ವಿಶ್ಲೇಷಣೆ
ಶಶಿ ತರೂರ್
ಕಾಂಗ್ರೆಸ್ ಪಕ್ಷ ಇತಿಹಾಸಕ್ಕೆ ಸೇರುತ್ತಿದೆ ಎಂದು ಕೆಲವರು ವ್ಯಾಖ್ಯಾನಿಸುತ್ತಿದ್ದಾರೆ. ಅದನ್ನು ಅಲ್ಲಗಳೆಯುವುದಕ್ಕಾಗಲೀ ಅದರ ವಿರುದ್ಧ ವಾದಿಸುವು ದಕ್ಕಾಗಲೀ ನಾನು ಹೋಗುವುದಿಲ್ಲ. ಆದರೆ ಇಲ್ಲೊಂದು ಸಂಗತಿಯನ್ನು ನಾವು ಅರ್ಥಮಾಡಿಕೊಳ್ಳಬೇಕು. ಆ ಸತ್ಯ ಏನೆಂದರೆ, ಕಾಂಗ್ರೆಸ್ ಪಕ್ಷವಿಲ್ಲದೆ ಭಾರತ ಮುನ್ನಡೆಯಲು ಸಾಧ್ಯವಿಲ್ಲ.
ಇತ್ತೀಚಿನ ವಿಧಾನಸಭಾ ಚುನಾವಣೆಗಳ ಸೋಲಿನ ಬಳಿಕ ನಡೆಯುತ್ತಿರುವ ಪೋಸ್ಟ್‌ಮಾರ್ಟಂನಲ್ಲಿ ಕಾಂಗ್ರೆಸ್ ಪಕ್ಷದ ಕತೆ ಮುಗಿಯಿತು ಎಂಬ ವಿಶ್ಲೇಷಣೆ ಗಳೇ ಕೇಳಿ ಬರುತ್ತಿವೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹಿಂದಿ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಅಡ್ಡಡ್ಡ ಮಲಗಲಿದೆ ಎಂದು ವ್ಯಾಖ್ಯಾನಿಸ ಲಾಗುತ್ತಿದೆ.
೨೦೧೪ರ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಅನುಭವಿಸಿದ ಐತಿಹಾಸಿಕ ಸೋಲು, ನಂತರ ೨೦೧೯ರ ಲೋಕಸಭೆ ಚುನಾವಣೆಯಲ್ಲಿ ಪುನಃ ಸೋಲಿನ
ಆಘಾತ ಹಾಗೂ ಈಗ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಉಂಟಾದ ಸೋಲು ಈ ಎಲ್ಲವುಗಳನ್ನು ನೋಡಿ ರಾಜಕೀಯ ವೀಕ್ಷಕ ವಿವರಣೆ ಕಾರರು ದೇಶದ ಗ್ರ್ಯಾಂಡ್ ಓಲ್ಡ್ ಪಾರ್ಟಿ ಯೀಗ ತನ್ನ ಇತಿಹಾದಲ್ಲೇ ಅತಿದೊಡ್ಡ ಬಿಕ್ಕಟ್ಟನ್ನು ಅನುಭವಿಸುತ್ತಿದೆ ಎಂದು ಷರಾ ಬರೆಯುತ್ತಿದ್ದಾರೆ.
೨೦೧೪ರ ಲೋಕಸಭೆ ಚುನಾವಣೆಯಲ್ಲಿ ‘ಕಾಂಗ್ರೆಸ್ -ಮುಕ್ತ ಭಾರತ’ ಎಂಬುದು ನರೇಂದ್ರ ಮೋದಿಯವರ ಘೋಷಣೆಗಳಲ್ಲಿ ಒಂದಾಗಿತ್ತು. ೨೦೨೪ರಲ್ಲಿ ಆ ಘೋಷಣೆಯನ್ನು ಅವರು ಸಂಪೂರ್ಣ ಜಾರಿಗೆ ತರುತ್ತಾರಾ? ನಾನು ಹೇಳುತ್ತೇನೆ ಕೇಳಿ: ಅಷ್ಟು ಬೇಗ ಸಾಧ್ಯವಿಲ್ಲ ಫ್ರೆಂಡ್ಸ್! ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೇನೆ ಎಂಬ ಕಾರಣಕ್ಕೆ ಇದನ್ನು ಹೇಳುತ್ತಿಲ್ಲ. ನಾವು ಸೋತ ನಾಲ್ಕು ರಾಜ್ಯಗಳ ಫಲಿತಾಂಶದಲ್ಲೇ ಈ ಸಂದೇಶವಿದೆ. ಡಿಸೆಂಬರ್ ೨೮ಕ್ಕೆ ಕಾಂಗ್ರೆಸ್ ಪಕ್ಷ ತನ್ನ ೧೩೯ನೇ ಸಂಸ್ಥಾಪನಾ ದಿನ ಆಚರಿಸಿಕೊಳ್ಳುತ್ತಿದೆ. ಒಂದು ಕಾಲದಲ್ಲಿ ದೇಶ ಆಳುವುದಕ್ಕೆ ಜನರ ಸಹಜ ಆಯ್ಕೆಯಾಗಿದ್ದ ಅಮೆರಿಕದ
ವಿಗ್ಸ್ ಪಕ್ಷ ಅಥವಾ ಬ್ರಿಟನ್‌ನ ಲಿಬರಲ್‌ಗಳು ಇಂದು ನಾಮಾವಶೇಷಗೊಂಡಿದ್ದಾರೆ ಎಂಬುದು ನನಗೆ ಗೊತ್ತು. ಆದರೆ ಕಾಂಗ್ರೆಸ್‌ನ ಕತೆಯೇ ಬೇರೆ.
ನಮ್ಮದೇ ದೇಶದ ಪ್ರಜಾಪ್ರಭುತ್ವದ ಇತಿಹಾಸವನ್ನು ಕೆದಕಿ ನೋಡಿದರೆ ಇಲ್ಲಿ ಕೂಡ ಒಂದು ಕಾಲದಲ್ಲಿ ಗಮನಾರ್ಹ ಸ್ಥಾನಗಳಲ್ಲಿದ್ದ ರಾಜಕೀಯ ಪಕ್ಷ
ಗಳು ಕ್ರಮೇಣ ನಾಮಾವಶೇಷಗೊಂಡಿರುವುದು ಕಾಣಿಸುತ್ತದೆ. ರಾಜಾಜಿಯವರ ಸ್ವತಂತ್ರ ಪಾರ್ಟಿ ಈಗ ಎಲ್ಲಿದೆ? ಇದು ಒಂದು ಸಮಯದಲ್ಲಿ ದೇಶದ
ಅತಿದೊಡ್ಡ ವಿರೋಧ ಪಕ್ಷವಾಗಿತ್ತು. ೨೦೧೪ರಲ್ಲಿ ಕಾಂಗ್ರೆಸ್‌ಗೆ ಎಷ್ಟು ಸೀಟು ಬಂದಿತ್ತೋ ಅಷ್ಟೇ ಸೀಟು ೧೯೬೭ರ ಚುನಾವಣೆಯಲ್ಲಿ ಸ್ವತಂತ್ರ ಪಕ್ಷಕ್ಕೆ ಸಿಕ್ಕಿತ್ತು. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಕೂಡ ಈಗ ಅವಸಾನದ ಅಂಚಿನಲ್ಲಿದೆ. ೧೯೭೭ರಿಂದ ೧೯೭೯ರ ವರೆಗೆ ಭಾರತವನ್ನು ಆಳಿದ ಜನತಾ ಪಾರ್ಟಿಯ ಹೆಸರೇ ಈಗ ಕೇಳಿಸುವುದಿಲ್ಲ.
ಕಾಂಗ್ರೆಸ್ ಪಕ್ಷ ಹೀಗೆ ಜನತಾ ಪಾರ್ಟಿಯಂತೆ ಕಣ್ಮರೆಯಾಗುವುದಿಲ್ಲ ಅಥವಾ ಸ್ವತಂತ್ರ ಪಾರ್ಟಿಯಂತೆ ಬೇರೆ ಪಕ್ಷದಲ್ಲಿ ವಿಲೀನಗೊಳ್ಳುವುದಿಲ್ಲ.
ಆದರೆ ಈಗಾಗಲೇ ಅನೇಕ ರಾಜ್ಯಗಳಲ್ಲಿ ಇದು ಮೂರು ಅಥವಾ ನಾಲ್ಕನೆಯ ಸ್ಥಾನಕ್ಕೆ ಕುಸಿದಿದೆ. ಹಿಂದೊಮ್ಮೆ ಆ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ
ಅಧಿಕಾರದಲ್ಲಿತ್ತು ಅಥವಾ ಅಧಿಕೃತ ವಿರೋಧ ಪಕ್ಷವಾಗಿತ್ತು. ಈ ಕಾರಣಕ್ಕಾಗಿಯೇ ಕೆಲವರು ಕಾಂಗ್ರೆಸ್ ಪಕ್ಷ ಇತಿಹಾಸಕ್ಕೆ ಸೇರುತ್ತಿದೆ ಎಂದು ವ್ಯಾಖ್ಯಾನ ಮಾಡುತ್ತಿದ್ದಾರೆ. ಅದನ್ನು ಅಲ್ಲಗಳೆಯುವುದಕ್ಕಾಗಲೀ ಅಥವಾ ಅದರ ವಿರುದ್ಧ ವಾದ ಮಾಡುವುದಕ್ಕಾಗಲೀ ನಾನು ಹೋಗುವುದಿಲ್ಲ.
ಆದರೆ ಇಲ್ಲೊಂದು ಸಂಗತಿಯನ್ನು ನಾವು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಆ ಸತ್ಯ ಏನೆಂದರೆ, ಕಾಂಗ್ರೆಸ್ ಪಕ್ಷವಿಲ್ಲದೆ ಭಾರತ ಮುನ್ನಡೆ
ಯಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ಯಾವ ಸಿದ್ಧಾಂತಕ್ಕಾಗಿ ನಿಂತಿದೆಯೋ, ಯಾವ ಸ್ಥಾನವನ್ನು ದೇಶದ ಜನರ ಮನಸ್ಸಿನಲ್ಲಿ ಗಳಿಸಿದೆಯೋ ಅದು ಈ
ದೇಶ ಉಳಿಯಲು ಹಾಗೂ ಅರಳಲು ಬಹಳ ಮುಖ್ಯವಾಗಿದೆ.
ಕಾಂಗ್ರೆಸ್ ಪಕ್ಷ ಈ ದೇಶದ ಸ್ವಾತಂತ್ರ್ಯ ಹೋರಾಟದ ನಾಯಕತ್ವ ವಹಿಸಿಕೊಂಡಿತ್ತು ಅಥವಾ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿತು ಎಂಬ ಕಾರಣಕ್ಕಾಗಿ ಈ ಮಾತು ಹೇಳುತ್ತಿಲ್ಲ. ಅಥವಾ, ೨೦೧೯ರಲ್ಲಿ ಸೋತರೂ ೧೨ ಕೋಟಿ ವೋಟು ಗಳಿಸಿದೆ ಎಂಬ ಕಾರಣಕ್ಕೆ ನಾನು ಹೀಗೆ ಹೇಳುತ್ತಿಲ್ಲ. ಸಂಸತ್ತಿನಲ್ಲಿರುವ ಕಾಂಗ್ರೆಸ್ ಸಂಸದರ ಸಂಖ್ಯೆ ಕಡಿಮೆಯೇ ಇರಬಹುದು, ಆದರೆ ಸೀಟಿನ ಅನುಪಾತಕ್ಕಿಂತ ಹೆಚ್ಚು ಜನಬೆಂಬಲ ಪಕ್ಷಕ್ಕೆ ವೋಟಿನ ರೂಪದಲ್ಲಿದೆ. ಈ ಕಾರಣಕ್ಕಾಗಿಯೂ ಕಾಂಗ್ರೆಸ್ ಇಲ್ಲದೆ ಭಾರತವಿಲ್ಲ ಎಂದು ನಾನು ಹೇಳುತ್ತಿಲ್ಲ. ಬದಲಿಗೆ, ಭಾರತಕ್ಕೆ ಕಾಂಗ್ರೆಸ್ ಪಕ್ಷ ಬೇಕೇಬೇಕು ಎಂದು ಹೇಳುತ್ತಿರು
ವುದು ಏಕೆಂದರೆ ಈ ದೇಶವನ್ನು ಸಮಗ್ರವಾಗಿ ನೋಡಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯವಿದೆ.
ಭಾರತವು ಎಲ್ಲರಿಗೂ ಸೇರಿದ್ದು ಎಂಬ ದೃಷ್ಟಿಕೋನದೊಂದಿಗೆ ರಾಜಕಾರಣ ಮಾಡಲು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸಾಧ್ಯವಿದೆ. ಎಲ್ಲ ಜಾತಿ, ಧರ್ಮ, ಪಂಥದ ಜನರೂ ಈ ದೇಶದ ಇತಿಹಾಸ ಹಾಗೂ ನಾಗರಿಕತೆಗೆ ಕೊಡುಗೆ ನೀಡಿದ್ದಾರೆಂದು ಗುರುತಿಸಲು ಈ ಪಕ್ಷಕ್ಕೆ ಮಾತ್ರ ಸಾಧ್ಯವಿದೆ. ಭಾರತದ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವ ಹಾಗೂ ಪ್ರೋತ್ಸಾಹಿಸುವ ವಿಶೇಷ ಜವಾಬ್ದಾರಿ ಬಹುಸಂಖ್ಯಾತರ ಮೇಲಿದೆ ಎಂಬ ಸಿದ್ಧಾಂತವನ್ನು ಪಾಲಿಸಲು ಈ ಪಕ್ಷಕ್ಕೆ ಮಾತ್ರ ಸಾಧ್ಯವಿದೆ.
ಕಾಂಗ್ರೆಸ್ ಎಂಬುದು ಕೇವಲ ಒಂದು ರಾಜಕೀಯ ಪಕ್ಷವಲ್ಲ. ಇದು ನಮ್ಮ ರಾಷ್ಟ್ರೀಯ ಚಳವಳಿಯ ಮೂಸೆಯಲ್ಲಿ ರೂಪುಗೊಂಡಂಥ ಒಂದು ಸಿದ್ಧಾಂತ. ಸರಕಾರದ ನೀತಿಗಳಲ್ಲೂ, ವೈಯಕ್ತಿಕ ನಿಲುವಿನಲ್ಲೂ ಎಲ್ಲ ಧರ್ಮ, ಜಾತಿ, ಸಮುದಾಯ ಹಾಗೂ ಭಾಷೆಗಳು ಸೇರಿ ಭಾರತ ರೂಪುಗೊಂಡಿದೆ ಎಂಬ ಸಿದ್ಧಾಂತವನ್ನು ಕಾಂಗ್ರೆಸ್ ಪಕ್ಷ ಸದಾ ಪಾಲಿಸುತ್ತಾ ಬಂದಿದೆ. ಈ ಕಾರಣಕ್ಕಾಗಿ ಸಾಕಷ್ಟು ಬಾರಿ ದೊಡ್ಡ ದೊಡ್ಡ ಆಘಾತ ಅನುಭವಿಸಿದ ಮೇಲೂ ಕಾಂಗ್ರೆಸ್ ಪಕ್ಷ ಮರಳಿ ಪುಟಿದೆದ್ದಿದೆ. ೧೯೬೯ ಹಾಗೂ ೧೯೭೭ರಲ್ಲಿ ಪಕ್ಷ ವಿಭಜನೆಗೊಂಡಿತು. ೧೯೮೪ರಲ್ಲಿ ಇಂದಿರಾ ಗಾಂಧಿಯವರ, ೧೯೯೧ರಲ್ಲಿ
ರಾಜೀವ್ ಗಾಂಧಿಯವರ ಹತ್ಯೆಯಾದವು. ೧೯೯೬ ರಿಂದ ೧೯೯೮ರ ಅವಽಯಲ್ಲಿ ಸೀತಾರಾಂ ಕೇಸರಿ ಕೈಲಿ ಪಕ್ಷ ನಲುಗಿತು. ೧೯೯೬ರಿಂದ ೨೦೦೪ರ ನಡುವೆ
ಕೇಂದ್ರದಲ್ಲಿ ಸುದೀರ್ಘ ಅವಧಿಯವರೆಗೆ ಅಧಿಕಾರವಿಲ್ಲದೆ ಪಕ್ಷ ಸಂಕಷ್ಟದಲ್ಲಿತ್ತು.
೨೦೨೪ರಲ್ಲಿ ಲೋಕಸಭೆ ಚುನಾವಣೆಗೆ ಹೋಗುವ ಹೊತ್ತಿಗೆ ಇದಕ್ಕಿಂತ ದೀರ್ಘ ಅವಧಿಯನ್ನು ಪಕ್ಷ ಅಧಿಕಾರವಿಲ್ಲದೆ ಕಳೆದಿರುತ್ತದೆ ಎಂಬುದು ಕೂಡ ನಿಜ. ಆದರೆ ದೇಶದೆಲ್ಲೆಡೆ ಬಿಜೆಪಿಗೆ ಪರ್ಯಾಯವಾಗಿ ನಿಲ್ಲಬಲ್ಲ ಏಕೈಕ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಎಂಬುದನ್ನು ನಾವು ಮರೆಯಬಾರದು. ಈಗ ಇದು
ಕೇವಲ ೩ ರಾಜ್ಯಗಳಲ್ಲಿ ಅಧಿಕಾರದಲ್ಲಿರಬಹುದು. ಅಥವಾ ಇನ್ನೆರಡು ರಾಜ್ಯಗಳಲ್ಲಿ ಮೈತ್ರಿ ಸರಕಾರ ರಚಿಸಿರಬಹುದು. ಆದರೆ ಸಮಗ್ರವಾಗಿ ನೋಡಿದರೆ
ಹಿಮಾಚಲದಿಂದ ಹಿಡಿದು ತೆಲಂಗಾಣದವರೆಗೆ ಪಕ್ಷ ಹರಡಿಕೊಂಡಿದೆ. ರಾಜಸ್ಥಾನದಿಂದ ಹಿಡಿದು ಅಸ್ಸಾಂವರೆಗೆ ಹಾಗೂ ಕಾಶ್ಮೀರದಿಂದ ಹಿಡಿದು ಕೇರಳದ ವರೆಗೆ ಈಗಲೂ ಸಮರ್ಥ ಪರ್ಯಾಯ ಪಕ್ಷವಾಗಿ ಗುರುತಿಸಿಕೊಳ್ಳುವ ಶಕ್ತಿಯನ್ನು ಕಾಂಗ್ರೆಸ್ ಹೊಂದಿದೆ.
ಆಮ್ ಆದ್ಮಿ ಪಾರ್ಟಿ ಅಥವಾ ತೃಣಮೂಲ ಕಾಂಗ್ರೆಸ್‌ನಂಥ ಸಣ್ಣ ಪ್ರಾದೇಶಿಕ ಪಕ್ಷಗಳಿಗೆ ತಮ್ಮ ಹಿಡಿತವಿರುವ ರಾಜ್ಯದ ಹೊರಗೆ ಸ್ಪರ್ಧಿಸುವುದು ಕಷ್ಟ. ಆದರೆ ‘ಇಂಡಿಯ’ ಮೈತ್ರಿಕೂಟವು ಕಾಂಗ್ರೆಸ್ ಪಕ್ಷಕ್ಕಿರುವ ರಾಷ್ಟ್ರಮಟ್ಟದ ಹಿಡಿತವನ್ನು ಅವಲಂಬಿಸಿ ಎಲ್ಲೆಡೆ ಹೋರಾಡಲು ಸಾಧ್ಯವಿದೆ. ಒಂದು ವೇಳೆ ಸೋತರೂ ಮತಗಳಿಕೆಯ ಪ್ರಮಾಣ ದಲ್ಲಿರುವ ವ್ಯತ್ಯಾಸವು ಮುಂದೊಂದು ದಿನ ತುಂಬಿ ಕೊಳ್ಳುವಂತಿರುತ್ತದೆ. ಕಾಂಗ್ರೆಸ್‌ಗೆ ರಾಷ್ಟ್ರೀಯ ಮಟ್ಟದಲ್ಲಿ ರುವ ಹೆಜ್ಜೆಗುರುತಿನಿಂದಾಗಿ ಲೋಕಸಭಾ ಚುನಾವಣೆಯಲ್ಲಿ ಕೇವಲ ಶೇ.೫ರಷ್ಟು ಮತಗಳು ಹೆಚ್ಚುವರಿಯಾಗಿ ಪಕ್ಷಕ್ಕೆ ಹರಿದುಬಂದರೂ ಅದರಿಂದ ೬೦-೭೦ ಹೆಚ್ಚುವರಿ ಸೀಟುಗಳು ಲಭಿಸುತ್ತವೆ.
ಅದರ ಜತೆಗೆ ‘ಇಂಡಿಯ’ ಮೈತ್ರಿಕೂಟದ ಪಕ್ಷಗಳೂ ತಮ್ಮ ತಮ್ಮ ರಾಜ್ಯಗಳಲ್ಲಿ ಗೆದ್ದರೆ ಆಗ ಮೋದಿ ಸರಕಾರದ ಅಸ್ತಿತ್ವಕ್ಕೇ ಸಂಚಕಾರ ಬರುತ್ತದೆ.
ಆದರೂ ಕಾಂಗ್ರೆಸ್ ಬಗ್ಗೆ ಹೊರಗೆ ರವಾನೆಯಾಗುವ ಸಂದೇಶಗಳೇ ಈಗಲೂ ಈ ಪಕ್ಷಕ್ಕೊಂದು ಸವಾಲು. ಹಿಂದುತ್ವದ ವಿರುದ್ಧ ಮಾತನಾಡಿದರೆ
ಅಲ್ಪಸಂಖ್ಯಾತರ ಓಲೈಕೆ ಎಂಬಂತೆ ಬಿಂಬಿಸಲಾಗು ತ್ತದೆ. ಹಿಂದುತ್ವದ ಪರವಾಗಿ ಮಾತನಾಡಿದರೆ ಮೃದು-ಹಿಂದುತ್ವದ ನೀತಿ ಅನುಸರಿಸುತ್ತಿದ್ದಾರೆ
ಎನ್ನಲಾಗುತ್ತದೆ. ಹಿಂದುತ್ವದ ಪರವಾಗಿ ಮತ ಹಾಕುವವರಿಗೆ ಮೃದು-ಹಿಂದುತ್ವದ ಪ್ರತಿಪಾದಕರು ಯಾಕಾದರೂ ಬೇಕು? ಮೋದಿ ಸರಕಾರದ ವಿರುದ್ಧ
ಮಾತನಾಡಿದರೆ ಋಣಾತ್ಮಕತೆಯನ್ನು ಹರಡುತ್ತಿದ್ದಾರೆಂದು ಬ್ರ್ಯಾಂಡ್ ಮಾಡುತ್ತಾರೆ. ಸುಮ್ಮನಿದ್ದರೆ ಇವರು ದುರ್ಬಲರಾಗಿಬಿಟ್ಟಿದ್ದಾರೆ ಎನ್ನುತ್ತಾರೆ.
ಬಿಜೆಪಿಯ ಬಹುಸಂಖ್ಯಾತ ಧೋರಣೆಯನ್ನು ಹಾಗೂ ಸರ್ವಾಽಕಾರಿ ಮನೋಭಾವದ ರಾಷ್ಟ್ರೀಯ ವಾದವನ್ನು ಟೀಕಿಸಿದರೆ ರಾಷ್ಟ್ರವಿರೋಧಿಗಳು ಎನ್ನು
ತ್ತಾರೆ. ಹಾಗೆ ಮಾಡದೆ ಇದ್ದರೆ ರಾಷ್ಟ್ರೀಯವಾದಿ ಜಾಗವನ್ನು ಬಿಜೆಪಿಗೆ ಬಿಟ್ಟುಕೊಟ್ಟಂತಾಗುತ್ತದೆ. ಹೀಗಾಗಿ ಕಾಂಗ್ರೆಸ್ ಪಕ್ಷ ಏನೇ ಮಾಡಿದರೂ ಅದನ್ನು
ದೂರುವುದು ಕೆಲವರಿಗೆ ಅಭ್ಯಾಸವೇ ಆಗಿಬಿಟ್ಟಿದೆ. ಕಾಂಗ್ರೆಸ್‌ಗೆ ಹೋಲಿಸಿದರೆ ಬಿಜೆಪಿಗಿರುವ ನಿಜವಾದ ಅನುಕೂಲವೆಂದರೆ ‘ಎಲೆಕ್ಷನ್ ಮ್ಯಾನೇಜ್
ಮೆಂಟ್’ ಕೌಶಲ. ಬಿಜೆಪಿಯ ಬಳಿಯಿರುವ ಹಣ, ಪ್ರಚಾರ ತಂತ್ರಗಳು, ಸಾರ್ವಜನಿಕ ಸಂಪರ್ಕ (ಪಿ.ಆರ್.), ಸಂಘಟನಾ ಶಕ್ತಿ (ಆರ್‌ಎಸ್‌ಎಸ್‌ನಿಂದ
ಬಂದಿರುವುದು) ಹಾಗೂ ಇವೆಲ್ಲವನ್ನೂ ಮತದಾನದ ದಿನದಂದು ಮತವಾಗಿ ಪರಿವರ್ತನೆ ಮಾಡಿಕೊಳ್ಳುವ ಚಾಕಚಕ್ಯತೆ ಇವು ಬಿಜೆಪಿಗಿರುವ ಪ್ಲಸ್
ಪಾಯಿಂಟ್‌ಗಳು.
೨೦೨೪ರ ಚುನಾವಣೆ ಭಾರತದ ಆತ್ಮವನ್ನು ಉಳಿಸಲು ನಡೆಸುವ ಹೋರಾಟವೆಂದು ಬಿಂಬಿಸುವ ಮೂಲಕ ಬಿಜೆಪಿ ವಿರುದ್ಧ ನಾವು ಹಲ್ಲುಕಚ್ಚಿ ಹೋರಾಡಬೇಕಿದೆ. ಹತ್ತು ವರ್ಷಗಳ ಬಿಜೆಪಿ ಆಡಳಿತ ದೇಶಕ್ಕೆ ಸಾಕಷ್ಟು ಹಾನಿ ಮಾಡಿದೆ. ಕೇಂದ್ರ ಸರಕಾರದ ನೀತಿಗಳು ಆರ್ಥಿಕತೆಯನ್ನು ಹಾಳು ಗೆಡವಿವೆ. ಹಣದುಬ್ಬರ ನಿಯಂತ್ರಣ ಕಳೆದುಕೊಂಡಿದೆ. ಇತಿಹಾಸದಲ್ಲೇ ಈಗ ಭಾರತ ಅತ್ಯಧಿಕ ನಿರುದ್ಯೋಗದಿಂದ ಬಳಲುತ್ತಿದೆ.
ಅಲ್ಪಸಂಖ್ಯಾತರನ್ನು, ಅದರಲ್ಲೂ ಮುಸ್ಲಿಮರನ್ನು ಹೊರಗಿನವರು ಎಂಬಂತೆ ಬಿಂಬಿಸುವ ಮೂಲಕ ಸಾಮಾಜಿಕ ಸಾಮರಸ್ಯವನ್ನು ಹಾಳುಗೆಡ
ವಲಾಗುತ್ತಿದೆ. ಸರಕಾರಿ ಸಂಸ್ಥೆಗಳು ಈ ಹಿಂದೆ ಅನುಭವಿಸುತ್ತಿದ್ದ ಸ್ವಾಯತ್ತತೆ ಹಾಗೂ ಸ್ವಾತಂತ್ರ್ಯವನ್ನು ಕಿತ್ತುಕೊಂಡು ಅವನ್ನು ಸ್ವಾರ್ಥಕ್ಕೆ ಹಾಗೂ
ಬೇರೆಯವರನ್ನು ಬೆದರಿಸುವುದಕ್ಕೆ ಬಳಸಿಕೊಳ್ಳಲಾಗುತ್ತಿದೆ. ಪರಿಸರಕ್ಕೆ ಮಾಡುತ್ತಿರುವ ಹಾನಿಯಂತೂ ಹೇಳತೀರದು. ದೊಡ್ಡ ದೊಡ್ಡ ನಗರಗಳಲ್ಲಿ ವಾಯುಮಾಲಿನ್ಯದಿಂದ ಉಸಿರಾಡುವುದೇ ಕಷ್ಟವಾಗುತ್ತಿದೆ.
ನಮ್ಮ ನದಿಗಳ ನೀರು ಈಗ ಕುಡಿಯಲಾಗದಷ್ಟು ಕಲುಷಿತಗೊಂಡಿವೆ. ಅವುಗಳಿಗೆ ತ್ಯಾಜ್ಯ ಹರಿಬಿಡುವವರಿಗೆ ಮುಕ್ತ ಸ್ವಾತಂತ್ರ್ಯ ನೀಡಲಾಗಿದೆ. ನೆರೆ
ಹೊರೆಯ ದೇಶಗಳೊಂದಿಗೆ ಸಂಬಂಧ ಕೆಡಿಸಿಕೊಳ್ಳಲಾಗಿದೆ. ಬಹಳ ವರ್ಷಗಳಿಂದ ನಮ್ಮ ಸ್ನೇಹಿತರಾಗಿದ್ದ ಕತಾರ್‌ನಿಂದ ಹಿಡಿದು ಅಮೆರಿಕದವರೆಗೆ ಬೇರೆ ಬೇರೆ ದೇಶಗಳಲ್ಲಿ ಭಾರತಕ್ಕೆ ವಿರುದ್ಧವಾದ ಬೆಳವಣಿಗೆಗಳು ನಡೆಯುತ್ತಿವೆ. ವ್ಯಾಂಕೋವರ್‌ನಿಂದ ಹಿಡಿದು ಗಲ್ವಾನ್‌ವರೆಗೆ ಭಾರತದ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ೨೦೦೪ರಲ್ಲಿ ವಾಜಪೇಯಿ ಸರಕಾರ ಇವು ಗಳ ಪೈಕಿ ಕೇವಲ ಒಂದು ಸಮಸ್ಯೆಯನ್ನು ಮಾತ್ರ ಎದುರಿಸುತ್ತಿತ್ತು- ಅದು ನಿರುದ್ಯೋಗ. ಆಗ ಚುನಾವಣೆಯಲ್ಲಿ ಬಿಜೆಪಿ ಸೋಲಲು ಅದೊಂದೇ ಸಮಸ್ಯೆ ಸಾಕಾಯಿತು. ಹೀಗಾಗಿ ಭವಿಷ್ಯ ಭರವಸೆದಾಯಕವಾಗಿದೆ.
ಕಾಂಗ್ರೆಸ್ ಕಷ್ಟದಲ್ಲಿದೆ ನಿಜ, ಆದರೆ ಔಟಾಗಿಲ್ಲ. ಭಾರತದ ಉಳಿವಿಗಾಗಿ ನಾವು ಮಿಸ್ಟರ್ ಮೋದಿಯ ವರ ‘ಕಾಂಗ್ರೆಸ್-ಮುಕ್ತ ಭಾರತ’ದ ಕನಸನ್ನು ಯಾವತ್ತೂ ನನಸಾಗಲು ಬಿಡುವುದಿಲ್ಲ.
(ಲೇಖಕರು ಸಂಸದರು)