Thursday, 24th October 2024

ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂಗೆ ಸಮನ್ಸ್‌ ಜಾರಿ

ಚೆನ್ನೈ: 263 ಚೀನೀ ಪ್ರಜೆಗಳಿಗೆ (2011) ವೀಸಾ ನೀಡಿಕೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಮನಿ ಲಾಂಡರಿಂಗ್ ತನಿಖೆಯ ಭಾಗವಾಗಿ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್‌ ಜಾರಿ ಮಾಡಿದೆ.

ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಮಂಗಳವಾರ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗದಿರಲು ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರು ಸಂಸತ್ತಿನಲ್ಲಿ ಅಧಿವೇಶನ ನಡೆಯುತ್ತಿರುವ ಕಾರಣ ಬರಲು ಆಗುವುದಿಲ್ಲ ಎಂದು ಹೇಳಿದ್ದಾರೆ.

ತಮಿಳುನಾಡಿನ ಶಿವಗಂಗಾ ಲೋಕಸಭಾ ಕ್ಷೇತ್ರದ ಸಂಸದರಾದ ಕಾರ್ತಿ ಅವರಿಗೆ ಇಡಿ ಈ ವಾರ ಇಲ್ಲಿನ ಕಚೇರಿಗೆ ಹಾಜರಾಗಲು ಮತ್ತು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ತನಿಖೆ ನಡೆಸುತ್ತಿರುವ ಪ್ರಕರಣದಲ್ಲಿ ಅವರ ಹೇಳಿಕೆ ದಾಖಲಿಸಲು ಸಮನ್ಸ್ ನೀಡಿದೆ. ಆದರೆ ಸಂಸತ್ ಅಧಿವೇಶನದಲ್ಲಿ ನಿರತರಾಗಿರುವುದಾಗಿ ಸಂಸದರು ಇಡಿಗೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

2022 ರ ಇಡಿ ಪ್ರಕರಣವು ಪಂಜಾಬ್‌ನಲ್ಲಿ ವಿದ್ಯುತ್ ಸ್ಥಾವರವನ್ನು ಸ್ಥಾಪಿಸುತ್ತಿರುವ ವೇದಾಂತ ಗ್ರೂಪ್ ಕಂಪನಿ ತಲ್ವಂಡಿ ಸಾಬೋ ಪವರ್ ಲಿಮಿಟೆಡ್‌ನ (ಟಿಎಸ್‌ಪಿಎಲ್) ಉನ್ನತ ಕಾರ್ಯನಿರ್ವಾಹಕರಿಂದ ಕಾರ್ತಿ ಮತ್ತು ಅವರ ನಿಕಟವರ್ತಿ ಎಸ್ ಭಾಸ್ಕರರಾಮನ್‌ಗೆ ಕಿಕ್‌ಬ್ಯಾಕ್‌ ಆಗಿ ರೂ 50 ಲಕ್ಷ ಪಾವತಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದೆ.

ನನ್ನ ಮೇಲೆ ಮೂರು ವರ್ಗದ ಪ್ರಕರಣಗಳಿವೆ. ಬೋಗಸ್, ಹೆಚ್ಚು ಬೋಗಸ್ ಮತ್ತು ಭಾರೀ ಬೋಗಸ್, ಇದು ವರ್ಗ ಮೂರು. ಅದನ್ನು ನನ್ನ ವಕೀಲರು ನೋಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಕಾರ್ತಿ ಅವರನ್ನು ವಿಚಾರಣೆಗೊಳಪಡಿಸಿದ್ದ ಸಿಬಿಐ ಕಳೆದ ವರ್ಷ ಚಿದಂಬರಂ ಕುಟುಂಬದ ನಿವೇಶನಗಳ ಮೇಲೆ ದಾಳಿ ನಡೆಸಿ ಭಾಸ್ಕರರಾಮನ್ ಅವರನ್ನು ಬಂಧಿಸಿತ್ತು.