ಶಿಶಿರ ಕಾಲ
shishirh@gmail.com
ಇತ್ತೀಚಿನ ಫೋರ್ಬ್ಸ್ ಪತ್ರಿಕೆ ಓದುತ್ತಿದ್ದೆ. ಅದರಲ್ಲಿ ಒಂದು ಚಿಕ್ಕ ವರದಿ, ಪತ್ರಿಕೆಯ ಪರಿಭಾಷೆಯಲ್ಲಿ ಬಾಕ್ಸ್ ಐಟಮ್ ಒಂದು ಹೀಗಿತ್ತು- ‘೨೦೨೦ ರಿಂದೀಚೆಗೆ ಜಗತ್ತಿನ ಹೊಸ ಸಂಪತ್ತಿನ ಶೇ.೬೬ರಷ್ಟು ಭಾಗವು ಅತ್ಯಂತ ಶ್ರೀಮಂತ ಶೇ.೧ರಷ್ಟು ಜನರನ್ನು ತಲುಪಿದೆ’ ಎಂದು.
ಸಾಂಕ್ರಾಮಿಕದ ಸಮಯದಲ್ಲಿ ಉತ್ಪಾದನೆಗಳು ಕೆಲ ಕಾಲ ನಿಂತುಹೋಗಿದ್ದವು. ಆರ್ಥಿಕ ವ್ಯವಹಾರಗಳೇ ನಡೆಯದೆ ಅದೆಷ್ಟೋ ತಿಂಗಳುಗಳು ಕಳೆದವು. ಈ ಪ್ರಮಾಣದಲ್ಲಿ ವ್ಯವಹಾರಗಳು ಸಾಮೂಹಿಕವಾಗಿ ನೆಲಕಚ್ಚಿಬಿಡುವುದನ್ನು ಎದುರಿಸುವ, ಸಂಭಾಳಿಸುವ ಶಕ್ತಿ ಯಾವ ವ್ಯಾಪಾರ ವ್ಯವಹಾರಕ್ಕೂ ಇರಲಿಲ್ಲ. ಚಿಕ್ಕ ಗೂಡಂಗಡಿಯಿಂದ ದೊಡ್ಡ ದೊಡ್ಡ ಮಾಲ್ ಗಳಾದಿಯಾಗಿ ಎಲ್ಲವನ್ನೂ ದಿವಾಳಿಯ ಅಂಚಿಗೆ ತಂದು ನಿಲ್ಲಿಸಿದ್ದು ಈ ಸಾಂಕ್ರಾಮಿಕ. ಕರೋನಾದಿಂದ ಆದ ಏರುಪೇರುಗಳು, ಬಡವರಿಗೆ, ಸಂಬಳದಿಂದ ಸಂಬಳಕ್ಕೆ ಬದುಕುವ ವರಿಗೆ ಆದ ಪೆಟ್ಟು ಅಷ್ಟಿಷ್ಟಲ್ಲ. ಕೆಲವರು ಆ ಆರ್ಥಿಕ ಹೊಡೆತ ದಿಂದ ಇಂದಿಗೂ ಹೊರಬಂದಿಲ್ಲ. ಆಗ ಮಾಡಿಕೊಂಡ ಸಾಲಗಳನ್ನು ಇಂದಿಗೂ ತೀರಿಸುತ್ತಿರುವವರಿದ್ದಾರೆ.
ಹೀಗೆ ಇರುವಾಗ ಈ ಒಂದು ಸಾಲಿನ ವರದಿ ಅವ್ಯಕ್ತವಾಗಿ ಸಾಂಕ್ರಾಮಿಕ ಮತ್ತು ನಂತರದ ಮೂರು ವರ್ಷದ ಆರ್ಥಿಕ ಗತಿಯ ಬಗ್ಗೆ ಹೊಸತೊಂದು ಆಯಾಮ ವನ್ನು ನಮ್ಮೆದುರು ತೆರೆದಿಡುತ್ತದೆ- ಸಾಂಕ್ರಾಮಿಕದಲ್ಲಿ, ನಂತರದಲ್ಲಿ ಶ್ರೀಮಂತರು ಇನ್ನಷ್ಟು ಶ್ರೀಮಂತರಾಗಿದ್ದಾರೆ, ಬಡವರು, ಮಧ್ಯಮ ವರ್ಗದವರು ಇನ್ನಷ್ಟು ಬಡವರಾಗಿದ್ದಾರೆ ಎಂದು. ಇತ್ತೀಚೆಗೆ ಜಗತ್ತಿನಲ್ಲೆಲ್ಲ ಹೆಚ್ಚಿದ ಬೆಲೆ ಏರಿಕೆ ಈ ಬಡತನವನ್ನು ಇನ್ನಷ್ಟು ಸಹಿಸಲ ಸಾಧ್ಯವಾಗಿಸಿದೆ.
ಜಗತ್ತಿನ ಎಲ್ಲರ ಸಂಪತ್ತನ್ನು ಒಂದು ಕಡೆ ರಾಶಿ ಹಾಕಿ ಅದರಲ್ಲಿ ಅರ್ಧ ಭಾಗವನ್ನು ತೆಗೆದು ಬೇರೆ ಇಟ್ಟರೆ ಅದು ಅತ್ಯಂತ ಶ್ರೀಮಂತ ಶೇ.೧ರಷ್ಟು ಜನರ ಆಸ್ತಿ. ಬಾಕಿಯದು ಉಳಿದ ಶೇ.೯೯ರಷ್ಟು ಜನರದ್ದು. ಎಂದರೆ ಎಂಟು ಕೋಟಿ ಜನರಲ್ಲಿ ಜಗತ್ತಿನ ಅರ್ಧದಷ್ಟು ಆಸ್ತಿಯಿದ್ದರೆ ಉಳಿದ ಅರ್ಧವನ್ನು ಎಂಟುನೂರು ಕೋಟಿ ಜನರು ಹಂಚಿಕೊಳ್ಳಬೇಕು. ಅದರಲ್ಲಿ ಬಡತನ ರೇಖೆಗಿಂತ ಕೆಳಗಿರುವವರು ಶೇ.೨೦. ಇನ್ನೊಂದು ಹಂತ ಕೆಳಕ್ಕಿಳಿದು ನೋಡಿದರೆ ಜಗತ್ತಿನ ಶೇ.೧೦ ರಷ್ಟು ಮಂದಿಯ ಬಳಿ ಶೇ.೮೫ರಷ್ಟು ಸಂಪತ್ತು ಸೇರಿದೆ.
ಉಳಿದ ಶೇ. ೯೦ರಷ್ಟು ಜನರು ಹಂಚಿಕೊಳ್ಳುವ ಸಂಪತ್ತು ಕೇವಲ ಹದಿನೈದು ಪ್ರತಿಶತದಷ್ಟು. ಈ ಒಂದಿಷ್ಟು ಸರಳ ಅಂಕಿ ಅಂಶಗಳಿಂದ ಜಗತ್ತಿನ ಆಸ್ತಿ ಹಂಚಿಕೆಯ ಅಸಮತೋಲನದ ಅಂದಾಜಾಗಿಬಿಡುತ್ತದೆ. ಇದೆಲ್ಲ ಸರಿಯೋ, ತಪ್ಪೋ ಅವೆಲ್ಲ ಬೇರೆ ಚರ್ಚೆ. ಈ ಅವಸ್ಥೆ ಕೂಡ ನಾವೆಲ್ಲ ಮನುಷ್ಯರು ಸೇರಿಯೇ ಕಟ್ಟಿಕೊಂಡ ಸಮಾಜದ ಉಪೋತ್ಪನ್ನ. ಈ ಅಸಮತೋಲನವನ್ನು ಆದಷ್ಟು ಕಡಿಮೆ ಮಾಡಬೇಕಾದದ್ದು ಸರಕಾರದ ಕೆಲಸ. ಆದರೆ ನಮ್ಮಲ್ಲಿಯ ರಾಜಕಾರಣಿ ಗಳಷ್ಟೇ ಆ ಶೇ.೧೦ ಶ್ರೀಮಂತರಾಗಿರುವುದು, ಸಂಪತ್ತನ್ನು ಶೇಖರಿಸಿಟ್ಟುಕೊಂಡಿರುವುದು. ಹಾಗಾಗಿ ಇದೆಲ್ಲ ಬದಲಾಗಿಬಿಡುವುದು ಇನ್ನಷ್ಟು ಜಟಿಲ. ಜಗತ್ತು ಮುಂದುವರಿದಂತೆ ಈ ಅಂತರ, ಶ್ರೀಮಂತರೇ ಇನ್ನಷ್ಟು ಶ್ರೀಮಂತರಾಗುವುದು ಹೆಚ್ಚುತ್ತಲೇ ಹೋಗುತ್ತದೆ.
ಶೇ.೯೦ರಷ್ಟು ಬಡವರು ಬಡತನದಿಂದ ಹೊರಬರುವುದಕ್ಕೆ ಬೇಕಾಗುವ ಸಂಪತ್ತಿಗಿಂತ ಹಲವು ಪಟ್ಟು ಸಂಪತ್ತು ಶ್ರೀಮಂತರನ್ನೇ ಹೋಗಿ ಸೇರುತ್ತಲೇ ಇರುತ್ತದೆ. ಈ ಜಗತ್ತನ್ನು ಮುನ್ನಡೆಸುತ್ತಿರುವುದು ರಾಜಕಾರಣಿಗಳಲ್ಲ, ಬದಲಿಗೆ ಅವರ ಹಿಂದೆ ನಿಂತು ಇದೆಲ್ಲವನ್ನು ನಿರ್ದೇಶಿಸುವುದು ಶ್ರೀಮಂತರು ಎಂಬ ಮಾತಿದೆ. ಈ ವಾದಗಳನ್ನು ಸಂಪೂರ್ಣ ವಾಗಿ ಅಲ್ಲಗಳೆಯುವಂತಿಲ್ಲ. ಯಾವುದೇ ದೇಶವನ್ನು ತೆಗೆದು ಕೊಳ್ಳಿ, ಅಲ್ಲಿನ ಅತ್ಯಂತ ಶ್ರೀಮಂತರ ಒಡನಾಟ ರಾಜಕೀಯದೊಂದಿಗೆ, ಪಕ್ಷಗಳೊಂದಿಗೆ ಇದ್ದೇ ಇರುತ್ತದೆ.
ಕಾನೂನುಗಳು, ತೆರಿಗೆ ವಿನಾಯತಿಗಳನ್ನು ತಮಗೆ ಬೇಕಾದಂತೆ ಬದಲಾಯಿಸಿ ಲಾಭ ಪಡೆಯುವುದು ಈ ಶ್ರೀಮಂತರೇ. ಸಾಮಾನ್ಯವಾಗಿ ಶ್ರೀಮಂತರ ಮತ್ತು ರಾಜಕಾರಣಿಗಳ ಸಂಬಂಧ ಎಲ್ಲೆಡೆ ಗೌಪ್ಯ. ಜಗತ್ತಿನ ಬಹುತೇಕ ದೇಶಗಳಲ್ಲಿ ರಾಜಕೀಯ ಪಕ್ಷಗಳು ತಮಗೆ ಬರುವ ದೇಣಿಗೆಗಳ ಲೆಕ್ಕವನ್ನು ಸರಕಾರಕ್ಕೆ ಕೊಡಬೇಕಾಗಿಲ್ಲ. ಅಥವಾ ಅದರ ಮೂಲ, ಹಿನ್ನೆಲೆಯನ್ನು ಸರಕಾ ರಕ್ಕೆ ವಿವರಿಸಬೇಕಿಲ್ಲ. ಇದು ಶ್ರೀಮಂತರ ಮತ್ತು ರಾಜಕಾರಣಿ ಗಳ ನಡುವಿನ ಸಂಬಂಧವನ್ನು ಮರೆಮಾಚಲಿಕ್ಕೆಂದೇ ಇರುವುದು ಎಂಬುದು ವಾದ. ಒಟ್ಟಾರೆ ನೇರವಾಗಿ, ಅಥವಾ ಪರೋಕ್ಷವಾಗಿ ಆಡಳಿತದ ದಿಶೆಯನ್ನು ನಿರ್ಧರಿಸುವಲ್ಲಿ ಈ ಶೇ.೧ರಷ್ಟು ಶ್ರೀಮಂತರ ಪಾತ್ರ ಸ್ಪಷ್ಟ.
ನಾನು ಕಲಿಯುವಾಗ ಶಾಲೆಯಲ್ಲಿ ಬೆಳಗಿನ ಪ್ರಾರ್ಥನೆ, ರಾಷ್ಟ್ರಗೀತೆ ಇವೆಲ್ಲ ಮುಗಿದ ಮೇಲೆ ರಸಪ್ರಶ್ನೆ ಕೇಳುವ ಪರಿಪಾಠ ಇತ್ತು. ಜನರಲ್ ನಾಲೆಜ್ ಪ್ರಶ್ನೆಗಳು. ಪಾಳಿಯಲ್ಲಿ ದಿನಕ್ಕೆ ಒಬ್ಬರಂತೆ ಐದಾರು ರಸಪ್ರಶ್ನೆಯನ್ನು ಮಕ್ಕಳೇ ತಯಾರಿ ಮಾಡಿಕೊಂಡು ಕೇಳುವುದು. ಉತ್ತರ ಬಲ್ಲವರು ಕೈ ಎತ್ತಿ ಹೇಳಬೇಕು. ಅದು ಬೇರೆ ಮಕ್ಕಳಿಗೆ ಈ ಮೂಲಕ ಕೇಳಿ ತಿಳಿಯಬೇಕು. ಆಗ ವೃತ್ತ ಪತ್ರಿಕೆಯೊಂದರಲ್ಲಿ ವಾರಕ್ಕೊಮ್ಮೆ ಚಿಕ್ಕ ರಸಪ್ರಶ್ನೆಯ ಕಾಲಂ ಬರುತ್ತಿತ್ತು. ಅಲ್ಲಿ ಐದಾರು ಪ್ರಶ್ನೆಗಳಿರು ತ್ತಿದ್ದವು.
ಅವುಗಳನ್ನೆಲ್ಲ ಹಲವು ವಾರ ಸಂಗ್ರಹಿಸಿ ಅವುಗಳಲ್ಲಿಯೇ ಸುಧಾರಿಸಬೇಕು. ಆ ಪತ್ರಿಕೆಯವರಿಗೂ ಸಾಮಾನ್ಯ ಜ್ಞಾನದ ರಸಪ್ರಶ್ನೆಗಳ ಕೊರತೆಯಿತ್ತು ಅನ್ನಿಸುತ್ತದೆ. ಅದೇ ಹತ್ತಿಪ್ಪತ್ತು ಪ್ರಶ್ನೆಗಳು ಪತ್ರಿಕೆಯಲ್ಲಿ ಪುನರಾವರ್ತನೆ ಯಾಗುತ್ತಿದ್ದವು. ನಮಗಿದ್ದ ಸೆಲೆ ಅದೊಂದೇ. ಆದ್ದರಿಂದ ನಮ್ಮ ಶಾಲೆಯ ರಸಪ್ರಶ್ನೆಯಲ್ಲಿಯೂ ಪ್ರಶ್ನೆಗಳು ಪುನರಾವರ್ತನೆಯಾಗುತ್ತಿದ್ದವು. ಹಾಗಾಗಿ ನಮ್ಮಲ್ಲಿದ್ದ ಪ್ರಶ್ನೆಗಳು ಕೆಲವೇ ಕೆಲವು- ಮೌಂಟ್ ಎವರೆಸ್ಟ್ ಮೊದಲು ಏರಿದ್ದು ಯಾರು, ಚಂದ್ರನ ಮೇಲೆ ಮೊದಲು ಕಾಲಿಟ್ಟ ವ್ಯಕ್ತಿ ಯಾರು ಹೀಗೊಂದಿಷ್ಟು. ಅಲ್ಲಿ ಪದೇ ಪದೆ ಕೇಳುತ್ತಿದ್ದ ಇನ್ನೊಂದು ಪ್ರಶ್ನೆ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಯಾರು ಎಂದು. ನಮಗೆ ಈ ಬಿಲ್ ಗೇಟ್ಸ್ ಯಾರೆಂದು ಅಂದಾಜೂ ಇರಲಿಲ್ಲ. ಆದರೆ ಕೇಳಿ ಕೇಳಿ ಅವನ ಹೆಸರು ಬಾಯಿಪಾಠವಾಗಿತ್ತು. ಶ್ರೀಮಂತ ಯಾರು ಎಂದರೆ ಬಿಲ್ ಗೇಟ್ಸ್.
ಶಾಲೆಯಲ್ಲಿ, ಹೈಸ್ಕೂಲಿನಲ್ಲಿ ಯಾರಾದರೂ ಅತಿ ಪ್ರದರ್ಶನ ಮಾಡಿದರೆ ‘ಬಿಲ್ ಗೇಟ್ಸ್ ಮಗನಂತೆ ಆಡಬೇಡ’ ಎಂದು ಕಿಚಾಯಿಸುವುದು. ನಮಗೆ ಅಸಲಿಗೆ ಈ ಬಿಲ್ ಗೇಟ್ಸ್ ಗಂಡೋ, ಹೆಣ್ಣೋ, ಎಲ್ಲಿರುತ್ತಾನೆ, ಅವನ ಕೆಲಸ ಏನು ಇತ್ಯಾದಿ ಏನೂ ಗೊತ್ತಿರಲಿಲ್ಲ. ಕಂಪ್ಯೂಟರ್ ದಿಗ್ಗಜ ಎಂದೆಲ್ಲ ನಂತರ ದಲ್ಲಿ ಓದಿದಾಗ ಬಿಲ್ ಗೇಟ್ಸ್ದು ಕಂಪ್ಯೂಟರ್ ತಯಾರಿಸುವ ಕಾರ್ಖಾನೆ ಎಂದೇ ನಾವೆಲ್ಲಾ ಬಹುಕಾಲ ಅಂದುಕೊಂಡದ್ದು. ಬಿಲ್ ಗೇಟ್ಸ್ ೧೯೮೭ ರಲ್ಲಿಯೇ ಜಗತ್ತಿನ ಶ್ರೀಮಂತರಲ್ಲಿ ಮೊದಲಿಗನೆನಿಸಿಕೊಂಡವನು.
ಅಲ್ಲಿಂದ ಇಂದಿನವರೆಗೆ ಶ್ರೀಮಂತರ ಪಟ್ಟಿಯ ಮೊದಲ ಹತ್ತರಲ್ಲಿ ಅವನ ಹೆಸರು ಇದ್ದೇ ಇದೆ. ವಾರನ್ ಬಫೆಟ್, ಅಮೆಜಾನ್ನ ಜೆಫ್ ಬಿಜೋಸ್, ಲ್ಯಾರಿ ಪೇಜ್ ಇವರೆಲ್ಲ ಎರಡು ಮೂರು ದಶಕದಿಂದ ಆ ಮೊದಲ ಹತ್ತರ ಪಟ್ಟಿಯಲ್ಲಿದ್ದಾರೆ. ಅಂಬಾನಿ, ಅದಾನಿ, ಶಿವ್ ನಾಡಾರ್, ಜಿಂದಾಲ್, ನಾರಾಯಣ್ ಮೂರ್ತಿ ಇವರೆಲ್ಲರೂ ನಮ್ಮ ಬಿಲಿಯನೇರ್ ಗಳು. ಭಾರತದಲ್ಲಿ ೨೪೦ ಜನ ಬಿಲಿಯನೇರ್ಗಳು ಇದ್ದರೆ ಅಮೆರಿಕದಲ್ಲಿ ೭೫೦, ಚೀನಾದಲ್ಲಿ ೭೦೦. ಬಿಲಿಯನೇರ್ಗಳ ಸಂಖ್ಯೆಯಲ್ಲಿ ಭಾರತಕ್ಕೆ ಮೂರನೇ ಸ್ಥಾನ. ಮೊದಲ ಎರಡು ಅಮೆರಿಕ ಮತ್ತು ಚೀನಾಕ್ಕೆ. ಆರ್ಥಿಕ ಅಸಮತೋಲನದ ಹಿನ್ನೆಲೆಯಲ್ಲಿ ನೋಡಿದರೆ ಈ ಸ್ಥಾನ ಸಂಭ್ರಮಿಸುವಂಥದ್ದಲ್ಲ.
ಬಿಲಿಯನೇರ್ ಎಂದರೆ ಒಂದು ಸಾವಿರ ಕೋಟಿ ಡಾಲರ್ಗಿಂತ ಹೆಚ್ಚು ಆಸ್ತಿಯಿರುವವರು. ಒಂದು ಡಾಲರಿಗೆ ಎಂಬತ್ಮೂರು ರೂಪಾಯಿ. ಇದರರ್ಥ ೮೩ ಸಾವಿರ ಕೋಟಿ ರೂಪಾಯಿಗಿಂತ ಹೆಚ್ಚಿನ ಆಸ್ತಿಯಿರುವ ವ್ಯಕ್ತಿ ಬಿಲಿಯನೇರ್. ಇಷ್ಟು ಪ್ರಮಾಣದಲ್ಲಿ ಆಸ್ತಿ ಹೊಂದಿರುವವರು ಖಂಡಿತವಾಗಿ ಸರಕಾರ, ಆಡಳಿತದ ಮೇಲೆ ಒಂದಿಲ್ಲೊಂದು ರೀತಿಯಲ್ಲಿ ತಮ್ಮ ಪ್ರಭಾವ ವನ್ನು ಬೀರಿಯೇ ಇರುತ್ತಾರೆ. ಹಾಗಂತ ಬಿಲಿಯನೇರ್ಗಳೆಲ್ಲ ಈ ಜಗತ್ತಿನಲ್ಲಿ ಪ್ರಭಾವ ಶಾಲಿಗಳೇ? ಅದೆಷ್ಟೋ ಆಗರ್ಭ ಶ್ರೀಮಂತರು, ಬಿಲಿಯನೇರ್ಗಳ ಹೆಸರು ಎಲ್ಲಿಯೂ, ಯಾರೂ ಕೇಳಿರುವುದಿಲ್ಲ. ಭಾರತದ ಮೂರನೇ ಶ್ರೀಮಂತ ಶಿವ್ ನಾಡರ್ ಹೆಸರು ಎಲ್ಲಿ, ಎಷ್ಟು ಬಾರಿ ಕೇಳಿರುತ್ತೇವೆ? ಇವೆಲ್ಲ ಬಿಲಿಯನೇರ್- ಪರಮ ಶ್ರೀಮಂತರಿಗೆ ಹೋಲಿಸಿದರೆ ಸಂಪೂರ್ಣ ಬೇರೆಯಾಗಿ ನಿಲ್ಲುವವನು ಟೆಸ್ಲಾ, ಸ್ಪೇಸ್ ಎಕ್ಸ್, ಟ್ವಿಟರ್ (ಈಗ ‘ಎಕ್ಸ್’) ಖ್ಯಾತಿಯ ಎಲಾನ್ ಮಸ್ಕ್. ಸದ್ಯ ಜಗತ್ತಿನ ನಂಬರ್ ಒನ್ ಶ್ರೀಮಂತ. ಎಲಾನ್ನ ಆಸ್ತಿ ಮುಕೇಶ್ ಅಂಬಾ ನಿಯ ಮೂರು ಪಟ್ಟು.
ಆದರೆ ವಿಷಯ ಅದಲ್ಲ. ಎಲಾನ್ ಕೇವಲ ಶ್ರೀಮಂತನಷ್ಟೇ ಆಗಿದ್ದರೆ ಅವನ ಬಗ್ಗೆ ಹೇಳಲಿಕ್ಕೆ ಒಂದಿಷ್ಟು ಅಂಕಿ-ಸಂಖ್ಯೆಗಳನ್ನು ಬಿಟ್ಟರೆ ಬೇರಿನ್ನೇನೂ ಇರುತ್ತಿರಲಿಲ್ಲ. ಅವನ ಬಳಿ ಇಷ್ಟು ಕೋಟಿಯ ವಿಮಾನವಿದೆಯಂತೆ, ಅವನು ತನ್ನ ಕೂದಲಿಗೆ ಪ್ರತಿ ತಿಂಗಳು ಇಷ್ಟು ವ್ಯಯ ಮಾಡುತ್ತಾನಂತೆ ಎಂಬಿ ತ್ಯಾದಿ ಯಾವುದಕ್ಕೂ ಉಪಯೋಗಕ್ಕೆ ಬಾರದ ವಿಷಯಗಳಿರುತ್ತಿದ್ದವು. ಆದರೆ ಎಲಾನ್ ಮಸ್ಕ್ ಹಾಗಲ್ಲ. ಆತ ಬರೀ ಒಬ್ಬ ಶ್ರೀಮಂತನಲ್ಲ. ಅವನೊಬ್ಬ ದಾರ್ಶನಿಕ, ತತ್ವಜ್ಞಾನಿ, ವ್ಯಾಪಾರಿ, ತಂತ್ರಜ್ಞ, ಮಾತುಗಾರ, ಮಾನವತಾವಾದಿ ಇತ್ಯಾದಿ ಇತ್ಯಾದಿ. ಒಬ್ಬ ಮಹಾ ಬುದ್ಧಿವಂತ- ಜೀನಿಯಸ್. ಆತ ಉಳಿದ ಕಂಪನಿಗಳ ಮಾಲೀಕರಿಗಿಂತ, ಶ್ರೀಮಂತರಿಗಿಂತ ಬಹಳ ವಿಭಿನ್ನ. ಆತನಿಗೆ ತನ್ನ ಕಂಪನಿ ತಯಾರಿಸುವ ಇಲೆಕ್ಟ್ರಿಕ್ ಕಾರಿನ ಸ್ವಯಂಚಾಲನಾ ಸಾಫ್ಟ್ ವೇರ್ಗಳ ಒಳ ಆಯದಿಂದ ಹಿಡಿದು ಅದರಲ್ಲಿರುವ ಬ್ಯಾಟರಿ ಹೇಗೆ ಕೆಲಸ ಮಾಡುತ್ತದೆ ಎಂಬ ಎಲ್ಲಾ ವಿಚಾರಗಳೂ ತಾಂತ್ರಿಕವಾಗಿ ಗೊತ್ತು.
ವಿದ್ಯುತ್ ಚಾಲಿತ ವಾಹನ ಪೆಟ್ರೋಲ್ ವಾಹನಗಳಿಗೆ ಪರ್ಯಾಯವಾಗುವುದು ಸಾಧ್ಯವೇ ಇಲ್ಲ ಎಂಬ ಕಾಲವಿತ್ತು. ಮಾರ್ಗಮಧ್ಯೆ ಪೆಟ್ರೋಲ್ ಖಾಲಿಯಾದರೆ ಹಾಕಿಸಬಹುದು, ಚಾರ್ಜ್ ಹೋಗಿಬಿಟ್ಟರೆ? ಅದೆಲ್ಲ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿ ಹೊಸತೊಂದು ವ್ಯವಸ್ಥೆಯನ್ನು ಸೃಷ್ಟಿಸಿ ಬದಲಿಸಿದವನು ಎಲಾನ್ ಮಸ್ಕ್. ಇಂದು ಅಮೆರಿಕದ ರಸ್ತೆ ರಸ್ತೆಗಳಲ್ಲಿ ಟೆಸ್ಲಾ ಕಾರುಗಳು ಓಡಾಡುತ್ತಿವೆ. ಇನ್ನು ಕೆಲವೇ ವರ್ಷಗಳಲ್ಲಿ ನಾವು ಬಳಸುವ ಎಲ್ಲಾ ವಾಹನಗಳೂ ಪೆಟ್ರೋಲ್ ಬದಲಿಗೆ ವಿದ್ಯುತ್ ಬಳಸಲಿವೆ. ಪೆಟ್ರೋಲ್ ಕಾರುಗಳು ಬಹುಬೇಗ ನೇಪಥ್ಯಕ್ಕೆ ಸೇರಲಿವೆ.
ಈಗಾಗಲೇ ಬೆಂಗಳೂರಿನಲ್ಲಿ ಸಂಪೂರ್ಣ ವಿದ್ಯುತ್ ಚಾಲಿತ ಬಸ್ಗಳು ಬಂದಿವೆ ಎಂದು ಕೇಳಿದ್ದೇನೆ. ಇದೆಲ್ಲ ಆಮೂಲಾಗ್ರ ಬದಲಾವಣೆ ಸಾಧ್ಯ ಎನ್ನುವುದನ್ನು ಜಗತ್ತಿಗೆ ಸಾಧಿಸಿ ತೋರಿಸಿ ದವನು ಎಲಾನ್ ಮಸ್ಕ್. ಇಡೀ ಮನುಕುಲ ಪೆಟ್ರೋಲ್ ವಾಹನದಿಂದ ವಿದ್ಯುತ್ ವಾಹನಕ್ಕೆ ಹೊರಳುವುದಕ್ಕೆ ಮೊದಲ ಅಡಿಪಾಯ ಹಾಕಿದ್ದು ಎಲಾನ್. ಈಗ ಎಲ್ಲೆಂದರಲ್ಲಿ ವಿದ್ಯುತ್ ಚಾಲಿತ ವಾಹನಗಳಿವೆ. ಭರದಿಂದ ಪೆಟ್ರೋಲ್ ವಾಹನಗಳಿಗೆ ಪೈಪೋಟಿ ಕೊಡಲು ಶುರುಮಾಡಿವೆ. ಆತನ ಇನ್ನೊಂದು ಕಂಪನಿ ಸ್ಪೇಸ್ ಎಕ್ಸ್. ಈ ಕಂಪನಿಯನ್ನು ಸ್ಥಾಪಿಸಿದ್ದು ಇದೇ ಎಲಾನ್ ಮಸ್ಕ್. ಈ ಕಂಪನಿ ಇಂದು ಜಗತ್ತಿನ ಅಂತರಿಕ್ಷ ಕಂಪನಿಗಳಲ್ಲಿಯೇ ಅಗ್ರಜ. ದೇಶದೇಶಗಳ ಅಂತರಿಕ್ಷ ಸಂಸ್ಥೆಗೆ ಪೈಪೋಟಿ ಕೊಡುವಷ್ಟು ಬೆಳೆದು ನಿಂತ ಸಂಸ್ಥೆ. ಈ ವರ್ಷದ್ದೇ ಲೆಕ್ಕ ತೆಗೆದು ಕೊಂಡರೆ ನೂರು ರಾಕೆಟ್ ಅನ್ನು ಈ ಕಂಪನಿ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದೆ.
ಸ್ಪೇಸ್ ಎಕ್ಸ್ನ ರಾಕೆಟ್ಟುಗಳು ವಿಮಾನದಂತೆ. ಮೇಲಕ್ಕೇರಿ ಸ್ಯಾಟಲೈಟುಗಳನ್ನು ಕಕ್ಷೆಗೆ ಸೇರಿಸಿ ವಾಪಸ್ ನೆಲಕ್ಕೆ ಸುರಕ್ಷಿತ ವಾಗಿ ಮರಳುತ್ತವೆ. ಮೊದಲೆಲ್ಲ ರಾಕೆಟ್ಟುಗಳು ಒಂದೇ ಉಡಾವಣೆಗೆ ಸೀಮಿತವಾಗಿದ್ದವು. ಒಮ್ಮೆ ಹಾರಿಸಿದರೆ ಆ ವಾಹನದ ಕಥೆ ಮುಗಿಯುತ್ತಿತ್ತು. ಆದರೆ ಎಲಾನ್ ಮಸ್ಕ್ನ ರಾಕೆಟ್ಟುಗಳು
ಪುನರ್ಬಳಕೆಯಾಗುತ್ತವೆ. ಈ ಮೂಲಕ ಆತ ಸುಮಾರು ಐದೂವರೆ ಸಾವಿರ ತನ್ನದೇ ಕಂಪನಿಯ ಸ್ಯಾಟಲೈಟ್ಗಳನ್ನು ಕಕ್ಷೆಗೆ ಸೇರಿಸಿದ್ದಾನೆ. ಇನ್ನು ಎಂಟು ಸಾವಿರ ಸ್ಯಾಟಲೈಟ್ಗಳು ಕೆಲವು ವರ್ಷಗಳಲ್ಲಿ ಅಂತರಿಕ್ಷ ಸೇರಿಕೊಳ್ಳಲಿವೆ. ಇವೆಲ್ಲ ಸ್ಯಾಟಲೈಟ್ಗಳು ಈಗಾಗಲೇ ಜಗತ್ತಿನ ಯಾವ ಮೂಲೆಯಲ್ಲಿ ಬೇಕಾದರೂ ಇಂಟರ್ನೆಟ್ ಒದಗಿಸಬಲ್ಲವು. ಒಂದು ಚಿಕ್ಕ ಡಿಶ್ ಇದ್ದರಾಯಿತು, ಸಹರಾ ಮರುಭೂಮಿಯಿಂದ ಅಂಟಾರ್ಟಿಕಾದವರೆಗೆ ಎಲ್ಲಿಯೇ ಇದ್ದರೂ ಸೌಲಭ್ಯ ಪಡೆಯಲು ಸಾಧ್ಯ. ಅವುಗಳು ನಿಯಂತ್ರಿತ ಸ್ಯಾಟಲೈಟ್ಗಳು. ಅವನ್ನು ಭೂಮಿಯ ಯಾವುದೇ ಭಾಗಕ್ಕೆ ಕೇಂದ್ರೀಕರಿಸಿ ಅಲ್ಲಿ ಇಂಟರ್ನೆಟ್ ಲಭ್ಯವಾಗುವಂತೆ ಮಾಡಬಹುದು.
ವರ್ಷದಿಂದ ರಷ್ಯಾ-ಉಕ್ರೇನ್ ಯುದ್ಧ ನಡೆಯುತ್ತಿದೆಯಲ್ಲ, ಉಕ್ರೇನ್ ಸೈನ್ಯಕ್ಕೆ ಇಂಟರ್ನೆಟ್ ಒದಗಿಸುತ್ತಿರುವುದು ಇದೇ ಎಲಾನ್ ಮಸ್ಕ್ನ ಕಂಪನಿ. ಕೆಲವು ತಿಂಗಳ ಹಿಂದೆ ರಷ್ಯಾ ತನ್ನ ನೌಕಾಪಡೆಯನ್ನು ಕ್ರೀಮಿಯಾ ಪ್ರದೇಶದಲ್ಲಿ ತಂದು ನಿಲ್ಲಿಸಿತ್ತು. ಅದು ತನ್ನ ಮೇಲೆ ದಾಳಿಗೆ ಬಳಕೆಯಾದರೆ? ಎಂಬ ಆತಂಕ ಉಕ್ರೇನ್ಗೆ. ಯುದ್ಧದಲ್ಲಿ ಮುನ್ನಡೆ ಸಾಧಿಸಲು ಉಕ್ರೇನ್ ರಷ್ಯಾದ ಹಡಗನ್ನು ಹೊಡೆದುರುಳಿಸಬೇಕಿತ್ತು, ಹಿಮ್ಮೆಟ್ಟಿಸಬೇಕಿತ್ತು.
ಅದು ಸಾಧ್ಯವಾಗಬೇಕೆಂದರೆ ರಷ್ಯಾದ ಜಲಪ್ರದೇಶದಲ್ಲಿ ಉಕ್ರೇನ್ಗೆ ಇಂಟರ್ನೆಟ್ ಅವಶ್ಯವಿತ್ತು. ಅದಿಲ್ಲದೆ ದಾಳಿಯನ್ನು ಕರಾರುವಾಕ್ಕಾಗಿ ಮಾಡಲು ಸಾಧ್ಯ ವಿರಲಿಲ್ಲ. ರಷ್ಯಾದ ಆ ಪ್ರದೇಶದಲ್ಲಿ ಸ್ಯಾಟಲೈಟ್ ಇಂಟರ್ನೆಟ್ ಸೌಲಭ್ಯ ಒದಗಿಸುವಂತೆ ಖುದ್ದು ಉಕ್ರೇನ್ ಪ್ರಧಾನಿ ಎಲಾನ್ಗೆ ಕೇಳಿಕೊಂಡಿದ್ದ. ಆದರೆ ಎಲಾನ್ ಇದಕ್ಕೆ ಒಪ್ಪಲಿಲ್ಲ. ಇದರಿಂದ ಯುದ್ಧದ ದಿಶೆಯೇ ಬದಲಾಯಿತು ಎಂಬ ವಿಶ್ಲೇಷಣೆಯಿದೆ. ಹೀಗೆ ದೇಶ ದೇಶಗಳ ಯುದ್ಧದ ದಿಕ್ಕನ್ನು ನಿರ್ದೇಶಿಸುವಷ್ಟು ಎಲಾನ್ ಬಲಿಷ್ಠ.
ನೆಲದಲ್ಲಿ ವಿದ್ಯುತ್ ಕಾರ್, ಆಕಾಶದಲ್ಲಿ ಸ್ಯಾಟಲೈಟ್, ಇಂಟರ್ನೆಟ್. ಇದೆಲ್ಲದರ ಜತೆ ಎಲಾನ್ ಮಸ್ಕ್ನ ಹಿಡಿತದಲ್ಲಿರುವ ಇನ್ನೊಂದೆಂದರೆ ಟ್ವಿಟರ್- ಈಗ ಎಕ್ಸ್. ಸೋಷಿಯಲ್ ಮೀಡಿಯಾ ಮತ್ತು ಅದರ ಪ್ರಭಾವಗಳ ಬಗ್ಗೆ ಹೆಚ್ಚೇನೂ ವಿವರಿಸಬೇಕಿಲ್ಲ. ಟ್ವಿಟರ್ ಎಷ್ಟು ಪ್ರಭಾವಿ ಎಂಬುದು ನಿಮಗೆ ಗೊತ್ತು. ಟ್ವಿಟರ್ ಅನ್ನು ಮಸ್ಕ್ ಖರೀದಿಸುವುದಕ್ಕಿಂತ ಮೊದಲು ಅದು ಅಮೆರಿಕ ಸರಕಾರದ ಕೈಗೊಂಬೆಯಾಗಿತ್ತು. ಟ್ವಿಟರ್ ಒಂದೇ ಅಲ್ಲ, ಫೇಸ್ಬುಕ್, ಇನ್ಸ್ಟಾಗ್ರಾಂ ಇವೆಲ್ಲದರಲ್ಲಿ ಅಮೆರಿಕ ಸರಕಾರದ ಹಸ್ತಕ್ಷೇಪ, ನೇರ ನಿರ್ದೇಶನ ಇವತ್ತಿಗೂ ಇದ್ದೇ ಇದೆ. ಯಾವ ದೇಶದಲ್ಲಿ ಯಾರು ಯಾವುದನ್ನು ಹೆಚ್ಚಿಗೆ ನೋಡಬೇಕು, ಯಾವುದು ಸುದ್ದಿಯಾಗದಂತೆ ಅಡಗಿಸಿಡಬೇಕು ಎಂಬಿತ್ಯಾದಿ ಎಲ್ಲವನ್ನೂ ನಿರ್ಧರಿಸುತ್ತಿದ್ದುದು ಅಮೆರಿಕ ಸರಕಾರ.
ಅವರನ್ನೆಲ್ಲ ಹೊರಗಿಟ್ಟು, ಹಸ್ತಕ್ಷೇಪವಿಲ್ಲದ ಸಾಮಾಜಿಕ ಜಾಲ ತಾಣವನ್ನು ಜಗತ್ತಿಗೆ ಕೊಡಬೇಕೆಂಬ ಒಂದೇ ಕಾರಣಕ್ಕೆ- ತನ್ನ ಸ್ವಂತದ ಹಣದಿಂದ ಟ್ವಿಟರ್ ಅನ್ನು ಖರೀದಿಸಿದವನು ಎಲಾನ್. ನಿನ್ನೆ ತಾನೇ ಯುರೋಪಿಯನ್ ಒಕ್ಕೂಟ, ಟ್ವಿಟರ್ ಒಂದನ್ನು ಹೊರತುಪಡಿಸಿ ಉಳಿದ ಸಾಮಾಜಿಕ ಜಾಲತಾಣಗಳು ದೇಶಗಳ ಚುನಾವಣೆಯನ್ನು ಅಮೆರಿಕ ಸರಕಾರದ ಅಣತಿಯಂತೆ ನಿರ್ದೇಶಿಸುತ್ತವೆ, ಹಸ್ತಕ್ಷೇಪ ಮಾಡುತ್ತವೆ ಎಂಬ ವಿವರಗಳನ್ನು ಬಹಿರಂಗಪಡಿಸಿದೆ. ಒಟ್ಟಾರೆ ಒಂದು ಮುಕ್ತ ಸಾಮಾಜಿಕ ಜಾಲತಾಣವಾಗಿ ಇಂದು ಟ್ವಿಟರ್ ನೆಲೆ ನಿಂತಿದೆ.
ಟ್ವಿಟರ್ ಅಷ್ಟೇನೂ ಲಾಭದಾಯಕ ಕಂಪನಿಯಲ್ಲ. ಎಲಾನ್ ಖರೀದಿಸುವುದಕ್ಕಿಂತ ಮೊದಲೇ ನಷ್ಟದಲ್ಲಿತ್ತು. ಇವತ್ತಿಗೂ ಅದು ಮಾಡುವ ಲಾಭ ಅಷ್ಟಕ್ಕಷ್ಟೇ. ಆದರೂ ಹಸ್ತಕ್ಷೇಪವಿಲ್ಲದ ಸಾಮಾಜಿಕ ಜಾಲತಾಣ ಸಮಾಜದ ಅಗತ್ಯವೆಂಬ ಒಂದೇ ಕಾರಣಕ್ಕೆ ಎಲಾನ್ ಅದನ್ನು ಖರೀದಿಸಿದ್ದು, ಎಲ್ಲ ಸ್ವಂತ ಖರ್ಚಿನಲ್ಲಿ. ಎಲಾನ್ ಮಸ್ಕ್ ಎಲ್ಲವನ್ನೂ ಸ್ವಂತ ಕಲಿತು, ಇಷ್ಟು ಅಗಾಧವಾಗಿ ಬೆಳೆದು ನಿಂತವನು. ಹಾಗಂತ ಇಷ್ಟೆಲ್ಲಾ ಹಣವಿದ್ದರೂ ಅವನು ಐಷಾರಾಮಿಯಲ್ಲ. ಆತನಿಗೆ ಯಾವುದೇ ಐಷಾರಾಮಕ್ಕೂ ಪುರುಸೊತ್ತಿದ್ದಂತಿಲ್ಲ.
ಮಿನಿಮಲಿಸ್ಟ್- ತನಗೆ ಏನೇನು ತೀರಾ ಅವಶ್ಯಕವೋ ಅವಷ್ಟೇ. ಇವನಿಗಿಂತ ಕಡಿಮೆ ಶ್ರೀಮಂತನಾದ ಅಮೆಜಾನ್ನ ಜೆಫ್ ಬಿಜೋಸ್ಗೆ ಹೋದ ಊರಲ್ಲೆಲ್ಲ ಐಷಾರಾಮಿ ಮನೆಯಿದೆ, ಆಳುಕಾಳುಗಳಿದ್ದಾರೆ, ತನ್ನದೇ ಯಾಚ್- ಸ್ವಂತ ಹಡಗಿದೆ, ಅವನಿಗೆ ಬಿಡಿ, ಅವನ ಪ್ರೇಯಸಿಗೆಂದೇ ಎರಡು ವಿಮಾನಗಳಿವೆ. ಬಹುತೇಕ ಬಿಲಿಯನೇರ್ಗಳದ್ದೆಲ್ಲ ಎಲ್ಲಿಲ್ಲದ ಶೋಕಿ. ಆದರೆ ಎಲಾನ್ ಮಸ್ಕ್ನ ಬದುಕು ಸರಳ. ಇತ್ತೀಚೆಗೆ ಅನವಶ್ಯಕವೆಂದು ತನ್ನ ಸ್ವಂತ ಬಂಗಲೆಯನ್ನೇ ಮಾರಾಟಮಾಡಿದ್ದಾನೆ. ತನ್ನ ಬಹುತೇಕ ದಿನಗಳನ್ನು ಆತ ಕಳೆಯುವುದು ತನ್ನ ಕಂಪನಿಯ ಐದುನೂರು ಅಡಿಯ ಗೆಸ್ಟ್ ಹೌಸ್ಗಳಲ್ಲಿ. ಎಲಾನ್ ಮಸ್ಕ್ ರಜೆ ತೆಗೆದುಕೊಂಡು ಪ್ರವಾಸಕ್ಕೆ ಹೋಗುವುದು ಇತ್ಯಾದಿ ಇಲ್ಲವೇ ಇಲ್ಲ.
೨೪ ಗಂಟೆ ಕೆಲಸ, ಅದರ ಜತೆಯಲ್ಲೇ ಪ್ರವಾಸ, ಮನರಂಜನೆ ಇತ್ಯಾದಿ. ಅವನ ಬದುಕೇ ಒಂದು ಸಂಭ್ರಮ- ಅಲ್ಲಿ ಶೋಕಿಯಿಲ್ಲ. ಅಲ್ಲಿರುವುದು ಸಾಮಾಜಿಕ ಕಾಳಜಿ ಮತ್ತು ಮಾನವ ಪ್ರಜ್ಞೆ. ಆತನದು ಯೋಗಿಯ ಬದುಕು. ಹಾಗೆ ನೋಡಿದರೆ ಅವನಿಗಿಂತ ಬೆಂಗಳೂರಿನ ಕೆಲವು ಕಾರ್ಪೊರೇಟರ್ಗಳು ಸ್ವಂತಕ್ಕೆಂದು ಹೆಚ್ಚಿನ ಹಣ ವ್ಯಯಿಸುತ್ತಾರೆ. ಎಲಾನ್ ಮಸ್ಕ್ನ ರಕ್ಷಣೆಗೆ, ಓಡಾಟಕ್ಕೆ ಇವಕ್ಕೆಲ್ಲ ಸಾಕಷ್ಟು ಹಣ ಬೇಕು. ಜಗತ್ತಿನ ಶ್ರೀಮಂತನೆಂದಾದಾಗ ಇವೆಲ್ಲ ಅವಶ್ಯಕತೆ ಗಳು. ಅದನ್ನು ಬಿಟ್ಟು ಅವನ ಶೋಕಿ ಖರ್ಚುಗಳು ಬೇರಿನ್ನೇನೂ ಇಲ್ಲ.
ಎಲಾನ್ ಶ್ರೀಮಂತನಾದಂತೆಲ್ಲ ಹೊಸದಾದ, ಮನುಕುಲಕ್ಕೆ ಅತ್ಯವಶ್ಯವಿರುವ, ಹಿಂದೆ ಯಾರೂ ಮಾಡದ ಕೆಲಸಕ್ಕೆ ಕೈಹಾಕುತ್ತಾನೆ. ಮನುಷ್ಯರ ವಸಾಹತನ್ನು ಮಂಗಳಗ್ರಹದಲ್ಲಿ ಸ್ಥಾಪಿಸಬೇಕು ಎನ್ನುವುದು ಅವನ ಮುಂದಿನ ಗುರಿ. ಅವನದು ಹುಚ್ಚು ಕನಸುಗಳು. ಆದರೆ ಎಲ್ಲದಕ್ಕೂ ಅವನಲ್ಲಿ ಉಪಾಯ, ಮಾರ್ಗಗಳಿವೆ. ಹಾಗಾಗಿಯೇ ಎಲಾನ್ ಮಸ್ಕ್ನಂಥವರು ಇನ್ನಷ್ಟು ಶ್ರೀಮಂತರಾಗಬೇಕು ಎಂದೆನಿಸುವುದು. ತಾವು ದುಡಿದದ್ದನ್ನು ವಾಪಸ್ ಜಗತ್ತಿನ ಏಳಿಗೆಗೆ ವಿನಿಯೋಗಿಸುವ ಶ್ರೀಮಂತರಿಂದ ಮಾತ್ರ ಆರ್ಥಿಕ ಅಸಮತೋಲನ ತಗ್ಗಿಸಲು ಸಾಧ್ಯ. ದಾನ ಧರ್ಮದಿಂದಲ್ಲ.