡಿಕೊಂಡಿದ್ದರೆ, ಅದನ್ನು ವಿವೇಕದಿಂದ ಪ್ರಯೋಗಿಸಲು ಸಿದ್ಧವಾಗಿದೆ ಎನ್ನುವುದನ್ನು ನಮ್ಮ ನಡವಳಿಕೆಯಿಂದ ಸಾಧಿಸಿ ತೋರಿಸೋಣ’ ಎನ್ನುತ್ತಾರೆ ಅಂಬೇಡ್ಕರ್.
‘ದೇಶದ ಎಲ್ಲ ವಿಭಾಗಗಳೊಡನೆ ವ್ಯವಹರಿಸುವಾಗ ನಮಗೆ ಇರುವುದು ಅದೊಂದೇ ಮಾರ್ಗ. ಒಗ್ಗಟ್ಟಿನೆಡೆಗೆ ನಮ್ಮನ್ನು ಕರೆದೊಯ್ಯಲು ಬೇರೆ ಮಾರ್ಗ ವಿಲ್ಲ. ಈ ವಿಷಯವಾಗಿ ನಾವು ಯಾವುದೇ ಅನುಮಾನ ಇಟ್ಟುಕೊಳ್ಳದಿರೋಣ’ ಎಂಬ ಅವರ ಮಾತು, ಒಟ್ಟುಗೂಡಿಸುವ ಪ್ರಕ್ರಿಯೆಯಲ್ಲಿ ಸಂಯಮ ಮತ್ತು ಪ್ರಜ್ಞೆ ಎಷ್ಟು ಮುಖ್ಯ ಎಂಬುದನ್ನು ಸಮರ್ಥಿಸುತ್ತದೆ. ‘ಸಂವಿಧಾನ ರಚನಾ ಸಭೆಯು ಅಖಂಡವಾಗಿ ಕಾರ್ಯನಿರ್ವಹಿಸುತ್ತದೆ. ಹಾಗಾದಾಗ ಮಾತ್ರ ಈ ಸಭೆಗೂ ಶೋಭೆ’ ಎನ್ನುವ ಮುಖಾಂತರ ಸಭೆಯ ಯಶಸ್ಸಿನ ದೃಷ್ಟಿಯಿಂದ ಅಖಂಡತೆಯ ಸಂದೇಶವನ್ನು ನೀಡಿದ್ದರು ಅಂಬೇಡ್ಕರ್.
‘ಏಕತೆಯ ಕಡೆಗೆ ನಮ್ಮನ್ನು ಕರೆದೊಯ್ಯುವ ಹಾದಿಯಲ್ಲಿ ಸಾಗಲು, ನಮ್ಮಲ್ಲಿರುವ ವೈವಿಧ್ಯಪೂರ್ಣ ಜನಸಮುದಾಯ ಒಮ್ಮತದ ತೀರ್ಮಾನವನ್ನು
ತೆಗೆದುಕೊಳ್ಳುವಂತೆ ಮಾಡುವುದು ಹೇಗೆ ಎನ್ನುವುದೇ ಸಂಕಷ್ಟ’ ಎಂಬ ಆತಂಕವನ್ನು ಕೂಡ ಅವರು ವ್ಯಕ್ತಪಡಿಸಿ ದ್ದರು. ಹೀಗೆ ಒಟ್ಟು ಸಂವಿಧಾನ
ರಚನಾ ಸಭೆಯ ಕಾರ್ಯಚಟುವಟಿಕೆಯಲ್ಲಿ ರಾಷ್ಟ್ರೀಯತೆಯ, ಐಕ್ಯತೆಯ ಚೌಕಟ್ಟು ಮೀರಲಾರದ ಹಾಗೆ ಎಚ್ಚರ ವಹಿಸಿ, ಅಂಥ ಮೂಲಾಂಶಗಳು ಸಂವಿಧಾನದ ಭಾಗವಾಗು ವಂತೆ ಅಂಬೇಡ್ಕರರು ಪರಿಶ್ರಮಿಸಿದ್ದರು.
‘ಥಾಟ್ಸ್ ಆನ್ ಪಾಕಿಸ್ತಾನ’ ಕೃತಿಯಲ್ಲಿ ಅಖಂಡ ಭಾರತದ ಕುರಿತು ಪ್ರಸ್ತಾಪಿಸುತ್ತಾ, ‘ಅಖಂಡ ಭಾರತವೆಂಬುದು ಕೇವಲ ಕಲ್ಪನೆಯಲ್ಲ. ಭಾರತ
ಪ್ರಕೃತಿದತ್ತವಾಗಿಯೇ ಅಖಂಡವಾದದ್ದು. ಭಾರತವನ್ನು ವಿಭಜಿಸುವುದು ಎಂದರೆ ವಿಭಾಗ ಮಾಡುವುದು ಎಂದಲ್ಲ, ಒಂದು ಭಾಗವನ್ನು ಕತ್ತರಿಸುವುದು
ಎಂದೇ ಅರ್ಥ’ ಎನ್ನುತ್ತಾರೆ. ಈ ಒಂದು ಹೇಳಿಕೆಯು ಅಂಬೇಡ್ಕರರೊಳಗೆ ಜಾಗೃತವಾಗಿದ್ದ ರಾಷ್ಟ್ರಪ್ರೇಮಕ್ಕೆ ಹಿಡಿದ ಕೈಗನ್ನಡಿ. ಸಂವಿಧಾನ ರಚನಾ ಸಭೆಯಲ್ಲಿ ಸದಸ್ಯರೊಬ್ಬರ ಪ್ರಶ್ನೆಗೆ ಅಂಬೇಡ್ಕರ್ ಉತ್ತರಿಸುತ್ತಾ, ‘ಬ್ರಿಟಿಷರ ಸಂವಿಧಾನದ ಸಾರ್ವ ಭೌಮತ್ವದಿಂದ ಪಡೆದಿರುವ ಯಾವುದೇ ಅಂಶವು ಈ ಸಂವಿಧಾನ ದಲ್ಲಿರಬೇಕೆಂದು ಈ ಸಭೆಯ ಯಾವ ವ್ಯಕ್ತಿಯೂ ಆಶಿಸುವುದಿಲ್ಲ. ಯಾರಿಗೂ ಅದರ ಅಣುಮಾತ್ರ ಆಸೆಯೂ ಇಲ್ಲ.
ವಾಸ್ತವವಾಗಿ ಈ ಸಂವಿಧಾನವು ಕಾರ್ಯ ಪ್ರಾರಂಭಿಸುವ ಮೊದಲು, ಬ್ರಿಟಿಷ್ ಸಂಸತ್ತಿನ ಸಾರ್ವಭೌಮತ್ವದ ಎಲ್ಲಾ ಕುರುಹುಗಳನ್ನು ತೆಗೆದು ಹಾಕಲು ಇಷ್ಟಪಡುತ್ತೇವೆ’ ಎನ್ನುತ್ತಾರೆ. ಅಂಬೇಡ್ಕರರ ರಾಷ್ಟ್ರಪ್ರೇಮದ ವ್ಯಾಖ್ಯಾನಕ್ಕೆ ಇದಕ್ಕಿಂತಲೂ ಘನೀಭೂತವಾದ ಆಧಾರದ ಅವಶ್ಯಕತೆ ಇದೆಯೇ? ಆದ್ದರಿಂದ, ಈ ನೆಲೆಯಲ್ಲೂ ಅಂಬೇಡ್ಕರರ ಬೋಧನೆ ಗಳು, ಸಂಶೋಧನೆಗಳನ್ನು ಯುವ ಸಮುದಾಯಕ್ಕೆ ತಲುಪಿಸುವ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಅಭ್ಯಸಿಸುವುದು, ಅವಲೋಕಿಸುವುದು, ವಿಮರ್ಶಿಸುವುದು ಈ ಹೊತ್ತಿನ ಜರೂರಾಗಿದೆ.
(ಆಧಾರ: ಭಾರತ ಸಂವಿಧಾನ ರಚನಾ ಸಭೆಯ
ಚರ್ಚೆಗಳು, ಸಂಪುಟಗಳು ಒಂದರಿಂದ-ಹತ್ತು. ಅಂಬೇಡ್ಕರರ ಸಮಗ್ರ ಬರಹಗಳು ಮತ್ತು ಭಾಷಣಗಳು, ಸಂಪುಟ ೬ )
(ಲೇಖಕರು ಸಂವಿಧಾನ ತಜ್ಞರು)
ಒಂದಷ್ಟು ಹೊಳಹುಗಳು
? ಅಂಬೇಡ್ಕರ್ ಅವರು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಮತ್ತು ಸ್ವಾತಂತ್ರ್ಯಾನಂತರದ ಸುಧಾರಣೆಗಳಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ.
ಇದಲ್ಲದೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ರಚನೆಯಲ್ಲಿ ಅವರು ಮಹತ್ತರ ಪಾತ್ರವನ್ನು ವಹಿಸಿದ್ದಾರೆ. ಹಿಲ್ಟನ್ ಯಂಗ್ ಕಮಿಷನ್ ಸಮ್ಮುಖ
ದಲ್ಲಿ ಅಂಬೇಡ್ಕರರು ಮಂಡಿಸಿದ ಪರಿಕಲ್ಪನೆಯನ್ನು ಆಧರಿಸಿ ಆರ್ಬಿಐ ಅನ್ನು ರಚಿಸಲಾಯಿತು.
? ಸ್ವಾತಂತ್ರ್ಯಾನಂತರದಲ್ಲಿ ಅಂಬೇಡ್ಕರರು ನೆಹರು ಅವರ ಮೊದಲ ಸಚಿವ ಸಂಪುಟದಲ್ಲಿ ಕಾನೂನು ಮತ್ತು ನ್ಯಾಯ ಸಚಿವರಾಗಿ ಕಾರ್ಯ ನಿರ್ವಹಿಸಿದರು. ಆದರೆ ೧೯೫೧ರಲ್ಲಿ ಕಾಶ್ಮೀರ ಸಮಸ್ಯೆ, ಭಾರತದ ವಿದೇಶಾಂಗ ನೀತಿ ಮುಂತಾದವುಗಳ ಕುರಿತಾದ ನೆಹರು ಅವರ ಧೋರಣೆಯ
ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿ ತಮ್ಮ ಸಚಿವ ಸ್ಥಾನಕ್ಕೆ ಅವರು ರಾಜೀನಾಮೆ ಸಲ್ಲಿಸಿದರು.
? ಭಾರತದ ಸಂವಿಧಾನದ ಕರಡು ರಚನೆಗೆ ಸಂಬಂಧಿಸಿದಂತೆ ಅಂಬೇಡ್ಕರರು ಮಾಡಿದ ದಕ್ಷಕಾರ್ಯವನ್ನು ಗುರುತಿಸಿ ಕೊಲಂಬಿಯಾ ವಿಶ್ವವಿದ್ಯಾ ಲಯವು ಅವರಿಗೆ ೧೯೫೨ರಲ್ಲಿ ಎಲ್ಎಲ್ಡಿ ಪದವಿಯನ್ನು ನೀಡಿ ಗೌರವಿಸಿತು. ಅಂಬೇಡ್ಕರ್ ಅವರು ೧೯೫೫ರಲ್ಲಿ ‘ಥಾಟ್ಸ್ ಆನ್ ಲಿಂಗ್ವಿಸ್ಟಿಕ್ ಸ್ಟೇಟ್ಸ್’ ಎಂಬ ತಮ್ಮ ಪುಸ್ತಕವನ್ನು ಪ್ರಕಟಿಸಿದರು.