ಜೈಪುರ: ರಾಜಸ್ಥಾನದಲ್ಲಿ ಹೊಸದಾಗಿ ಚುನಾಯಿತರಾದ ಭಾರತೀಯ ಜನತಾ ಪಕ್ಷದ ಶಾಸಕರು ಮಂಗಳವಾರ ಸಭೆ ಸೇರಲಿದ್ದು, ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ.
ಪಕ್ಷದಿಂದ ವೀಕ್ಷಕರಾಗಿ ನೇಮಕಗೊಂಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಇಬ್ಬರು ಸಹ ವೀಕ್ಷಕರಾದ ವಿನೋದ್ ತಾವ್ಡೆ ಮತ್ತು ಸರೋಜ್ ಪಾಂಡೆ ಪಕ್ಷದ ಸಭೆಗೆ ಆಗಮಿಸಲಿದ್ದಾರೆ. ಮಂಗಳವಾರ ಸಂಜೆ ಬಿಜೆಪಿ ರಾಜ್ಯ ಕಚೇರಿಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ನೂತನ ವಾಗಿ ಆಯ್ಕೆಯಾಗಿರುವ ಬಿಜೆಪಿಯ ಎಲ್ಲಾ ಶಾಸಕರ ನೋಂದಣಿ ಮಧ್ಯಾಹ್ನ ಆರಂಭವಾಗಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಭಜನಲಾಲ್ ಶರ್ಮಾ ತಿಳಿಸಿದ್ದಾರೆ.
ನವೆಂಬರ್ 25ರಂದು ನಡೆದ ಚುನಾವಣೆಯಲ್ಲಿ 199 ಸ್ಥಾನಗಳಲ್ಲಿ 115 ಸ್ಥಾನಗಳನ್ನು ಗೆದ್ದು ಬಿಜೆಪಿ ರಾಜಸ್ಥಾನದಲ್ಲಿ ಅಧಿಕಾರಕ್ಕೆ ಮರಳಿದೆ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ವಸುಂಧರಾ ರಾಜೇ ಅವರು ವಿಧಾನಸಭಾ ಚುನಾವಣೆಯ ಸಮಯದಲ್ಲಿ ಪಕ್ಷದ ಪರವಾಗಿ ಆಕ್ರಮಣಕಾರಿಯಾಗಿ ಪ್ರಚಾರ ಮಾಡಿದ್ದರು. ಮುಖ್ಯಮಂತ್ರಿ ಸ್ಥಾನದ ಪ್ರಮುಖ ಆಕಾಂಕ್ಷಿಗಳಲ್ಲಿ ಅವರೂ ಒಬ್ಬರು.
ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಬಿಜೆಪಿಯ ರಜಪೂತ ಮುಖ. ಶೇಖಾವತ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಪಕ್ಷದ ಉನ್ನತ ನಾಯಕತ್ವದ ನಿಕಟವರ್ತಿ.
ಮೂರನೇ ಪ್ರಮುಖ ಅಭ್ಯರ್ಥಿ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್. ಇವರು ಮಾಜಿ ಅಧಿಕಾರಿ. ಚಿತ್ತೋರ್ಗಢದಿಂದ ಎರಡು ಬಾರಿ ಸಂಸದರಾಗಿರುವ ಸಿಪಿ ಜೋಶಿ ಅವರನ್ನೂ ಸ್ಪರ್ಧಿಗಳ ಪೈಕಿ ಪರಿಗಣಿಸಲಾಗಿದೆ.
‘ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಬಿಜೆಪಿ ಮತಗಳನ್ನು ಪಡೆದಿದೆ. ಅವರು ನಮ್ಮ ಪಕ್ಷದ ಪ್ರಬಲ ಮುಖ. ಅದರ ಹೊರತಾಗಿಯೂ, ಯಾರಾ ದರೂ ತಮ್ಮ ಮುಖದ ಆಧಾರದ ಮೇಲೆ ಪಕ್ಷಕ್ಕೆ ಮತಗಳನ್ನು ಪಡೆದರು ಎಂದು ಭಾವಿಸಿದರೆ, ಅದು ತಪ್ಪು ಕಲ್ಪನೆ. ಶಾಸಕರಿಗೆ ಕರೆ ಮಾಡಿ ಬೆಂಬಲ ಕೇಳುವುದು ಬಿಜೆಪಿಯ ಸಂಸ್ಕೃತಿಯಲ್ಲ” ಎಂದು ರಾಥೋಡ್ ಹೇಳಿದ್ದಾರೆ.