Sunday, 24th November 2024

ಕೂಟು: ಹಿರಣ್ಯಕಶಿಪುವಿಗೆ ನರಸಿಂಹನು ಅನುಗ್ರಹಿಸಿದ ಖಾದ್ಯ ?

ತಿಳಿರು ತೋರಣ

srivathsajoshi@yahoo.com

ಅನೇಕ ತರಕಾರಿಗಳನ್ನು ಕೂಡಿಸಿ ಮಾಡಿದ ಮೇಲೋಗರ – ಎಂದು ತಿಳಿಸುತ್ತದೆ ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು, ‘ಕೂಟು’ ಎಂಬ ಪದಕ್ಕೆ ಅರ್ಥ ಹುಡುಕಿದರೆ. ಆದರೆ ಕೂಟು ಮೂಲತಃ ತಮಿಳಿನವರದು. ಕನಿಷ್ಠ ನನಗಂತೂ ಅದು ತಮಿಳಿಗರಿಂದಲೇ ಪರಿಚಯವಾದದ್ದು, ಪದ ಮತ್ತು ಪದಾರ್ಥ ಎರಡೂ ರೀತಿಯಲ್ಲಿ. ಸುಮಾರು ೩೦ ವರ್ಷಗಳ ಹಿಂದೆ ಮೊತ್ತ ಮೊದಲ ಬಾರಿ ಕೂಟು ಪದ ನನ್ನ ಶ್ರವಣೇಂದ್ರಿಯದ ಮೇಲೆ ಬಿದ್ದದ್ದು, ಕೂಟು ಪದಾರ್ಥ ನನ್ನ ರಸನೇಂದ್ರಿ ಯವನ್ನು ಮುದಗೊಳಿಸಿದ್ದು- ಇವೆರಡನ್ನೂ ನಾನು ಆಗಾಗ ಮೆಲುಕು ಹಾಕುತ್ತಿರುತ್ತೇನೆ.

ಆ ಘಟನೆ ಅಂಥದ್ದೇನೂ ಭಾರೀ ಸ್ವಾರಸ್ಯದ್ದು ಎನ್ನಲಾರೆನಾದರೂ ಲೈಟಾದ ಮನೋರಂಜನೆ ಎಂಬಂತೆ ನಿಮ್ಮೊಂದಿಗೆ ಹಂಚಿಕೊಳ್ಳಲು ಯೋಗ್ಯವಾಗಿಯೇ ಇದೆ. ಆದ್ದರಿಂದಲೇ ಇಂದಿನ ತೋರಣದ ಹೂರಣವಾಗಿ ಆಯ್ದುಕೊಂಡಿದ್ದೇನೆ ಕೂಡ. ಹಾಂ! ಇಲ್ಲಿರುವ ಮನೋರಂಜನೆಗೂ ಇದೀಗ ಸುದ್ದಿಯಲ್ಲಿರುವ ಮನೋರಂಜನ್ ಎಂಬ ಮನೆಹಾಳನಿಗೂ ತಾಳೆ ಮಾತ್ರ ಹಾಕಬೇಡಿ ಯಾವುದೇ ಕಾರಣಕ್ಕೂ!

ನಿಮಗೆ ಬಹುಮಟ್ಟಿಗೆ ಗೊತ್ತೇ ಇರುವಂತೆ ನಾನೊಬ್ಬ ಲ್ಯಾಂಗ್ವೇಜ್ ಬಫ್. ಅಂದರೆ ಭಾಷಾಮೋಹಿತ (ಭಾಷಾಪಂಡಿತ ಅಲ್ಲ!) ಅಂತ ಅರ್ಥೈಸಿಕೊಳ್ಳಿ. ನಾವಾಡುವ ಮಾತಿನಲ್ಲಿ ಮತ್ತು ನಮ್ಮ ಬರವಣಿಗೆಯಲ್ಲಿ ಬಳಕೆಯಾಗುವ ಭಾಷೆಯ ಬಗ್ಗೆ, ಪದ ಪ್ರಯೋಗಗಳ ಬಗ್ಗೆ, ಪದಗಳ ಹುಟ್ಟಿನ ಬಗ್ಗೆ ತಿಳಿದುಕೊಳ್ಳುವು
ದೆಂದರೆ ನನಗೆ ಎಲ್ಲಿಲ್ಲದ ಆಸಕ್ತಿ. ಕನ್ನಡವಷ್ಟೇ ಅಲ್ಲದೆ ಬೇರೆಬೇರೆ ಭಾಷೆಗಳ ಪದಗಳನ್ನು ಗಮನಿಸುವುದು, ಅಭ್ಯಸಿಸುವುದು, ಅವುಗಳೊಂದಿಗೆ ಆಟವಾಡುವುದು, ಅವುಗಳ ವ್ಯುತ್ಪತ್ತಿ ಅಥವಾ ಎಟಿಮಾಲಜಿಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸುವುದು ನನ್ನ ನೆಚ್ಚಿನ ಹವ್ಯಾಸ.

ಅದಕ್ಕಾಗಿಯೇ ನಾನು ಕಸ್ತೂರಿಯಲ್ಲಿ ಪಾ.ವೆಂ. ಆಚಾರ್ಯರ ಪದಾರ್ಥ ಚಿಂತಾಮಣಿ, ಪ್ರಜಾವಾಣಿಯಲ್ಲಿ ಬರುತ್ತಿದ್ದ ಜಿ. ವೆಂಕಟಸುಬ್ಬಯ್ಯನವರ ಇಗೋ ಕನ್ನಡ,
ರೀಡರ್ಸ್ ಡೈಜೆಸ್ಟ್‌ನ It pays to enrich your word power ಮುಂತಾದ ಅಂಕಣಗಳನ್ನೆಲ್ಲ ತಪ್ಪದೇ ಓದುವವನು. ಸಮಾನ ಅಭಿರುಚಿಯ ಇತರ ಭಾಷಿಗರೊಂದಿಗೆ ಪದಪ್ರಯೋಗಗಳ ಬಗ್ಗೆ ಚರ್ಚಿಸುವವನು. ಒಂದು ಭಾಷೆಯ ಪದವನ್ನು ಇನ್ನೊಂದು ಭಾಷೆಯ ಪದದೊಟ್ಟಿಗೆ ಎಸೆಯುವುದು, ಬೆಸೆಯುವುದು ಮತ್ತು ಹೊಸಹೊಸ ಅರ್ಥಗಳನ್ನು ಹೊಸೆಯುವುದು- ಎಲ್ಲವೂ ನನಗಿಷ್ಟ. ಇದೆಲ್ಲ ಪಾಂಡಿತ್ಯಕ್ಕಲ್ಲ, ಮನಸ್ಸಿನ ಖುಷಿಗೆ.

೧೯೯೦ರ ದಶಕದ ನಾಲ್ಕೈದು ವರ್ಷಗಳನ್ನು ನಾನು ವೃತ್ತಿನಿಮಿತ್ತ ವಾಗಿ ಹೈದರಾಬಾದ್‌ನಲ್ಲಿ ಕಳೆದಿದ್ದೆ. ಅಲ್ಲಿ ನನ್ನ ಉದ್ಯೋಗಕ್ಕೆ ಅಥವಾ ದೈನಂದಿನ ವ್ಯವಹಾರಗಳಿಗೆ ಅಷ್ಟೇನೂ ಅಗತ್ಯವಿಲ್ಲದಿದ್ದರೂ ವ್ಯಕ್ತಿಗತ ಆಸಕ್ತಿಯಿಂದ ತೆಲುಗು ಭಾಷೆಯನ್ನು ಕಲಿತಿದ್ದೆ. ನನ್ನ ಕೆಲವು ಸಹೋದ್ಯೋಗಿಗಳು, ಆಪ್ತ ಸ್ನೇಹಿತರು ತಮಿಳಿನ ವರಿದ್ದುದರಿಂದ ಅಲ್ಪಸ್ವಲ್ಪ ತಮಿಳು ಭಾಷೆಯ ಪರಿಚಯವೂ ಆಗ ನನಗಾಗಿತ್ತು. ಒಟ್ಟಿನಲ್ಲಿ ಹೈದರಾಬಾದ್ ವಾಸ್ತವ್ಯದಿಂದಾಗಿ ನನ್ನ ಭಾಷಾ ತೂಣೀರ ದಲ್ಲಿ ಹೊಸ ಬಾಣಗಳಾಗಿ ತೆಲುಗು ತಮಿಳು ಭಾಷೆ ಗಳು ಸೇರಿಕೊಂಡವು. ಹಾಗೆಯೇ ಹೈದ್ರಾಬಾದಿ ಸ್ಪೆಷಲ್ ಭಾಷೆ ಯಾದ, ಕೇಳಲಿಕ್ಕೆ ತುಸು ವಿಚಿತ್ರವೆನಿಸುವ ‘ಐಸಾ ಕಾಯ್ಕು ಬೋಲ್ತಾ? ಉನ್ಹೋ ಕ್ಯಾ ಕರಾ ಮಾಲುಂ?’ ಶೈಲಿಯ ಉರ್ದು- ಹಿಂದೀ-ತೆಲುಗು ಭಾಷೆಗಳ ಖಿಚಡಿ ಎನಿಸಿದ ದಕ್ಖನಿ ಸಹ. ಹೈದರಾಬಾದ್‌ ನಲ್ಲಿ ಗುರುಮೂರ್ತಿ ನಾರಾಯಣನ್ ಎಂಬ ಹೆಸರಿನ ತಮಿಳಿನವರೊಬ್ಬರು ನನಗೆ ಬಹಳ ಆಪ್ತರಾಗಿದ್ದರು.

ಅವರು ನಮ್ಮ ಆಫೀಸಿನಲ್ಲಿ ಎಕ್ಸೆಕ್ಯುಟಿವ್ ಸೆಕ್ರೆಟರಿ ಹುದ್ದೆಯಲ್ಲಿದ್ದವರು, ವಯಸ್ಸಿನಲ್ಲಿ ಮತ್ತು ಜೀವನಾನುಭವದಲ್ಲಿ ನನಗಿಂತ ತುಂಬ ಹಿರಿಯರು. ಆದರೂ ನನ್ನಂತೆಯೇ ಅವರೂ ಒಬ್ಬ ಭಾಷಾ ವ್ಯಾಮೋಹಿ ಆಗಿದ್ದುದು, ಮತ್ತು ಬೇರೆ ಕೆಲ ವಿಷಯಗಳಲ್ಲೂ ನಮ್ಮಿಬ್ಬರ ತರಂಗಾಂತರಗಳು ಮ್ಯಾಚ್ ಆಗುತ್ತಿದ್ದದ್ದು ನಮ್ಮ
ದೋಸ್ತಿಗೆ ಮುಖ್ಯ ಕಾರಣ. ವಾರಾಂತ್ಯಗಳಲ್ಲಿ, ಹಬ್ಬಹರಿದಿನಗಳಲ್ಲಿ ನನಗೆ ಗುರುಮೂರ್ತಿಯವರ ಮನೆಗೆ ಮುಕ್ತ ಆಹ್ವಾನವಿರುತ್ತಿತ್ತು. ಆಗಿನ ದಿನಗಳಲ್ಲಿ ಸ್ವಯಂಪಾಕ ಮಾಡಿಕೊಂಡು ಬ್ರಹ್ಮಚಾರಿ ಜೀವನ ನಡೆಸುತ್ತಿದ್ದ ನನಗೆ ಅದೊಂದು ರೀತಿಯಲ್ಲಿ ಒಳ್ಳೆಯದೇ ಆಗುತ್ತಿತ್ತೆನ್ನಿ. ರುಚಿರುಚಿಯಾದ ಊಟವಷ್ಟೇ ಅಲ್ಲದೆ ಲೋಕಾಭಿರಾಮ ಹರಟೆಯಲ್ಲಿ ನಾವು ಕನ್ನಡ, ತೆಲುಗು, ತಮಿಳು ಇತ್ಯಾದಿ ಎಲ್ಲ ಭಾಷೆಗಳ ಕಲಸುಮೇಲೋಗರ ಮಾಡಿ ಸವಿಯುತ್ತಿದ್ದೆವು.

ಅದೇನೂ ಸಾಹಿತ್ಯಿಕವಾಗಿ ಪ್ರಬುದ್ಧ ಚರ್ಚೆಯೆಂದಲ್ಲ. ಊಟದ ಜೊತೆಯಲ್ಲಿ ನಂಚಿಕೊಳ್ಳಲು ಉಪ್ಪಿನಕಾಯಿಯಂತೆ ಭಾಷೆಯ ಆಟ-ಪಾಠ ಅಷ್ಟೇ. ಹಾಗೆ ಒಂದು ಭಾನುವಾರದಂದು ಗುರುಮೂರ್ತಿ ನನ್ನನ್ನು ಊಟಕ್ಕೆ ಕರೆದಿದ್ದರು. ಯಥಾಪ್ರಕಾರ ತಮಿಳು ಐಯರ್ ಬ್ರಾಹ್ಮಣ ಶೈಲಿಯ ಪೊಗದಸ್ತಾದ ಊಟ. ಆವತ್ತು ಅವರ ಮನೆಯಲ್ಲಿ ಸೋರೆಕಾಯಿಯ ‘ಕೂಟು’ ಮಾಡಿದ್ದರು. ಅವರ ಹಿತ್ತಲಲ್ಲೇ ಬೆಳೆದ ತರಕಾರಿಯಿಂದ ಮಾಡಿದ್ದೆಂದು ಹೆಮ್ಮೆಯಿಂದ ಬಡಿಸಿದ್ದರು. ‘ಕೂಟು ಒಂದು ಟಿಪಿಕಲ್ ತಮಿಳು ಅಡುಗೆ ವಿಶೇಷ. ನಿಮ್ಮ ಕಡೆ ಮಾಡುತ್ತೀರೋ ಇಲ್ಲವೋ ಗೊತ್ತಿಲ್ಲ… ಹೇಗಿದೆಯೆಂದು ರುಚಿ ನೋಡಿ!’ ಎಂದು ಅಭಿಮಾನದಿಂದ ಒತ್ತಾಯಿಸಿದ್ದರು.

ಸರಿ, ಆವತ್ತು ನಮಗೆ ಹೊಟ್ಟೆತುಂಬ ಊಟಕ್ಕೂ ಮನತುಂಬ ಚರ್ಚೆಗೂ ಗ್ರಾಸವಾದದ್ದು ಕೂಟು! ಕರಾವಳಿ ಕರ್ನಾಟಕದವನಾದ ನನಗೆ ಕೂಟು ಅಂತೊಂದು ಸ್ವಾದಿಷ್ಟ ವ್ಯಂಜನದ ಹೆಸರು ಗೊತ್ತಿರದಿದ್ದರೂ ತಮಿಳಿನಲ್ಲಿ ಅದರ ವ್ಯುತ್ಪತ್ತಿ ಹೇಗೆ ಆಗಿರಬಹುದೆಂಬ ಲಾಜಿಕ್ ಮಾತ್ರ ತತ್‌ಕ್ಷಣವೇ ಹೊಳೆಯಿತು. ರೇಡಿಯೊ ಸಿಲೊನ್ (ಶ್ರೀಲಂಕಾ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್)ನಲ್ಲಿ ಮಧ್ಯಾಹ್ನ ಕನ್ನಡ ಕಾರ್ಯಕ್ರಮ, ತುಳಸಿ ಸಮೀರ್ ಎಂಬಾಕೆಯ ಸಿಂಹಳೀ ಆಕ್ಸೆಂಟ್‌ನ ಕನ್ನಡ ಧ್ವನಿ ಶುರುವಾಗುವ ಮೊದಲು ತಮಿಳು ಉದ್ಘೋಷಕ ಹೇಳುತ್ತಿದ್ದ ‘ಇಲಂಗೈ ಒಲಿವರಪ್ಪು ಕೂಟ್ಟುತ್ತಾಪನಂ ಆಸಿಯ ಸೇವೈ…’ ಎಂಬ ಉಲಿ ಥಟ್ಟನೆ ನೆನಪಾಯಿತು.

ಅದರಲ್ಲಿ ಕೂಟ್ಟುತ್ತಾಪನಂ ಎಂಬ ಪದವಿದೆಯಲ್ಲ, ಅದು ಕಾರ್ಪೊರೇಷನ್ ಎಂಬ ಪದದ ತಮಿಳು ರೂಪ. ಅದನ್ನೇ ಮೊಟಕುಗೊಳಿಸಿದರೆ ಕೂಟ್ಟು ಅಥವಾ ಕೂಟು! ತರಕಾರಿ ಮತ್ತು ಬೇಳೆಕಾಳು ಬೆರೆತು ತಯಾರಾದದ್ದು ಎಂದು ಅರ್ಥೈಸಿದರೆ ಕೂಟು ಎನ್ನುವುದೂ ಇಂಗ್ಲಿಷ್‌ನ ಕಾರ್ಪೊರೇಷನ್ ಅಥವಾ ಇನ್‌ಕಾರ್ಪೊರೇಟ್
ಪದಗಳ ಅರ್ಥವ್ಯಾಪ್ತಿಯೊಳಗೇ ಬರುತ್ತದೆ. ಕೂಡು, ಕೂಟ, ಒಕ್ಕೂಟ ಇತ್ಯಾದಿ ಪದಗಳು ಅರ್ಥದಲ್ಲಿ ಕಾರ್ಪೊರೇಷನ್ ಎಂಬುದಕ್ಕೆ (ತಮಿಳುರೂಪ ಕೂಟ್ಟುತ್ತಾಪನಂ ಎಂಬ ಪದಕ್ಕೆ) ಎಷ್ಟು ಹತ್ತಿರವೋ ಅಷ್ಟೇ ಕೂಟ್ಟು ಎಂಬ ಪದಾರ್ಥ ಕೂಡ. ಇದು ನನಗೆ ಆ ಕ್ಷಣಕ್ಕೆ ಹೊಳೆದ ತರ್ಕ.

ಹಾಗಿದ್ದರೆ ಸಾಂಬಾರ್‌ನಲ್ಲಿ, ಪಲ್ಯದಲ್ಲಿ, ಅಷ್ಟೇಕೆ ನಮ್ಮ ಕನ್ನಡ ನಾಡಿನ ಸಿಗ್ನೇಚರ್ ಡಿಷ್ ಬಿಸಿಬೇಳೆಭಾತಿನಲ್ಲಿ ವಿವಿಧ ತರಕಾರಿ ಮತ್ತು ಬೇಳೆಗಳು ಇನ್‌ಕಾರ್ಪೊರೇಟ್ ಆಗಿಲ್ಲವೇ, ಒಂದು ಗೂಡಿಲ್ಲವೇ ಎಂಬ ಪ್ರಶ್ನೆ ಬರಬಹುದು. ಅಲ್ಲೇ ಇರುವುದು ಕೂಟಿನ ಸ್ಪೆಷಾಲಿಟಿ. ಕೂಟು ಎಂದರೆ ಪಲ್ಯದಂತೆ ಘನವೂ ಅಲ್ಲ, ಸಾಂಬಾರಿನಂತೆ ದ್ರವವೂ ಅಲ್ಲ. ಹೊಟೆಲ್‌ಗಳಲ್ಲಿ, ಹಾಸ್ಟೆಲ್‌ಗಳಲ್ಲಿ ಸಾಂಬಾರ್ ಹೇಗೆ ದ್ರವರೂಪದಲ್ಲಿ ಇರುತ್ತದೆ, ಹೋಳು-ರಸಗಳ ಅನುಪಾತ ಎಷ್ಟಿರುತ್ತದೆ, ರಸಸಮುದ್ರದಲ್ಲಿ ಗಾಳ ಹಾಕಿ ಹೋಳೆಂಬ ಮೀನು ಹೇಗೆ ಹಿಡಿಯಬೇಕಾಗುತ್ತದೆ ಎಂದು ನಮಗೆಲ್ಲ ಗೊತ್ತೇ ಇದೆ. ಹಾಗಿರದೆ ಸೆಮಿ-ಸಾಲಿಡ್ ಸೆಮಿ-ಲಿಕ್ವಿಡ್ ಕನ್ಸಿಸ್ಟೆನ್ಸಿ ಇದ್ದರೆ ಮಾತ್ರ ಅದು ಕೂಟು ಎನಿಸಿಕೊಳ್ಳುತ್ತದೆ. ಸೋರೆಕಾಯಿ, ಹೀರೆಕಾಯಿ, ಚೀನಿಕಾಯಿ, ಪಡುವಲಕಾಯಿ, ಎಳೆಪಪ್ಪಾಯಿ, ಬಾಕಾಯಿ ಇವೆಲ್ಲ ಕೂಟು ಮಾಡಲು ಬಹುಯೋಗ್ಯ ತರಕಾರಿಗಳು, ಚೆನ್ನಾಗಿ ಬೆಂದು ಬೇಳೆಯೊಂದಿಗೆ ಬೆರೆತುಹೋಗುವಂಥವು.

ಆದ್ದರಿಂದಲೇ ಕೂಟಿನಲ್ಲಿ ಹೋಳುಗಳಿಗಾಗಲೀ ರಸಕ್ಕಾಗಲೀ ಪ್ರತ್ಯೇಕ ಅಸ್ತಿತ್ವವಿಲ್ಲ. ಕೂಟಿನ ಇನ್ನೊಂದು ಲಕ್ಷಣವೆಂದರೆ ಅದಕ್ಕೆ ಹುಣಿಸೆ ಹುಳಿ ಅಥವಾ ಟೊಮ್ಯಾಟೊ ಹಾಕಲಿಕ್ಕಿಲ್ಲ. ಹಾಗಾಗಿಯೇ ಅದು ‘ಹುಳಿ’ ಅಲ್ಲ. ಅದನ್ನು ಹುಳಿ, ಸಾಂಬಾರ್ ಅಂತೆಲ್ಲ ಕರೆಯಲಿಕ್ಕಿಲ್ಲ. ಅಪ್ಪಿತಪ್ಪಿ ಹಾಗೇನಾದರೂ ಕರೆದಿರೋ, ಕೂಟು ಕೋಪದಿಂದ ಕುದಿದು ನಿಮ್ಮ ಮೇಲೆ ಮಾನನಷ್ಟ ಮೊಕದ್ದಮೆ ಹೂಡೀತು! ಸಾಂಬಾರ್‌ನ ಉಲ್ಲೇಖ ಬಂದಿದ್ದರಿಂದ ಇಲ್ಲೊಂದು ಚಿಕ್ಕ ಉಪಕಥೆಯನ್ನೂ ಸೇರಿಸುತ್ತೇನೆ. ಇದನ್ನು ನಾನು ಅಂತರಜಾಲದಲ್ಲಿ ಓದಿದ್ದು. ಮೂರು ವರ್ಷಗಳ ಹಿಂದೆ ನೆಟ್‌ಫ್ಲಿಕ್ಸ್‌ನಲ್ಲಿ ನೋಡಿದ್ದ ‘ರಾಜಾ, ರಸೋಯಿ, ಔರ್ ಅನ್ಯ ಕಹಾನಿಯಾಂ’ದಲ್ಲಿಯೂ ಇದರ ಪ್ರಸ್ತಾವ ಆಗಿತ್ತು.

ಸಾಂಬಾರಿನ ಆವಿಷ್ಕಾರವಾದದ್ದು ಶಹಾಜಿ ಭೋಂಸ್ಲೆ ಎಂಬ ಮರಾಠಾ ರಾಜನ ಅಡುಗೆಮನೆಯಲ್ಲಿ. ತಮಿಳುನಾಡಿನ ತಂಜಾವೂರಿನಲ್ಲಿ ಮರಾಠರ ಆಧಿಪತ್ಯ ಸ್ಥಾಪಿಸಿದ್ದ, ಶಿವಾಜಿಯ ಮಲಸಹೋದರನಾಗಿದ್ದ ಏಕೋಜಿಯ ಪುತ್ರನೇ ಶಹಾಜಿ. ವಾಸ್ತುಶಾಸ್ತ್ರ ಮತ್ತು ಸಾಹಿತ್ಯಕ್ಷೇತ್ರಗಳನ್ನು ವಿಶೇಷವಾಗಿ ಉತ್ತೇಜಿಸುತ್ತಿದ್ದ ಶಹಾಜಿಗೆ ಪಾಕವಿದ್ಯೆಯಲ್ಲೂ ಹೆಚ್ಚಿನ ಆಸಕ್ತಿ ಇತ್ತು. ಒಮ್ಮೆ ಶಹಾಜಿಗೆ ಪಕ್ಕಾ ಮಹಾರಾಷ್ಟ್ರ ಪದ್ಧತಿಯ ‘ಆಮ್ಠಿ ಡಾಳ್’ ಸವಿಯಬೇಕೆಂಬ ಆಸೆಯಾಯ್ತು. ಮಹಾರಾಷ್ಟ್ರದಲ್ಲಾದರೆ ಅದಕ್ಕೆ ಹುಳಿ ರುಚಿ ಬರಲಿಕ್ಕೆ ಕೋಕಂ (ಕನ್ನಡದಲ್ಲಿ ಬೀರುಂಡಿ, ತುಳು ಭಾಷೆಯಲ್ಲಿ ಪುನರ್ಪುಳಿ) ಬಳಸುವುದು. ತಂಜಾವೂರಿನಲ್ಲಿ ಆಗ
ಕೋಕಂ ಲಭ್ಯವಿರಲಿಲ್ಲ. ಅದಕ್ಕೆ ಬದಲಾಗಿ ಹುಣಿಸೆಹಣ್ಣು ಬಳಸಬಹುದಲ್ಲ ಎಂದು ಶಹಾಜಿಗೆ ಹೊಳೆಯಿತು.

ಹುಣಿಸೆರಸ, ಬೇಯಿಸಿದ ಬೇಳೆ, ಮತ್ತು ತರಕಾರಿಗಳ ಮಿಶ್ರಣವನ್ನು ಕೊತಕೊತ ಕುದಿಸಿದಾಗ ವಿಶೇಷ ಖಾದ್ಯವೊಂದು ಸಿದ್ಧವಾಯಿತು. ಆಗ ತಾನೆ ಅಲ್ಲಿಗೆ ಶಿವಾಜಿಯ ಮಗ ಸಾಂಭಾಜಿ ಭೇಟಿಯಿತ್ತಿದ್ದನಂತೆ. ತನ್ನ ದಾಯಾದಿಗೆ ರುಚಿಕರ ಆತಿಥ್ಯವಿರಲೆಂದು ಶಹಾಜಿಯು ಸಾಂಭಾಜಿಗೆ ಆ ಖಾದ್ಯವನ್ನೇ ಬಡಿಸಿದನು. ಅದು ‘ಸಾಂಭಾಚೇ ಆಹಾರ್’ ಎಂದು ತಂಜಾವೂರಿನ ಅರಮನೆಯಲ್ಲಿ ರಾಜಮಾನ್ಯತೆ ಪಡೆಯಿತು. ಮುಂದೆ ಅದೇ ಜನರ ಬಾಯಿಯಲ್ಲಿ ‘ಸಾಂಬಾರ್’ ಆಯಿತು! ಈ ಐತಿಹ್ಯವನ್ನು ಮೋಡಿ ಲಿಪಿಯಲ್ಲಿ ದಾಖಲಿಸಿದ್ದು ತಂಜಾವೂರು ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಇದೆಯಂತೆ.

ಇರಲಿ, ಈಗ ಬ್ಯಾಕ್ ಟು ಕೂಟು. ಆವತ್ತಿನ ನಮ್ಮ ಚರ್ಚೆಯಲ್ಲಿ ಗುರುಮೂರ್ತಿ ಹೇಳಿದ್ದ ಒಂದು ಪುರಾಣಪ್ರಸಂಗ ನನಗಿನ್ನೂ ಚೆನ್ನಾಗಿ ನೆನಪಿದೆ. ಅದನ್ನಿಲ್ಲಿ ನಿಮಗೂ ತಿಳಿಸುತ್ತೇನೆ. ಮುಂದೆಂದಾದರೂ ಕೂಟು ಚಪ್ಪರಿಸುವ ಸಂದರ್ಭ ಬಂದರೆ, ಊಟದಲ್ಲಿ ಬಡಿಸಿದ್ದು ಸಾಂಬಾರೂ ಅಲ್ಲ ಪಲ್ಯವೂ ಅಲ್ಲ ಇದ್ಯಾವ ಪದಾರ್ಥ
ವಪ್ಪಾ ಎಂಬ ಸನ್ನಿವೇಶ ಎದುರಾದರೆ ಈ ಕಥೆಯನ್ನು ನೆನಪಿಸಿಕೊಳ್ಳಿ. ಏನೆಂದರೆ- ಭಕ್ತಪ್ರಹ್ಲಾದನ ಕಥೆಯಲ್ಲಿ ಬರುವ ಹಿರಣ್ಯಕಶಿಪು (ಪ್ರಹ್ಲಾದನ ಅಪ್ಪ) ಕಠೋರ ತಪಸ್ಸನ್ನಾಚರಿಸಿ ಬ್ರಹ್ಮನಿಂದ ವಿಶೇಷ ವಾದ ವರವನ್ನು ಪಡೆದಿದ್ದನಷ್ಟೆ? ಹಗಲಲ್ಲಾಗಲೀ ರಾತ್ರಿಯ ಲ್ಲಾಗಲೀ, ಮನೆಯ ಒಳಗಾಗಲೀ ಹೊರಗಾಗಲೀ, ಮನುಷ್ಯ
ನಿಂದಾಗಲೀ ಪ್ರಾಣಿಯಿಂದಾಗಲೀ, ಭೂಮಿಯ ಮೇಲಾಗಲೀ ಆಕಾಶದಲ್ಲಾಗಲೀ ತನಗೆ ಸಾವು ಬರಬಾರದು; ಅಂದರೆ ಹೆಚ್ಚೂಕಡಿಮೆ ತನಗೆ ಅಮರತ್ವ ಸಿದ್ಧಿಯಾಗಬೇಕು ಎಂಬುದು ಹಿರಣ್ಯಕಶಿಪುವಿನ ಲೆಕ್ಕಾಚಾರ.

ಬ್ರಹ್ಮನೇನೋ ಅವನ ಬೇಡಿಕೆಗೆ ತಥಾಸ್ತು ಎಂದುಬಿಟ್ಟ. ವರ ಪಡೆದ ಹಿರಣ್ಯಕಶಿಪುವಿನ ಅಟ್ಟಹಾಸ ದಿನೇದಿನೇ ಹೆಚ್ಚತೊಡಗಿತು. ಲೋಕಕಂಟಕತನ ವಿಪರೀತ ವಾದಾಗ ದೇವತೆಗಳೆಲ್ಲ ಮಹಾವಿಷ್ಣುವಿನ ಮರೆಹೊಗಬೇಕಾಯ್ತು. ಮಹಾವಿಷ್ಣು ನರಸಿಂಹಾವತಾರದಲ್ಲಿ ಬಂದು ಹಗಲೂ ಅಲ್ಲದ ರಾತ್ರಿಯೂ ಅಲ್ಲದ ಮುಸ್ಸಂಜೆಯಲ್ಲಿ, ಮನೆಯ ಒಳಗೂ ಅಲ್ಲದ ಹೊರಗೂ ಅಲ್ಲದ ಕಂಬದಿಂದ ಉದ್ಭವಿಸಿ, ಮನುಷ್ಯನೂ ಅಲ್ಲದ ಪ್ರಾಣಿಯೂ ಅಲ್ಲದ ನರಸಿಂಹ ರೂಪದಲ್ಲಿ, ಭೂಮಿಯ ಮೇಲೂ ಅಲ್ಲದೆ ಆಕಾಶದಲ್ಲೂ ಅಲ್ಲದೆ ತೊಡೆಯಮೇಲೆ ಹಿಡಿದುಕೊಂಡು, ಬ್ರಹ್ಮ ಕೊಟ್ಟಿದ್ದ ವರಕ್ಕೆ ಯಾವುದೇ ಚ್ಯುತಿ ಬರದಂತೆ ಚಾಲಾಕಿನಿಂದ
ಹಿರಣ್ಯಕಶಿಪುವನ್ನು ಕೊಂದುಬಿಟ್ಟನು- ಎಂಬಷ್ಟು ಕಥೆ ನಮಗೆಲ್ಲ ಗೊತ್ತಿರುವಂಥದ್ದೇ. ಅದರ ಕೊನೆಯ ಬಾಲಂಗೋಚಿಯೇ ಭಲೇ ರುಚಿಕರವಾಗಿರುವುದು: ಹಿರಣ್ಯಕಶಿಪು ಸಾಯುವ ಮುನ್ನ ಕೊನೆಯ ಆಸೆಯಾಗಿ ಮಹಾವಿಷ್ಣುವಿನ ಬಳಿಯೂ ತನ್ನ ಮಾಮೂಲಿನ ‘ಅದೂ ಅಲ್ಲ ಇದೂ ಅಲ್ಲ…’ ಸ್ಟೈಲ್‌ನಲ್ಲಿ ಒಂದು
ಡಿಮ್ಯಾಂಡ್ ಸಲ್ಲಿಸಿದನಂತೆ.

ಅದೇನೆಂದರೆ ತನಗೆ ಸಾಂಬಾರೂ ಅಲ್ಲ, ಪಲ್ಯವೂ ಅಲ್ಲ ಅಂತಹ ವ್ಯಂಜನವೊಂದು ಉಣ್ಣಲಿಕ್ಕೆ ಬೇಕು ಎಂದು. ಆಗ ಸ್ವಯಂ ಮಹಾವಿಷ್ಣುವೇ ತಯಾರು ಮಾಡಿಕೊಟ್ಟ, ಹಿರಣ್ಯಕಶಿಪು ಹೊಟ್ಟೆತುಂಬ ಉಂಡ ಖಾದ್ಯವೇ ಕೂಟು! ಹಿರಣ್ಯಕಶಿಪುವಿನ ಆ ಅಂತಿಮ ಕೂಟು ಸೇವನೆ (ಲಾಸ್ಟ್ ಸಪ್ಪರ್) ಬಳಿಕವಷ್ಟೇ ವಿಷ್ಣು ಅವನನ್ನು ಕಟ್ ಮಾಡಿಬಿಟ್ಟದ್ದು. ಈ ಕಥೆಯು ಯಾವ ಪುರಾಣಗಳಲ್ಲೂ ಉಲ್ಲೇಖಗೊಂಡಿಲ್ಲವಾದರೂ ಹಿರಣ್ಯ ಕಶಿಪುವಿನ ‘ಚಾಪೆಕೆಳಗೆ ತೂರುವಿಕೆ’ಗೆ ಶ್ರೀಮನ್ನಾರಾಯಣನು ರಂಗೋಲಿಯಡಿಗೆ ತೂರುವ ಚಾಣಾಕ್ಷತೆ ತೋರಿಸಿದ್ದಕ್ಕೆ ತಾಳೆ ಆಗುವುದಂತೂ ಹೌದು. ತುಳು ಭಾಷೆಯಲ್ಲಿ ಪಲ್ಯಕ್ಕೂ ಸಾಂಬಾರಿಗೂ ‘ಕಜಿಪು’ ಎಂಬ ಪದ ಇರುವುದು ಹಿರಣ್ಯಕಶಿಪುವಿನ ನೆನಪಲ್ಲೇ ಇರಬಹುದೇ ಎಂದು ನನ್ನ ತಲೆಗೆ ಹೊಳೆಯುವುದೂ ಹೌದು.

ಕೂಟು ಒಂದು ತಮಿಳು ವಿಶೇಷ ಖಾದ್ಯ ಎಂದು ಹೇಳಿದರೆ ಬೆಂಗಳೂರು ಮೈಸೂರು ಪ್ರದೇಶದ ಕನ್ನಡಿಗರು ಆಕ್ಷೇಪಿಸಬಹುದು. ಏಕೆಂದರೆ ಅಲ್ಲಿ ಹೆಚ್ಚಿನವರಿಗೆ ಕೂಟು ಗೊತ್ತು. ಅಂತರ ಜಾಲದಲ್ಲಿ ಕನ್ನಡಿತಿಯರ ಅಡುಗೆಮನೆ (ಬ್ಲಾಗ್)ಗಳಿಗೆ ಒಂದು ಸುತ್ತುಹಾಕಿ ಬನ್ನಿ. ಹೀರೆ, ಸೋರೆ, ಪಡುವಲ, ಬೂದುಗುಂಬಳ,
ಚೀನಿಕಾಯಿ, ಕೋಸುಗೆಡ್ಡೆ, ಸುವರ್ಣಗೆಡ್ಡೆ, ಆಲೂಗಡ್ಡೆ, ಪಾಲಕ್, ಮೆಂತ್ಯಸೊಪ್ಪು… ಹೀಗೆ ತರಹೇವಾರಿ ತರಕಾರಿಗಳ ಕೂಟು ಘಮ್ಮೆಂದು ನಿಮ್ಮ ಮೂಗಿಗೆ ಬಡಿಯುತ್ತದೆ. ಒಂದು ಬ್ಲಾಗ್ ನಲ್ಲಂತೂ ‘ರಾಯರ ಕೂಟು’ ಕೂಡ ಇದೆ! ಅಂದರೆ…? ಗಾಬರಿಯಾಗಬೇಡಿ, ಯಾವ ರಾಯರನ್ನೂ ಕೊಚ್ಚಿಲ್ಲ ಕಡಿದಿಲ್ಲ.

ಅದು ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ತಯಾರಿಸುವಂತೆ ಕೂಟು ಹೇಗೆ ತಯಾರಿಸುವುದೆಂದು ತಿಳಿಸುವ ಬ್ಲಾಗ್. ಅನ್ನದ ಜೊತೆಗಷ್ಟೇ ಅಲ್ಲದೇ ರೊಟ್ಟಿ, ಪೂರಿ, ಚಪಾತಿಗೂ ಕೂಟು ಒಳ್ಳೆಯ ಸಾಥ್ ನೀಡುವುದರಿಂದ, ಅಳಿದುಳಿದ ತರಕಾರಿಗಳನ್ನೆಲ್ಲ ಸೇರಿಸಿ ‘ಒಗ್ಗಟ್ಟಿನಲ್ಲಿ ಬಲವಿದೆ’ ಎಂದು ಸಾರಲಿಕ್ಕೆ ಮಿಕ್ಸ್‌ಡ್ ವೆಜಿಟೆಬಲ್ಸ್ ಕೂಟು ಒಳ್ಳೆಯ ಆಯ್ಕೆಯಾದ್ದರಿಂದ ಅದರ ಲೋಕಖ್ಯಾತಿ ಹೆಚ್ಚು. ಶಂಕರಾಚಾರ್ಯರು ಶಿವಮಾನಸ ಸೋತ್ರದ ‘ಶಾಕಾನಾಮಯುತಂ ಜಲಂ ರುಚಿಕರಂ ಕರ್ಪೂರಖಂಡೋಜ್ಜ್ವಲಂ’ ಎಂಬೊಂದು ಸಾಲಿ ನಲ್ಲಿ ಶಾಕಾನಾಂ ಅಯುತಂ ಎಂದಿರುವುದು ಮಾತ್ರ ಕೊಂಚ ಜಿಜ್ಞಾಸೆಗೆ ಕಾರಣವಾಗುವಂತಿದೆ. ಸಂಸ್ಕೃತದಲ್ಲಿ ಅಯುತ ಅಂದರೆ ಸೇರಿಕೊಂಡಿಲ್ಲದ, ಮಿಶ್ರವಲ್ಲದ ಎಂದರ್ಥ. ಹಾಗಾದರೆ ಶಂಕರಾಚಾರ್ಯರು ಶಾಕಾನಾಂ ಅಯುತಂ- ಬೇರೆಬೇರೆ ತರಕಾರಿ
ಗಳಿರುವ ಬುಟ್ಟಿಯನ್ನು ಶಿವನಿಗೆ ಅರ್ಪಿಸುತ್ತೇನೆ ಎಂದದ್ದಿರ ಬಹುದು. ಅವುಗಳ ಕೂಟು ಮಾಡಿ ಅದ್ವೈತಗೊಳಿಸಿ ಅಲ್ಲ. ಬೇಕಿದ್ದರೆ ಶಿವನೇ ಪಾರ್ವತಿಗೆ ಹೇಳಿ ಕೂಟು ಮಾಡಿಸಿಕೊಳ್ಳಲಿ ಎಂದು ಕೂಡ ಇರಬಹುದು.

ಕೂಟಿನ ಮೂಲ ತಮಿಳಲ್ಲ ನಮ್ಮ ಕನ್ನಡವೇ, ಕುಮಾರವ್ಯಾಸನ ಕಾವ್ಯದಲ್ಲೇ ಕೂಟಿನ ಪ್ರಸ್ತಾಪವಿದೆ ಎಂದು ಪ್ರತಿಪಾದಿಸುವ ಅಪ್ಪಟ ಕನ್ನಡಿಗರೂ ಸಿಗಬಹುದು. ನನಗೆ ಕುಮಾರವ್ಯಾಸನಿಂದ ಕೂಟಿನ ಉಲ್ಲೇಖ ಸಿಕ್ಕಿಲ್ಲ. ಎಂ. ಆರ್. ಶ್ರೀನಿವಾಸಮೂರ್ತಿಯವರ ಪ್ರಸಿದ್ಧ ಕೃತಿ ರಂಗಣ್ಣನ ಕನಸಿನ ದಿನಗಳು ಇದರಲ್ಲಿ ಕೂಟು
ಕಾಣಿಸಿಕೊಂಡಿದೆ. ಆ ಭಾಗವನ್ನು ನೀವೊಮ್ಮೆ ಓದಿ ಸವಿಯಬೇಕು (ಬಾಯಿಂದ ಜೊಲ್ಲು ಸುರಿದರೆ ನನ್ನನ್ನು ಬೈಯಬೇಡಿ): ‘ಸ್ನಾನಾದಿಗಳು ಮುಗಿದಮೇಲೆ ವೆಂಕಟಸುಬ್ಬಯ್ಯ ದೇವತಾರ್ಚನೆ ಮಾಡಿದನು. ಬಳಿಕ ಊಟಕ್ಕೆ ಕುಳಿತಾಯಿತು. ಸೊಗಸಾದ ಅಡುಗೆ!

ಅದರಲ್ಲಿ ಪಾಯಸ ಬಹಳ ಸೊಗಸಾಗಿತ್ತು. ಮನೆಯಲ್ಲೇ ಯಥೇಷ್ಟ ವಾಗಿ ಹಾಲು ದೊರೆಯುತ್ತಿದುದರಿಂದ ವೆಂಕಟಸುಬ್ಬಯ್ಯಗೆ ಯೋಚನೆ ಇರಲಿಲ್ಲ. ಒಳ್ಳೆಯ ಹೆಪ್ಪು ಹಾಕಿದ ಧೈಂಡಿ ಮೊಸರು. ಎಲ್ಲವನ್ನೂ ಮನೆಯಾಕೆ ಧಾರಾಳವಾಗಿ ಬಡಿಸಿದಳು. ರಂಗಣ್ಣನೂ ಧಾರಾಳವಾಗಿಯೇ ಹೊಟ್ಟೆಗೆ ಸೇರಿಸಿದನು. ತಾನು ಸ್ವಲ್ಪ ಕಾಲದ ಹಿಂದೆ ಅಷ್ಟೊಂದು ಉಪ್ಪಿಟ್ಟು, ಬೋಂಡ, ರಸಬಾಳೆಹಣ್ಣು, ಕಾಫಿಮತ್ತು ಎಳನೀರುಗಳನ್ನು ತುಂಬಿಕೊಂಡು ತೇಗಿದ್ದವನು, ಎರಡು ದಿವಸಗಳ ಉಪವಾಸವಿದ್ದ ಗೋದಾವರಿಯ ಬ್ರಾಹ್ಮಣನಂತೆ ಆ ಕೂಟು, ಮಜ್ಜಿಗೆಹುಳಿ, ಚಿತ್ರಾನ್ನ, ಆಂಬೊಡೆ, ಹೋಳಿಗೆ ಮತ್ತು ಪಾಯಸಗಳನ್ನು ಮಹೇಂದ್ರಜಾಲ ಮಾಡಿದಂತೆ ಮಾಯಮಾಡಿಸಿದ್ದು ಅವನಿಗೇನೆ ಆಶ್ಚರ್ಯವಾಯತು.

ಎಂತಹ ವಿಚಿತ್ರ!’ ಅಂದಹಾಗೆ ತಮಿಳರಿಗೆಲ್ಲ (ನನ್ನ ಹೈದರಾಬಾದ್ ದೋಸ್ತ ಗುರುಮೂರ್ತಿಯೂ ಸೇರಿದಂತೆ) ಕೂಟು ಬಗ್ಗೆ ಅಪಾರ ಹೆಮ್ಮೆ ಎಂದೆನಷ್ಟೆ? ಕನ್ನಡದಲ್ಲೊಂದು ಜನಪ್ರಿಯ ಗಾದೆಯಿದೆ ‘ಕೂತು ಉಣ್ಣುವವನಿಗೆ ಕುಡಿಕೆಹೊನ್ನು ಸಾಲದು…’ ಎಂದು. ಕೂಟಿನ ರುಚಿಗೆ ಅನ್ವಯಿಸುವಂತೆ ಅದನ್ನು ‘ಕೂಟು ಉಣ್ಣುವವನಿಗೆ ಗಡಿಗೆಅನ್ನ ಸಾಲದು’ ಎಂದು ತಿದ್ದಿಕೊಳ್ಳಬಹುದು!