Friday, 22nd November 2024

ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಉಚ್ಚಾಟನೆ: ಇಂದು ವಿಚಾರಣೆ

ವದೆಹಲಿ: ತಮ್ಮನ್ನು ಲೋಕಸಭೆಯಿಂದ ಉಚ್ಚಾಟನೆ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಅವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದು ಶುಕ್ರವಾರ ವಿಚಾರಣೆ ನಡೆಯಲಿದೆ.

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್.ವಿ.ಭಟ್ಟಿ ಅವರನ್ನೊಳಗೊಂಡ ವಿಭಾಗಿಯ ಪೀಠವು ಮಹುವಾ ಅವರ ಅರ್ಜಿಯ ವಿಚಾರಣೆ ನಡೆಸಲಿದೆ.

ಉದ್ಯಮಿಯೊಬ್ಬರ ಹಿತಾಸಕ್ತಿಯ ರಕ್ಷಣೆಗಾಗಿ ಮಹುವಾ ಮೊಯಿತ್ರಾ ಅವರು, ಆ ಉದ್ಯಮಿಯಿಂದ ಅಕ್ರಮವಾಗಿ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಹೇಳಿರುವ ನೀತಿ ಸಮಿತಿಯ ವರದಿಯನ್ನು ಅಂಗೀಕರಿಸಿರುವ ಲೋಕಸಭೆಯು, ಮಹುವಾ ಅವರನ್ನು ಲೋಕಸಭಾ ಸದಸ್ಯತ್ವದಿಂದ ಉಚ್ಚಾ ಟಿಸಿದೆ.

ನೀತಿ ಸಮಿತಿಯ ವರದಿ ಬಗ್ಗೆ ಲೋಕಸಭೆಯಲ್ಲಿ ಬಿರುಸಿನ ಚರ್ಚೆ ನಡೆದಿತ್ತು. ಆದರೆ ಈ ವೇಳೆ ಮಹುವಾ ಅವರಿಗೆ ಮಾತನಾಡಲು ಅವಕಾಶ ಕೊಡಲಿಲ್ಲ. ಮಹುವಾ ಅವರು ‘ಅನೈತಿಕವಾಗಿ ನಡೆದುಕೊಂಡಿದ್ದಾರೆ’ ಎಂಬ ಕಾರಣಕ್ಕೆ ಅವರನ್ನು ಉಚ್ಚಾಟಿಸಬೇಕು ಎಂಬ ಗೊತ್ತುವಳಿಯನ್ನು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಮಂಡಿಸಿದ್ದರು. ಈ ಗೊತ್ತುವಳಿಯನ್ನು ಸದನವು ಧ್ವನಿಮತದ ಮೂಲಕ ಅಂಗೀಕರಿಸಿತ್ತು.

ತಮ್ಮನ್ನು ಉಚ್ಚಾಟಿಸಿರುವುದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ಮಹುವಾ, ಈ ಕ್ರಮವು ‘ಕಾಂಗರೂ ನ್ಯಾಯಾಲಯವೊಂದು (ಕೆಲವು ವ್ಯಕ್ತಿಗಳ ಗುಂಪು ನಿಯಮಾವಳಿಯನ್ನು ಗಾಳಿಗೆ ತೂರಿ, ಸಾಕ್ಷ್ಯದ ಆಧಾರವಿಲ್ಲದೆ ನೀಡುವ ತೀರ್ಮಾನ) ನೇಣು ಶಿಕ್ಷೆ ವಿಧಿಸಿದಂತೆ ಇದೆ’ ಎಂದು ಹೇಳಿದ್ದರು.

ಮಹುವಾ ಮೊಯಿತ್ರಾ ಕಳೆದ ಸೋಮವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.