Saturday, 23rd November 2024

ಪತಿಯನ್ನು ಸಿಲುಕಿಸಲು ಆತನ ಮೊಬೈಲ್​ನಿಂದಲೇ ಪೊಲೀಸರಿಗೆ ಬಾಂಬ್​ ಬೆದರಿಕೆ ಸಂದೇಶ

ಆನೇಕಲ್: ಮಹಿಳೆ ತನ್ನ ಪತಿಯ ಮೊಬೈಲ್​ನಿಂದ ಹುಸಿ ಬಾಂಬ್ ಸ್ಪೋಟದ ಮೆಸೇಜ್ ಕಳುಹಿಸಿ ಕೊನೆಗೆ ಸಿಕ್ಕಿಬಿದ್ದಿರುವ ಘಟನೆ ಆನೇಕಲ್​ನಲ್ಲಿ ನಡೆದಿದೆ.

ಆನೇಕಲ್​ ಪಟ್ಟಣದ ಮಾರುತಿ ಬಡಾವಣೆಯಲ್ಲಿ ಉತ್ತರ ಕರ್ನಾಟಕ ಮೂಲದ ಕಿರಣ್ ಮತ್ತು ವಿದ್ಯಾರಾಣಿ ಎಂಬ ದಂಪತಿ ವಾಸವಿದ್ದರು. ಮೊಬೈಲ್​ ಆಯಪ್​ ಒಂದರ ಮೂಲಕ ವಿದ್ಯಾರಾಣಿಗೆ ವ್ಯಕ್ತಿಯೊಬ್ಬನ ಪರಿಚಯವಾಗಿತ್ತು. ಈ ವಿಚಾರ ಕೆಲ ದಿನಗಳ ಹಿಂದೆ ಗಂಡ ಕಿರಣ್​​ಗೆ​ ಗೊತ್ತಾಗಿದೆ. ಈ ವಿಚಾರ ದಂಪತಿಗಳ ಮಧ್ಯೆ ಗಲಾಟೆಗೆ ಕಾರಣವಾಗಿತ್ತು. ಪರಿಣಾಮ ಪತ್ನಿಯ ಮೊಬೈಲ್​ನ್ನು ಕಿರಣ್​ ಒಡೆದು ಹಾಕಿದ್ದ.

ಈ ಸಂಗತಿಯನ್ನು ಬೇರೆ ನಂಬರ್ ಮೂಲಕ ವಿದ್ಯಾರಾಣಿ ತನ್ನ ಸ್ನೇಹಿತನಿಗೆ ತಿಳಿಸಿದ್ದಳು. ಬಳಿಕ ಕಿರಣ್​ರನ್ನು ಸಿಲುಕಿಸುವ ಸಂಚು ರೂಪಿಸಿದ್ದರು. ಇದಕ್ಕಾಗಿ ವಿದ್ಯಾರಾಣಿಯ ಸ್ನೇಹಿತ ಹಾಗೂ ಆತನ ಸ್ನೇಹಿತರು ವಿದ್ಯಾರಾಣಿಗೆ ಕೆಲವು ಸಂದೇಶಗಳನ್ನು ಕಳುಹಿಸುತ್ತಿದ್ದರು. ಕಳುಹಿಸಿದ ಈ ಮೆಸೇಜ್​ಗಳನ್ನು ವಿದ್ಯಾರಾಣಿ ತನ್ನ ಗಂಡನ ಮೊಬೈಲ್​ಗೆ ಕಳುಹಿಸಿಕೊಂಡಿದ್ದಾಳೆ. ಬಳಿಕ ಆ ಮೊಬೈಲ್​ನಿಂದಲೇ ‘ಡಿಸೆಂಬರ್ 5ರಂದು ಆರ್​ಡಿಎಕ್ಸ್​ ಬಾಂಬ್’ ಸ್ಪೋಟಿಸುವ ಬೆದರಿಕೆ ಮೆಸೇಜ್​ಗಳನ್ನು ಪೊಲೀಸ್ ಹಾಗು ಕೇಂದ್ರ ತನಿಖಾ ತಂಡಗಳಿಗೆ ಖುದ್ದು ಕಳುಹಿಸಿದ್ದಳು.

ಪೊಲೀಸರು ಮತ್ತು ತನಿಖಾ ಸಂಸ್ಥೆಗಳು ಮೆಸೇಜ್ ಬಂದಿದ್ದ ಫೋನ್​ ನಂಬರ್​ ಮೂಲ ಹುಡುಕಿಕೊಂಡು ಹೊರಟಿದ್ದಾರೆ. ಮಾಹಿತಿ ದೊರಕಿದಂತೆ ಸೀದಾ ಕಿರಣ್ ಮನೆಗೆ ಬಂದು ಪೊಲೀಸರು ದಂಪತಿಯನ್ನು ವಿಚಾರಣೆಗೊಳಪಡಿಸಿದ್ದು, ಆಗ ಸತ್ಯ ಬಯಲಾಗಿದೆ. ಈ ಸಂಬಂಧ ಆನೇಕಲ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.