ತುಮಕೂರು: ಐತಿಹಾಸಿಕ ಪ್ರಸಿದ್ಧ ಗೂಳೂರು ಶ್ರೀ ಮಹಾಗಣಪತಿಯ ವಿಸರ್ಜನಾ ಮಹೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ವೈಭವಯುತವಾಗಿ ನಡೆಯಿತು.
ಬಲಿಪಾಢ್ಯಮಿಯಂದು ಇತಿಹಾಸ ಪ್ರಸಿದ್ದ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಿ ಆರಂಭಿಸಲಾದ ಗೂಳೂರು ಗಣಪನ ಪೂಜಾ ಕೈಂಕರ್ಯಗಳು ಕಾರ್ತಿಕ ಮಾಸದಲ್ಲಿ ಸಂಪೂರ್ಣಗೊಂಡು, ಸಕಲ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಗೂಳೂರು ಕೆರೆಯಲ್ಲಿ ವರ್ಣರಂಜಿತ ಅಬ್ಬರದ ನಡುವೆ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು.
ಭಾನುವಾರ ಮಧ್ಯಾಹ್ನ 12.30 ರಿಂದ ಊರಿನ ಪ್ರಮುಖ ಬೀದಿಗಳಲ್ಲಿ ಗಣೇಶಮೂರ್ತಿಯ ಮೆರವಣಿಗೆ ಆರಂಭವಾಯಿತು. ಗ್ರಾಮದ ಮಹಿಳೆಯರು ತಮ್ಮ ಮನೆಗಳ ಮುಂದೆ ತಳಿರು, ತೋರಣಗಳಿಂದ ಸಿಂಗರಿಸಿ, ಬಣ್ಣ, ಬಣ್ಣದ ರಂಗೋಲಿ ಹಾಕಿ ಗಣೇಶಮೂರ್ತಿಗೆ ಹಣ್ಣು, ಕಾಯಿ, ಪೂಜಾ ಸಾಮಗ್ರಿಗಳನ್ನು ಅರ್ಪಿಸಿ ಕೃತಾರ್ಥರಾದರು. ಮಧ್ಯಾಹ್ನ ಮೂರು ಗಂಟೆಯವರಗೆ ಮೆರವಣಿಗೆ ನಡೆಸಿದ ನಂತರ, ಭಾನುವಾರ ಸಂಜೆ ಗೂಳೂರು ಕೆರೆಯಲ್ಲಿ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಗಣೇಶಮೂರ್ತಿಯನ್ನು ವಿಸರ್ಜಿಸಲಾಯಿತು.
ಗೂಳೂರು ಗಣೇಶ ಜಾತ್ರಾ ಮಹೋತ್ಸವದ ಆಂಗವಾಗಿ ಡಿ. 18ರಂದು ಬೆಳಿಗ್ಗೆ 11 ಗಂಟೆಗೆ ಶ್ರೀ ಗೂಳೂರು ಮಹಾಗಣಪತಿ ಕೃಪಾಪೋಷಿತ ನಾಟಕ ಮಂಡಳಿ ಹಾಗೂ ಅಬ್ಬಯ್ಯನಾಯ್ಡು ಕಲಾ ಸಂಘದ ವತಿಯಿಂದ ಭಕ್ತ ಪ್ರಧಾನ ಪೌರಾಣಿಕ ನಾಟಕ ನಲ್ಲತಂಗ ಅಥವಾ ಶನಿಪ್ರಭಾವ ಎಂಬ ನಾಟಕದ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.