Thursday, 12th December 2024

ಈಶಾನ್ಯ ಭಾರತದಲ್ಲಿ ಕ್ಷೀಣಿಸುತ್ತಿರುವ ಪ್ರತ್ಯೇಕತೆಯ ಕೂಗು

ವಿಶ್ಲೇಷಣೆ

ಶಶಿಕುಮಾರ್‌ ಕೆ.

ಮಣಿಪುರದ ಸಾರ್ವಭೌಮತೆಗೆ ಹೋರಾಡುತ್ತಿದ್ದ ಉಗ್ರಗಾಮಿ ಸಂಘಟನೆಯಾದ ಯುಎನ್ ಎಲ್‌ಎಫ್ (ಯುನೈಟೆಡ್ ನ್ಯಾಷನಲ್ ಲಿಬರೇಷನ್ ಫ್ರಂಟ್) ಜತೆಗೆ ಶಾಂತಿ ಒಪ್ಪಂದ ಮಾಡಿಕೊಳ್ಳುವಲ್ಲಿ ಕೇಂದ್ರ ಸರಕಾರ ಯಶಸ್ವಿಯಾಗಿದೆ. ಈ ಮೂಲಕ ೬ ದಶಕಗಳ ಹಿಂಸಾಚಾರ ಅಂತ್ಯವಾಗುವ ಭರವಸೆ ಹೊಮ್ಮಿದೆ.

ಸಾರ್ವಭೌಮ ಮಣಿಪುರಕ್ಕಾಗಿ ಯುಎನ್‌ಎಲ್‌ಎಫ್ ಮಾಡುತ್ತಿದ್ದ ಗೆರಿಲ್ಲಾ ಯುದ್ಧಕ್ಕೆ ನಿಷೇಧಿತ ಸಂಘಟನೆ ಪೀಪಲ್ಸ್ ಲಿಬರೇಷನ್ ಆರ್ಮಿ ಕೂಡ ಸಾಥ್ ನೀಡುತ್ತಿತ್ತು. ಅಲ್ಲದೆ ಇಂಥ ಬಂಡುಕೋರ ಗುಂಪುಗಳಿಗೆ ಚೀನಾದ ಕೃಪಾಕಟಾಕ್ಷ ಇದ್ದುದರಿಂದ ಯುಎನ್‌ಎಲ್‌ಎಫ್ ಬಳಿ ಅತ್ಯಾಧುನಿಕ ಶಸ್ತಾಸಗಳು ಲಭ್ಯವಿದ್ದವು. ಶಾಂತಿ ಒಪ್ಪಂದದ ನಂತರ ಯುಎನ್‌ಎಲ್‌ಎಫ್ ಬಂಡುಕೋರರು ಅವನ್ನು ಸರಕಾರಕ್ಕೆ ಒಪ್ಪಿಸುತ್ತಿದ್ದ ವಿಡಿಯೋವನ್ನು ಕೇಂದ್ರ ಗೃಹಸಚಿವ ಅಮಿತ್ ಶಾ ಟ್ವಿಟರ್ (ಎಕ್ಸ್)ನಲ್ಲಿ ಹಂಚಿಕೊಂಡರು.

ಇದಕ್ಕೂ ಮೊದಲು ಅಂದರೆ ೨೦೧೫ರಲ್ಲಿ, ನಾಗಾಲ್ಯಾಂಡ್ ನಲ್ಲಿ ದಶಕಗಳಿಂದ ಬಂಡುಕೋರ ಚಟುವಟಿಕೆಗಳಲ್ಲಿ ಸಕ್ರಿಯ ವಾಗಿದ್ದ ನ್ಯಾಷನಲ್ ಸೋಷಲಿಸ್ಟ್ ಕೌನ್ಸಿಲ್ ಆಫ್ ನಾಗಾ ಲ್ಯಾಂಡ್ (ಎನ್‌ಎಸ್‌ಸಿಎನ್) ಸಂಘಟನೆಯು ಕೇಂದ್ರ ಸರಕಾರದೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿಹಾಕಿತ್ತು. ನಾಗಾ ಜನರ ವಸತಿ ಪ್ರದೇಶಗಳನ್ನೆಲ್ಲಾ ಸೇರಿಸಿ ‘ಗ್ರೇಟರ್ ನಾಗಾಲಿಮ್’ ರಚಿಸಬೇಕೆಂಬುದು ಎನ್‌ಎಸ್‌ಸಿಎನ್ ನಾಯಕರ ಬೇಡಿಕೆಯಾಗಿತ್ತು. ಇದರಲ್ಲಿ ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ ಮತ್ತು ಮ್ಯಾನ್ಮಾರ್‌ನ ಭೂಭಾಗಗಳು ಸೇರಿವೆ. ಗ್ರೇಟರ್ ನಾಗಾಲಿಮ್ ಒಟ್ಟು ೧.೨ ಲಕ್ಷ ಚ.ಕಿ.ಮೀ. ವ್ಯಾಪ್ತಿಯದ್ದಾಗಿದ್ದರೆ, ಈಗಿನ ನಾಗಾಲ್ಯಾಂಡ್ ವ್ಯಾಪ್ತಿ ಕೇವಲ ೧೬,೫೨೭ ಚ.ಕಿ.ಮೀ.ನಷ್ಟಿದೆ.

ನಾಗಾಲ್ಯಾಂಡ್ ವಿಧಾನಸಭೆ ಕೂಡ ಇದನ್ನು ೫ ಬಾರಿ ಅನುಮೋದಿಸಿ ನಿರ್ಣಯ ಕೈಗೊಂಡಿದೆ. ೧೮೨೬ರಲ್ಲಿ ಅಸ್ಸಾಂ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿತ್ತು. ತದ ನಂತರ ೧೮೮೧ರಲ್ಲಿ ನಾಗಾಬೆಟ್ಟಗಳು ಕೂಡ ಬ್ರಿಟಿಷ್ ಇಂಡಿಯಾದ ಭಾಗವಾಗಿಬಿಟ್ಟವು. ೧೯೧೮ರಲ್ಲಿ ನಾಗಾ ಕ್ಲಬ್ ರಚನೆ ಮೂಲಕ, ‘ನಮ್ಮಷ್ಟಕ್ಕೆ ನಾವಿರುತ್ತೇವೆ, ಬಿಟ್ಟುಬಿಡಿ’ ಎಂಬ ಸಂದೇಶ ರವಾನಿಸಿದ್ದಾಗಿ ಸೈಮನ್ ಆಯೋಗ ೧೯೨೯ರಲ್ಲಿ ಉಲ್ಲೇಖಿಸಿತ್ತು. ಇದು ನಾಗಾಜನರ ಮೊದಲ ಪ್ರತಿರೋಧ ಎನ್ನಲಾಗುತ್ತದೆ. ತದನಂತರ ೧೯೪೬ರಲ್ಲಿ ನಾಗಾ ನ್ಯಾಷನಲ್ ಕೌನ್ಸಿಲ್ (ಎನ್‌ಎನ್‌ಸಿ) ರಚನೆಯಾಯಿತು. ಇದರ ನಾಯಕ ಅಂಗಾಮಿ ಜಪು ಪಿಜೊ ೧೯೪೭ರ ಆಗಸ್ಟ್ ೧೪ರಂದು ನಾಗಾಲ್ಯಾಂಡ್ ಇನ್ನು ಸ್ವತಂತ್ರ ರಾಜ್ಯ ಎಂದು ಘೋಷಿಸಿದ.

ಅಷ್ಟೇ ಅಲ್ಲ, ಸಾರ್ವಭೌಮ ನಾಗಾರಾಜ್ಯ ರಚನೆಗಾಗಿ ಎನ್‌ಎನ್‌ಸಿ ೧೯೫೧ರಲ್ಲಿ ಜನಮತಗಣನೆಯನ್ನೂ ನಡೆಸಿತ್ತು, ಆ ವೇಳೆ ಶೇ.೯೯ರಷ್ಟು ಜನ ಸ್ವತಂತ್ರ ನಾಗಾಲ್ಯಾಂಡ್ ಪರ ಮತ ಚಲಾಯಿಸಿದ್ದರು. ಆದರೆ ಇದು ಅಸ್ತಿತ್ವಕ್ಕೆ ಬರುವುದು ಕಷ್ಟವೆನಿಸಿದಾಗ, ೧೯೫೨ರ ಮಾರ್ಚ್ ೨೨ರಂದು ಭೂಗತ ನಾಗಾ ಫೆಡರಲ್ ಗವರ್ನಮೆಂಟ್ (ಎನ್ ಎಫ್ ಜಿ) ಮತ್ತು ನಾಗಾ ಫೆಡರಲ್ ಆರ್ಮಿಯನ್ನು (ಎನ್ ಎಫ್ ಎ) ಅಂಗಾಮಿ ಜಪು ಸ್ಥಾಪಿಸಿದರು. ಈ ಬಂಡುಕೋರ
ಚಟುವಟಿಕೆ ಹತ್ತಿಕ್ಕಲು ಅಲ್ಲಿಗೆ ಸೇನೆಯನ್ನು ಕಳಿಸಿದ ಭಾರತ ಸರಕಾರ ೧೯೫೮ರಲ್ಲಿ ಸಶಸ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು ಜಾರಿಮಾಡಿತು.

ಎನ್‌ಎಫ್ಜಿ ಮತ್ತು ಎನ್‌ಎಫ್ಎ ಬಂಡಾಯದ ಸದ್ದಡಗಿಸಲು ಸರಕಾರ ಸೇನಾ ಕಾರ್ಯಾಚರಣೆ ಆರಂಭಿಸಿದ ಬೆನ್ನಲ್ಲೇ ಎನ್‌ಎನ್‌ಸಿಯಲ್ಲಿ ಭಿನ್ನಮತ ಕಾಣಿಸಿಕೊಂಡಿತು. ಭಿನ್ನಬಣದ ನಾಯಕರನೇಕರು ಸರಕಾರದ ಜತೆಗಿನ ಶಾಂತಿ ಒಪ್ಪಂದಕ್ಕೆ ಸಹಿಹಾಕಲು ಮುಂದಾದರು. ಹಾಗೆಯೇ, ೧೯೭೫ರ ನವೆಂಬರ್ ೧೧ರಂದು ಎನ್‌ಎನ್‌ಸಿ ಮತ್ತು ಎನ್‌ಎಫ್ ಜಿಯ ಒಂದು ಬಣದ ನಾಯಕರು ಸರಕಾರದ ಜತೆ ಒಪ್ಪಂದಕ್ಕೆ ಸಹಿಹಾಕಿದರು.

ಆದರೆ ಇದೇ ವೇಳೆ, ಚೀನಾದಲ್ಲಿದ್ದ ತುಯಿನ್ ಗಲೆಂಗ್ ಮುಯಿವಾ ನೇತೃತ್ವದ ೧೪೦ ಸದಸ್ಯರು ಇದನ್ನು ವಿರೋಧಿಸಿದರು. ಎನ್‌ಎಸ್‌ಸಿಎನ್ ಸಂಘಟನೆ ಇಬ್ಭಾಗವಾದ ಬೆನ್ನಲ್ಲೇ ಹೊಸ ಸಂಘಟನೆ ರಚಿಸಿದ ಮುಯಿವಾ ಮತ್ತಿತರ ನಾಯಕರು ಸೇನಾ ಕಾರ್ಯಾಚರಣೆ ಎದುರಿಸಲಾಗದೆ ೧೯೯೦ರ ದಶಕದ
ಆದಿಭಾಗದಲ್ಲಿ ಥಾಯ್ಲೆಂಡ್‌ಗೆ ಪಲಾಯನಗೈದಿದ್ದರು. ೯೦ರ ದಶಕದ ಮಧ್ಯಭಾಗದಲ್ಲಿ ನಾಗಾಲ್ಯಾಂಡ್ ಗವರ್ನರ್ ಎಂ. ಎಂ.ಥಾಮಸ್ ಮೊದಲ ಬಾರಿಗೆ ಶಾಂತಿ ಸಂಧಾನ ನಡೆಸುವುದಕ್ಕೆ ಈ ನಾಯಕರಿಗೆ ವೇದಿಕೆ ಒದಗಿಸಿದ್ದರು. ಮುಯಿವಾ ಮತ್ತು ಸಂಗಡಿಗರಿಂದ ಅದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿತು.

ಪರಿಣಾಮ ೩-೪ ವರ್ಷದ ಅವಧಿಯಲ್ಲಿ ೮೦ ಸುತ್ತು ಮಾತುಕತೆ ನಡೆದು, ಕೊನೆಗೆ ೧೯೯೭ರ ಜುಲೈ ೨೫ರಂದು ಕೇಂದ್ರ ಸರಕಾರದೊಂದಿಗೆ ಶಾಂತಿ ಒಪ್ಪಂದಕ್ಕೆ ಎನ್‌ಎಸ್‌ಸಿಎನ್ ಮುಖಂಡರು ಸಹಿಹಾಕಿದರು. ಇದು ೨೦೧೫ರ ಆಗಸ್ಟ್ ೧ರಿಂದ ಜಾರಿಗೆ ಬಂತು. ಅದಾಗಿಯೂ, ಕಾಲಾನಂತರದಲ್ಲಿ ಈ
ಒಪ್ಪಂದ ಅನೂರ್ಜಿತಗೊಂಡು ಬಂಡುಕೋರರ ಚಟುವಟಿಕೆ ಮತ್ತೆ ಶುರುವಾಯಿತು. ೧೯೫೩ರ ಮಾರ್ಚ್ ೩೦ರಂದು ಅಂದಿನ ಪ್ರಧಾನಿ ನೆಹರು ನಾಗಲ್ಯಾಂಡ್ ರಾಜಧಾನಿ ಕೊಹಿಮಾಗೆ ಭೇಟಿಯಿತ್ತಾಗ, ೫೦೦೦ಕ್ಕೂ ಹೆಚ್ಚು ನಾಗಾಜನರು ಅವರ ಸ್ವಾಗತಕ್ಕೆ ಸೇರಿ, ಸಾರ್ವಭೌಮ ನಾಗಾಲ್ಯಾಂಡ್ ಬೇಡಿಕೆಯಿರುವ ಮನವಿ ಪತ್ರವನ್ನು ಅವರಿಗೆ ಸಲ್ಲಿಸಿದ್ದರು. ಆದರೆ ಆ ಬೇಡಿಕೆಯನ್ನು ನೆಹರು ತಿರಸ್ಕರಿಸಿದಾಗ ಸಿಟ್ಟಿಗೆದ್ದ ಅಷ್ಟೂ ಜನರು ನೆಹರುರಿಗೆ
ಬೆನ್ನುತೋರಿ ಅವಮಾನಿಸಿ ಹಿಂದೆ ಕಳಿಸಿದ್ದರು.

ಕೊಹಿಮಾಗೆ ನೆಹರು ಆದಿಯಾಗಿ ಹಲವರು ಭೇಟಿಯಿತ್ತಿದ್ದಾರೆ. ಆದರೆ ಜನ ಸ್ಮರಿಸುವುದು ೨೦೦೩ ಅಕ್ಟೋಬರ್ ೨೮ರ, ಅಟಲ್ ಬಿಹಾರಿ ವಾಜಪೇಯಿ ಯವರ ಭೇಟಿ ಮತ್ತು ಅವರ ಅವಿಸ್ಮರಣೀಯ ಭಾಷಣವನ್ನು ಮಾತ್ರ. ವಾಜಪೇಯಿ ಹಾದಿಯಲ್ಲೇ ಸಾಗಿದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ, ಕರ್ನಾಟಕ ಮೂಲದ ಪದ್ಮನಾಭ ಬಾಲಕೃಷ್ಣ ಆಚಾರ್ಯ ಅವರನ್ನು ನಾಗಾಲ್ಯಾಂಡ್‌ನ ರಾಜ್ಯಪಾಲರಾಗಿ ನೇಮಿಸಿತು. ಈಶಾನ್ಯ ರಾಜ್ಯಗಳಲ್ಲಿ ಆರೆಸ್ಸೆಸ್ ಪ್ರಚಾರಕರಾಗಿ ಕಾರ್ಯನಿರ್ವಹಿಸಿದ ಅನುಭವಿಯಾದ ಇವರು ಬಂಡುಕೋರರ ಚಟುವಟಿಕೆಗಳ ಮಾಹಿತಿ ಅರಿತವರು. ಇವರ ಜತೆಗೂಡಿದ ಜಂಟಿ ಗುಪ್ತಚರ ಸಮಿತಿ ಅಧ್ಯಕ್ಷ ಆರ್.ಎನ್.ರವಿಯವರ ಪ್ರಯತ್ನದಿಂದಾಗಿ ಎನ್‌ಎಸ್‌ಸಿಎನ್ ಸಂಘಟನೆಯ ನಾಯಕರ ಜತೆ ಮತ್ತೆ ಸಂಧಾನ ಸಾಧಿಸುವುದು ಸಾಧ್ಯವಾಯಿತು. ಈ ಎಲ್ಲಾ ಸಂಘಟಿತ ಯತ್ನಗಳ -ಲವಾಗಿ ನಾಗಾಗಳ ಜತೆಗಿನ ಐತಿಹಾಸಿಕ ಒಪ್ಪಂದ ಕೈಗೂಡಿತು.

ಭಾರತದ ಅವಿಭಾಜ್ಯ ಅಂಗವಾಗಿರುವ ಈಶಾನ್ಯ ರಾಜ್ಯಗಳು ಮುಂಬರುವ ದಿನಗಳಲ್ಲಿ ಆಗ್ನೇಯ ಏಷ್ಯಾ ರಾಷ್ಟ್ರಗಳಿಗೆ ರಹದಾರಿ ನಿರ್ಮಿಸಲು ಸಹಕಾರಿ ಯಾಗಿವೆ. ಆದರೆ ಹೆಚ್ಚಾಗಿರುವ ಬಂಡುಕೋರರ ಉಪಟಳವು ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಮಾರಕವಾಗಿದೆ. ಇದನ್ನು ಗಮನದಲ್ಲಿಟ್ಟು ಕೊಂಡು ಕೇಂದ್ರ ಸರಕಾರವು ಈ ಭಾಗದ ಹಲವು ಬಂಡುಕೋರ ಗುಂಪುಗಳೊಂದಿಗೆ ಮಾತುಕತೆ ನಡೆಸಿ ಶಾಂತಿ ಒಪ್ಪಂದಕ್ಕೆ ಕರೆತರುವ ಮೂಲಕ ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎನ್ನಲಡ್ಡಿಯಿಲ್ಲ.

ಹೀಗೆಂದಿದ್ದರು ಅಟಲ್‌ಜೀ..
೨೦೦೩ರಲ್ಲಿ ನಾಗಾಲ್ಯಾಂಡ್‌ನ ಕೊಹಿಮಾಗೆ ಭೇಟಿಯಿತ್ತ ವಾಜಪೇಯಿಯವರು ನಾಗಾ ಜನರನ್ನುದ್ದೇಶಿಸಿ ಮಾತಾಡಿದ ಪರಿಯಿದು: ‘ನನ್ನ ಸೋದರ ಸೋದರಿಯರೇ, ನಾಗಾಲ್ಯಾಂಡ್‌ನ ಈ ಮಣ್ಣಿನಲ್ಲಿ ನಿಮ್ಮ ನಡುವಿನ ಈ ಉಪಸ್ಥಿತಿ ನನಗೆ ಬಹಳ ಖುಷಿ ಕೊಟ್ಟಿದೆ. ನಾಗಾಗಳ ವಿಶಿಷ್ಟ ಇತಿಹಾಸದಲ್ಲಿ ಎನ್‌ಎಸ್‌ಸಿಎನ್ ವಿಶೇಷವಾಗಿ ಸ್ಮರಿಸಲ್ಪಡುತ್ತದೆ. ಸ್ವಾತಂತ್ರ್ಯ ಹೋರಾಟದ ವಿಷಯಕ್ಕೆ ಬಂದರೆ, ರಾಣಿ ಗಾಯ್ಡಿನ್, ಜುಡುನೊಂಗ್ ಮತ್ತಿತರರು
ಮುಂಚೂಣಿಯಲ್ಲಿ ಕಾಣಿಸುತ್ತಾರೆ. ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೇನೆಯಲ್ಲಿದ್ದ ನಾಗಾಲ್ಯಾಂಡ್ ಜನರ ಪರಾಕ್ರಮ ಅವಿಸ್ಮರಣೀಯ’.

(ಲೇಖಕರು ಹವ್ಯಾಸಿ ಬರಹಗಾರರು)