Friday, 20th September 2024

ಮೋದಿ ತಂದ ಕೃಷಿ ಕಾಯ್ದೆ ರೈತರಿಗೇಕೆ ಮಾರಕ?

ಅಭಿಪ್ರಾಯ
ಪಿ.ಚಿದಂಬರಂ, ಕೇಂದ್ರದ ಮಾಜಿ ಸಚಿವ

ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು ವಿತ್ತ ಮಂತ್ರಿ, ನೀತಿ ಆಯೋಗದ ಸಿಇಒ, ಬಿಜೆಪಿ ಅಧ್ಯಕ್ಷ ಹಾಗೂ ಬಿಜೆಪಿ ವಕ್ತಾರ ರವರೆಗೆ ಪ್ರತಿಯೊಬ್ಬರೂ ಹಾಡುತ್ತಿರುವುದು ಒಂದೇ ಹಾಡು.

ದೇಶದ ರೈತರು ಇಷ್ಟು ದಿನ ಎಪಿಎಂಸಿಗಳಿಗೆ ಕಟ್ಟುಹಾಕಲ್ಪಟ್ಟಿದ್ದರು, ಈಗ ಅವರನ್ನು ಆ ಸಂಕೋಲೆಯಿಂದ ಬಿಡುಗಡೆಗೊಳಿಸಿ ಎಪಿಎಂಸಿಯ ಹೊರಗೆ ಅವರಿಗಿಷ್ಟ ಬಂದವರಿಗೆ ಬೆಳೆಗಳನ್ನು ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟಿದ್ದೇವೆ ಎಂದು ಎಲ್ಲರೂ ಏಕಸ್ವರದಲ್ಲಿ ವಾದಿಸುತ್ತಿದ್ದಾರೆ. ಅಫ್‌ಕೋರ್ಸ್, ಅವರ್ಯಾಾರೂ ತಮ್ಮ ವಾದಕ್ಕೆ ಅಂಕಿಅಂಶಗಳನ್ನು ನೀಡುತ್ತಿಲ್ಲ.
ಇನ್ಫೋಸಿಸ್ ಕಂಪನಿಯ ಸಹ ಸಂಸ್ಥಾಪಕ ನಾರಾಯಣಮೂರ್ತಿ ಹೇಳಿದ್ದಾರೆ ಎನ್ನಲಾದ ಒಂದು ಮಾತಿದೆ. ನಾವು ದೇವರನ್ನು ನಂಬುತ್ತೇವೆ. ಬೇರೇನನ್ನು ನಂಬುವುದಿದ್ದರೂ ಅದಕ್ಕೆ ಅಂಕಿಅಂಶಗಳನ್ನು ಕೊಡಿ.

ಅಂಕಿಅಂಶಗಳು ಏನು ಹೇಳುತ್ತವೆ?

– ನಮ್ಮ ದೇಶದಲ್ಲಿರುವ ರೈತರ ಪೈಕಿ ಶೇ.86ರಷ್ಟು ರೈತರು ಸಣ್ಣ ಹಿಡುವಳಿದಾರರು. ಅವರ ಬಳಿಯಿರುವ ಜಮೀನು 2
ಹೆಕ್ಟೇರ್‌ಗಿಂತಲೂ ಕಡಿಮೆ.

– ಕೃಷಿ ಹಿಡುವಳಿಗಳು ವರ್ಷದಿಂದ ವರ್ಷಕ್ಕೆ ಸಣ್ಣದಾಗುತ್ತಲೇ ಹೋಗುತ್ತಿವೆ. ಕೃಷಿ ಗಣತಿಯ ಪ್ರಕಾರ ದೇಶದಲ್ಲಿ 2010-11ರಲ್ಲಿ 13.8 ಕೋಟಿ ಇದ್ದ ಹಿಡುವಳಿಗಳ ಸಂಖ್ಯೆ 2015-16ಕ್ಕೆ 14.6 ಕೋಟಿಗೆ ಏರಿದೆ.

– ಸಣ್ಣ ರೈತರ ಬಳಿ ಮಾರಾಟ ಮಾಡಲು ಹೆಚ್ಚೇನೂ ಕೃಷಿ ಉತ್ಪನ್ನಗಳು ಇರುವುದಿಲ್ಲ. ಅವರು ಒಂದಷ್ಟು ಚೀಲ ಭತ್ತವನ್ನೋ ಅಥವಾ ಗೋಧಿಯನ್ನೋ ತಮ್ಮ ಸಾಲ ತೀರಿಸಲು ಅಥವಾ ಮನೆ ಖರ್ಚಿನ ತುರ್ತು ಅಗತ್ಯ ಪೂರೈಸಿಕೊಳ್ಳಲು ಮಾರಾಟ ಮಾಡುತ್ತಾರಷ್ಟೆ.

– ದೇಶದ ಶೇ.6ರಷ್ಟು ರೈತರು ಮಾತ್ರ ತಮ್ಮ ಉತ್ಪನ್ನಗಳನ್ನು ಎಪಿಎಂಸಿ ಯಾರ್ಡ್‌ಗಳಲ್ಲಿ ಮಾರಾಟ ಮಾಡುತ್ತಾರೆ. ಇನ್ನುಳಿದ ಶೇ.94ರಷ್ಟು ರೈತರು ಎಪಿಎಂಸಿಯ ಹೊರಗೆ, ಹೆಚ್ಚಾಗಿ ಸ್ಥಳೀಯ ವ್ಯಾಪಾರಿಗಳಿಗೆ ಅಥವಾ ಕೋ ಆಪರೇಟಿವ್ ಸೊಸೈಟಿಗಳಿಗೆ ಅಥವಾ ಸಂಸ್ಕರಣೆದಾರರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ.

– ಕೇರಳದಲ್ಲಿ, ಕೆಲ ಈಶಾನ್ಯ ರಾಜ್ಯಗಳಲ್ಲಿ ಹಾಗೂ ಚಂಡೀಗಢ ಹೊರತುಪಡಿಸಿ ಇನ್ನುಳಿದ ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಪಿಎಂಸಿಗಳೇ ಇಲ್ಲ. ಕೆಲ ವರ್ಷಗಳ ಹಿಂದೆ ಬಿಹಾರ ಸರಕಾರ ಎಪಿಎಂಸಿ ಕಾಯ್ದೆ ರದ್ದುಪಡಿಸಿದೆ. ಈ ರಾಜ್ಯಗಳಲ್ಲಿ ಕೃಷಿ ಉತ್ಪನ್ನಗಳ ಮಾರಾಟ ಎಪಿಎಂಸಿಗಳ ಹೊರಗೇ ನಡೆಯುತ್ತದೆ.

– ರಾಜ್ಯಗಳಲ್ಲಿರುವ ಎಪಿಎಂಸಿಗಳ ಸಂಖ್ಯೆಯಲ್ಲಿ ಭಾರಿ ವ್ಯತ್ಯಾಸವಿದೆ. ಹರಿಯಾಣದಲ್ಲಿ 106, ಪಂಜಾಬ್‌ನಲ್ಲಿ 145 ಹಾಗೂ ತಮಿಳುನಾಡಿನಲ್ಲಿ 283 ಎಪಿಎಂಸಿಗಳಿವೆ.

ಪಂಜಾಬ್ ಮತ್ತು ಹರಿಯಾಣದಲ್ಲಿ ಉತ್ಪಾದನೆಯಾದ ಶೇ.70ರಷ್ಟು ಗೋಧಿಯನ್ನು ಎಫ್‌ಸಿಐನಂತಹ ಸರಕಾರಿ ಏಜೆನ್ಸಿಗಳೇ ಖರೀದಿಸುತ್ತವೆ. ತಮಿಳುನಾಡಿನಲ್ಲಿ 2019-20ರಲ್ಲಿ ಎಲ್ಲ ಎಪಿಎಂಸಿಗಳೂ ಸೇರಿ ನಡೆಸಿದ ಆಹಾರೋತ್ಪನ್ನಗಳ ವಹಿವಾಟು 129.76 ಕೋಟಿ ರು. ಮಾತ್ರ.

– ಮಹಾರಾಷ್ಟ್ರದಲ್ಲಿ ಒಬ್ಬ ರೈತ ಎಪಿಎಂಸಿಗೆ ಹೋಗಬೇಕು ಅಂದರೆ 25 ಕಿ.ಮೀ. ಸಂಚರಿಸಬೇಕು. ಒಳ್ಳೆಯದಕ್ಕಿಂತ ಕೆಟ್ಟದೇ ಹೆಚ್ಚು ರಾಜ್ಯದಲ್ಲಿ ಎಪಿಎಂಸಿ ಇದೆಯೋ ಇಲ್ಲವೋ, ಅಥವಾ, ರೈತರಿಗೆ ಎಪಿಎಂಸಿಗಳು ಹತ್ತಿರವಿದೆಯೋ ದೂರವಿದೆಯೋ,
ವಾಸ್ತವ ಏನೆಂದರೆ ಶೇ.94ರಷ್ಟು ರೈತರು ಎಪಿಎಂಸಿಗಳ ಹೊರಗಿರುವ ಅನಿಯಂತ್ರಿತ ಮಾರುಕಟ್ಟೆಯಲ್ಲೇ ತಮ್ಮ
ಉತ್ಪನ್ನಗಳನ್ನು ಮಾರಾಟ ಮಾಡುವುದು ಅನಿವಾರ್ಯವಾಗಿದೆ. ಅಂದರೆ, ಈಗಾಗಲೇ ಶೇ.94ರಷ್ಟು ರೈತರು ಎಪಿಎಂಸಿಗಳ ಹಿಡಿತದಿಂದ ಹೊರಗೇ ಇದ್ದಾರೆ.

ಆದರೂ ರೈತರು ಎಪಿಎಂಸಿಗಳು ಮತ್ತು ಮಧ್ಯವರ್ತಿಗಳ ಕಪಿಮುಷ್ಟಿಯಲ್ಲಿ ಸಿಲುಕಿದ್ದಾರೆ ಎಂದೇ ಪ್ರಧಾನಿಯಿಂದ ಹಿಡಿದು ವಕ್ತಾರರವರೆಗೆ ಎಲ್ಲರೂ ಬಿಂಬಿಸುತ್ತಿರುವುದಕ್ಕೆ ಕಾರಣವೇನು? ಇದಕ್ಕೆ ಅವರು ಉತ್ತರ ನೀಡುವುದಿಲ್ಲ. ಹೀಗಾಗಿ, ಹೊಸ ಕೃಷಿ ಕಾಯ್ದೆಗಳಿಂದ ರೈತರಿಗೆ ಉತ್ತಮ ಆಯ್ಕೆಗಳು ಸಿಗುತ್ತವೆ, ಇಂತಹ ಆಯ್ಕೆಗಳು ಹಿಂದೆ ಇರಲೇ ಇಲ್ಲ ಎಂಬ ವಾದವೇ ತಪ್ಪು. ಇದನ್ನು ಅಂಕಿಅಂಶಗಳೇ ಹೇಳುತ್ತವೆ. ವಾಸ್ತವವಾಗಿ ಹೊಸ ಕೃಷಿ ಕಾಯ್ದೆಗಳು ಇನ್ನೊಂದಷ್ಟು ಎಡವಟ್ಟುಗಳನ್ನು ಸೇರಿಸಿ ಈಗಿರುವ ವಸ್ತುಸ್ಥಿತಿಯನ್ನೇ ಮುಂದುವರೆಸುತ್ತವೆ.

ರೈತರಿಗೆ ಆಯ್ಕೆಗಳನ್ನು ನೀಡಬೇಕು ಎಂಬ ವಾದಕ್ಕೆ ನನ್ನ ಬೆಂಬಲವಿದೆ (ಎಲ್ಲಾ ಕಾಲಕ್ಕೂ ಎಲ್ಲರನ್ನೂ ಮೂರ್ಖರನ್ನಾಗಿಸು ವುದು, ಇಂಡಿಯನ್ ಎಕ್ಸ್ಪ್ರೆಸ್, ಸೆ.27, 2020 ಲೇಖನ ನೋಡಿ). ಕಾಲಕ್ರಮೇಣ ಎಪಿಎಂಸಿಗಳನ್ನು ರದ್ದುಪಡಿಸಬೇಕು ಎಂದು ನಾನೂ ಹೇಳುತ್ತೇನೆ. ಏಕೆಂದರೆ, ಅವು ಇಲ್ಲಿಯವರೆಗೆ ಒಂದಷ್ಟು ರೈತರಿಗೆ ಸುರಕ್ಷಾ ಕವಚದಂತೆ ಕೆಲಸ ಮಾಡಿದ್ದರೂ ಅವು
ಮುಕ್ತ ವ್ಯಾಪಾರಕ್ಕೆ ಅಡ್ಡಿಯಾಗಿವೆ.

ಅಲ್ಲಿ ವ್ಯಾಪಾರಕ್ಕೆ ನಿರ್ಬಂಧಗಳಿವೆ. ಎಪಿಎಂಸಿಗಳು ಉತ್ತಮ ಮಾರುಕಟ್ಟೆ ಅಲ್ಲ. ಅವು ಎಲ್ಲಾ ರೈತರಿಗೂ ನೆರವು ನೀಡುವುದಿಲ್ಲ.
ಅತಿ ಹೆಚ್ಚಿನ ದರದಲ್ಲಿ ಬಾಡಿಗೆ ಕೀಳುತ್ತವೆ. ಕೆಲವೆಡೆ ಅವು ವ್ಯಾಪಾರಿಗಳು ಮತ್ತು ಮಧ್ಯವರ್ತಿಗಳ ಹಿಡಿತದಲ್ಲಿವೆ. ಆದರೆ, ಎಪಿಎಂಸಿಗಳನ್ನು ರದ್ದುಪಡಿಸುವುದಕ್ಕಿಂತ ಮೊದಲು ರೈತರಿಗೆ ನಿಜವಾದ ಉತ್ತಮ ಆಯ್ಕೆಗಳನ್ನು ನೀಡಬೇಕು. ಆ ಆಯ್ಕೆ ಯಾವುದು? ದೇಶದ ಸಾವಿರಾರು ದೊಡ್ಡ ಹಳ್ಳಿಗಳು ಮತ್ತು ಸಣ್ಣ ಪಟ್ಟಣ ಪ್ರದೇಶಗಳಲ್ಲಿ ರೈತರಿಗೆ ಹತ್ತಿರದ ಸ್ಥಳಗಳಲ್ಲಿ ಸಾಕಷ್ಟು ಪರ್ಯಾಯ ಮಾರುಕಟ್ಟೆಗಳನ್ನು ಸೃಷ್ಟಿಸುವುದು.

ತೂಕ ಮತ್ತು ದರದ ವಿಚಾರದಲ್ಲಿ ಮಾತ್ರ ರಾಜ್ಯ ಸರಕಾರಗಳಿಗೆ ಆ ಮಾರುಕಟ್ಟೆಗಳ ಮೇಲೆ ನಿಯಂತ್ರಣವಿರಬೇಕು. ರೈತರು ಈ
ಪರ್ಯಾಯ ಮಾರುಕಟ್ಟೆಗಳಿಗೆ ಹೋಗಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು, ಖಾಸಗಿ ಹಾಗೂ ಸರ್ಕಾರಿ ಏಜೆನ್ಸಿಗಳು ಈ ಮಾರುಕಟ್ಟೆಗಳಲ್ಲಿ ಉತ್ಪನ್ನಗಳನ್ನು ಖರೀದಿಸಲು ಅವಕಾಶವಿರಬೇಕು. ಆದರೆ, ಇಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುವ ದರ ಸರಕಾರ ನಿಗದಿಪಡಿಸುವ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆಯಿರಬಾರದು. ಆಗ – ಈಗಿನಂತೆ ಬಹಳ ಕಡಿಮೆ ರೈತರ ಬದಲು – ಅತಿ ಹೆಚ್ಚು ರೈತರಿಗೆ ಕನಿಷ್ಠ ಬೆಂಬಲ ಬೆಲೆ ಸಿಗುತ್ತದೆ ಅಥವಾ ಅವರ ಉತ್ಪನ್ನಗಳಿಗೆ ಇನ್ನೂ ಉತ್ತಮ ಬೆಲೆ ಸಿಗುತ್ತದೆ. ರೈತರ ಬೆಳೆಗೆ ಕಾನೂನಾತ್ಮಕ ಕನಿಷ್ಠ ಬೆಲೆಯ ಖಾತ್ರಿ ಅಥವಾ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿದರೆ ಸಾವಿರಾರು ವ್ಯಾಪಾರಿಗಳು ಎಸಗುವ ವಂಚನೆಯನ್ನು ಪತ್ತೆ ಹಚ್ಚಲು ತನಿಖಾ ತಂಡಗಳು ಬೇಕಾಗುತ್ತವೆ, ಅವರನ್ನು ಜೈಲಿಗೆ ಹಾಕಬೇಕಾಗುತ್ತದೆ ಎಂದು ಸುಳ್ಳುಸುಳ್ಳೇ
ಕೂಗೆಬ್ಬಿಸಲಾಗುತ್ತಿದೆ.

ಇದು ಅಪ್ಪಟ ನಾನ್‌ಸೆನ್ಸ್. ರೈತರ ಉತ್ಪನ್ನಗಳಿಗೆ ಕನಿಷ್ಠ ದರ ನಿಗದಿಪಡಿಸುವ ಕಾನೂನಾತ್ಮಕ ವ್ಯವಸ್ಥೆ ರೈತರ ಮಾರುಕಟ್ಟೆಯ ಒಳಗೆ ಮಾತ್ರ ಅನ್ವಯಿಸುತ್ತದೆ. ಮೋದಿ ಸರಕಾರದ ಹೊಸ ಕಾಯ್ದೆಗಳು ಹೀಗೆ ಸಾವಿರಾರು ಪರ್ಯಾಯ ರೈತ ಮಾರುಕಟ್ಟೆಗಳನ್ನು
ಸೃಷ್ಟಿಸುವುದಿಲ್ಲ. ಬದಲಿಗೆ, ಖಾಸಗಿ ವ್ಯಾಪಾರಿಗಳು ಹಾಗೂ ಕಾರ್ಪೊರೇಟ್ ಕುಳಗಳು ರೈತರ ಜೊತೆಗೆ ಖಾಸಗಿಯಾಗಿ ಒಪ್ಪಂದ ಗಳನ್ನು ಮಾಡಿಕೊಳ್ಳಲು ಅವಕಾಶ ನೀಡುತ್ತವೆ.

ಅದರಲ್ಲೇನಾದರೂ ತಕರಾರು ಬಂದರೆ ಕೋರ್ಟ್‌ಗೆ ಹೋಗುವಂತಿಲ್ಲ. ಬದಲಿಗೆ, ಅಧಿಕಾರಿಗಳೇ ಅದನ್ನು ಪರಿಹರಿಸಬೇಕಾದ ವ್ಯವಸ್ಥೆ ಜಾರಿಗೆ ತರಲಾಗುತ್ತದೆ. ತನ್ಮೂಲಕ ಸರಕಾರವು ರೈತರಿಗೆ ಈಗಿರುವುದಕ್ಕಿಂತ ಹೆಚ್ಚು ತೊಂದರೆ ಉಂಟುಮಾಡಲು ಹೊರಟಿದೆ. ಜೊತೆಗೆ, ಒಮ್ಮೆ ಎಪಿಎಂಸಿಗಳ ಹೊರಗೆ ಅನಿಯಂತ್ರಿತ ಖಾಸಗಿ ವ್ಯಾಪಾರವನ್ನು ಕಾನೂನುಬದ್ಧಗೊಳಿಸಿದರೆ ವ್ಯಾಪಾರಿಗಳೆಲ್ಲ ಎಪಿಎಂಸಿಯಿಂದ ತಮ್ಮ ನೋಂದಣಿಯನ್ನು ವಾಪಸ್ ಪಡೆಯುತ್ತಾರೆ.

ಅಂದರೆ ವ್ಯಾಪಾರಿಗಳು ಎಪಿಎಂಸಿಗೆ ಬರುವುದನ್ನೇ ನಿಲ್ಲಿಸುತ್ತಾರೆ. ರಾಜ್ಯಗಳು ಕಾನೂನು ಮಾಡಲಿ ಬೆಳೆಗಳನ್ನು ಬೆಳೆಯುವುದು, ಅವುಗಳನ್ನು ಮಾರಾಟ ಮಾಡುವುದು, ವ್ಯಾಪಾರಿಗಳ ಮನೋಭಾವ ಹೀಗೆ ಕೃಷಿಗೆ ಸಂಬಂಧಿಸಿದ ವಿಷಯಗಳಲ್ಲಿ ಒಂದೊಂದು ರಾಜ್ಯದಲ್ಲೂ ಬೇರೆ ಬೇರೆ ಸನ್ನಿವೇಶಗಳೇ ಇವೆ. ಹೀಗಾಗಿ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದಂತೆ ರಾಜ್ಯಗಳು ಕಾನೂನು
ರೂಪಿಸಲಿ. ಅವು ಬೇಕಾದರೆ ಪಂಜಾಬ್ ಮಾದರಿಯನ್ನೋ ಅಥವಾ ಬಿಹಾರದ ಮಾದರಿಯನ್ನೋ ಅಳವಡಿಸಿಕೊಳ್ಳಲಿ.

ಆಯಾ ರಾಜ್ಯ ಸರಕಾರಗಳು, ಅಲ್ಲಿನ ರೈತರು ಹಾಗೂ ಜನರು ಸೇರಿಕೊಂಡು ತಮಗೆ ಯಾವ ವಿಧಾನ ಉತ್ತಮ ಎಂಬುದನ್ನು ನಿರ್ಧರಿಸಲಿ. ಅದು ನಿಜವಾಗಿಯೂ ಒಕ್ಕೂಟ ವ್ಯವಸ್ಥೆಗೆ ನೀಡುವ ಗೌರವ. ಅದರ ಬದಲಿಗೆ ಸಂವಿಧಾನದ ರಾಜ್ಯಪಟ್ಟಿಯಲ್ಲಿ ಬರುವ ವಿಷಯಗಳಿಗೆ ಸಂಬಂಧಿಸಿದಂತೆ ಸಂಸತ್ತು ಕಾಯ್ದೆ ರೂಪಿಸಿದರೆ ಒಂದೇ ಅಳತೆಯ ಅಂಗಿಯನ್ನು ಎಲ್ಲರಿಗೂ ಹೊಲಿದಂತಾಗುತ್ತದೆ. ಆಗ ಸರಕಾರದ ಉದ್ದೇಶದ ಮೇಲೇ ಅನುಮಾನ ಮೂಡುತ್ತದೆ.

ತರಾತುರಿಯಲ್ಲಿ ಸುಗ್ರೀವಾಜ್ಞೆಗಳನ್ನು ಜಾರಿಗೆ ತಂದು, ಆ ಸುಗ್ರೀವಾಜ್ಞೆಗಳ ಬಗ್ಗೆ ಸರಿಯಾಗಿ ಚರ್ಚೆ ಕೂಡ ನಡೆಸದೆ,
ಪ್ರತಿಪಕ್ಷ ಗಳು ಕೇಳಿದಂತೆ ಮತದಾನ ಕೂಡ ನಡೆಸದೆ ಸಂಸತ್ತಿನಲ್ಲಿ ಕಾಯ್ದೆ ರೂಪಿಸಿ ಜಾರಿಗೊಳಿಸುತ್ತಿರುವುದರ ಬಗ್ಗೆ ಸರಿಯಾದ ತನಿಖೆ ನಡೆಯುವ ಅಗತ್ಯವಿದೆ. ಈ ವಿವಾದಿತ ಕಾಯ್ದೆಗಳನ್ನು ಜಾರಿಗೊಳಿಸುತ್ತಿರುವುದರ ಹಿಂದೆ ಸರಕಾರಕ್ಕೆ ಯಾವ ಉದ್ದೇಶವಿದೆ ಎಂಬುದೇ ಪ್ರಶ್ನಾರ್ಹ ಸಂಗತಿ.