Saturday, 23rd November 2024

ಅಟಲ್ ಟನಲ್: ಭಾರತೀಯ ಎಂಜಿನಿಯರ್‌ಗಳಿಗೆ ದೊಡ್ಡ ಸಲಾಂ

ಅಟಲ್ ಟನಲ್ ಉದ್ಘಾಟನೆಗೂ ಒಂದು ದಿನ ಮುಂಚೆ ಹಂಗಾಮ-2 ಚಿತ್ರದ ಶೂಟಿಂಗ್ ‌ಗಾಗಿ ಅಲ್ಲಿಗೆ ಹೋಗಿದ್ದ ಸ್ಯಾಂಡಲ್‌ವುಡ್ ನಟಿ ಪ್ರಣಿತಾ ಸುಭಾಷ್. ಈ ಸುರಂಗಮಾರ್ಗದಲ್ಲಿ ಪ್ರಯಾಣಿಸಿದ ಮೊದಲ ಕನ್ನಡತಿ. ಆ 30 ನಿಮಿಷಗಳ ಪ್ರಯಾಣದ ಅನುಭವವನ್ನು ಅವರ ಮಾತುಗಳಲ್ಲಿ ಕೇಳೋಣ ಬನ್ನಿ.

ಹಂಗಾಮ-2 ಚಿತ್ರದ ಶೂಟಿಂಗ್‌ಗೆಂದು ಮನಾಲಿಗೆ ಹೋಗಿ, ಅಲ್ಲಿಂದ ಲೇಹ್ ಲಡಾಖ್ ಕಡೆ ಪ್ರಯಾಣಿಸಬೇಕಿತ್ತು. ಸಾಮಾನ್ಯವಾಗಿ ದ್ದರೆ ಈ ದಾರಿ ಕ್ರಮಿಸಲು ಸುಮಾರು ಐದರಿಂದ ಆರು ತಾಸು ಬೇಕಂತೆ. ಆದರೆ ನಮ್ಮ ತಂಡ ಹೋಗುವ ಹಿಂದಿನ ದಿನವೇ ಪ್ರಧಾನಿ ನರೇಂದ್ರ ಮೋದಿ ಅವರು ಅಟಲ್ ಟನಲ್ ಅನ್ನು ಉದ್ಘಾಟಿಸಿದ್ದರು. ಆದ್ದರಿಂದ ನಾವು ಇದೇ ಸುರಂಗಮಾರ್ಗ ದಲ್ಲಿ ಪ್ರಯಾಣಿಸಿದೆವು. ಐದಾರು ತಾಸು ತಗೆದುಕೊಳ್ಳುತ್ತಿದ್ದ ಈ ದಾರಿ, ಈ ಸುರಂಗಮಾರ್ಗ ದಿಂದ ಕೇವಲ 30 ನಿಮಿಷಕ್ಕೆ ಇಳಿದಿದೆ ಎಂದು ನಮ್ಮ ಕಾರಿನ ಚಾಲಕ ಹೇಳುತ್ತಿದ್ದರು.

ನಾನು ಮನಾಲಿ, ಲೇಹ್, ಲಡಾಖ್‌ಗೆ ಹೋಗುತ್ತಿರುವುದು ಇದೇ ಮೊದಲು. ಅದರಲ್ಲೂ ಅಟಲ್ ಟನಲ್ ಉದ್ಘಾಟನೆಗೊಂಡ ಮರುದಿನವೇ, ಹೋಗಿದ್ದು ನಿಜಕ್ಕೂ ಅದ್ಭುತ ಕ್ಷಣ. ಈ ಟನಲ್ ಅನ್ನು ಮುಂದಿನ ದಿನಗಳಲ್ಲಿ ಭಾರತದ ಎಂಜಿನಿಯರಿಂಗ್‌ನ ಸಾಮರ್ಥ್ಯವೇನು ಎನ್ನುವುದನ್ನು ತೋರಿಸುವುದಕ್ಕೆ ಬಳಸಿದರೂ ಅಚ್ಚರಿಯಿಲ್ಲ.

ಬೃಹದಾಕಾರದ ಬೆಟ್ಟದ ಕೆಳಗೆ ಸುರಂಗ ಮಾರ್ಗ ಕೊರೆದು ಅತ್ಯದ್ಭುತ ರಸ್ತೆಯನ್ನು ನಿರ್ಮಿಸಿರುವ ಭಾರತೀಯ  ಎಂಜಿನಿಯರ್ ‌ಗಳಿಗೆ ದೊಡ್ಡ ಸಲಾಂ ಹೇಳಬೇಕು. ನಾನು ಹೋಗುವ ಹಿಂದಿನ ದಿನವೇ ಪ್ರಧಾನಿ ನರೇಂದ್ರ ಮೋದಿ ಅವರು ಈ ಸುರಂಗ ಮಾರ್ಗವನ್ನು ಉದ್ಘಾಟನೆ ಮಾಡಿದ್ದರಿಂದ ಸಹಜವಾಗಿಯೇ, ಅಲ್ಲಲ್ಲಿ ಫ್ಲೆೆಕ್ಸ್, ಬೋರ್ಡ್ ಹಾಗೂ ಸ್ವಾಗತ ಕಮಾನುಗಳಿದ್ದವು.

ಈ ಕಮಾನುಗಳ ಮೂಲಕ ಹಾದು ಹೋಗುವುದೇ ಒಂದು ಸಂತಸದ ವಿಷಯ. ಇನ್ನು ಸುಮಾರು 9 ಕಿ.ಮೀ ದೂರದ ಸುರಂಗ ಮಾರ್ಗ ಪ್ರವೇಶಿಸುತ್ತಿದ್ದಂತೆ ಅಲ್ಲಲ್ಲಿ ಟೆಲಿಫೋನ್‌ಗಳು,ರಸ್ತೆಯುದ್ದಕ್ಕೂ ಲೈಟ್‌ಗಳು ಹಾಗೂ ಅಪಘಾತವನ್ನು ತಪ್ಪಿಸುವ ದೃಷ್ಟಿಯಿಂದ ವೇಗದ ಮಿತಿ ಹೇರಿರುವುದನ್ನು ನೋಡುವುದಕ್ಕೆ ಖುಷಿಯಾಗುತ್ತದೆ. ಭಾರತದಲ್ಲಿಯೂ ಈ ರೀತಿಯ ರಸ್ತೆ ನಿರ್ಮಾಣವನ್ನು ಮಾಡಬಹುದು ಎಂದು ವಿಶ್ವಕ್ಕೆ ತೋರಿಸುವುದಕ್ಕೆ ಇದೊಂದು ತಾಜಾ ಉದಾಹರಣೆ ಎಂದರೆ ತಪ್ಪಾಗುವುದಿಲ್ಲ.

ನಾನು ಹಾಗೂ ನಮ್ಮ ತಂಡ ಹೋಗುವಾಗ ಅನೇಕ ಪ್ರವಾಸಿಗರು ಈ ಸುರಂಗಮಾರ್ಗವನ್ನು ನೋಡುವುದಕ್ಕೆಂದು ಆಗಮಿಸಿ ದ್ದರು. ಕರೋನಾಸಮಯದಲ್ಲಿಯೂ ಇಷ್ಟೊಂದು ಜನ ಇಷ್ಟು ಉತ್ಸಾಹದಿಂದ ಬರಲು ಕಾರಣವೇನು ಎನ್ನುವ ಬಗ್ಗೆ
ನಮ್ಮ ಚಾಲಕರನ್ನು ಪ್ರಶ್ನಿಸಿದೆ. ಅದಕ್ಕೆ ಅವರು ಈ ಸುರಂಗಮಾರ್ಗ ನಿರ್ಮಾಣವಾಗುವ ಮೊದಲು ಇದ್ದ ದುರ್ಗಮ ಹಾದಿಯ ಬಗ್ಗೆ ಹೇಳಿದರು. ಲೇಗೆ ತಲುಪಲು ಸುಮಾರು 45 ಕಿ.ಮೀ ಕ್ರಮಿಸಬೇಕಿತ್ತು. ಅದೂ ದುರ್ಗಮ ಹಾದಿಯಾಗಿದ್ದರಿಂದ, ವಾಹನ ಚಲಾಯಿಸುವುದೇ ದೊಡ್ಡ ಸವಾಲಾಗಿತ್ತಂತೆ. ಚಿಕ್ಕ ರಸ್ತೆ ಇದ್ದಿದ್ದರಿಂದ ಟ್ರಾಫಿಕ್ ಸಮಸ್ಯೆಯೂ ಹೆಚ್ಚಾಗಿಯೇ ಇರುತ್ತಿತ್ತಂತೆ.
ಆದರೀಗ ಈ ಎಲ್ಲ ಸಮಸ್ಯೆಗೂ ಈ ಸುರಂಗ ಮಾರ್ಗ ಪರಿಹಾರವಾಗಿದೆ.

ಕೇಂದ್ರ ಸರಕಾರ ಈ ಸುರಂಗ ಮಾರ್ಗವನ್ನು ಆರಂಭಿಸಿರುವುದು ಪ್ರಮುಖವಾಗಿ ತಮ್ಮ ಸೈನಿಕರಿಗೆ ಸಹಾಯವಾಗಲಿ ಎನ್ನುವ ಉದ್ದೇಶದಿಂದ. ಚೀನಾ ಹಾಗೂ ಪಾಕಿಸ್ತಾನ ಗಡಿಯಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿರುವ ಪುಂಡಾಟಿಕೆಯನ್ನು ಮಟ್ಟಹಾಕಲು
ಸುಲಭವಾಗಿ ಅಲ್ಲಿಗೆ ತಲುಪಲು ಈ ಸುರಂಗಮಾರ್ಗ ಸಹಾಯ ಮಾಡುತ್ತದೆ. ಇದರೊಂದಿಗೆ ಪ್ರವಾಸಿಗರಿಗೂ ಲೇ, ಲಡಾಖ್ ತಲುಪಲು ಸಹಾಯ ಮಾಡುತ್ತದೆ. ಇದರಿಂದ ಈ ಭಾಗದ ಪ್ರವಾಸೋದ್ಯಮ ಮತ್ತಷ್ಟು ಹೆಚ್ಚಾಗಲಿದೆ ಎನ್ನುವ ವಿಶ್ವಾಸವಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಹೋಗಿ ಬಂದ ಮರುದಿನವೇ ನಾನು ಅಲ್ಲಿಗೆ ಹೋಗಿದ್ದು, ಅದೇ ಸುರಂಗ ಮಾರ್ಗದಲ್ಲಿ ಸಾಗಿದ್ದು ಜೀವನದಲ್ಲಿ ಮರೆಯಲಾಗದ ಘಟನೆ. ಆ 30 ನಿಮಿಷ ನಾನು ಸಂಚರಿಸಿದ್ದು ನೆನಪಿಸಿಕೊಂಡರೆ ಖುಷಿಯಾಗುತ್ತದೆ.
ಈ ಸುರಂಗ ಮಾರ್ಗ ಮುಂದಿನ ದಿನಗಳಲ್ಲಿ ನಮ್ಮಯೋಧರಿಗೆ ಇನ್ನಷ್ಟು ಅನುಕೂಲವಾಗಲಿ ಎನ್ನುವ ಆಶಯದೊಂದಿಗೆ ಅಟಲ್ ಸುರಂಗ ಮಾರ್ಗದ ಆ ಜರ್ನಿಯನ್ನು ಮುಗಿಸಿದೆ.