ಯಕ್ಷ ಪ್ರಶ್ನೆ
ಡಾ.ದಯಾನಂದ ಲಿಂಗೇಗೌಡ
ಹಲವು ವರ್ಷಗಳ ಹಿಂದೆ, ಬೈಕ್‌ನಲ್ಲಿ ಆಸ್ಪತ್ರೆಗೆ ಹೋಗುತ್ತಿದ್ದ ನನಗೆ ಸ್ನೇಹಿತನೊಬ್ಬ, ‘ವೈದ್ಯರು ಬೈಕಿನಲ್ಲಿ ಓಡಾಡುವುದು ಚೆನ್ನಾಗಿರದು. ಜತೆಗೆ ಪೊಲೀಸರು ಪದೇಪದೆ ಅಡ್ಡ ಹಾಕ್ತಾರೆ. ಮಳೆ ಬಂದರೆ ಕಷ್ಟ. ರಾತ್ರಿ ಆಸ್ಪತ್ರೆಗೆ ಬರಲು ಸುರಕ್ಷಿತವಲ್ಲ. ಬೈಕಿನಲ್ಲಿ ತಿರುಗಾಡ್ತಾನೆ ಅಂದ್ರೆ ಯಾರೂ ಹೆಣ್ಣು ಕೊಡಲ್ಲ, ಕಾರು ತಗೋ’ ಎಂದು ಒತ್ತಾಯಿಸಿದ.
ಅಗತ್ಯವಿಲ್ಲದಿದ್ದರೂ ಕಾರು ಖರೀದಿಸಿ ಗಾಜಿನ ಮೇಲೆ ವೈದ್ಯರ ಲಾಂಛನವೊಂದನ್ನು ಅಂಟಿಸಲು ಬಯಸಿದೆ. ಅಂಗಡಿಯವನು ಕೆಂಪು ‘ಪ್ಲಸ್’ ಚಿಹ್ನೆ ಯನ್ನು ಹಾಕಲು ಹೊರಟಾಗ, ‘ಇದು ವೈದ್ಯರ ಚಿಹ್ನೆಯಲ್ಲ, ರೆಡ್‌ಕ್ರಾಸ್‌ನವರ ಗುರುತು; ಇದನ್ನು ನಾವು ಬಳಸಿದರೆ ೫೦೦ ರು.ದಂಡ ಹಾಕಬಹುದು’ ಎಂದು ಹೇಳಿ ಬೇರೆ ಚಿಹ್ನೆ ತೋರಿ ಸಲು ಹೇಳಿದೆ. ಅವನಲ್ಲಿ ತರಹೇವಾರಿ ಚಿಹ್ನೆಗಳಿದ್ದವು. ಒಂದರಲ್ಲಿ ಹಾವೊಂದು ಕೋಲಿಗೆ ಸುತ್ತಿಕೊಂಡಿದ್ದರೆ, ಮತ್ತೊಂದರಲ್ಲಿ ಎರಡು ಹಾವು. ಅದರಲ್ಲೂ ಕೆಲವೊಂದು ಕೆಂಪು, ಮತ್ತೆ ಕೆಲವು ಹಸಿರು ಬಣ್ಣದ್ದು. ಈಗಿನಂತೆ ಮೊಬೈಲ್ ತೆರೆದು ಗೂಗಲ್‌ನಲ್ಲಿ ಹುಡುಕುವ ಕಾಲ ಅದಾಗಿರಲಿಲ್ಲ.
ಹಾಗಾಗಿ ವೈದ್ಯರ ನಿಜವಾದ ಚಿಹ್ನೆ ಯಾವುದೆಂದು ಗೊತ್ತಾಗದೆ, ‘ಯಾವುದೂ ಬೇಡ. ಈ ಚಿಹ್ನೆ ಹಾಕಿಕೊಂಡರೆ ಜನ ದಾರಿಬಿಡ್ತಾರಾ ಅಥವಾ ಪೊಲೀಸರು ಅಡ್ಡಹಾಕೋದನ್ನು ಬಿಡ್ತಾರಾ? ಬೇರಾವುದೂ ಅನುಕೂಲತೆ ಇಲ್ಲ’ ಎನಿಸಿ ಏನೂ ಅಂಟಿಸದೆ ಮರಳಿದೆ. ಈ ಘಟನೆಯನ್ನು ಈಗ ಪ್ರಸ್ತಾಪಿಸಲು ಕಾರಣ, ನ್ಯಾಷನಲ್ ಮೆಡಿಕಲ್ ಕೌನ್ಸಿಲ್‌ನ ಲಾಂಛನದ ಬಗ್ಗೆ ಎದ್ದಿರುವ ವಿವಾದ. ಅದು ಇತ್ತೀಚೆಗೆ ಬಿಡುಗಡೆ ಮಾಡಿರುವ ಚಿಹ್ನೆಯಲ್ಲಿ ಧನ್ವಂತರಿ ದೇವರ ಬಣ್ಣದ ಚಿತ್ರವಿದೆ. ಇದಕ್ಕೆ ಹಲವು ರಾಜ್ಯ ವೈದ್ಯಕೀಯ ಸಂಘಗಳು ವಿರೋಧ ವ್ಯಕ್ತಪಡಿಸಿ ಪತ್ರ ಬರೆದಿವೆ. ಭಾರತೀಯ ವೈದ್ಯರ ಸಂಘದ ಪತ್ರದಲ್ಲಿ, ‘ವೈದ್ಯರು ಜಾತ್ಯತೀತರು, ಧರ್ಮಾತೀತವಾಗಿ ಕೆಲಸ ಮಾಡುವವರು.
ಆದ್ದರಿಂದ, ಒಂದು ಸಮುದಾಯಕ್ಕೆ ಸೇರಿದ ದೇವರ ಲಾಂಛನ ಬಳಸುವುದು ಸರಿಯಾಗದು’ ಎಂಬ ಆಕ್ರೋಶ ವ್ಯಕ್ತವಾಗಿದೆ. ‘ಸಂವಿಧಾನದ ಜಾತ್ಯತೀತತೆಯನ್ನು ಎತ್ತಿಹಿಡಿಯಬೇಕು’ ಎಂದು ಆಗ್ರಹಿಸಲಾಗಿದೆ. ‘ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು’ ಎನ್ನುವಂತೆ, ನಮಗೆ ಇಷ್ಟವಾಗದಿದ್ದರೆ ಎಲ್ಲದರಲ್ಲೂ ತಪ್ಪನ್ನು ಹುಡುಕಬಹುದು. ಉದಾಹರಣೆಗೆ, ಭಾರತೀಯ ವೈದ್ಯರ ಸಂಘದ ಪತ್ರದಲ್ಲಿ ಒಂದು ಕೋಲಿನ ಸುತ್ತ ೨ ಹಾವು ಸುತ್ತಿ ಕೊಂಡಿರುವ ಚಿಹ್ನೆಯಿದೆ. ಇದನ್ನು ಸೆಡುಸೆಸ್ (ಛಿbಛ್ಠಿo) ಚಿಹ್ನೆ ಎನ್ನುತ್ತಾರೆ. ಪುರಾಣಗಳ ಪ್ರಕಾರ ಇದು ವ್ಯಾಪಾರಸ್ಥರು, ಕಳ್ಳರು ಮತ್ತು ಪ್ರಯಾಣಿಕರು ಬಳಸುವ ಚಿಹ್ನೆಯಾಗಿತ್ತು.
ಇದನ್ನು ೧೯೦೦ರ ದಶಕದಲ್ಲಿ ಮೊದಲ ಬಾರಿಗೆ ಅಮೆರಿಕ ಸೈನ್ಯದ ವೈದ್ಯಕೀಯ ಸಿಬ್ಬಂದಿ ಬಳಸತೊಡಗಿದರು. ಗ್ರೀಕ್ ಪುರಾಣದ ಆರೋಗ್ಯದ ಚಿಹ್ನೆ ಎಂಬ ತಪ್ಪುಗ್ರಹಿಕೆಯಲ್ಲಿ ಅದು ಬಳಸಲ್ಪಟ್ಟಿತ್ತು. ಚಿಹ್ನೆಯ ಅವಾಂತರವು ದಶಕಗಳ ನಂತರ ಗೊತ್ತಾದರೂ ಬದಲಿಸುವಲ್ಲಿ ಬಹಳ ತಡವಾಗಿತ್ತು. ಬಹಳಷ್ಟು ವೈದ್ಯಕೀಯ ಸಂಘದವರು, ಆಸ್ಪತ್ರೆಗಳು ತಪ್ಪುಚಿಹ್ನೆಯನ್ನೇ ಈಗಲೂ ಬಳಸುತ್ತಿದ್ದಾರೆ. ಅಲ್ಲದೆ, ಆಧುನಿಕ ಮತ್ತು ಪಾರಂಪರಿಕ ವೈದ್ಯರನ್ನು ಗುರುತಿಸಲು ಭಾರತೀಯ ವೈದ್ಯರ ಸಂಘವು ರೆಡ್‌ಕ್ರಾಸ್ ಮೇಲೆ ’ಈ’ ಎಂದು ಬರೆದ ಲಾಂಛನವನ್ನು ಉಪಯೋಗಿಸುತ್ತದೆ. ಇದು ತಮ್ಮ ಲಾಂಛನವನ್ನು ಹೋಲು ತ್ತದೆ ಎಂಬ ಕಾರಣಕ್ಕೆ ಇದಕ್ಕೆ ರೆಡ್‌ಕ್ರಾಸ್ ಸಂಸ್ಥೆಯ ವಿರೋಧವಿದೆ.
ಮಾತ್ರವಲ್ಲದೆ, ಈ ‘ಪ್ಲಸ್’ ಚಿಹ್ನೆಗೆ ಸೂರ್ತಿ ಕ್ರೈಸ್ತಧರ್ಮದ ಶಿಲುಬೆ. ಕ್ರೈಸ್ತ ಮಿಷನರಿಗಳು ಧರ್ಮಪ್ರಚಾರಕ್ಕೆ ವೈದ್ಯಕೀಯ ಕ್ಷೇತ್ರವನ್ನು ಸಾಧನವಾಗಿ ಬಳಸುವುದು ಗೊತ್ತಿರುವಂಥದ್ದೇ. ಈ ಚಿಹ್ನೆ ಬಳಸುವಾಗ ಇದು ಒಂದು ಪಂಥವನ್ನು ಪ್ರತಿನಿಽಸುತ್ತದೆಯೆಂದು ವೈದ್ಯರ ಸಂಘಕ್ಕೆ ಅನಿಸಲಿಲ್ಲವೇ? ಆಗ ಎಲ್ಲಿ ಹೋಗಿತ್ತು ಅದರ ಸೆಕ್ಯುಲರ್ ನೀತಿ? ಕೋಲಿಗೆ ಸುತ್ತಿಕೊಂಡಿರುವ ಒಂದೇ ಹಾವಿನ ಚಿಹ್ನೆಯು (ಟb ಟ್ಛ Zoಛಿmಜಿo) ಗ್ರೀಕ್ ಪುರಾಣದ ಪ್ರಕಾರ ಅಪೊಲೊ ಮಗನಾದ ಅಸ್ಕ್ಲಪಿಸ್ ಹಿಡಿದುಕೊಳ್ಳುತ್ತಿದ್ದ ಲಾಂಛನ.
ವೈದ್ಯನಾಗಿದ್ದ ಅಸ್ಕ್ಲಪಿಸ್ ಗೆ ಹಲವು ರೋಗಗಳನ್ನು ಗುಣಪಡಿಸುವ ಶಕ್ತಿಯಿತ್ತು. ಹಾವಿಗೆ ಚೈತನ್ಯ ಕುಸಿದಾಗ, ಪೊರೆಬಿಟ್ಟು ನವಚೈತನ್ಯವನ್ನು ಪಡೆಯುತ್ತದೆ. ಅದು ರೋಗಿಯು ಮರಳಿ ನವಜೀವನ ಪಡೆವುದನ್ನು ಸಂಕೇತಿಸುವುದರಿಂದ ಈ ಲಾಂಛನ ವೈದ್ಯವೃತ್ತಿಗೆ ಹೊಂದುತ್ತದೆ. ಈಗ ಮೂಲ ಪ್ರಶ್ನೆಗೆ ಬರೋಣ. ನ್ಯಾಷನಲ್ ಮೆಡಿಕಲ್ ಕೌನ್ಸಿಲ್ ನಿಜಕ್ಕೂ ಚಿಹ್ನೆ ಬದಲಿಸಿದೆಯೇ? ಇಲ್ಲ. ಮೊದಲಿದ್ದ ಚಿಹ್ನೆಯಲ್ಲಿ ಕಪ್ಪು-ಬಿಳಿ ಬಣ್ಣದ ಧನ್ವಂತರಿಯ ಚಿತ್ರವಿದ್ದು, ಅದನ್ನೀಗ ಬಣ್ಣದ ಚಿತ್ರವಾಗಿ ಬದಲಿಸಿದ್ದಾರಷ್ಟೇ. ಬಣ್ಣದಲ್ಲಿ ಧನ್ವಂತರಿಯು ಹೆಚ್ಚು ಸ್ಪಷ್ಟವಾಗಿ ಕಾಣುತ್ತಿದ್ದಾನಷ್ಟೇ.
ಆದರೆ ಆಗಿಲ್ಲದ ವಿರೋಧ ಈಗೇಕೋ?! ಹಿಂದೂ ಪುರಾಣಗಳ ಪ್ರಕಾರ ಧನ್ವಂತರಿಯು ಭಾರತೀಯ ವೈದ್ಯಪದ್ಧತಿಯ ಪಿತಾಮಹ. ಈತ ಒಂದು ಕೋಮಿನ ದೇವರಾದರೆ, ಗ್ರೀಕ್ ದೇವರುಗಳಾದ ಅಸ್ಕ್ಲಪಿಸ್ ಮತ್ತು ಸೆಡುಸೆಸ್ ಹೇಗೆ ಧರ್ಮಾತೀತರಾಗುತ್ತಾರೆ? ಗ್ರೀಕ್ ದೇವರುಗಳಿಗಿರುವ ಸ್ವೀಕಾರ
ಸ್ವದೇಶಿ ದೇವರುಗಳಿಗಿಲ್ಲ. ಇದು ಚಿಹ್ನೆಗಷ್ಟೇ ಸೀಮಿತವಾಗಿಲ್ಲ.
ದೇಹದ ಹಲವು ಭಾಗಗಳಿಗೂ ಗ್ರೀಕ್ ದೇವರುಗಳ ಹೆಸರಿವೆ. ಉದಾಹರಣೆಗೆ, ಬೆನ್ನೆಲುಬಿನ ಮೊದಲ ಮೂಳೆಗೆ ವೈದ್ಯಭಾಷೆಯಲ್ಲಿ ‘ಅಟ್ಲಾಸ್’ ಎನ್ನುತ್ತಾರೆ. ಅಂದರೆ, ಭೂಮಿಯನ್ನು ಹೊತ್ತಿರುವ ಅಟ್ಲಾಸ್ ದೇವರಿಗೆ, ತಲೆಬುರುಡೆಯನ್ನು ಹೊತ್ತಿರುವ ಈ ಮೂಳೆಯನ್ನು ಹೋಲಿಸಲಾಗಿದೆ. ಇದಕ್ಕೆ ಎಲ್ಲೂ ವಿರೋಧ ವ್ಯಕ್ತವಾಗಿಲ್ಲ. ಒಂದೊಮ್ಮೆ ಇದನ್ನು ಭೂಮಿಯನ್ನು ಹೊತ್ತಿರುವ ಹಿಂದೂದೇವರು ‘ವರಾಹ’ ಎಂದಿದ್ದರೆ ಅಲ್ಲೋಲ-ಕಲ್ಲೋಲ ವಾಗುತ್ತಿತ್ತೇನೋ? ಚಂದ್ರಯಾನ-೩ ಇಳಿದ ಜಾಗಕ್ಕೆ ‘ಶಿವಶಕ್ತಿ ಪಾಯಿಂಟ್’ ಎಂದು ಹೆಸರಿಟ್ಟಿದ್ದಕ್ಕೂ ಆಕ್ಷೇಪ ವ್ಯಕ್ತವಾಗಿತ್ತು; ಒಂದು ಧರ್ಮಕ್ಕಷ್ಟೇ
ಸೇರದ ಚಂದ್ರನ ಮೇಲೆ, ಒಂದು ಧರ್ಮಕ್ಕೆ ಸೇರಿದ ಹೆಸರಿಡುವುದು ಜಾತ್ಯತೀತ ಭಾರತಕ್ಕೆ ಎಷ್ಟು ಸರಿ? ಎಂಬ ಪ್ರಶ್ನೆ ಉದ್ಭವಿಸಿತ್ತು.
ಹೀಗೆ ವಾದಿಸುವವರಿಗೆ ಮರ್ಕ್ಯುರಿ, ವೀನಸ್, ಸ್ಯಾಟರ್ನ್ ಎಂಬುದೆಲ್ಲ ದೇವರ ಹೆಸರುಗಳೆಂಬುದು ತಿಳಿದಿರಲಿಲ್ಲವೇನೋ? ರಾಷ್ಟ್ರೀಯ ಸಂಸ್ಥೆಯಾಗಿರುವ ನ್ಯಾಷನಲ್ ಮೆಡಿಕಲ್ ಕೌನ್ಸಿಲ್ ತನ್ನದೇ ಆದ ಚಿಹ್ನೆ ಹೊಂದುವುದರಲ್ಲಿ, ಅದರಲ್ಲಿ ಭಾರತೀಯತೆಯನ್ನು ಬಿಂಬಿಸುವುದರಲ್ಲಿ ತಪ್ಪೇನಿಲ್ಲ. ನಮ್ಮ ಸಂಸ್ಕೃತಿಯನ್ನು ನಾವೇ ಉಳಿಸದೆ ಬೇರೆಯವರಿಂದ ಅದನ್ನು ನಿರೀಕ್ಷಿಸಲಾದೀತೇ? ಹಿಂದೂಗಳ ದೇವಸ್ಥಾನದ ಹುಂಡಿ ಹಣವನ್ನು ಸರಕಾರ ಬಳಸುವಾಗ ಇಲ್ಲದ ಸೆಕ್ಯುಲರಿಸಂ ಪ್ರಶ್ನೆ, ಹಿಂದೂ ದೇವರ ಲಾಂಛನ ಬಳಸಿದಾಗ ಹೊಮ್ಮಿದ್ದೇಕೆ? ಐನ್‌ಸ್ಟೀನ್‌ನ ‘ಸಾಪೇಕ್ಷತಾ ಸಿದ್ಧಾಂತ’ ನಿಮಗೆ ಗೊತ್ತಿರಬಹುದು.
ವಿಶ್ವದಲ್ಲಿ ಬಹಳಷ್ಟು ವಿಷಯಗಳು ತುಲನಾತ್ಮಕ ಆಧಾರದಲ್ಲಿ ಭಿನ್ನವಾಗಿ ಕಾಣುತ್ತವೆ. ಒಂದೆಡೆ ಕೂತು ‘ನಾನು ಚಲಿಸುತ್ತಿಲ್ಲ’ ಎಂದರೆ ಎದುರಿನವನಿಗೆ ಅದು ಸತ್ಯವಾಗಿ ಕಾಣಬಹುದು. ಆದರೆ ಅನ್ಯಗ್ರಹದಲ್ಲಿದ್ದು ನಿಮ್ಮನ್ನು ಗಮನಿಸುವಾತನಿಗೆ ನೀವು ಪ್ರತಿ ಸೆಕೆಂಡಿಗೆ ಭೂಮಿಯ ಜತೆ ೩೦ ಕಿ.ಮೀ. ವೇಗದಲ್ಲಿ ಚಲಿಸುತ್ತಿರುವಂತೆ ಕಾಣುತ್ತದೆ. ಸೂರ್ಯ ಚಲಿಸುವುದಿಲ್ಲ, ಗ್ರಹಗಳಷ್ಟೇ ಸೂರ್ಯನನ್ನು ಸುತ್ತುತ್ತವೆ ಎಂಬುದು ಸೌರಮಂಡಲ ದಲ್ಲಿರುವವರಿಗಷ್ಟೇ ಸತ್ಯವಾಗಿ ಕಾಣುತ್ತದೆ. ಆದರೆ ಸೌರಮಂಡಲದಿಂದ ಹೊರಗಿದ್ದು ನೋಡಿದರೆ ಸೂರ್ಯನೂ ಬೇರೆ ಕಕ್ಷೆಯಲ್ಲಿ ಚಲಿಸುತ್ತಿರುವುದು ಕಾಣುತ್ತದೆ. ಅಂತೆಯೇ, ನಾವು ಎಲ್ಲಿ ನಿಂತು ವಿಚಾರವನ್ನು ವಿಮರ್ಶಿಸುತ್ತಿದ್ದೇವೆ ಎಂಬುದನ್ನಾಧರಿಸಿ ತಪ್ಪು-ಒಪ್ಪುಗಳ ನಿಷ್ಕರ್ಷೆಯಾಗುತ್ತದೆ. ಈ ಹಿನ್ನೆಲೆಯಲ್ಲಿ, ಭಾರತೀಯ ವೈದ್ಯರ ಸಂಘದ ಹೇಳಿಕೆಯು ಸರಿ-ತಪ್ಪುಗಳನ್ನು ತೋರಿಸುವುದಕ್ಕಿಂತ ಅದರ ಸ್ಥಾನವನ್ನು ತೋರಿಸುತ್ತಿದೆ ಎಂದರೆ
ತಪ್ಪಾಗಲಾರದು.
(ಲೇಖಕರು ರೇಡಿಯಾಲಜಿಸ್ಟ್ )