ಹಿಂದಿರುಗಿ ನೋಡಿದಾಗ
ಮಧ್ಯಯುಗದ ಯುರೋಪಿನಲ್ಲಿ ಶಸ್ತ್ರಚಿಕಿತ್ಸೆಯೆನ್ನುವುದು ನರಕದ ಪ್ರತಿರೂಪವಾಗಿತ್ತು. ಶಸ್ತ್ರವೈದ್ಯರು ತಮ್ಮ ಕೈಗಳನ್ನು ತೊಳೆಯುತ್ತಿರಲಿಲ್ಲ. ರಕ್ತಸಿಕ್ತ ಕೋಟನ್ನು ಧರಿಸುತ್ತಿದ್ದರು. ಅವನ್ನು ಎಂದಿಗೂ ಒಗೆಯುತ್ತಿರಲಿಲ್ಲ. ಹೊಲಿಗೆ ದಾರವನ್ನು ತಮ್ಮ ಕೋಟಿನ ಕಾಜಗಳಲ್ಲಿ ಸಿಕ್ಕಿಸಿಕೊಂಡಿರುತ್ತಿದ್ದರು. ಇನ್ನು ಶಸ್ತ್ರಚಿಕಿತ್ಸಾ ಉಪಕರಣಗಳನ್ನು ಸ್ವಚ್ಛಗೊಳಿಸುವ ಪಾಪಕಾರ್ಯವನ್ನು ಎಂದಿಗೂ ಮಾಡುತ್ತಿರಲಿಲ್ಲ.
‘ಯಾರ ಕೈಗಳು ಮತ್ತು ಬಟ್ಟೆಗಳು ಹೆಚ್ಚು ರಕ್ತಸಿಕ್ತವಾಗಿರುತ್ತಿದ್ದವೋ, ಅವರು ಯಶಸ್ವೀ ವೈದ್ಯರು’ ಎನಿಸಿಕೊಳ್ಳುತ್ತಿದ್ದರು. ಇಂಥ ಪರಿಸರದಲ್ಲಿ ನಡೆಸಿದ ಶಸ್ತ್ರಚಿಕಿತ್ಸೆಗಳು ಯಶಸ್ವಿಯಾಗುವುದು ಅಪರೂಪವಾಗಿತ್ತು. ಗಾಯಗಳು ಕೊಳೆತು, ಸಾಯುವುದು ಅನಿವಾರ್ಯವಾಗಿತು. ಜೋಸೆಫ್ ಲಿಸ್ಟರ್ ಇಂಗ್ಲೆಂಡಿನ ಎಸೆಕ್ಸ್ ನಗರದಲ್ಲಿ ೧೮೨೭ ರಲ್ಲಿ ಹುಟ್ಟಿದ. ತಂದೆ ಜೋಸೆಫ್ ಜಾಕ್ಸನ್, ತಾಯಿ ಇಸಬೆಲ್ಲ ಲಿಸ್ಟರ್. ಇವರ ನಾಲ್ಕನೆಯ ಮಗ. ಜೋಸೆ-, ಜಾಕ್ಸನ್ ರಾಯಲ್ ಸೊಸೈಟಿಯ ಫೆಲೋ ಆಗಿ ಆಯ್ಕೆಯಾಗಿದ್ದ.
ಸಂಯುಕ್ತ ಸೂಕ್ಷ್ಮದರ್ಶಕಗಳಲ್ಲಿ (ಕಾಂಪೌಂಡ್ ಮೈಕ್ರೋ ಸ್ಕೋಪ್) ಬಳಸುವ ಮಸೂರವನ್ನು ಈತ ಸಿದ್ಧಪಡಿಸಿದ್ದ. ಜತೆಗೆ ಅಧಿಕೃತ ವೈದ್ಯಕೀಯ ಪದವಿ ಇಲ್ಲದ ಅಳಲೆಕಾಯಿ ಪಂಡಿತನೂ (ಕ್ವಾಕ್) ಆಗಿದ್ದ. ಹಾಗಾಗಿ ತಂದೆಯ ವೈಜ್ಞಾನಿಕ ಮನೋಭಾವ, ಪ್ರಯೋಗಗಳ ಮೂಲಕ ಪುರಾವೆಯನ್ನು ಹುಡುಕುವ ಗುಣ ಹಾಗೂ ಅಳಲೆಕಾಯಿ ಪಾಂಡಿತ್ಯವು ಮಗನ ಮೇಲೂ ಅಪಾರ ಪರಿಣಾಮವನ್ನು ಬೀರಿದ್ದವು. ಲಿಸ್ಟರ್ ತನ್ನ ಪ್ರಾಥಮಿಕ ಶಿಕ್ಷಣವನ್ನು ಹಾರ್ಟ್-ಲ್ಡ್‌ಶೈರ್ ಮತ್ತು ಟೋಟೆನ್‌ಹ್ಯಾಮ್ ಎಂಬಲ್ಲಿ ಪಡೆದ. ಭಾಷಾ ವಿಜ್ಞಾನ, ಗಣಿತ ವಿಜ್ಞಾನ ಹಾಗೂ ನೈಸರ್ಗಿಕ ವಿಜ್ಞಾನಗಳ ಪ್ರಾಥಮಿಕ ಶಿಕ್ಷಣವು ಅವನ ಭವಿಷ್ಯಕ್ಕೆ ಭದ್ರವಾದ ಬುನಾದಿಯನ್ನು ಹಾಕಿದವು.
ತನ್ನ ೧೭ನೆಯ ವಯಸ್ಸಿನಲ್ಲಿ ಯೂನಿವರ್ಸಿಟಿ ಕಾಲೇಜ್ ಆಫ್ ಲಂಡನ್‌ಗೆ ಸೇರಿದ. ಅಂದು ಲಂಡನ್ನಿನ ವಿಶ್ವವಿದ್ಯಾಲಯದಲ್ಲಿ ಅಳಲೆಕಾಯಿ ಪಂಡಿತರಿಗೂ
ಪ್ರವೇಶವಿತ್ತು. ಹಾಗಾಗಿ, ಅಂದಿನ ಶಿಕ್ಷಣ ಪದ್ಧತಿಯಂತೆ ಲಿಸ್ಟರ್ ಮೊದಲು ಗಾಯಗಳಿಗೆ ಪಟ್ಟಿ ಕಟ್ಟುವ ವಿಭಾಗದಲ್ಲಿ ತನ್ನ ಕೆಲಸವನ್ನು ಆರಂಭಿಸಿದ (೧೮೫೧). ವೈದ್ಯಕೀಯ ಶಿಕ್ಷಣ ವನ್ನು ಪೂರೈಸಿದ ಮೇಲೆ ಜಾನ್ ಎರಿಕ್ ಎರಿಕ್ಸನ್ ಅವರ ಬಳಿ ಶಿಷ್ಯವೃತ್ತಿಯನ್ನು ಕೈಗೊಂಡ. ೧೯೫೨ರಲ್ಲಿ ವೈದ್ಯಕೀಯ ಶಿಕ್ಷಣದ ಸ್ನಾತಕನಾಗಿ (ಬ್ಯಾಚೆಲರ್ ಆಫ್ ಮೆಡಿಸಿನ್) ಪದವಿಯನ್ನು ಗಳಿಸಿದ. ನಂತರ ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ಸೇರಿ ಪೂರ್ಣ ಪ್ರಮಾಣದ ಶಸ್ತ್ರವೈದ್ಯನಾದ.
ಶಸವೈದ್ಯನಾಗಿದ್ದ ಜೋಸೆಫ್ ಲಿಸ್ಟರ್, ಮತ್ತೋರ್ವ ಪ್ರೊಫೆಸರ್ ವಿಲಿಯಮ್ ಶಾರ್ಪೆ ಅವರ ಸಲಹೆಯ ಮೇರೆಗೆ, ೧೮೫೩ರಲ್ಲಿ ಎಡಿನ್ಬರೋ ನಗರಕ್ಕೆ ಬಂದ. ಅಲ್ಲಿ ಪ್ರಖ್ಯಾತ ಶಸವೈದ್ಯ ಜೇಮ್ಸ್ ಸೈಮ್ ಅವರ ಬಳಿ ಶಿಷ್ಯವೃತ್ತಿಯನ್ನು ಕೈಗೊಂಡ.
೧೮೫೬ರಲ್ಲಿ ರಾಯಲ್ ಇನ್ ಫಾರ್ಮರಿ ಯಲ್ಲಿ (ಆಸ್ಪತ್ರೆ) ಅಸಿಸ್ಟೆಂಟ್ ಸರ್ಜನ್ ಆಗಿ ನೇಮಕವಾದ. ಅದೇ ವರ್ಷ ಸೈಮ್‌ನ ಹಿರಿಯ ಮಗಳು ಆಗ್ನೆಸ್ ಎನ್ನುವಾಕೆ
ಯನ್ನು ಮದುವೆಯಾದ. ಈಕೆ ತನ್ನ ಜೀವಮಾನ ಪೂರ್ತಿ ಲಿಸ್ಟರನ ಸಹಾಯಕಳಾಗಿ ಕೆಲಸ ಮಾಡಿ, ಅವರ ಎಲ್ಲ ರೀತಿಯ ಸಂಶೋಧನೆಯಲ್ಲಿ ಪಾಲುಗೊಂಡಳು.
೧೮೬೦ರಲ್ಲಿ ಲಿಸ್ಟರ್ ರಾಯಲ್ ಸೊಸೈಟಿಯ ಫೆಲೋ ಆಗಿ ಆಯ್ಕೆಯಾದ. ನಂತರ ಗ್ಲಾಸ್ಗೋ ವಿಶ್ವವಿದ್ಯಾಲಯದಲ್ಲಿ ಶಸ್ತ್ರವೈದ್ಯಕೀಯದ ಪ್ರೊಫೆಸರ್ ಆದ.
೧೮೬೧ರಲ್ಲಿ ಗ್ಲಾಸ್ಗೋ ರಾಯಲ್ ಇನ್ ಫಾರ್ಮರಿಯಲ್ಲಿ ಕೆಲಸಕ್ಕೆ ಸೇರಿದ. ಅವನ ಬಳಿ ಅನೇಕ ವೈದ್ಯಕೀಯ ವಿದ್ಯಾರ್ಥಿಗಳು ಅಧ್ಯಯನವನ್ನು ಮಾಡುತ್ತಿದ್ದರು. ಈ ಅವಽಯಲ್ಲಿ ಆತನಿಗೆ ಅನೇಕ ಪ್ರಶಸ್ತಿಗಳು ಹಾಗೂ ಗೌರವವೂ ದೊರೆಯಿತು. ಕೊನೆಗೆ ಫೆಬ್ರವರಿ ೧೦, ೧೯೧೨ರಲ್ಲಿ ತನ್ನ ೮೪ನೆಯ ವಯಸ್ಸಿನಲ್ಲಿ ಮರಣಿಸಿದ. ಗಾಯಗಳು ಏಕೆ ಕೊಳೆಯುತ್ತವೆ, ಗಾಯಗಳು ಕೊಳೆಯದಂತೆ ತಡೆಗಟ್ಟಲು ಸಾಧ್ಯವಿಲ್ಲವೆ ಎಂದು ಜೋಸೆಫ್ ಲಿಸ್ಟರ್ ಸುದೀರ್ಘಕಾಲದಿಂದಲೂ ಯೋಚಿಸುತ್ತಿದ್ದ. ಈ ಬಗ್ಗೆ ತನ್ನ ಗೆಳೆಯ ಥಾಮಸ್ ಆಂಡರ್ಸನ್ ಬಳಿ ಚರ್ಚಿಸುವಾಗ, ‘ನೀನು ಲೂಯಿ ಪ್ಯಾಶ್ಚರ್ ಅವರ ಪ್ರಬಂಧಗಳನ್ನು ಓದಿಲ್ಲವೆ?’ ಎಂದು ಪ್ರಶ್ನಿಸಿದ. ಲಿಸ್ಟರ್ ಇಲ್ಲವೆಂದಾಗ, ಆಂಡರ್ಸನ್ ಆ ಪ್ರಬಂಧಗಳ ಪ್ರತಿಯನ್ನು ಒದಗಿಸಿದ.
ಅವು ಲಿಸ್ಟರನ ಬದುಕಿಗೆ ಮಹತ್ತರ ತಿರುವನ್ನೇ ನೀಡಿದವು. ಹಾಲೆಂಡಿನ ಆಂಟನ್‌ವಾನ್ ಲ್ಯೂವೆನ್‌ಹಾಕನು ಕ್ರಿ.ಶ. ೧೬೭೩ರಷ್ಟು ಹಿಂದೆಯೇ ಸೂಕ್ಷ್ಮದರ್ಶಕವನ್ನು ಅಭಿವೃದ್ಧಿ ಪಡಿಸಿ, ಅದೃಶ್ಯ ಲೋಕದ ಅಗೋಚರ ಜೀವಿಗಳ ಪರಿಚಯ ವನ್ನು ಮಾಡಿಸಿದ್ದ. ಆದರೆ ಈ ಅಗೋಚರ ಸೂಕ್ಷ್ಮಜೀವಿಗಳಲ್ಲಿ ಕೆಲವು ರೋಗಜನಕ ಗಳಾಗಿವೆ ಎಂಬ ಮಾಹಿತಿಯು ಜಗತ್ತಿಗೆ ತಿಳಿದಿರಲಿಲ್ಲ. ಅದನ್ನು ಅನುಮಾನವಿಲ್ಲದಂತೆ ನಿರೂಪಿಸಿದ ವನು ಲೂಯಿ ಪ್ಯಾಶ್ಚರ್. ಅವನ ಸಂಶೋಧನೆಯ
ಸಾರಾಂಶವನ್ನು ಈ ಕೆಳಕಂಡಂತೆ ಸಂಗ್ರಹಿಸಬಹುದು.
? ಸ್ವಯಂಜನನ ಸಿದ್ಧಾಂತ (ಸ್ಪಾಂಟೇನಿಯಸ್ ಜನರೇಷನ್): ಅಜೀವದಿಂದ ಜೀವ ಹುಟ್ಟುತ್ತದೆ ಎನ್ನುವ ನಂಬಿಕೆಯಿದ್ದ ಕಾಲದಲ್ಲಿ, ‘ಜೀವದಿಂದ ಜೀವ ಹುಟ್ಟುತ್ತದೆ, ಅಜೀವದಿಂದ ಜೀವ ಹುಟ್ಟಲು ಸಾಧ್ಯವಿಲ್ಲ’ ಎಂದ. ಸೂಕ್ಷ್ಮಜೀವಿಗಳು ವಾತಾವರಣದಿಂದ ಹಾಲಿನೊಳಗೆ ಪ್ರವೇಶಿಸಿ, ಅದನ್ನು ಹುಳಿಯಿಸುತ್ತವೆ (ಫಾರ್ಮೆಂಟೇಷನ್), ಅವು ನೇರವಾಗಿ ಆಹಾರಾಂಶಗಳಲ್ಲಿ ಹುಟ್ಟುವುದಿಲ್ಲ ಎಂಬುದನ್ನು ಪ್ರಯೋಗ ಸಹಿತವಾಗಿ ನಿರೂಪಿಸಿದ.
?ರೋಗಜನಕ ಸೂಕ್ಷ್ಮಜೀವಿ ಸಿದ್ಧಾಂತ: ರೋಗಗಳಿಗೆ ಸೂಕ್ಷ್ಮಜೀವಿಗಳು ಕಾರಣ ಎಂಬ ಸಿದ್ಧಾಂತವನ್ನು ಪ್ರತಿಪಾದಿಸಿದವರಲ್ಲಿ ಪ್ಯಾಶ್ಚರ್ ಮೊದಲಿಗನಲ್ಲ. ಈತನಿಗಿಂತಲೂ ಮೊದಲೇ ಗಿರೋಲಾಮೋ ಪ್ರೊಕ್ಯಾಸ್ಟೊರೊ, ಅಗಸ್ಟಿನೋ ಬಾಸ್ಸಿ, ಫ್ರೆಡ್ರಿಕ್ ಹೆನ್ಲೆ ಮುಂತಾದವರು ಈ ಸಿದ್ಧಾಂತವನ್ನು ಮಂಡಿಸಿದ್ದರು. ಆದರೆ ಅವರಿಗೆ ತಮ್ಮ ಸಿದ್ಧಾಂತಕ್ಕೆ ಅಗತ್ಯವಾದ ಪುರಾವೆಯನ್ನು ಒದಗಿಸಲು ಸಾಧ್ಯವಾಗಿರಲಿಲ್ಲ. ಅದನ್ನು ಪ್ಯಾಶ್ಚರ್ ಒದಗಿಸಿದ.
?ಬಾಣಂತಿ ಜ್ವರ: ಬಾಣಂತಿ ಜ್ವರಕ್ಕೆ ಸೂಕ್ಷ್ಮಜೀವಿಗಳು ಕಾರಣವೆಂದ. ಸ್ವಚ್ಛತೆಯನ್ನು ಪರಿಪಾಲಿಸಿದರೆ ಸೂಕ್ಷ್ಮಜೀವಿಗಳನ್ನು ನಿಗ್ರಹಿಸಬಹುದು ಎಂಬುದನ್ನು ತೋರಿಸಿಕೊಟ್ಟ. ಈತನ ಈ ಅಂಶವು ಲಿಸ್ಟರನ ಗಮನವನ್ನು ಸೆಳೆಯಿತು. ಈ ಪ್ರಬಂಧಗಳನ್ನು ಓದಿದ ಮೇಲೆ, ಮಾಂಸವು ಕೊಳೆಯಲು, ಹಾಲು ಹುಳಿಯಲು, ಬಾಣಂತಿ ಜ್ವರ ಬರಲು ಹಾಗೂ ಗಾಯಗಳು ಗ್ಯಾಂಗ್ರಿನ್ ಆಗಿ ಪರಿವರ್ತಿತವಾಗಲು ಸೂಕ್ಷ್ಮಜೀವಿಗಳು ಕಾರಣವಾಗಿರಬಹುದು ಎಂಬುದು ಜೋಸೆಫ್ ಲಿಸ್ಟರನಿಗೆ ಅನಿಸಿತು. ಇದು ಸತ್ಯವೇ ಆಗಿದ್ದಲ್ಲಿ, ಅವು ಗಾಯದೊಳಗೆ ಪ್ರವೇಶಿಸದಂತೆ ತಡೆಗಟ್ಟುವುದು ಹೇಗೆ ಎಂದು ಯೋಚಿಸಿದ.
ಇದಕ್ಕೆ ಪ್ಯಾಶ್ಚರ್ ಮೂರು ಮಾರ್ಗ
ಗಳನ್ನು ಸೂಚಿಸಿದ್ದ: ೧) ಸೂಕ್ಷ್ಮಜೀವಿಗಳು ಒಳಪ್ರವೇಶಿಸದಂತೆ ತಡೆಗಟ್ಟುವುದು. ೨) ಸೂಕ್ಷ್ಮಜೀವಿಗಳನ್ನು ಅತಿಯಾದ ಉಷ್ಣತೆಗೆ ಒಡ್ಡುವುದು. ೩) ಸೂಕ್ಷ್ಮ ಜೀವಿಗಳನ್ನು ರಾಸಾಯನಿಕ ದ್ರಾವಣಗಳಿಗೆ ಗುರಿಪಡಿಸುವುದು. ಮೊದಲ ೨ ಸಲಹೆಗಳನ್ನು ಮನುಷ್ಯರಿಗೆ ಅನ್ವಯಿಸುವುದು ಕಷ್ಟವಾಗಿತ್ತು. ಗಾಯ ಗಳಲ್ಲಿರುವ ಸೂಕ್ಷ್ಮಕ್ರಿಮಿಗಳನ್ನು ರಾಸಾಯನಿಕ ದ್ರಾವಣಗಳಿಂದ ನಿಗ್ರಹಿಸುವ ವಿಧಾನವು ಸುಲಭವಾಗಿತ್ತು. ಅಂದಿನ ದಿನಗಳಲ್ಲಿ ಮೋರಿ ಕಟ್ಟಿಕೊಂಡಾಗ, ಅದನ್ನು ಸ್ವಚ್ಛಗೊಳಿಸಲು ಕಾರ್ಬಾಲಿಕ್ ಆಸಿಡ್ (ಫೀನಾಲ್) ಅನ್ನು ಬಳಸುತ್ತಿದ್ದರು. ಒಂದು ಸಲ ಹುಡುಗ ನೊಬ್ಬನ ಕಾಲಿನ ಮೇಲೆ ಕುದುರೆಗಾಡಿ ಹತ್ತಿ ಗಾಯ ವಾಯಿತು. ಜೋಸೆಫ್ ಲಿಸ್ಟರ್, ಆ ಹುಡುಗನ ಗಾಯವನ್ನು ಕಾರ್ಬಾಲಿಕ್ ಆಮ್ಲದಿಂದ ತೊಳೆದ. ಕಾರ್ಬಾಲಿಕ್ ಆಮ್ಲದ ಪಟ್ಟಿಯನ್ನು ಹಾಕಿದ. ಪ್ರತಿದಿನ ಪಟ್ಟಿಯನ್ನು ಬದಲಾಯಿ ಸುತ್ತಿದ್ದ. ಗಾಯ ಕ್ರಮೇಣ ಗುಣವಾಯಿತು. ಕೀವುಗಟ್ಟಲೇ ಇಲ್ಲ!
ಜೋಸೆಫ್ ಲಿಸ್ಟರ್ ತನ್ನ ಪ್ರಥಮ ಯಶಸ್ಸಿನಿಂದ ಉತ್ತೇಜಿತನಾಗಿ ತಾನು ಶಸಚಿಕಿತ್ಸೆಯಲ್ಲಿ ಬಳಸುವ ಎಲ್ಲ ಉಪಕರಣಗಳನ್ನು ಕಾರ್ಬಾಲಿಕ್ ಆಮ್ಲದಿಂದ ತೊಳೆದ. ಶಸ್ತ್ರಚಿಕಿತ್ಸೆ ಮಾಡಬೇಕಾದ ದೇಹದ ಭಾಗವನ್ನು ಕಾರ್ಬಾಲಿಕ್ ಆಮ್ಲದಿಂದ ಸ್ವಚ್ಛಗೊಳಿಸಿದ. ಗಾಯಗಳನ್ನು ಹೊಲಿಯಲು ಬಳಸುವ ದಾರವನ್ನೂ ಕಾರ್ಬಾಲಿಕ್ ಆಮ್ಲದಿಂದ ಸಂಸ್ಕರಿಸಿದ. ಗಾಯದ ಮೇಲೆ ಕಟ್ಟುವ ಪಟ್ಟಿಯನ್ನೂ ಕಾರ್ಬಾಲಿಕ್ ಆಮ್ಲದಿಂದಲೇ ಸಿದ್ಧಪಡಿಸಿದ. ಆತನ ಶಸ್ತ್ರಚಿಕಿತ್ಸೆಗಳು ಯಶಸ್ವಿಯಾಗಲಾರಂಭಿಸಿದವು. ಗಾಯಗಳು ಗ್ಯಾಂಗ್ರಿನ್ ಆಗಿ ಪರಿವರ್ತಿತವಾಗುವುದು ನಿಂತಿತು.
ಲಿಸ್ಟರ್ ೧೮೬೫-೧೮೬೭ರ ನಡುವೆ ೧೧ ಪ್ರಯೋಗಗಳನ್ನು ನಡೆಸಿದ. ಅವೆಲ್ಲವೂ ಸಂಯುಕ್ತ ಅಸ್ಥಿಭಂಗದ (ಕಾಂಪೌಂಡ್ ಫ್ರಾಕ್ಚರ್) ಪ್ರಕರಣಗಳಾಗಿದ್ದವು. ೯ ಪ್ರಕರಣಗಳು ಯಾವುದೇ ತೊಡಕುಗಳಿಲ್ಲದೆ ಸಂಪೂರ್ಣವಾಗಿ ಗುಣವಾದವು. ಒಂದು ಪ್ರಕರಣದಲ್ಲಿ ಕಾಲನ್ನು ಛೇದಿಸಬೇಕಾಯಿತು. ಮತ್ತೊಂದು ಪ್ರಕರಣದಲ್ಲಿ ವಿಪರೀತ ರಕ್ತಸ್ರಾವದಿಂದ ರೋಗಿಯು ಮರಣಿಸಿದ. ಲಿಸ್ಟರ್ ಮಾರ್ಚ್ ೧೯೬೭ರಿಂದ ಜುಲೈ ೧೯೬೭ರ ನಡುವೆ ಆರು ಪ್ರಬಂಧಗಳನ್ನು ಬರೆದ. ಆ ಪ್ರಬಂಧಗಳು ‘ಲ್ಯಾನ್ಸೆಟ್’ ಪತ್ರಿಕೆಯಲ್ಲಿ ‘ಆಂಟಿಸೆಪ್ಟಿಕ್ ಪ್ರಿನ್ಸಿಪಲ್ಸ್ ಆಫ್ ದಿ ಪ್ರಾಕ್ಟೀಸ್ ಆಫ್ ಸರ್ಜರಿ‘ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದವು.
ತನ್ನೆಲ್ಲ ಸಂಶೋಧನೆಯ ವಿವರಗಳನ್ನು ಡಬ್ಲಿನ್‌ನಲ್ಲಿದ್ದ ಬ್ರಿಟಿಷ್ ಮೆಡಿಕಲ್ ಅಸೋಸಿಯೇಷನ್ ಸಮ್ಮುಖದಲ್ಲಿ ಮಂಡಿಸಿದ. ಶಸ್ತ್ರವೈದ್ಯರು ಸ್ವಚ್ಛವಾದ ಉಡುಪುಗಳನ್ನು ಧರಿಸಬೇಕು, ಕೈಗಳನ್ನು ಚೆನ್ನಾಗಿ ತೊಳೆದುಕೊಂಡು ಗವಸುಗಳನ್ನು ಹಾಕಿಕೊಳ್ಳಬೇಕು ಹಾಗೂ ಎಲ್ಲ ಶಸಚಿಕಿತ್ಸಾ ಉಪಕರಣಗಳನ್ನು ೫% ಕಾರ್ಬಾಲಿಕ್ ಆಮ್ಲದಲ್ಲಿ ಮುಳುಗಿಸಿರಬೇಕು ಎನ್ನುವುದನ್ನು ವಿಶೇಷವಾಗಿ ಒತ್ತಿ ಹೇಳಿದ. ಲಿಸ್ಟರನಿಗೆ ಶಸ್ತ್ರಚಿಕಿತ್ಸಾ ಕೊಠಡಿಯನ್ನೂ ಏಕೆ ಕ್ರಿಮಿರಾಹಿತ್ಯ ವನ್ನಾಗಿಸಬಾರದು ಎಂಬ ಯೋಚನೆಯು ಬಂದಿತು. ಅದಕ್ಕಾಗಿ ಕಾರ್ಬಾಲಿಕ್ ಆಮ್ಲದ ೧:೧೦೦ ಪ್ರಮಾಣದ ವಿಶೇಷ ದ್ರಾವಣವನ್ನು ಸಿದ್ಧಪಡಿಸಿದ. ಇದನ್ನು ಸಿಂಪಡಿಸಲು ಹಲವು ಸಾಧನಗಳನ್ನು ರೂಪಿಸಿದ.
ಕೊನೆಗೆ ‘ಡಾಂಕಿ ಎಂಜಿನ್’ ಎಂಬ ಅಡ್ಡ ಹೆಸರಿನಲ್ಲಿ ಪ್ರಖ್ಯಾತವಾದ ಯಂತ್ರವನ್ನು ರೂಪಿಸಿ ಅದನ್ನು ಪರಿಣಾಮಕಾರಿಯಾಗಿ ಬಳಸಿದ. ಜೋಸೆಫ್ ಲಿಸ್ಟರ್ ಕೈಗೊಂಡ ಕಾರ್ಬಾಲಿಕ್ ಆಮ್ಲದ ಪ್ರಯೋಗಗಳು ವಿಶ್ವವಿಖ್ಯಾತವಾದವು. ಜಗತ್ತಿನ ಎಲ್ಲ ಶಸ್ತ್ರ ವೈದ್ಯರು ಲಿಸ್ಟರನ ತಂತ್ರವನ್ನು ಪ್ರಯೋಗಿಸಿದರು. ಆದರೆ
ಲಿಸ್ಟರನ ಕಾರ್ಬಾಲಿಕ್ ಆಮ್ಲದ ಪ್ರಯೋಗಗಲ್ಲಿ ಕೆಲವು ಅನನುಕೂಲತೆಗಳಿದ್ದವು. ಮೊದಲನೆಯದು ಕಾರ್ಬಾಲಿಕ್ ಆಮ್ಲವು ದೇಹದ ಊತಕವನ್ನು ಸುಟ್ಟು ಹಾನಿಮಾಡುತ್ತಿತ್ತು. ಎರಡನೆಯದು, ಕಾರ್ಬಾಲಿಕ್ ಆಮ್ಲವನ್ನು ಮಿತಿಮೀರಿ ಬಳಸಿದಾಗ, ಅದು ಶರೀರವನ್ನು ಸೇರಿ ‘ಕಾರ್ಬೋಲೂರಿಯ’ ಎಂಬ ಅಪಾಯಕಾರಿ ಸ್ಥಿತಿಗೆ ಕಾರಣವಾಗಿ ನಾನಾ ವಿಷಲಕ್ಷಣ ಗಳನ್ನು ಬೀರುತ್ತಿದ್ದವು. ಆದರೆ ಹಿತ-ಮಿತ ಪ್ರಮಾಣದ ಕಾರ್ಬಾಲಿಕ್ ಆಮ್ಲವನ್ನು ಎಚ್ಚರಿಕೆಯಿಂದ ಬಳಸುವುದರಿಂದ
ಸೋಂಕನ್ನು ತಡೆಗಟ್ಟಬಹುದು ಎನ್ನುವುದನ್ನು ಪ್ರಾಯೋಗಿಕ ವಾಗಿ ನಿರೂಪಿಸಿದ.
ಹಾಗಾಗಿ ಜೋಸೆಫ್ ಲಿಸ್ಟರ್ ಅಧುನಿಕ ವೈದ್ಯಕೀಯ ಹರಿಕಾರರಲ್ಲಿ ಒಬ್ಬ ಎನ್ನಬಹುದು. ಜೋಸೆಫ್ ಲಿಸ್ಟರ್‌ನ ಪ್ರಯೋಗಗಳು ನೊಬೆಲ್ ಪಾರಿತೋಷಕ ಪಡೆಯಲು ಅರ್ಹವಾಗಿದ್ದವು. ಆದರೆ ಅವನ ಕಾಲದಲ್ಲಿ ನೊಬೆಲ್ ಪಾರಿತೋಷಕವೇ ಆರಂಭವಾಗಿರಲಿಲ್ಲ. ಅಂದಿನ ದಿನಗಳ ಪ್ರತಿಷ್ಠಿತ ರಾಯಲ್ ಮೆಡಲ್, ಆಲ್ಬರ್ಟ್ ಮೆಡಲ್ ಹಾಗೂ ಕೋಪ್ಲೆ ಮೆಡಲ್ ಇತ್ಯಾದಿ ಗೌರವಗಳು ದೊರೆತವು. ಈತನ ಗೌರವಾರ್ಥ ಒಂದು ಬ್ಯಾಕ್ಟೀರಿಯ ಗುಂಪಿಗೆ ‘ಲಿಸ್ಟೀರಿಯ‘ ಎಂಬ ಹೆಸರನ್ನು ನೀಡಿದರು. ಈತನ ಹೆಸರಿನಲ್ಲಿ ತಯಾರಾದ ‘ಲಿಸ್ಟೆರಿನ್‘ ಎಂಬ ಬಾಯಿ ಮುಕ್ಕಳಿಸುವ ದ್ರಾವಣ ಇಂದಿಗೂ ಮಾರಾಟವಾಗುತ್ತಿದೆ. ವೈದ್ಯ ಜಗತ್ತು ಜೋಸೆಫ್ ಲಿಸ್ಟರ್‌ನನ್ನು ‘ಆಧುನಿಕ ನಂಜುರಾಹಿತ್ಯ ಪಿತಾಮಹ’ (ಫಾದರ್ ಆಫ್ ಮಾಡರ್ನ್ ಆಂಟಿಸೆಪ್ಸಿಸ್) ಎಂದು ಕರೆದು ಗೌರವಿಸಿದೆ.