ಕೃಷಿ ರಂಗ
ಬಸವರಾಜ ಶಿವಪ್ಪ ಗಿರಗಾಂವಿ
ಕೇಂದ್ರ ಸರಕಾರದ ಅಧೀನದಲ್ಲಿರುವ ಗ್ರಾಹಕ ವ್ಯವಹಾರಗಳು ಮತ್ತು ಆಹಾರ ಸರಬರಾಜು ಸಚಿವಾಲಯವು ‘ಅಗತ್ಯ ಸರಕುಗಳ ಕಾಯಿದೆ, ೧೯೫೫’ರ ಅಡಿಯಲ್ಲಿ ಸಕ್ಕರೆ ಬೆಲೆಯನ್ನು ನಿಯಂತ್ರಿಸಲು ಮೊನ್ನೆ ಆದೇಶವೊಂದನ್ನು ಹೊರಡಿಸಿದೆ. ದೇಶದಲ್ಲಿರುವ ಸಕ್ಕರೆ ಕಾರ್ಖಾನೆಗಳು ಮತ್ತು ಡಿಸ್ಟಿಲರಿಗಳು
೨೦೨೩-೨೪ರ ಕಬ್ಬು ನುರಿಸುವ ಹಂಗಾಮಿನಲ್ಲಿ, ಕಬ್ಬಿನ ರಸದಿಂದ ಹಾಗೂ ಸಿರಪ್‌ನಿಂದ ನೇರವಾಗಿ ಎಥೆನಾಲ್ ಉತ್ಪಾದಿಸುವಂತೆ ತಕ್ಷಣದಿಂದ ಜಾರಿಗೆ ಬರುವಂತೆ ಅದು ಆದೇಶ ನೀಡಿದೆ. ಆದರೆ ಬಿ-ಹೆವಿ ಮೊಲ್ಯಾಸಿಸ್‌ನಿಂದ (ಕಾಕಂಬಿ) ಎಥೆನಾಲ್ ಉತ್ಪಾದಿಸಿ ತೈಲ ಕಂಪನಿಗಳಿಗೆ ಮೊದಲಿನ ಆದೇಶದಂತೆ ಪೂರೈಸಲು ಅನುಮತಿ ನೀಡಿದೆ.
ಕೇಂದ್ರ ಸರಕಾರವು ಮುಂಬರುವ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ರಾಜಕೀಯ ಲಾಭ ಪಡೆದುಕೊಳ್ಳಲು ಈ ಆದೇಶವನ್ನು ಹೊರಡಿಸಿದೆ ಎಂದು ಹಲವಾರು ಕ್ಷೇತ್ರತಜ್ಞರು ಹಾಗೂ ರೈತ ಹೋರಾಟಗಾರರು ಆರೋಪಿಸುತ್ತಿದ್ದಾರೆ. ಕೇಂದ್ರ ಸರಕಾರದ ಈ ನಿರ್ಧಾರದಿಂದ ದೇಶದಲ್ಲಿರುವ ರೈತರಿಗೆ ಹಾಗೂ ಸಕ್ಕರೆ ಉದ್ದಿಮೆಗಳಿಗೆ ಬರಸಿಡಿಲು ಬಡಿದಂತಾಗಿದೆ. ಒಂದು ವೇಳೆ ಈ ಆದೇಶವನ್ನು ಕೇಂದ್ರ ಸರಕಾರವು ಮರುಪರಿಶೀಲಿಸದಿದ್ದಲ್ಲಿ ದೇಶದಲ್ಲಿರುವ ಬಹುಸಂಖ್ಯಾತ ಕಬ್ಬು ಬೆಳೆಗಾರರಿಗೆ ಯೋಗ್ಯವಾದ ಹಾಗೂ ಸಮಯಾನುಸಾರವಾದ ಬೆಲೆ ದೊರೆಯುವುದು ಅಸಾಧ್ಯವಾಗುತ್ತದೆ.
ದೇಶದಲ್ಲಿ ಅತಿಹೆಚ್ಚು ಕಬ್ಬು ಬೆಳೆಯುವ ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಈಗಾಗಲೇ ಭೀಕರ ಬರಗಾಲವು ಆವರಿಸಿದೆ. ಇದರಿಂದಾಗಿ ಸದ್ಯ ಲಭ್ಯವಿರುವ ಕಬ್ಬು ಬೆಳೆಯ ಕ್ಷೇತ್ರ ಮತ್ತು ಉತ್ಪನ್ನವು ಕಳೆದ ಸಾಲಿಗಿಂತ ಅಂದಾಜು ಶೇ.೩೫ರಷ್ಟು ಕಡಿಮೆಯಾಗಿದೆ. ಇದರಿಂದ ಕಬ್ಬು ಬೆಳೆಗಾರರು ತೀವ್ರ ನಷ್ಟದಲ್ಲಿದ್ದರೆ, ಕೆಲಸದ ದಿನಗಳು ಕಡಿಮೆಯಾದ ಪ್ರಯುಕ್ತ ಸಕ್ಕರೆ ಉದ್ದಿಮೆಯೂ ಗಣನೀಯ ಹಾನಿ ಅನುಭವಿಸುವ ಅಪಾಯದಲ್ಲಿದೆ. ಇಂಥ ಸಂದಿಗ್ಧ ಸಂದರ್ಭದಲ್ಲಿ ಕೇಂದ್ರ ಸರಕಾರವು ಹೊರಡಿಸಿದ ಈ ಆದೇಶವು ನುಂಗಲಾರದ ತುತ್ತಾಗಿದೆ.
ದೇಶದಲ್ಲಿ ಜನಸಾಮಾನ್ಯರು ಕಡಿಮೆ ದರದಲ್ಲಿ ಸಕ್ಕರೆಯನ್ನು ಉಪಯೋಗಿಸಲಿ ಎಂಬ ಉದ್ದೇಶವಿರುವ ಕೇಂದ್ರ ಸರಕಾರದ ಕ್ರಮವು ಸರಿಯಾಗಿದೆ. ಆದರೆ ಇದರ ನಿಜವಾದ ಉಪಯೋಗವನ್ನು ಮಿಠಾಯಿ ಉದ್ದಿಮೆ, ಬಿಸ್ಕತ್ತು, ಚಾಕಲೇಟ್ ಹಾಗೂ ತಂಪು ಪಾನೀಯ ಕಂಪನಿಗಳು ಅನುಭವಿಸುತ್ತವೆ. ಇದರಿಂದ ಸರಕಾರದ ಆಶಯವು ನೈಜವಾಗಿ ಪಾಲನೆಯಾಗುವುದಿಲ್ಲ ಎಂಬುದನ್ನು ಸರಕಾರವು ಗಂಭೀರವಾಗಿ ಪರಿಗಣಿಸಬೇಕು. ಆದ್ದರಿಂದ ಸರಕಾರವು
ವಾಣಿಜ್ಯ ಬಳಕೆಗಾಗಿ ಉಪಯೋಗಿಸುತ್ತಿರುವ ಸಕ್ಕರೆ ಮಾರಾಟಕ್ಕೆ ಪ್ರತ್ಯೇಕ ಮಾನದಂಡಗಳನ್ನು ನಿಗದಿಪಡಿಸಬೇಕು.
ಸಕ್ಕರೆಯ ತಲಾ ಬಳಕೆಯನ್ನು ಹೊರತುಪಡಿಸಿ ಹೆಚ್ಚುವರಿಯಾಗಿ ಬಳಸುವ ಸಕ್ಕರೆಗೆ ಪ್ರತ್ಯೇಕ ದರ ನಿಗದಿಯಾಗಬೇಕು. ಅಂದಾಗ ಮಾತ್ರ ಕೇಂದ್ರದ ಈ ಉದ್ದೇಶವು ಸಾರ್ಥಕ್ಯವನ್ನು ಕಾಣುತ್ತದೆ. ತಪ್ಪಿದಲ್ಲಿ, ಸಾಕಷ್ಟು ಶ್ರಮ ಹಾಕುವ ಸಕ್ಕರೆ ಉದ್ದಿಮೆ ಹಾಗೂ ಕಬ್ಬು ಬೆಳೆಗಾರರು ಇದರ ಬಲಿಪಶುವಾಗುವು ದರಲ್ಲಿ ಸಂದೇಹವಿಲ್ಲ. ಕೇಂದ್ರದ ಈ ಆದೇಶದಿಂದ ಈ ಕೆಳಗಿನಂತೆ ಹಲವಾರು ಸಂಕಷ್ಟಗಳು ಎದುರಾಗುವ ಅಪಾಯವಿದೆ.
೧. ಕೇವಲ ಸಕ್ಕರೆಯ ಉತ್ಪಾದನೆ ಮಾಡುವುದರಿಂದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಬೆಳೆಗೆ ಸಮಯಕ್ಕೆ ಸರಿಯಾಗಿ ರೈತರಿಗೆ ಯೋಗ್ಯವಾದ ಬೆಲೆಯನ್ನು ಕೊಡಲು ಅಸಾಧ್ಯವಾಗುತ್ತದೆ.
೨. ಕಳೆದ ನಾಲ್ಕು ವರ್ಷದಿಂದ ಪ್ರಚಲಿತದಲ್ಲಿರುವ ಎಥೆನಾಲ್ ಕಾರ್ಯನೀತಿಯಂತೆ ಹಲವಾರು ಸಕ್ಕರೆ ಕಾರ್ಖಾನೆಗಳು ಕೋಟ್ಯಂತರ ರುಪಾಯಿ ಹಣ ವಿನಿಯೋಗಿಸಿವೆ. ಉತ್ಪಾದನೆ ಸ್ಥಗಿತದಿಂದ ಅವು ತೀವ್ರ ನಷ್ಟ ಅನುಭವಿಸುವ ಸಂಭವವಿದೆ.
೩. ಕಳೆದ ನಾಲ್ಕೈದು ವರ್ಷಗಳಲ್ಲಿ ಎಥೆನಾಲ್ ಉತ್ಪಾದನೆಯಿಂದ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕೊಡಬೇಕಾಗಿದ್ದ ಬಾಕಿ ಹಣದ ಪ್ರಮಾಣವು ತೀವ್ರವಾಗಿ ಕಡಿಮೆಯಾಗಿರುವುದನ್ನು ಮನಗಂಡಿದ್ದೇವೆ. ಆದರೆ ಸದ್ಯದ ಆದೇಶದಿಂದ ಮತ್ತೆ ದೇಶದಲ್ಲಿ ರೈತರಿಗೆ ಕೊಡಬೇಕಾದ ಬಾಕಿ ಪ್ರಮಾಣವು
ಹೆಚ್ಚಾಗುವ ಸಂಭವವಿದೆ.
೪. ಸಕ್ಕರೆ ಕಾರ್ಖಾನೆಗಳು ಕೇವಲ ಸಕ್ಕರೆಯನ್ನು ಉತ್ಪಾದನೆ ಮಾಡುವುದರಿಂದ ಸಕ್ಕರೆಯ ಬೆಲೆ ಕುಸಿತವಾಗುತ್ತದೆ. ಆದೇಶ ಹೊರಡಿಸಿದ ಒಂದೇ ದಿನದಲ್ಲಿ ದೇಶದಲ್ಲಿರುವ ಸಕ್ಕರೆ ಬೆಲೆಯು ಕುಸಿತವಾಗಿದೆಯಲ್ಲದೆ ಸಂಬಂಧಿಸಿದ ಸಕ್ಕರೆ ಖರೀದಿ ಕಂಪನಿಗಳ ಷೇರುಗಳ ಮೌಲ್ಯಗಳೂ ಗಣನೀಯವಾಗಿ ಕುಸಿದಿವೆ. ಇದರಿಂದ ಸ್ವಾಭಾವಿಕವಾಗಿ ರೈತರಿಗೆ ಹಾಗೂ ಕಾರ್ಖಾನೆಗಳಿಗೆ ನಷ್ಟವಾಗುವ ಅಪಾಯವಿದೆ.
೫. ಪ್ರಪಂಚದಲ್ಲಿ ಅತಿಹೆಚ್ಚು ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಭಾರತವು ಪ್ರಮುಖ ದೇಶ ವಾಗಿದೆ. ಕಳೆದ ಎರಡು ವರ್ಷಗಳಿಂದ ಎಥೆನಾಲ್ ಉತ್ಪಾದನೆ ಹಾಗೂ ಬಳಕೆಯಿಂದ ಕಚ್ಚಾತೈಲ ಆಮದು ಪ್ರಮಾಣವು ತಗ್ಗಿತ್ತು. ಈಗ ಮತ್ತೆ ಕಚ್ಚಾತೈಲದ ಆಮದು ಅನಿವಾರ್ಯವಾಗಿ ಹೆಚ್ಚಾಗುವುದರಿಂದ ಭಾರತದ ವಿದೇಶಿ ವಿನಿಮಯ ಪ್ರಮಾಣವು ವಿಪರೀತವಾಗಿ ಬಳಕೆಯಾಗುತ್ತದೆ.
೬. ಕೇಂದ್ರ ಸರಕಾರಕ್ಕೆ ಎಥೆನಾಲ್ ಉತ್ಪಾದನೆ ಹಾಗೂ ಬಳಕೆಯಿಂದ ಬರುವ ತೆರಿಗೆ ಪ್ರಮಾಣವು ಸ್ಥಗಿತಗೊಳ್ಳುತ್ತದೆ.
೭. ಎಥೆನಾಲ್ ಸಾಗಣೆಗಾಗಿ ಭಾರಿ ವಾಹನ ಹೊಂದಿದ ಸಾರಿಗೆದಾರರಿಗೆ ಎಥೆನಾಲ್ ಸಾಗಾಟ ಸ್ಥಗಿತಗೊಳ್ಳುವುದರಿಂದ ಹಾನಿಯಾಗುತ್ತದೆ.
೮. ಈ ಆದೇಶ ಜಾರಿಯಾಗಬೇಕಾದರೆ ಈಗಾಗಲೆ ಘೋಷಣೆಯಾದ ಎ-ಆರ್‌ಪಿ ಬೆಲೆಯನ್ನು ತಕ್ಷಣದಿಂದ ಮರುಪರಿಶೀಲನೆ ಮಾಡಬೇಕಾಗುತ್ತದೆ.
೯. ಈಗಾಗಲೆ ಸಕ್ಕರೆ ಕಾರ್ಖಾನೆಗಳು ಎಥೆನಾಲ್ ಉತ್ಪಾದನೆಯನ್ನು ಪರಿಗಣಿಸಿಯೇ ಕಬ್ಬು ಬೆಲೆಯನ್ನು ನಿಗದಿಪಡಿಸಿರುತ್ತವೆ. ಒಂದುವೇಳೆ ಈ ಆದೇಶ ಜಾರಿಯಾಗ ಬೇಕಾದರೆ ಸಕ್ಕರೆ ಕಾರ್ಖಾನೆಗಳಿಗೆ ಉಂಟಾಗುವ ನಷ್ಟದ ಪ್ರಮಾಣವನ್ನು ಕೇಂದ್ರ ಸರಕಾರವು ಭರಪಾಯಿ ಮಾಡಿಕೊಡಬೇಕು.
೧೦. ಎಥೆನಾಲ್ ಬಳಕೆಗೆ ಅನ್ವಯವಾಗುವಂತೆ ವಾಹನ ತಯಾರಿಕಾ ಕಂಪನಿಗಳು ತಮ್ಮ ವಾಹನಗಳಲ್ಲಿ ಕೆಲವು ತಾಂತ್ರಿಕ ಬದಲಾವಣೆಯನ್ನು ಮಾಡುತ್ತಿದ್ದು ಇವುಗಳಿಗೂ ಹಾನಿಯಾಗುವ ಸಂಭವವಿದೆ. ಭಾರತದಲ್ಲಿರುವ ವಾತಾವರಣವು ಹಲವು ವೈವಿಧ್ಯಗಳಿಂದ ಕೂಡಿರುವ ಪ್ರಯುಕ್ತ ಕೃಷಿ ಪ್ರಧಾನ ದೇಶವಾಗಿದೆ. ಭಾರತಲ್ಲಿರುವ ಹವಾಮಾನದ ವೈವಿಧ್ಯಗಳಂತೆ ಬೆಳೆಗಳೂ ಪ್ರದೇಶವಾರು ವೈವಿಧ್ಯಗಳಿಂದ ಕೂಡಿವೆ. ಕಳೆದ ಕೆಲವು ದಶಕಗಳಿಂದ ಹಲವು ನೂತನ ತಂತ್ರಜ್ಞಾನಗಳನ್ನು ಕೃಷಿಯಲ್ಲಿ ಅಳವಡಿಸಿಕೊಂಡಿರುವ ಪ್ರಯುಕ್ತ ಕಬ್ಬು ಸೇರಿದಂತೆ ಹಲವಾರು ವಾಣಿಜ್ಯ ಬೆಳೆಗಳು ರೈತರಿಗೆ ಹಾಗೂ ಸರಕಾರಕ್ಕೂ ಹೆಚ್ಚು ಆದಾಯ ಕೊಡುವ ಮೂಲಗಳಾಗಿವೆ. ಅದರಂತೆ ಕಳೆದ ಕೆಲವು ವರ್ಷಗಳ ಹಿಂದೆ ದೇಶದ ಬಹುತೇಕ ಸಕ್ಕರೆ ಉದ್ಯಮಗಳು ಹೊರಬರಲಾರದಂಥ ನಷ್ಟದಲ್ಲಿ ಸಿಲುಕಿಕೊಂಡಿದ್ದವು.
ಕೇಂದ್ರ ಸರಕಾರವು ಕಳೆದೆರಡು ವರ್ಷಗಳಿಂದ ಜಾರಿಮಾಡುತ್ತಿರುವ ಎಥೆನಾಲ್ ಉತ್ಪಾದನೆಯ ಕಾರ್ಯ ನೀತಿಯಿಂದ ಸದ್ಯ ಸಕ್ಕರೆ ಉದ್ಯಮವು ನಷ್ಟದಿಂದ ಕ್ರಮೇಣ ವಾಗಿ ಹೊರಬರುತ್ತಿವೆ. ಈಗ ಮತ್ತೆ ಕೇಂದ್ರ ಸರಕಾರದ ಎಥೆನಾಲ್ ಕಾರ್ಯನೀತಿಯ ಬದಲಾವಣೆಯಿಂದ ಸಕ್ಕರೆ ಉದ್ಯಮವು ಸಂಕಷ್ಟಕ್ಕೆ ಸಿಲುಕುವುದರಲ್ಲಿ ಯಾವುದೇ ಅನುಮಾನವಿಲ್ಲ.
ಬ್ರೆಜಿಲ್ ಮತ್ತು ಕ್ಯೂಬಾ ದೇಶಗಳು ಎಥೆನಾಲ್ ಉತ್ಪಾದನೆ ಮತ್ತು ಬಳಕೆಯಿಂದ ವಿಶ್ವದಲ್ಲಿಯೇ ಅತಿಹೆಚ್ಚು ಲಾಭದಾಯಕವಾಗಿ ಮುನ್ನಡೆಯಲು ಸಾಧ್ಯವಾಗಿದೆ. ಗೋವಿನಜೋಳ ಹಾಗೂ ಇತರೆ ಆಹಾರಧಾನ್ಯಗಳು ಸೇರಿದಂತೆ ಹಲವು ಕೃಷಿ ಉತ್ಪನ್ನಗಳಿಂದ ಎಥೆನಾಲ್ ಉತ್ಪಾದಿಸಲಾಗುತ್ತದೆ.
ಆದರೆ ಕಬ್ಬು ಬೆಳೆಯಿಂದ ಅತ್ಯಂತ ಕಡಿಮೆ ಖರ್ಚಿನಲ್ಲಿ ಎಥೆನಾಲ್ ಉತ್ಪಾದನೆ ಮಾಡಲಾಗುತ್ತದೆ. ಹೊರದೇಶದ ಈ ಎಥೆನಾಲ್ ಉತ್ಪಾದನೆಯ ತಂತ್ರಜ್ಞಾನವನ್ನು ಅಳವಡಿಸಿಕೊಂಡ ಪ್ರಯುಕ್ತ ಕಳೆದ ಕೆಲವು ವರ್ಷಗಳಿಂದ ಸಕ್ಕರೆ ಉದ್ಯಮವು ಉತ್ತಮ ಸ್ಥಿತಿಯಲ್ಲಿ ಮುನ್ನಡೆಯುತ್ತಿರುವುದು
ಸುಳ್ಳೇನಲ್ಲ. ಆದರೆ ಕೇಂದ್ರ ಸರಕಾರದ ಮೊನ್ನಿನ ಈ ನಡೆಯುಸಕ್ಕರೆ ಉದ್ಯಮ ಹಾಗೂ ಕಬ್ಬು ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.
(ಲೇಖಕರು ಕೃಷಿತಜ್ಞರು ಹಾಗೂ
ಸಹಾಯಕ ಮಹಾಪ್ರಬಂಧಕರು)