Thursday, 12th December 2024

ಶಿಸ್ತಿನ ಪಕ್ಷ ಬಿಜೆಪಿಯಲ್ಲಿ ಶಿಸ್ತೇ ನಾಪತ್ತೆ

ವರ್ತಮಾನ

maapala@gmail.com

ರಾಜ್ಯಾಧ್ಯಕ್ಷ, ಪ್ರತಿಪಕ್ಷ ನಾಯಕನಿಲ್ಲದಿದ್ದರೂ ಜುಲೈನಲ್ಲಿ ಬೆಂಗಳೂರಿನಲ್ಲಿ ನಡೆದ ಅಧಿವೇಶನದಲ್ಲಿ ಸರಕಾರದ ವಿರುದ್ಧ ಬಿಜೆಪಿ ಸದಸ್ಯರ ಸಂಘಟಿತ ಹೋರಾಟ, ಕಾರ್ಯತಂತ್ರಗಳನ್ನು ಕಂಡಾಗ, ಇನ್ನು ಈ ಎರಡು ಹುದ್ದೆಗಳು ಭರ್ತಿಯಾದರೆ ಇವರನ್ನು ಹಿಡಿಯುವುದೇ ಕಷ್ಟ ಎಂಬಂತೆ ಕಾಣಿಸಿತ್ತು. ಆದರೆ, ಆ ನಿರೀಕ್ಷೆಯನ್ನು ಬೆಳಗಾವಿ ಅಧಿವೇಶನ ಸುಳ್ಳು ಮಾಡಿದೆ.

ಕೆಲವೊಮ್ಮೆ ಎಲ್ಲವೂ ಇರುವಾಗಿನದ್ದಕ್ಕಿಂತ ಏನೂ ಇಲ್ಲದಿದ್ದರೆ ಎಲ್ಲಾ ಸರಿಯಾಗಿರುತ್ತದೆ. ಪ್ರಸ್ತುತ ರಾಜ್ಯ ಬಿಜೆಪಿಯಲ್ಲಿ ಆಗುತ್ತಿರುವುದು ಇದೇ. ಕಳೆದ ವಿಧಾನ ಸಭೆ ಚುನಾವಣೆ ಸೋಲಿನ ಬಳಿಕ ಹಳಿತಪ್ಪಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಪ್ರತಿಪಕ್ಷ ನಾಯಕನ ನೇಮಕದ ಬಳಿಕವಾದರೂ ಹಳಿಗೆ ಬರುತ್ತದೆ ಎಂಬ ನಂಬಿಕೆ ಹುಸಿಯಾಗಿದೆ. ಅಸಮಾಧಾನ, ಭಿನ್ನಮತ, ಭಿನ್ನ ಅಭಿಪ್ರಾಯ, ಹೊಂದಾಣಿಕೆ ಮತ್ತು ಪರಸ್ಪರ ವಿಶ್ವಾಸದ ಕೊರತೆ, ಹಿರಿಯರ ಸಿಟ್ಟು… ಹೀಗೆ ಎಲ್ಲವೂ ಸೇರಿ ರಾಜ್ಯ ಬಿಜೆಪಿಯ ಪರಿಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಆಗಿದೆ.

ಒಂದು ಕಾಲದಲ್ಲಿ ಶಿಸ್ತಿನ ಪಕ್ಷ ಎಂದು ಹೆಸರುಗಳಿಸಿದ್ದ ಪಕ್ಷದಲ್ಲಿ ಅಶಿಸ್ತು ತಾಂಡವವಾಡುತ್ತಿದೆ. ಎಲ್ಲವನ್ನೂ ಸರಿಮಾಡುವ ಜವಾಬ್ದಾರಿ ಹೊಂದಿರುವವರ ಕಾದು ನೋಡುವ ಯೋಚನೆ, ಮುಂದೆ ಎಲ್ಲವೂ ಸರಿಹೋಗುತ್ತದೆ ಎಂಬ ಆಶಾಭಾವನೆ ಸುಳ್ಳಾಗುವ ಲಕ್ಷಣಗಳು ಕಾಣಿಸಿಕೊಳ್ಳಲಾರಂಭಿಸಿದೆ. ಕಳೆದ ಆರು ತಿಂಗಳಿನಿಂದ ನಡೆಯುತ್ತಿರುವ ಕೆಲವೊಂದು ಬೇಡದ ವಿದ್ಯಮಾನ ಗಳು ಬೆಳಗಾವಿ ಅಽವೇಶನದ ವೇಳೆ ಸದನದ ಒಳಗೆ ಮತ್ತು ಹೊರಗೆ ಮತ್ತಷ್ಟು ತೀವ್ರಗೊಂಡಿವೆ. ಯಾರೇನೇ ಮಾತನಾಡಿದರೂ, ಹೇಗೆಯೇ ವರ್ತಿಸಿದರೂ ನಡೆಯುತ್ತದೆ ಎಂಬ ವಾತಾವರಣ ಸೃಷ್ಟಿಯಾಗಿದೆ.

ಬಿಜೆಪಿಯಲ್ಲಿ ಹೊಸ ರಾಜ್ಯಾಧ್ಯಕ್ಷ ಮತ್ತು ಪ್ರತಿಪಕ್ಷ ನಾಯಕನ ಆಯ್ಕೆ ಬಳಿಕ ಅಸಮಾಧಾನ, ಭಿನ್ನಾಭಿಪ್ರಾಯಗಳು ನಿರೀಕ್ಷಿತವೇ ಆಗಿತ್ತು. ಯಾವುದೇ
ಹುದ್ದೆಯಾಗಲಿ, ಆಕಾಂಕ್ಷಿತರ ಸಂಖ್ಯೆ ಹೆಚ್ಚಾಗಿದ್ದಾಗ, ಅವರಿಗೆ ಹುದ್ದೆ ಸಿಗದೇ ಇದ್ದಾಗ ಅವರು ಅಸಮಾಧಾನಗೊಳ್ಳುವುದು ಸಾಮಾನ್ಯ. ಅದು ಬಿಜೆಪಿ
ಯಲ್ಲೂ ಆಗಿದೆ. ಆದರೆ, ಈ ಹಿಂದೆಲ್ಲಾ ಪಕ್ಷದಲ್ಲಿ ಇದ್ದ ಶಿಸ್ತಿನ ಪರಿಽಯೊಳಗೇ ಎಲ್ಲವೂ ಮುಗಿಯುತ್ತಿತ್ತು. ಒಂದೆರಡು ದಿನ ಗರಂ ಆಗಿ ಏನೇನೋ ಮಾತ
ನಾಡಿ ತಮ್ಮಲ್ಲಿರುವ ಅಸಮಾಧಾನ ವನ್ನು ಹೊರ ಹಾಕಿ ಬಳಿಕ ಸಹಜ ಸ್ಥಿತಿಗೆ ಮರಳುತ್ತಿದ್ದರು. ಅದಕ್ಕೂ ಮೀರಿ ಹೋದರೆ ಅಂಥವರ ವಿರುದ್ಧ ಶಿಸ್ತು ಕ್ರಮ
ಜರುಗಿಸಲಾಗುತ್ತಿತ್ತು. ಇದ ರಿಂದ ಪಕ್ಷಕ್ಕೆ ಅಂತಹ ಹಾನಿಯೇನೂ ಆಗುತ್ತಿರಲಿಲ್ಲ.

ಬದಲಾಗಿ ಉಳಿದವರು ಹೆಚ್ಚು ಎಚ್ಚರಿಕೆಯಿಂದ ಇರುತ್ತಿದ್ದುದರಿಂದ ಪಕ್ಷದ ಆಧಾರ ಸ್ಥಂಭಗಳಾದ ಕಾರ್ಯಕರ್ತರಿಗೆ ಒಂದೊಳ್ಳೆಯ ಸಂದೇಶ ರವಾನೆ ಯಾಗುತ್ತಿತ್ತು. ಅಧಿಕಾರಕ್ಕಿಂತ ಸಿದ್ಧಾಂತ, ಶಿಸ್ತಿಗೆ ಆದ್ಯತೆ ಸಿಗುತ್ತದೆ ಎಂಬ ಕಾರಣಕ್ಕೆ ಅವರೂ ಹುರುಪಿನಿಂದ ಕೆಲಸ ಮುಂದುವರಿಸುತ್ತಿದ್ದರು. ಕಾರ್ಯ ಕರ್ತರ ಮುಂದೆ ನಾಯಕರು ಇದ್ದುದರಿಂದ ಹಿಂದೆ ನಿಂತು ಅವರನ್ನು ತಮಗೆ ಬೇಕಾದಂತೆ ಮುಂದಕ್ಕೆ ಕರೆದೊಯ್ಯಲು ಕಾರ್ಯಕರ್ತರಿಗೂ ಸಾಧ್ಯ ವಾಗುತ್ತಿತ್ತು. ಆದರೆ, ಆಪರೇಷನ್ ಕಮಲದಿಂದಾಗಿ ಪಕ್ಷ ಬೆಳೆಯಿತಾದರೂ ಶಿಸ್ತು ಮಾಯವಾಯಿತು. ಪಕ್ಷಕ್ಕೆ ಹೊಸದಾಗಿ ಸೇರಿಕೊಂಡವರು ತಮ್ಮೊಂದಿಗೆ ಬಂದ ಕಾರ್ಯಕರ್ತರ ಪಡೆ ರಚಿಸಿ ತಮ್ಮನ್ನು ತಾವು ಗಟ್ಟಿಯಾಗಿ ತಳವೂರುವಂತೆ ನೋಡಿಕೊಂಡರು.

ಹೀಗಾಗಿ ಪಕ್ಷದಲ್ಲಿ ಮೊದಲಿನಿಂದಲೂ ಇದ್ದವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹಿಂಬಾಲಕರ ಪಡೆಯನ್ನು ನಿರ್ಮಿಸಿಕೊಳ್ಳುವುದು ಅನಿವಾರ್ಯವಾಯಿತು. ಇದರ ಪರಿಣಾಮ ನಾಯಕರ ಹಿಂದೆ ಕಾರ್ಯಕರ್ತರು ಹೋಗುವಂತಾಯಿತು. ತಮ್ಮ ನಾಯಕ ಹೇಗೆ ಹೋಗುತ್ತಾನೋ ಅದೇ ಸರಿ ಎಂದು ನಾಯಕನನ್ನು ಹಿಂಬಾಲಿಸುವಂತಾಯಿತು. ಪಕ್ಷ ಬಲಗೊಳ್ಳುವುದಕ್ಕಿಂತ ಅದರ ಸಣ್ಣ ಪುಟ್ಟ ನಾಯಕರು ತಮ್ಮ ವ್ಯಾಪ್ತಿಯಲ್ಲಿ ಶಕ್ತಿಯುತವಾಗಿ ಬೆಳೆಯಲಾರಂಭಿಸಿದರು. ಕಾರ್ಯಕರ್ತರ ಪಕ್ಷವಾಗಿದ್ದ ಬಿಜೆಪಿ ಇದೀಗ ಸಣ್ಣ ಪುಟ್ಟ ನಾಯಕರ ಪಕ್ಷವಾಗಿ ಬದಲಾಯಿತು. ಅದರಲ್ಲೂ ಆ ನಾಯಕನಿಗೆ ಜಾತಿ ಬೆಂಬಲ ಇದೆ ಎಂದಾದರೆ ಆತ ಅನಿವಾರ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಯಿತು. ಈಗಿನ ಬಿಜೆಪಿಯ ದುಸ್ಥಿತಿಗೆ ಈ ಅಂಶಗಳೇ ಕಾರಣ. ಅದರ ಪರಿಣಾಮವನ್ನು ಈಗ ರಾಜ್ಯ ಎದುರಿಸುವಂತಾಗಿದೆ.

ಇದರ ದ್ಯೋತಕವೇ ಪಕ್ಷದ ನಾಯಕರ ವಿರುದ್ಧ ಸಣ್ಣ ಪುಟ್ಟವರು, ಹೆಚ್ಚು ಬಲಾಢ್ಯರಲ್ಲದವರೂ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಉನ್ನತ ಹುದ್ದೆ
ಯನ್ನೂ ವ್ಯಕ್ತಿ ಎಂದು ಪರಿಗಣಿಸಿ ವಾಗ್ದಾಳಿ ನಡೆಸುತ್ತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಸೋಲಿಗೆ ಲಿಂಗಾಯತ ಮತ ವಿಭಜನೆಯಾಗಿದ್ದು
ಮತ್ತು ನಿರೀಕ್ಷಿತ ಪ್ರಮಾಣದಲ್ಲಿ ಲಿಂಗಾಯತರ ಮತಗಳು ಬಾರದೇ ಇರುವುದು ಕಾರಣ ಎಂಬುದು ಗೊತ್ತಾದ ಮೇಲೆ ವರಿಷ್ಠರು ಜಾತಿ ಲೆಕ್ಕಾಚಾರದಲ್ಲಿ
ಲಿಂಗಾಯತ ಸಮುದಾಯಕ್ಕೆ ಸೇರಿದ ಬಿ.ವೈ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರಾಗಿ ಮತ್ತು ಒಕ್ಕಲಿಗ ಸಮುದಾಯಕ್ಕೆ ಸೇರಿದ ಆರ್.ಅಶೋಕ ಅವರನ್ನು ವಿಧಾನಸಭೆ ಪ್ರತಿಪಕ್ಷ ನಾಯಕನಾಗಿ ಆಯ್ಕೆ ಮಾಡಿದರು. ಪಕ್ಷದ ಭವಿಷ್ಯದ ದೃಷ್ಟಿಯಿಂದ ವರಿಷ್ಠರು ತೆಗೆದುಕೊಂಡ ನಿರ್ಧಾರ ಸರಿಯೇ ಆದರೂ ರಾಜ್ಯದಲ್ಲಿ ಅಂತಹ ಪರಿಸ್ಥಿತಿ ಇಲ್ಲ.

ವಿಜಯೇಂದ್ರ ಆಯ್ಕೆ ವಿರುದ್ಧ ಅಜೇ ಸಮುದಾಯದ ವಿ.ಸೋಮಣ್ಣ, ಬಸವಗೌಡ ಪಾಟೀಲ್ ಯತ್ನಾಳ್ ತಿರುಗಿ ಬಿದ್ದಿದ್ದಾರೆ. ಅದೇ ರೀತಿ ಆರ್.ಅಶೋಕ ಆಯ್ಕೆಯಿಂದ ಅದೇ ಸಮುದಾಯಕ ಡಾ.ಸಿ.ಎನ್.ಅಶ್ವತ್ಥನಾರಾಯಣ, ಹಿಂದುಳಿದ ವರ್ಗಕ್ಕೆ ಸೇರಿದ ವಿ.ಸುನೀಲ್ ಕುಮಾರ್ ಮತ್ತಿತರರು ಬೇಸರಗೊಂಡಿದ್ದಾರೆ. ಈ ಎರಡೂ ಆಯ್ಕೆಗಳು ಸಿ.ಟಿ.ರವಿ, ಬಸವರಾಜ ಬೊಮ್ಮಾಯಿ ಅವರಿಗೂ ಸಮಾಧಾನ ತಂದಿಲ್ಲ. ಇದೆಲ್ಲಕ್ಕಿಂತ ಮುಖ್ಯವಾಗಿ ಉತ್ತರ ಕರ್ನಾಟಕ ಭಾಗಕ್ಕೆ ಎರಡು ಹುದ್ದೆಗಳ ಪೈಕಿ ಯಾವುದಾದರೂ ಒಂದು ಸ್ಥಾನ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಆ ಭಾಗದ ನಾಯಕರಿಗೆ ಅಸಮಾಧಾನವಾಗಿದೆ.

ತಮ್ಮದೇ ಆದ ಕಾರ್ಯಕರ್ತರ ಪಡೆಸೃಷ್ಟಿಸಿಕೊಂಡು ವೈಯಕ್ತಿಕವಾಗಿ ಗೆಲುವು ಸಾಧಿಸುವುದರ ಜತೆಗೆ ಆ ಭಾಗದ ನಾಯಕರು ಭ್ರಮನಿರಸನ ಗೊಂಡಿದ್ದಾರೆ. ಪರಿಶಿಷ್ಟ ಪಂಗಡದವರೂ ತಣ್ಣಗೆ ಕುಳಿತಿದ್ದಾರೆ. ಇದೆಲ್ಲದರ ಪರಿಣಾಮವೇ ಸದನದಲ್ಲಿ ಆದದ್ದಲ್ಲ. ಬೆಳಗಾವಿಯ ಬಿಜೆಪಿ ಕಾರ್ಯಕರ್ತ ಪೃಥ್ವಿಸಿಂಗ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಕೆಲವರು ಧರಣಿ ನಡೆಸಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಯೋಚಿಸಿದ್ದರೆ ಪ್ರತಿಪಕ್ಷ ನಾಯಕ ಆರ್.ಅಶೋಕ ಮತ್ತು ತಂಡ ಏಕಾಏಕಿ ಸಭಾತ್ಯಾಗ ಮಾಡಿತು. ಇದು ಸಮನ್ವಯದ ಕೊರತೆ ಎಂದು ಸಮಜಾಯಿಷಿ ನೀಡಿದರೂ ಅದರ ಹಿಂದಿರುವ ಕಾರಣ ಬೇರೆಯದ್ದೇ ಇದೆ.

ನಮ್ಮನ್ನು ಕೇಳದೆ ತೀರ್ಮಾನ ಕೈಗೊಂಡರು ಎಂಬುದು ಒಂದು ಗುಂಪಿನ ವಾದವಾದರೆ, ನಾಯಕನಾದವನು ಅವರನ್ನು ಕೇಳಿಯೇ ನಿರ್ಧಾರ ಕೈಗೊಳ್ಳಬೇಕೇ ಎಂಬುದು ಇನ್ನೊಂದು ಗುಂಪಿನ ವಾದವಾಗಿತ್ತು. ಎರಡೂ ಕಡೆಯವರ ವೈಯಕ್ತಿಕ ಪ್ರತಿಷ್ಠೆಯಿಂದ ಮುಜುಗರಕ್ಕೊಳಗಾಗಿದ್ದು ಮಾತ್ರ ಪಕ್ಷ. ಅದು ಸದ್ಯ ತಣ್ಣಗಾದಂತೆ ಕಂಡುಬಂದಿದೆ ಯಾದರೂ ಬೂದಿ ಮುಚ್ಚಿದ ಕೆಂಡದಂತೆ ಉಳಿದು ಕೊಂಡಿದೆ. ಬಸನಗೌಡ ಪಾಟೀಲ್ ಅವರಂಥ ಹಿರಿಯರು ಪಕ್ಷದ ರಾಜ್ಯ ನಾಯಕತ್ವದ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಅವರ ಮೇಲೆ ಆರೋಪಗಳನ್ನು ಮಾಡುತ್ತಲೇ ಇದ್ದಾರೆ.

ಇನ್ನು ಬಿಜೆಪಿ ಶಾಸಕರಾದ ಎಸ್.ಟಿ.ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಅವರ ಪ್ರಕರಣದಲ್ಲಂತೂ ಬಿಜೆಪಿ ಶರಣಾದಂತೆ ಕಂಡು ಬಂದಿದೆ. ಇಲ್ಲಿ ನಾಯಕರ ಹೊಂದಾಣಿಕೆ ರಾಜಕಾರಣವೂ ಸ್ಪಷ್ಟವಾಗುತ್ತಿದೆ. ಸದನದಲ್ಲಿ ಬಿಜೆಪಿ ಸಾಲಿನಲ್ಲಿ ಕುಳಿತರೂ ಪಕ್ಷದ ತೀರ್ಮಾನಗಳನ್ನು ಗೌರವಿಸುತ್ತಿಲ್ಲ. ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೆ ಹೋಗುವುದಿಲ್ಲ. ಔತಣ ಕೂಟಕ್ಕೂ ಬರುವುದಿಲ್ಲ. ಆದರೆ, ಬಿಜೆಪಿಯ ಕೆಲವು ನಾಯಕರೊಂದಿಗೆ ವೈಯಕ್ತಿಕವಾಗಿ ಭೇಟಿಯಾಗಿ ಅವರೊಂದಿಗೆ ಉತ್ತಮ ಸಂಬಂಧ ಇಟ್ಟುಕೊಳ್ಳುತ್ತಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಬಳಿಕ ಕಾಂಗ್ರೆಸ್ ಶಾಸಕರಿಗೆ ಏರ್ಪಡಿಸಿದ್ದ ಔತಣ ಕೂಟಕ್ಕೆ ಹೋಗುತ್ತಾರೆ. ಆದರೆ, ಅವರ ವಿರುದ್ಧ ಶಿಸ್ತು ಕ್ರಮದ ಯೋಚನೆಯನ್ನೇ ಪಕ್ಷ ಮಾಡುತ್ತಿಲ್ಲ. ಏಕೆಂದರೆ, ಅವರು ಪಕ್ಷದ ವಿರುದ್ಧ ತಿರುಗಿ ಬಿದ್ದರೂ ಶಿಸ್ತು ಕ್ರಮಕ್ಕೆ ಶಿ-ರಸು ಮಾಡಬೇಕಾದವರ ಜತೆ ತಮ್ಮ ಸಂಬಂಧವನ್ನು ಚೆನ್ನಾಗಿಟ್ಟು ಕೊಂಡಿದ್ದಾರೆ. ನಾಯಕರ ಈ ರೀತಿಯ ವರ್ತನೆಗಳು ಪಕ್ಷದ ಶಾಸಕರು, ಇತರರು ಬೇಸರ ಗೊಳ್ಳುವಂತೆ ಮಾಡುತ್ತಿದೆ. ಇದುವೇ ಬೆಳಗಾವಿ ವಿಧಾನಸಭೆ ಅಧಿವೇಶನದ ವೇಳೆ ಸದನದ ಒಳಗೆ ಮತ್ತು ಹೊರಗೆ ಬಿಜೆಪಿ ಶಾಸಕರಲ್ಲಿ ಸಮನ್ವಯತೆಯ ಕೊರತೆ, ಅಸಮಾಧಾನಕ್ಕೆ ಕಾರಣ.

ಇದರ ಪರಿಣಾಮ ಇಡೀ ಅಧಿವೇಶನದಲ್ಲಿ ಜೆಡಿಎಸ್ ಜತೆಗಿನ ಮೈತ್ರಿಯ ಬಲವಿದ್ದರೂ ಬಿಜೆಪಿ ಪ್ರಬಲ ಪ್ರತಿಪಕ್ಷವಾಗಿ ತನ್ನ ಕಾರ್ಯಕ್ಷಮತೆಯನ್ನು
ತೋರಿಸಲೇ ಇಲ್ಲ. ಮೊದಲ ವಾರ ಹೊಂದಾಣಿಕೆ ರಾಜಕಾರಣದಿಂದಾಗಿ ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಲು ಮನಸ್ಸು ಮಾಡದೇ ಇದ್ದರೆ, ಎರಡನೇ
ವಾರ ಅದಕ್ಕೆ ಸಮಯದ ಕೊರತೆ ಎದುರಾಯಿತು. ಕೆಲವೊಂದು ವಿಚಾರಗಳಲ್ಲಿ ಎತ್ತು ಏರಿಗೆಳೆದರೆ, ಕೋಣ ನೀರಿಗೆಳೆಯಿತು ಎಂಬಂತೆ ಶಾಸಕರು ವರ್ತಿ
ಸಿದರು. ಪಕ್ಷ ವಿರೋಽ ಚಟುವಟಿಕೆ ಮಾಡುವವರು, ಹೊಂದಾಣಿಕೆ ರಾಜಕಾರಣ ಮಾಡುವವರನ್ನೇ ಪ್ರಶ್ನಿಸುವುದಿಲ್ಲ ಎಂದಾದರೆ ನಮ್ಮಂಥವರು ಹೇಗೆ
ಬೇಕಾದರೂ ಇರಬಹುದು ಎಂಬ ಭಾವನೆ ಶಾಸಕ ರಲ್ಲೂ ಕಾಣಿಸಿಕೊಂಡಿತು.

ಇದೆಲ್ಲದರ ಪರಿಣಾಮ ಅಧಿವೇಶನದಲ್ಲಿ ಬಿಜೆಪಿಯಿಂದ ಸಂಘಟಿತ ಹೋರಾಟ ಕಾಣಿಸಿಕೊಳ್ಳಲೇ ಇಲ್ಲ. ಇದರಿಂದಾಗಿ ಜೆಡಿಎಸ್ ಕೂಡ ಬೆಂಬಲಿಸುವ ವಿಚಾರದಲ್ಲಿ
ಗೊಂದಲಕ್ಕೆ ಸಿಲುಕಿತ್ತು. ಆದರೆ, ವಿಧಾನಪರಿಷತ್ ಅದಕ್ಕೆ ಅಪವಾದ ಎನ್ನುವಂತಿತ್ತು. ಆರಂಭದಿಂದ ಅಂತ್ಯದವರೆಗೆ ಎಲ್ಲರೂ ಒಟ್ಟಾಗಿಯೇ ಸರಕಾರದ
ವಿರುದ್ಧ ಮುಗಿಬಿದ್ದಿದ್ದರು. ಅದೇ ರೀತಿ ಜೆಡಿಎಸ್ ಕೂಡ ಬೆಂಬಲಿಸಿತ್ತು. ಬಹುಷಃ ಅಲ್ಲಿ ಪ್ರತಿಪಕ್ಷ ನಾಯಕ ಇಲ್ಲದೇ ಇರುವುದೂ ಇದಕ್ಕೆ ಕಾರಣ ವಾಗಿರಬಹುದು. ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಪಕ್ಷವನ್ನು ಒಂದುಗೂಡಿಸಬೇಕಾದ ಬಿಜೆಪಿ ವರಿಷ್ಠ ರಿಗೆ ಇದೆಲ್ಲವೂ ತಿಳಿಯದೇ ಇರುವ ವಿಚಾರವೇನೂ ಅಲ್ಲ. ಆದರೆ, ಇನ್ನು ಕೆಲವೇ ತಿಂಗಳಲ್ಲಿ ಬರುವ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವುದನ್ನೇ ಗುರಿ ಯಾಗಿಸಿಕೊಂಡಿರುವ ಅವರಿಗೆ ಈ ಬಗ್ಗೆ ಹೆಚ್ಚು ತಲೆಕೆಡಿಸಲು ಸಮಯವಿಲ್ಲ. ಹೇಗೂ ಜಾತಿ ಸಮೀಕರಣದ ಮೇಲೆ ಪ್ರಮುಖ ಹುದ್ದೆಗಳನ್ನು ಹಂಚಿದ್ದಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಬಿಜೆಪಿ ಪಾಲಿಗೆ ಅನಿವಾರ್ಯ ಆಗಿರುವ
ಬಿ.ಎಸ್. ಯಡಿಯೂರಪ್ಪ ಖುಷಿಯಾಗಿದ್ದಾರೆ.

ಲೋಕಸಭೆ ಚುನಾವಣೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ನಡೆಯುವುದರಿಂದ ಮತ್ತು ಜೆಡಿಎಸ್ ಜತೆ ಮೈತ್ರಿ ಇರುವುದರಿಂದ ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆಲ್ಲುವುದು ಕಷ್ಟವೇನೂ ಅಲ್ಲ ಎಂಬುದು ಅವರಿಗೂ ಗೊತ್ತಿದೆ. ಮುಂದಿನ ವಿಧಾನಸಭೆ ಚುನಾವಣೆಗೆ ಸಮಯವಿರುವುದರಿಂದ ಅಷ್ಟರೊಳಗೆ ಎಲ್ಲವೂ ಸಹಜ ಸ್ಥಿತಿಗೆ ಬರಬಹುದು ಎಂಬ ನಿರೀಕ್ಷೆಯೊಂದಿಗೆ ಸುಮ್ಮನೆ ಕುಳಿತಿದ್ದಾರೆ. ಆದರೆ, ಇದರಿಂದ ರಾಜ್ಯ ಬಿಜೆಪಿಯ ನಾಯಕರೊಳಗಿನ ಅಸಮಾಧಾನ ಹೆಚ್ಚುತ್ತಲೇ
ಹೋಗುತ್ತಿದೆ. ಪಕ್ಷದ ವಿರುದ್ಧ ಅಲ್ಲದಿದ್ದರೂ ನಾಯಕರ ವಿರುದ್ಧ ಕೆಲವರು ಮಾತನಾಡಿ ಮುಜುಗರ ತರುತ್ತಿದ್ದಾರಾದರೂ, ಶಿಸ್ತಿನ ಪಕ್ಷದಲ್ಲಿ ಶಿಸ್ತೇ ಇಲ್ಲವಾಗಿದ್ದರೂ ಅಽಕಾರ, ಹುದ್ದೆಗಳಿಗಾಗಿ ಎಲ್ಲವನ್ನೂ ಸಹಿಸಿಕೊಂಡು ಮುಂದೆ ಸಾಗುತ್ತಿದ್ದಾರೆ.

ಸದ್ಯ ಅಸಮಾಧಾನ ಪಕ್ಷದ ನಾಯಕರ ವಿರುದ್ಧವೇ ಹೊರತು ಪಕ್ಷದ ವಿರುದ್ಧ ಅಲ್ಲವಾಗಿದ್ದರಿಂದ ಲೋಕಸಭೆ ಚುನಾವಣೆ ಮೇಲೆ ಯಾವುದೇ ಪ್ರತೀಕೂಲ ಪರಿಮಾಮ ಬೀರುವ ಸಾಧ್ಯತೆ ಕಡಿಮೆ ಎಂಬುದಷ್ಟೇ ಸಮಾಧಾನ.

ಲಾಸ್ಟ್ ಸಿಪ್: ತಾನೇನು ಮಾಡಿದರೂ ನಡೆಯುತ್ತದೆ ಎಂಬ ಭಾವನೆಯಲ್ಲಿ ಮುಂದೆ ಸಾಗಿದರೆ ಒಂದಲ್ಲಾ ಒಂದು ದಿನ ಎಡವಿ ಬೀಳುವುದಂತೂ ಸ್ಪಷ್ಟ.