ತುಮಕೂರು: ಮಹಾನಗರ ಪಾಲಿಕೆ ವತಿಯಿಂದ ಹಮ್ಮಿಕೊಂಡಿದ್ದ ತ್ವರಿತ ಅದಾಲತ್ ವಿನೂತನ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರೆಯಿತು.
ವಿವಿಧ ಸಮಸ್ಯೆಗಳ ಕುರಿತಾಗಿ 698 ಅರ್ಜಿಗಳು ಸಲ್ಲಿಕೆಯಾಗಿದ್ದವು. ಮಹಾನಗರ ಪಾಲಿಕೆ ಆಯುಕ್ತ ಅಶ್ವಿಜ್ ಅವರು 347 ಅರ್ಜಿಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಿ ಮೆಚ್ಚುಗೆಗೆ ಪಾತ್ರವಾದರು.
ಸಾರ್ವಜನಿಕರಿಂದ ಕಂದಾಯ, ನೀರು ಸರಬರಾಜು, ಯುಜಿಡಿ, ಚುನಾವಣೆ, ಉದ್ದಿಮೆ ಪರವಾನಿಗೆ, ಜನನ ಮತ್ತು ಮರಣ ಶಾಖೆಗಳಿಗೆ ಸಂಬಂಧಪಟ್ಟ 698 ಅಹವಾಲುಗಳು ಸಲ್ಲಿಕೆಯಾದವು, ಖುದ್ದು ಆಯುಕ್ತ ಅಶ್ವಿಜಾ ಮುಂದೆ ನಿಂತು ಸಾಧ್ಯವಿದ್ದ 347 ಅರ್ಜಿಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಿದರು. ಉಳಿದ 351 ಅರ್ಜಿಗಳನ್ನು ಪರಿಶೀಲಿಸಿ ಏಳು ದಿನಗಳಲ್ಲಿ ಪರಿಹರಿಸುವ ಭರವಸೆ ನೀಡಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ,ಹತ್ತಾರು ವರ್ಷಗಳಿಂದ ತಮ್ಮ ಆಸ್ತಿ, ಜನನ, ಮರಣ ಪತ್ರಗಳಲ್ಲಿ ಆಗಿರುವ ಸಣ್ಣ, ಪುಟ್ಟ ತಪ್ಪುಗಳಿಂದ ಜನರು ಸಾಕಷ್ಟು ತೊಂದರೆ ಅನುಭವಿಸುತಿದ್ದಾರೆ. ಇಂತಹವರಿಗೆ ಅನುಕೂಲವಾಗಲೆಂದು ಈ ಅಭಿಯಾನವನ್ನು ಆಯೋಜಿಸಲಾಗಿದೆ ಎಂದರು.
ಪಾಲಿಕೆಯ ಅವರಣದಲ್ಲಿ 6 ಕೌಂಟರ್ಗಳನ್ನು ತೆರೆದು,ಜನನ,ಮರಣ,ಅಳತೆಯಲ್ಲಿನ ವೆತ್ಯಾಸ,ಮತದಾರರ ನೊಂದಣಿ, ನಲ್ಲಿ ಮತ್ತು ಯುಜಿಡಿ ಸಮಪರ್ಕ,ಟ್ರೇಡ್ ಲೈಸನ್ಸ್ ಗೆ ಸಂಬಂಧಿಸಿದಂತೆ ದಾಖಲೆಗಳ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ.ಹಿರಿಯ ನಾಗರಿಕರಿಗೆ ಪ್ರತ್ಯೇಕ ಲೈನ್ ಮಾಡಿ, ತ್ವರಿತವಾಗಿ ಅವರ ಕೆಲಸಗಳನ್ನು ಪೂರೈಸಿಕೊಡಲಾಗುತ್ತಿದೆ. ಮರುಪರಿಶೀಲನೆ ಇರುವ ಕೆಲಸಗಳನ್ನು ನಿಗಧಿತ ಅವಧಿಯೊಳಗೆ ಪೂರೈಸಲು ಎಲ್ಲ ಕ್ರಮಗಳನ್ನು ಪಾಲಿಕೆ ವತಿಯಿಂದ ತೆಗೆದು ಕೊಳ್ಳಲಾಗುವುದು. ಇದೇ ರೀತಿ ಮುಂದಿನ ದಿನಗಳಲ್ಲಿ ಪ್ರತಿತಿಂಗಳ 2 ಮತ್ತು 4ನೇ ಶುಕ್ರವಾರ ನಡೆಸುವಂತೆ ಸಾರ್ವಜನಿಕರಿಂದ ಮನವಿ ಮುಂದೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮೇಯರ್ ಪ್ರಭಾವತಿ ಮಾತನಾಡಿ, ಆಯುಕ್ತರು ಮತ್ತು ಅಧಿಕಾರಿಗಳ ಜತೆ ನಡೆಸಿದ ಚರ್ಚೆಯಂತೆ ಪಾಲಿಕೆಯಲ್ಲಿ ಇಂದು ತ್ವರಿತ ಸೇವೆ ಆಭಿಯಾನ ಆಯೋಜಿಸಲಾಗಿದೆ. ಬೆಳಗ್ಗೆಯಿಂದ ನೂರಾರು ಜನರು ಕ್ಯೂನಲ್ಲಿ ನಿಂತು ತಮ್ಮ ದಾಖಲಾತಿ ಸರಿಪಡಿಸಿಕೊಳ್ಳಲು ಅರ್ಜಿ ಸಲ್ಲಿಸುತ್ತಿದ್ದಾರೆ.ಯಾವ ವಿಚಾರದ ಬಗ್ಗೆ ಹೆಚ್ಚಿನ ಅರ್ಜಿಗಳು ಬರುತ್ತಿವೆ ಎಂಬುದನ್ನು ಮನಗಂಡು ಮುಂದಿನ ದಿನಗಳಲ್ಲಿ ಐದು ವಾರ್ಡುಗಳಿಗೆ ಒಂದು ದಿನ ಇಂತಹ ಅದಾಲತ್ ಗಳನ್ನು ಆಯೋಜಿಸಲು ಚಿಂತನೆ ನಡೆಸಿದ್ದು, ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು.
ಈ ವೇಳೆ, ಪಾಲಿಕೆಯ ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ, ವಿರೋಧ ಪಕ್ಷದ ನಾಯಕ ವಿಷ್ಣುವರ್ಧನ್, ಪಾಲಿಕೆಯ ಸದಸ್ಯರುಗಳು ಉಪಸ್ಥಿತ ರಿದ್ದರು.