ರಾಯಪುರ: ಛತ್ತೀಸಗಢದ ಮುಖ್ಯಮಂತ್ರಿಯಾಗಿ ವಿಷ್ಣುದೇವ್ ಸಾಯ್ ಅವರು ಗುರುವಾರ ಮೊದಲ ಕ್ಯಾಬಿನೆಟ್ ಸಭೆ ನಡೆಸಲಿದ್ದಾರೆ.
ಸಾಯ್ ಮಾತನಾಡಿ, ಇಂದು ಸಚಿವ ಸಂಪುಟ ಸಭೆ ನಡೆಯಲಿದೆ. ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳೊಂದಿಗೆ ಪರಿಚಯಾತ್ಮಕ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳಾದ ‘ಮೋದಿ ಕೀ ಗ್ಯಾರಂಟಿಗಳ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ಆದ್ಯತೆ ನೀಡಲಾಗುವುದು ಎಂದರು.
ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ನಂತರ, ಪಿಎಂ ಆವಾಸ್ ಯೋಜನೆಯ ಫಲಾನುಭವಿಗಳಿಗೆ 18 ಲಕ್ಷ ಮನೆಗಳನ್ನು ಮಂಜೂರು ಮಾಡುವುದು ರಾಜ್ಯದಲ್ಲಿ ನಾವು ಮಾಡಬೇಕಾಗಿರುವ ಮೊದಲ ಕೆಲಸ ಎಂದು ಸಾಯ್ ಹೇಳಿದ್ದರು.
ಛತ್ತೀಸಗಢದ ಮುಖ್ಯಮಂತ್ರಿಯಾಗಿ ಕುಂಕುರಿ ಶಾಸಕ ಮತ್ತು ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ವಿಷ್ಣುದೇವ್ ಸಾಯ್ ಅವರು ರಾಯಪುರ ದಲ್ಲಿ ನಿನ್ನೆ ಪ್ರಮಾಣ ವಚನ ಸ್ವೀಕರಿಸಿದರು. ಇವರೊಂದಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅರುಣ್ ಸಾವ್ ಮತ್ತು ಶಾಸಕ ವಿಜಯ್ ಶರ್ಮಾ ಅವರು ಉಪ ಮುಖ್ಯ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.
ರಾಯಪುರದ ವಿಜ್ಞಾನ ಕಾಲೇಜು ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ವಿಶ್ವಭೂಷಣ್ ಹರಿಚಂದನ್, ಪ್ರಮಾಣ ವಚನ ಬೋಧಿಸಿದರು.
ಸಾಯ್ ಅವರು ಛತ್ತೀಸಗಢದ ನಾಲ್ಕನೆಯ ಮುಖ್ಯಮಂತ್ರಿಯಾಗಿದ್ದಾರೆ. ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸಚಿವ ನಿತಿನ್ ಗಡ್ಕರಿ, ಕೆಲ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದರು.