Sunday, 24th November 2024

ರಾಜಕೀಯ ಪರಾವಲಂಬಿತನಕ್ಕೆ ಕೊನೆ ಎಂದು

ಅಶ್ವತ್ಥಕಟ್ಟೆ
ರಂಜಿತ್ ಎಚ್.ಅಶ್ವತ್ಥ

‘ಜೆಡಿಎಸ್ ತಿಪ್ಪರಲಾಗ ಹಾಕಿದರೂ, ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲ್ಲ. ಅದೇನಿದ್ದರೂ ಇನ್ನೊಬ್ಬರ ಕುದುರೆ ಮೇಲೆ
ಕೂತು, ಅಧಿಕಾರ ನಡೆಸುವುದಕ್ಕಷ್ಟೇ ಲಾಯಕ್’.

ಹೀಗೆಂದು ಮಾಜಿ ಮುಖ್ಯಮಂತ್ರಿ, ವಿಧಾನಸಭೆಯ ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ವಿರುದ್ಧ ಟೀಕಿಸಿದರು. ರಾಜಕೀಯ ಅಸ್ತಿತ್ವವನ್ನು ಸಿದ್ದರಾಮಯ್ಯ ಅವರಿಗೆ ನೀಡಿದ, ಉಪಮುಖ್ಯಮಂತ್ರಿ ಸ್ಥಾನದ ಮೇಲೆ ಕೂರಿಸಿದ್ದ ಪಕ್ಷದ ವಿರುದ್ಧ ಈ ರೀತಿ ವಾಗ್ದಾಳಿ ನಡೆಸಿದ್ದಕ್ಕೆ ಕೆಲವೊಂದಷ್ಟು ರಾಜಕೀಯ ಚರ್ಚೆ, ಸಿದ್ದರಾಮಯ್ಯ ಹೇಳಿಕೆಗೆ ಜೆಡಿಎಸ್ ಪ್ರತಿಕ್ರಿಯೆ ನೀಡುವ ಪ್ರಕ್ರಿಯೆ ನಡೆಯುತ್ತಲೇ ಇದೇ. ಆದರೆ ಈ ಹೇಳಿಕೆಯನ್ನು ಸಿದ್ದರಾಮಯ್ಯ ಅವರು ನೀಡಿರುವುದು ಹಾಗೂ ಜನತಾದಳ ವಿಭಜನೆಯಾಗಿ ಜಾತ್ಯತೀತ ಜನತಾದಳವಾಗಿ ಪರಿವರ್ತನೆಯಾದ ಬಳಿಕ ನಡೆದ ಘಟನಾವಳಿಗಳನ್ನು ನೋಡಿದರೆ, ಸಿದ್ದರಾ ಮಯ್ಯ ಅವರ ಹೇಳಿಕೆಯಲ್ಲಿ ತಪ್ಪೇನಿದೆ ಎನ್ನುವ ಪ್ರಶ್ನೆ ಮೂಡುವುದರಲ್ಲಿ ಅನುಮಾನವಿಲ್ಲ.

ಹೌದು, ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್ ತನ್ನ ಅಸ್ತಿತ್ವವನ್ನು ಕಳೆದ ಕೆಲ ದಶಕದಿಂದ ಉಳಿಸಿಕೊಂಡು ಬಂದಿದೆ. ರಾಜ್ಯ ನಾಡು, ನುಡಿ, ಹಿತದ ವಿಷಯ ಬಂದಾಗ ನಮ್ಮನ್ನು ನಾವು ಸಮರ್ಪಣೆ ಮಾಡಿಕೊಂಡಿದ್ದೇನೆ. ಎನ್ನುವ ಹೇಳಿಕೆಗಳನ್ನು ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಅವರಿಂದ ಹಿಡಿದು ಪ್ರತಿಯೊಬ್ಬ ಕಾರ್ಯಕರ್ತನೂ ಹೇಳಿಕೊಳ್ಳುವುದನ್ನು ನಾವು ನೋಡಿದ್ದೇವೆ.

ಪ್ರಾದೇಶಿಕ ಪಕ್ಷವಾಗಿ ಯಾವುದೇ ಪಕ್ಷವಾದರೂ, ಇದೇ ರೀತಿ ಕಾರ್ಯನಿರ್ವಹಿಸಬೇಕು ಎಂದು ರಾಜ್ಯದ ಜನರು  ಅಪೇಕ್ಷಿಸುತ್ತಾರೆ. ಆದರೆ ನಿಜವಾಗಿಯೂ ಜೆಡಿಎಸ್ ಈ ರೀತಿ ನಡೆದುಕೊಂಡಿದ್ದರೆ, ‘ಪರಾವಲಂಬಿ’ ಯಾಗಿಯೇ ಅಧಿಕಾರದ ಗದ್ದುಗೆ ಹಿಡಿಯಬೇಕಿತ್ತೇ ಎನ್ನುವ ಪ್ರಶ್ನೆಗಳು ಮೂಡುವುದು ಸಹಜ. ಹಾಗೆ ನೋಡಿದರೆ ಜನತಾದಳದಿಂದ ದೇವೇಗೌಡರ ನೇತೃತ್ವದಲ್ಲಿ ಜಾತ್ಯತೀತ ಜನತಾದಳ ಹೊರಬಂದ ಬಳಿಕ, ಸ್ವಂತ ಬಲದ ಮೇಲೆ ಅಧಿಕಾರ ನಡೆಸಿದ್ದು ತೀರಾ ಕಡಿಮೆ.

ತುರ್ತು ಪರಿಸ್ಥಿತಿ ಸಮಯದಲ್ಲಿ ಜಯಪ್ರಕಾಶ ನಾರಾಯಣ ನೇತೃತ್ವದಲ್ಲಿ ಮೂಡಿದ ಜನತ ಪಕ್ಷದಿಂದ ಹೊರಬಂದು,
ರೂಪುಗೊಂಡ ಜನತಾದಳ 1994ರಿಂದ 99ರ ಅವಧಿಗೆ ಆಡಳಿತ ಪಕ್ಷದಲ್ಲಿ ಕೂತುಕೊಂಡಿತ್ತು. 94 ವಿಧಾನಸಭಾ ಚುನಾವಣೆ ಯಲ್ಲಿ ಜೆಡಿಎಸ್ 115 ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಸ್ಪಷ್ಟಬಹುಮತದೊಂದಿಗೆ ವಿಧಾನಸಭೆಯ ಮೂರನೇ ಮಹಡಿಯನ್ನು ಪ್ರವೇಶಿಸಿತ್ತು. ಈ ವೇಳೆ ದೇವೇಗೌಡರು ಮುಖ್ಯಮಂತ್ರಿಯಾಗಿಯೂ ಎರಡು ವರ್ಷಗಳ ಕಾಲ ಆಡಳಿತ ನಡೆಸಿದರು. ಬಳಿಕ ಅನಿರೀಕ್ಷಿತವಾಗಿ ಎರಗಿ ಬಂದ ಪ್ರಧಾನಿ ಪಟ್ಟ ಅಲಂಕರಿಸಲು, ದೆಹಲಿಗೆ ತೆರಳಿದ ಬಳಿಕ ರಾಜ್ಯವನ್ನು ಉಳಿದ ಸಮಯ ಜೆ.ಎಚ್
ಪಾಟೀಲರು ಮುನ್ನಡೆಸಿದರು.

ಇದೊಂದು ಅವಧಿಗೆ ಬಿಟ್ಟರೆ ದೇವೇಗೌಡರ ನೇತೃತ್ವದಲ್ಲಿ ಆಗಲಿ ಅವರ ಪುತ್ರ ಕುಮಾರಸ್ವಾಮಿ ನೇತೃತ್ವದಲ್ಲಾಗಲಿ ಸ್ವಂತ
ಬಲದ ಮೇಲೆ ಅಧಿಕಾರದ ಗದ್ದುಗೆಯನ್ನು ಏರಿಲ್ಲ. ಹಾಗೇ ನೋಡಿದರೆ ದೇವೇಗೌಡರು ಪ್ರಧಾನ ಮಂತ್ರಿಯಾಗಿದ್ದೂ ಸಹ ’ಅನಿರೀಕ್ಷಿತ’ ಎಂದರೆ ತಪ್ಪಾಗಲಿಕ್ಕಿಲ್ಲ. 545 ಸಂಸದರ ಸಂಖ್ಯಾಬಲದಲ್ಲಿ ಅಂದು ಅಧಿಕಾರ ಹಿಡಿದ ದೇವೇಗೌಡರ ಜನತಾದಳದ ಸಂಖ್ಯೆೆ ಕೇವಲ 46. ಕೇವಲ 46 ಸಂಸದರನ್ನು ಗೆಲ್ಲಿಸಿಕೊಂಡು, ದೇಶದ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ ಹೊಸ ದಾಖಲೆಯನ್ನು ಅಂದು ದೇವೇಗೌಡರು ಬರೆದಿದ್ದರು. ಆದರೆ ಈ ಅನಿರೀಕ್ಷಿತ ಹುದ್ದೆ ಅವರ ಬಳಿ ಉಳಿದಿದ್ದು 11 ತಿಂಗಳು ಮಾತ್ರ.

ಕರ್ನಾಟಕದ ಮಣ್ಣಿನ ಮಗನೊಬ್ಬ ಪ್ರಧಾನಿ ಹುದ್ದೆಗೆ ಏರಿದ್ದ ಎನ್ನುವ ಹೆಮ್ಮೆ ಮಾತ್ರ ಜೀವನ ಪರ್ಯಂತ ಉಳಿದಿದೆ. ಆದರೆ
ದೇವೇಗೌಡರು 96ರಲ್ಲಿ ಪ್ರಧಾನಿಯಾದ ಬಳಿಕ ಇನ್ನೊಬ್ಬ ಕನ್ನಡಿಗನಿಗೆ ಈ ಸ್ಥಾನ ಸಿಕ್ಕಿಲ್ಲ. ಸಿಗುವುದು ಸದ್ಯಕ್ಕೆ ಸಾಧ್ಯವಿಲ್ಲ
ಎನ್ನುವುದು ಬೇರೆ ಮಾತು. ಮೂರು ಮತ್ತೊಂದು ಪಕ್ಷಗಳ ಬೆಂಬಲದೊಂದಿಗೆ ಪ್ರಧಾನಿ ಹುದ್ದೆ ಅಲಂಕರಿಸಿದ ದೇವೇಗೌಡರಿಗೆ ಅಧಿಕಾರ ನಡೆಸುವುದಕ್ಕಿಂತ, ಹೆಚ್ಚಾಗಿ ಈ ಎಲ್ಲ ಸಮ್ಮಿಶ್ರ ಪಕ್ಷಗಳನ್ನು ಸಂತೈಸುವುದೇ ದೊಡ್ಡ ಕೆಲಸವಾಗಿತ್ತು ಎನ್ನುವುದು ಎಲ್ಲರಿಗೂ ಗೊತ್ತಿರುವ ಅಂಶ.

ಹತ್ತು ಹಲವು ಪಕ್ಷಗಳೊಂದಿಗೆ ಅಧಿಕಾರಕ್ಕೆ ಬಂದಿದ್ದ ಆ ಮೈತ್ರಿಕೂಟ 11 ತಿಂಗಳಲ್ಲಿ ಮುಗಿದು ಸರಕಾರ ಬಿದ್ದು ಹೋಗಿತ್ತು. ಆದಾದ ಬಳಿಕ ದೇವೇಗೌಡರು, ಹಲವು ಬಾರಿ ಸಂಸತ್ ಪ್ರವೇಶಿಸಿದರೂ ಬಹುತೇಕ ಸಮಯದಲ್ಲಿ ಪ್ರತಿಪಕ್ಷದ ಸ್ಥಾನದಲ್ಲಿಯೇ ಕೂರುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಜೆಡಿಎಸ್ ಪುನಃ ವಿಭಜನೆಯಾಗಿ ದೇವೇಗೌಡರ ನೇತೃತ್ವದಲ್ಲಿ ರಾಜ್ಯದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ಶುರು ಮಾಡಿದ ದಿನದಿಂದ, 28 ಲೋಕಸಭಾ ಕ್ಷೇತ್ರಗಳಿರುವ ಕರ್ನಾಟಕದಲ್ಲಿ ಜೆಡಿಎಸ್‌ನಿಂದ ಮೂರು ಅಥವಾ ನಾಲ್ಕಕ್ಕಿಂತ ಹೆಚ್ಚಿನ ಸಂಸದರು ದೆಹಲಿಗೆ ಹೋಗಲಿಲ್ಲ. ಇನ್ನು ರಾಜ್ಯಸಭೆಗೆ ಒಂದು ಅಥವಾ ಎರಡು (ಅದು ಇನ್ನೊಂದು ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು) ಸಂಸದರನ್ನು ಕಳುಹಿಸಿದೆ. ಆದ್ದರಿಂದ ಆಡಳಿತಕ್ಕೆ ಬರುವ ಬಹುತೇಕ ರಾಜಕೀಯ ಪಕ್ಷಗಳು, ಜೆಡಿಎಸ್‌ನತ್ತ ಹೆಚ್ಚು ಗಮನಹರಿಸುವುದಿಲ್ಲ.

ರಾಷ್ಟ್ರ ರಾಜಕಾರಣದಲ್ಲಿ ಜೆಡಿಎಸ್ ನಡೆ ಇದಾದರೆ, ಕರ್ನಾಟಕದಲ್ಲಿ ನೋಡುವುದಾದರೆ 1994ರ ಚುನಾವಣೆ ಬಳಿಕ ಜೆಡಿಎಸ್ ಹೇಳಿಕೊಳ್ಳುವಂತಹ ಸಾಧನೆಯನ್ನೇನು ಮಾಡಿಲ್ಲ. 96ರಲ್ಲಿ ಸ್ವಂತ ಬಲದಲ್ಲಿ ಅಧಿಕಾರದ ಗದ್ದುಗೆಯನ್ನು ಏರಿದ್ದ ಜೆಡಿಎಸ್ ಅಲ್ಲಿಂದ ಇಲ್ಲಿಯವರೆಗೆ ಸ್ವಂತ ಬಲದ ಮೇಲೆ ಅಧಿಕಾರವನ್ನು ಹಿಡಿಯಲು ಆಗಿಲ್ಲ. 2013-14ರವರೆಗೆ ಪ್ರತಿಪಕ್ಷ ಸ್ಥಾನಕ್ಕೆ ಏರಿದ್ದು ಬಿಟ್ಟರೆ, ಕಳೆದ ಎರಡೂವರೆ ದಶಕದಲ್ಲಿ ‘ಸ್ವ’ಬಲದಲ್ಲಿ ಅಧಿಕಾರವನ್ನು ಹಿಡಿಯಲು ಜೆಡಿಎಸ್‌ನಿಂದ ಆಗಿಲ್ಲ. 2013ರಲ್ಲಿಯೂ
ಬಿಜೆಪಿಯಿಂದ ಯಡಿಯೂರಪ್ಪ ಆ್ಯಂಡ್ ಟೀಂ ಹೊರಹೋಗಿದ್ದರಿಂದ, ಜೆಡಿಎಸ್‌ಗೆ ಹೆಚ್ಚು ಸ್ಥಾನ ಸಿಗುವ ಮೂಲಕ ಅಧಿಕೃತ ಪ್ರತಿಪಕ್ಷವಾಗಿ ಹೊರಹೊಮ್ಮಿತ್ತು. ಯಾವಾಗ ಬಿಜೆಪಿಯೊಂದಿಗೆ ಕೆಜೆಪಿ ವಿಲೀನವಾಯಿತೋ ನಂತರ, ಪುನಃ ಮೂರನೇ ಸ್ಥಾನದಲ್ಲಿಯೇ ಜೆಡಿಎಸ್ ಕೂರುವಂಥ ಸ್ಥಿತಿ ನಿರ್ಮಾಣವಾಗಿದೆ.

96ರ ಬಳಿಕ ನಡೆದ ಎಲ್ಲ ವಿಧಾನಸಭಾ ಚುನಾವಣಾ ಫಲಿತಾಂಶವನ್ನು ಗಮನಿಸಿದರೆ, ಜೆಡಿಎಸ್ 50ಕ್ಕಿಂತ ಹೆಚ್ಚು ಸ್ಥಾನವನ್ನು ಪಡೆಯುವಲ್ಲಿ ಸಫಲವಾಗಿಲ್ಲ. ಆದರೂ ದೇವೇಗೌಡರ ಪುತ್ರ ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾದರು. 2004ರ ಚುನಾವಣೆಯ ಬಳಿಕ ಬಂದ ಮೈತ್ರಿ ಸರಕಾರದಲ್ಲಿ ಜೆಡಿಎಸ್‌ನ ಹಲವು ನಾಯಕರು ಪ್ರಮುಖ ಸಚಿವ ಸ್ಥಾನವನ್ನು ಪಡೆಯುವಲ್ಲಿ ಯಶಕಂಡರು. ಹಾಗೆ ನೋಡಿದರೆ, ಸ್ವಾಲವಂಬಿಯಾಗಿ ಅಧಿಕಾರಕ್ಕೆ ಬಾರದಿದ್ದರೂ, ಅಂದಿನ ರಾಜಕೀಯ ಪರಿಸ್ಥಿ ತಿಯನ್ನು ‘ಬಳಸಿಕೊಂಡು’ ಅಧಿಕಾರಕ್ಕೆ ತರುವ ಬಳಿಕ, ಆಯಕಟ್ಟಿನ ಸ್ಥಾನವನ್ನೇ ಹಿಡಿಯುವ ಚಾಕಚಕತ್ಯೆೆ ಜೆಡಿಎಸ್ ನಾಯಕ ರಲ್ಲಿದೆ.

ಕಾಂಗ್ರೆಸ್-ಜೆಡಿಎಸ್ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಧರ್ಮಸಿಂಗ್ ಅವರ ಸರಕಾರವನ್ನು ಉರುಳಿಸಲು ಬಿಜೆಪಿ ಮುಂದಾದಾಗ, ಜೆಡಿಎಸ್‌ನ ಕುಮಾರಸ್ವಾಮಿ ಹಾಗೂ ಅವರೊಂದಿಗೆ ಕೆಲ ಶಾಸಕರು ಯಡಿಯೂರಪ್ಪ ಅವರಿಗೆ ಬೆಂಬಲಿಸಿದರು. ಇದಕ್ಕೆ ಪ್ರತಿ ಯಾಗಿ 20-20 ಸರಕಾರ ಮಾಡಬೇಕು ಎನ್ನುವ ‘ಒಪ್ಪಂದ’ವನ್ನು ಜೆಡಿಎಸ್ ಬಿಜೆಪಿ ಮಾಡಿಕೊಂಡಿತ್ತು.

ಇದರ ಫಲವಾಗಿಯೇ 58 ಸಂಖ್ಯಾಬಲವಿದ್ದರೂ, ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ
ಸ್ವೀಕರಿಸಿದರು. ಬಿಜೆಪಿಗೆ ದಕ್ಷಿಣ ಭಾರತದಲ್ಲಿ ಅಧಿಕಾರದ ಚುಕ್ಕಾಾಣಿ ಹಿಡಿಯಬೇಕು ಎನ್ನುವ ಹಠದೊಂದಿಗೆ, ಕಾಂಗ್ರೆಸ್
ಆಡಳಿತವನ್ನು ಕೆಳಗಿಳಿಸಬೇಕು ಎನ್ನುವ ಗುರಿಯಿತ್ತು. ಆದ್ದರಿಂದಲೇ ಬಿಜೆಪಿ ಜೆಡಿಎಸ್‌ಗಿಂತ 20 ಸ್ಥಾನ ಹೆಚ್ಚಿಗೆ ಪಡೆದುಕೊಂಡಿ ದ್ದರೂ, ಮೊದಲ 20 ತಿಂಗಳು ಕುಮಾರಸ್ವಾಮಿ ಆಡಳಿತ ನಡೆಸಲಿ ಎಂದು ಬಿಟ್ಟುಕೊಟ್ಟರು.

20 ತಿಂಗಳ ಅವಧಿಯ ಬಳಿಕ ಅಧಿಕಾರ ನೀಡಲ್ಲಿಲ್ಲವೆಂದು ಬಿಜೆಪಿ-ಜೆಡಿಎಸ್ ನಡುವೆ ಕಿತ್ತಾಟ ಏರ್ಪಟ್ಟು, ಮೈತ್ರಿಯನ್ನು
ಮುರಿದುಕೊಂಡರು. ಆದರೆ ಜೆಡಿಎಸ್ ಮಾತ್ರ 20 ತಿಂಗಳ ಅಧಿಕಾರಾವಧಿಯನ್ನು ಅನುಭವಿಸಿ, ಜನರ ಮುಂದೆ ಹೋಗಿತ್ತು. ವಚನಭ್ರಷ್ಟ ಎನ್ನುವ ಆರೋಪದಲ್ಲಿಯೇ ಬಿಜೆಪಿ ಚುನಾವಣಾ ಪ್ರಚಾರ ನಡೆಸಿದ್ದರಿಂದ ಜೆಡಿಎಸ್ 28 ಸ್ಥಾನಕ್ಕೆ ಕುಸಿದಿತ್ತು. ಇದಾದ ಬಳಿಕ ಸುಮಾರು ದಶಕದ ಕಾಲ ಪ್ರತಿಪಕ್ಷದಲ್ಲಿಯೇ ಕೂತಿದ್ದ ಜೆಡಿಎಸ್‌ಗೆ 2018ರಲ್ಲಿಯೂ ಅತಂತ್ರ ಫಲಿತಾಂಶ ಬಂದಿದ್ದರಿಂದ ‘ಕೂತಲ್ಲಿಗೆ ಸಿಹಿ ಬಂದು ಬಾಯಿಗೆ ಬಿದ್ದಿತ್ತು’.

ಇನ್ನು 2018ರಲ್ಲಿ ಕೇವಲ 37 ಶಾಸಕರನ್ನು ಒಳಗೊಂಡಿದ್ದ ಜೆಡಿಎಸ್ ಕನಸಿನಲ್ಲಿಯೂ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಯೋಚಿಸಿರ ಲಿಲ್ಲ. ಆದರೆ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎನ್ನುವ ಏಕೈಕ ಉದ್ದೇಶದಿಂದ ಕಾಂಗ್ರೆಸ್ ನಾಯಕರು, ತಾವೇ ಮೇಲೆ ಬಿದ್ದು ಜೆಡಿಎಸ್‌ಗೆ ಬೆಂಬಲ ಸೂಚಿಸಿತ್ತು. ಇದರ ಪರಿಣಾಮವಾಗಿಯೇ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಕುಮಾರಸ್ವಾಮಿ ಅವರು ಎರಡನೇ ಬಾರಿಗೆ ‘ಆಕಸ್ಮಿಕ ಮುಖ್ಯಮಂತ್ರಿ’ಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಅಧಿಕಾರಕ್ಕೆ ಬಂದ ಬಳಿಕ ಅನೇಕ ಬಾರಿ ತಾವು ‘ಸಾಂದರ್ಭಿಕ ಶಿಶು’ವೆಂದು ಕುಮಾರಸ್ವಾಮಿ ಅವರು ಹೇಳಿಕೊಂಡಿದ್ದಾರೆ. ಆದರೆ ಈ ರೀತಿ ಸಾಂದರ್ಭಿಕ ಶಿಶು ಕೇವಲ ಒಮ್ಮೆ ಮಾತ್ರವಲ್ಲ ಎನ್ನುವುದನ್ನು ಮಾತ್ರ ಹೇಳುವುದಿಲ್ಲ. ಕಾಂಗ್ರೆಸ್-ಬಿಜೆಪಿ ಪಕ್ಷಗಳು ತಮ್ಮ ಎದುರಾಳಿ ಪಕ್ಷವನ್ನು ಅಧಿಕಾರದಿಂದ ದೂರವಿಡಬೇಕು ಎನ್ನುವ ಯೋಚನೆ ಮಾಡಿದಾಗಲೆಲ್ಲ, ಜೆಡಿಎಸ್‌ಗೆ ಅಧಿಕಾರವನ್ನು
ಬಳುವಳಿಯ ರೀತಿ ನೀಡುತ್ತಾರೆ. ಜೆಡಿಎಸ್ ಸಹ ಈ ರೀತಿ ಅವಕಾಶ ಬಂದಾಗ ಹಿಂದೆ ನಡೆದ ಘಟನಾವಳಿ ಯಾವುದನ್ನು
ಲೆಕ್ಕಿಸದೇ, ಮೈತ್ರಿ ಪಕ್ಷವನ್ನು ಅಪ್ಪಿಕೊಳ್ಳುತ್ತದೆ.

ಹಾಗೆ ನೋಡಿದರೆ 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ನಡುವಿನ ಕಿತ್ತಾಟಕ್ಕಿಂತ ಹೆಚ್ಚಾಗಿ ಆಗಿದ್ದು, ಜೆಡಿಎಸ್-ಕಾಂಗ್ರೆೆಸ್ ನಡುವೆ. ಅಂದಿನ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಜೆಡಿಎಸ್ ಅನ್ನು ‘ಬಿಜೆಪಿಯ ಬಿ-ಟೀಂ’ ಎಂದು ಮೂದಲಿಸಿದ್ದರು. ಇನ್ನು ಸಿದ್ದರಾಮಯ್ಯ ಹಾಗೂ ಜೆಡಿಎಸ್ ನಡುವಿನ ವೈಮನಸ್ಸು ಎಷ್ಟರ ಮಟ್ಟಿಗೆ ಇದೆ ಎನ್ನುವುದಕ್ಕೆ ಆ ಚುನಾವಣೆಯ ವಾಕ್ಸಮರಗಳು ಸಾಕ್ಷೀಕರಿಸಿದ್ದವು. ಕಾಂಗ್ರೆಸ್ ನಾಯಕ ಜಮೀರ್ ಅಹಮದ್ ಅವರು ‘ಒಂದು ವೇಳೆ ಕುಮಾರ ಸ್ವಾಮಿ ಮುಖ್ಯಮಂತ್ರಿಯಾದರೆ ತಲೆ ಕತ್ತರಿಸಿಕೊಳ್ಳುವುದಾಗಿ’ ಶಪಥವನ್ನು ತೊಟ್ಟಿದ್ದರು. ಆದರೆ ಈ ಎಲ್ಲ ವೀರಾವೇಶದ
ಮಾತುಗಳು, ಶಪಥಗಳು ಚುನಾವಣ್ಣೋತ್ತರ ಮೈತ್ರಿಯಲ್ಲಿ ಕೊಚ್ಚಿ ಹೋಗಿ, ‘ಭಾಯಿ-ಭಾಯಿ’ ಎನ್ನುವಂತಾಗಿತ್ತು.

ಇದಾದ ಬಳಿಕ ಒಂದುವರೆ ವರ್ಷ ಆಡಳಿತ ನಡೆಸಿದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಬಿಜೆಪಿಯ ಆಪರೇಷನ್ ಕಮಲದ ಅಸ್ತ್ರಕ್ಕೆ ಬಿದ್ದು ಹೋಗಿತ್ತು. ಈ ವೇಳೆ ಕುಮಾರಸ್ವಾಮಿ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು ಅಷ್ಟಿಷ್ಟಲ್ಲ. ವಿಶ್ವಾಸಮತ ಸಾಬೀತುಪಡಿಸುವಾಗ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಅವರು ಒಬ್ಬರನ್ನು ಒಬ್ಬರು ಬೈದಾಡಿಕೊಂಡಿದ್ದು ಕಲಾಪದ ದಾಖಲೆಗಳಲ್ಲಿ ಈಗಲೂ ಲಭ್ಯವಿದೆ. ಅಪ್ಪ ಮಕ್ಕಳು ನಾಶವಾಗಿ ಹೋಗುತ್ತೀರಿ ಎಂದು ಯಡಿಯೂರಪ್ಪ ಟೀಕಿಸಿದ್ದರೆ, ಕುಮಾರಸ್ವಾಮಿ ಯಡಿಯೂರಪ್ಪ ಒಬ್ಬ ಮಹಾನ್ ಭ್ರಷ್ಟಾ ಎಂದು ವಾಗ್ದಾಳಿ ನಡೆಸಿದ್ದರು. ಈ ಎಲ್ಲ ಘಟನೆ ನಡೆದು ಸರಕಾರ ಬಿತ್ತು.

ಇದಾದ ಬಳಿಕ ಕಾಂಗ್ರೆಸ್-ಬಿಜೆಪಿ ಎರಡರಿಂದಲೂ ಅಂತರ ಕಾಯ್ದುಕೊಂಡ ಜೆಡಿಎಸ್, ಇತ್ತೀಚಿಗೆ ಪುನಃ ಬಿಜೆಪಿಯತ್ತ ಹೆಚ್ಚು ‘ಒಲವು’ ತೋರುತ್ತಿದೆ. ಕಳೆದೊಂದು ತಿಂಗಳ ಅಂತರದಲ್ಲಿಯೇ ಯಾರ ವಿರುದ್ಧ ಸದನದಲ್ಲಿ ವಾಗ್ದಾಳಿ ನಡೆಸಿ, ಕೂಗಾಡಿದ್ದರೋ ಅವರ ಮನೆಗೆ ಕುಮಾರಸ್ವಾಮಿ ಅವರು ಕೆಲವು ‘ಫೈಲ್’ನೊಂದಿಗೆ ತೆರಳಿ ಗುಪ್ತ ಸಭೆಯನ್ನು ನಡೆಸಿದ್ದರು. ಯಾವ ಸರಕಾರ ಅಧಿಕಾರಕ್ಕೆ ಬಂದರೆ, ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗುತ್ತದೆ ಎನ್ನುವ ಮಾತನ್ನು ಹೇಳಿದ್ದರೋ, ಅದೇ ಬಿಜೆಪಿಯ ವಿವಾದಾತ್ಮಕ ಕಾಯಿದೆಗಳ ವಿರುದ್ಧ ತುಟಿಕ್ ಪಿಟಿಕ್ ಎನ್ನದೇ ಸ್ವಾಗತಿಸಿದರು.

ಇದಿಷ್ಟೇ ಅಲ್ಲದೇ, ಇದೀಗ ಎದುರಾಗಿರುವ ಉಪಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಒಂದೊಂದು ಕ್ಷೇತ್ರಕ್ಕೆ ಒಳಒಪ್ಪಂದ
ಮಾಡಿಕೊಳ್ಳುವ ಮಾತುಗಳನ್ನು ಜೆಡಿಎಸ್ ಪರೋಕ್ಷವಾಗಿ ಮಾಡುತ್ತಿದೆ. ಹಾಗೇ ಸೂಕ್ಷ್ಮವಾಗಿ ಗಮನಿಸಿದರೆ, ಕರ್ನಾಟಕ
ದಲ್ಲಿ ಪ್ರಾದೇಶಿಕ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ ಎಂದಲ್ಲ. ಆದರೆ ಜೆಡಿಎಸ್ ಆಗಿಂದಾಗ್ಗೆ ತನ್ನ
ನಿಲುವುಗಳನ್ನು ಬದಲಾವಣೆ ಮಾಡಿಕೊಂಡು,adjustment ರಾಜಕಾರಣ ಮಾಡಲು ಹೋಗುವುದೇ ಅವರ ಹಿನ್ನಡೆಗೆ ಕಾರಣ.

ಈ ರೀತಿ ಅಸ್ವಿತ್ತಕ್ಕಾಗಿ ಹೋರಾಟ ಮಾಡಬೇಕಾದ ಅನಿರ್ವಾಯತೆ ಜೆಡಿಎಸ್‌ಗೆ ಸೃಷ್ಟಿಯಾಗಿರುವುದು ಸಹ, ಪಕ್ಷದ ವರಿಷ್ಠರು ಹಾಗೂ ನಾಯಕರ ಕೆಲ ಕೆಟ್ಟ ನಿರ್ಧಾರಗಳಿಂದ. ಪ್ರಾದೇಶಿಕ ಪಕ್ಷವಾಗಿ ಗುರುತಿಸಿಕೊಂಡ ಜೆಡಿಎಸ್, ಇಡೀ ಕರ್ನಾಟಕಕ್ಕೆ ತಮ್ಮ ಸಂಘಟನೆಯನ್ನು ವಿಸ್ತರಿಸುವ ಬದಲು, ಹಳೇ ಮೈಸೂರು ಅಥವಾ ಕೆಲ ಜಿಲ್ಲೆಗಳು ನಮ್ಮ ಪಾಲಿಗಿದ್ದರೆ ಸಾಕು, ಸರಕಾರಗಳನ್ನು
ಅಲ್ಲಾಡಿಸುತ್ತೇವೆ. ಹಳೇ ಮೈಸೂರು ಭಾಗದಲ್ಲಿ ಸಿಗುವ 30ರಿಂದ 40 ಸೀಟುಗಳನ್ನು ಹಿಡಿದುಕೊಂಡು, ಅತಂತ್ರ ಫಲಿತಾಂಶದ ವೇಳೆ ‘ಕಿಂಗ್’ ಆಗುತ್ತೇವೆ ಎನ್ನುವ ಮನಸ್ಥಿತಿಯಿಂದ ಹೊರಬರಬೇಕಿದೆ.

ಯಾವುದೇ ರಾಜಕೀಯ ಪಕ್ಷ ಆರಂಭದಲ್ಲಿ ಅನಿವಾರ್ಯವಾಗಿ ಇನ್ನೊಂದು ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ರಾಜಕೀಯದಲ್ಲಿ ಸಹಜ. ಆದರೆ ಆರಂಭದಲ್ಲಿ ತಮ್ಮದೇಯಾದ ಮತ ಬ್ಯಾಂಕ್ ಅನ್ನು ಹೊಂದಿ, ಸ್ವತಂತ್ರವಾಗಿ ಅಧಿಕಾರ ನಡೆಸಿರುವ ಪಕ್ಷವೊಂದು, ಕೇವಲ ಅಧಿಕಾರದ ಗದ್ದುಗೆಗೆ ತಮ್ಮ ಸೈದ್ದಾಂತಿಕ ವಿರೋಧಿಗಳನ್ನು ಒಪ್ಪಿಕೊಂಡು ಆಡಳಿತ ಪಕ್ಷದ ಭಾಗದಲ್ಲಿ ಕೂರುತ್ತಿರುವುದರಿಂದಲೇ. ಇಂದು ಜೆಡಿಎಸ್ ಪರಾವಲಂಭಿಯಾಗಿ ನಿಲ್ಲಬೇಕಾಗಿದೆ. ಈ ಪರಾವಲಂಬಿತನ ಬಿಟ್ಟು, ಸ್ವಾತಂತ್ರ್ಯವಾಗಿ ಪಕ್ಷ ಸಂಘಟನೆಗೆ ಒತ್ತು ನೀಡುವ ನಿಟ್ಟಿನಲ್ಲಿ, ಅಧಿಕಾರವನ್ನು ಕುಟುಂಬದ ಹೊರತಾಗಿಯೂ ನೀಡಿ, ಪಕ್ಷ ನಾಯಕರಿಗೆ, ಕಾರ್ಯಕರ್ತರಿಗೆ ಸ್ವಾತಂತ್ರ್ಯ ನೀಡುವ ತನಕ ‘ಜೆಡಿಎಸ್‌ನ ಈ ಪರಾವಲಂಬಿತನಕ್ಕೆ ಮುಕ್ತಿಯಿಲ್ಲ’ ಎನ್ನುವುದು ಸ್ಪಷ್ಟ