ಮೂರ್ತಿಪೂಜೆ
ಮೊನ್ನೆ ದಿಲ್ಲಿಗೆ ಹೋಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಅವರು ಕರ್ನಾಟಕದಲ್ಲಿ ಪಕ್ಷವನ್ನು ಸಂಘಟಿಸಲು ಮಾಡಬೇಕಾದ ಕೆಲಸಗಳ ರೂಪುರೇಷೆಯ ಬಗ್ಗೆ ವಿವರಿಸಿದರಂತೆ.
ವಿಧಾನ ಪರಿಷತ್ತಿನಲ್ಲಿ ಪಕ್ಷದ ಶಾಸಕಾಂಗ ನಾಯಕರು ಯಾರಾಗಬೇಕು? ವಿಧಾನಸಭೆ ಮತ್ತು ಪರಿಷತ್ತಿನಲ್ಲಿ ಉಪ ನಾಯಕರು ಯಾರಾಗಬೇಕು? ಇದೇ ರೀತಿ ಯಾರು ಪಕ್ಷದ ಪದಾಧಿಕಾರಿಗಳಾಗಬೇಕು ಎಂಬ ಕುರಿತು ಅವರು ನೀಡಿದ ಪಟ್ಟಿಯನ್ನು ಗಮನಿಸಿದ ನಡ್ಡಾ ಅವರು, ‘ಈ ಕುರಿತು ಇನ್ನೊಂದು ವಾರದಲ್ಲಿ ತೀರ್ಮಾನ ತೆಗೆದುಕೊಳ್ಳೋಣ. ಎನಿ ವೇ, ಪಕ್ಷದ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೇಲೆ ನೀವು ತುಂಬ ಚೆನ್ನಾಗಿ ಕೆಲಸ ಮಾಡುತ್ತಿದ್ದೀರಿ ಎಂಬ
ರಿಪೋರ್ಟು ಬಂದಿದೆ. ಕಂಗ್ರಾಟ್ಸ್’ ಎಂದರಂತೆ.
ಯಾವಾಗ ನಡ್ಡಾ ಅವರು ತಮ್ಮ ಕೆಲಸದ ಬಗ್ಗೆ ತಾರೀಫು ಮಾಡಿದರೋ ಆಗ ವಿಜಯೇಂದ್ರ, ‘ಪಕ್ಷ ಸಂಘಟಿಸುವ ವಿಷಯದಲ್ಲಿ ನನ್ನ ಕೈಲಾದ ಎಲ್ಲವನ್ನೂ ಮಾಡುತ್ತೇನೆ ಸರ್, ನೀವಿಟ್ಟ ನಂಬಿಕೆಯನ್ನು ಹುಸಿಗೊಳಿಸದಂತೆ ಕೆಲಸ ಮಾಡುತ್ತೇನೆ. ಆದರೆ ಕರ್ನಾಟಕದಲ್ಲಿ ಸಣ್ಣದೊಂದು ಸಮಸ್ಯೆ ಎದುರಾಗಿದೆ. ನೀವು ಕ್ರಮ ಕೈಗೊಳ್ಳದಿದ್ದರೆ ಈ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆಗಳಿವೆ’ ಎಂದಿದ್ದಾರೆ. ಈ ಮಾತು ಕೇಳಿ ಗಂಭೀರರಾದ ನಡ್ಡಾ ಅವರು, ‘ಏನು ಸಮಸ್ಯೆ ಹೇಳಿ’
ಎಂದಿದ್ದಾರೆ. ಆಗ ವಿಜಯೇಂದ್ರ, ‘ಕರ್ನಾಟಕದಲ್ಲಿ ಪಕ್ಷ ವನ್ನು ಸಂಘಟಿಸಲು ನಾವು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದೇವೆ. ಅದಕ್ಕೆ ರೆಸ್ಪಾನ್ಸೂ ಚೆನ್ನಾಗಿದೆ. ಆದರೆ ಸೀನಿಯರ್ ಲೀಡರುಗಳಾದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಸೋಮಣ್ಣ ಮಾತ್ರ ಉಲ್ಟಾ ಮಾತನಾಡುತ್ತಿದ್ದಾರೆ.
ಈ ಪೈಕಿ ಯತ್ನಾಳ್ ಅವರಂತೂ ಇಷ್ಟ ಬಂದಂತೆ ಮಾತನಾಡುತ್ತಿದ್ದಾರೆ. ಕಳೆದ ಅಸೆಂಬ್ಲಿ ಎಲೆಕ್ಷನ್ನಿನಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸೋಲಿಸಲು ನಾನು ದುಡ್ಡು ಕಳಿಸಿದ್ದೆ ಎಂಬುದು ಸೇರಿದಂತೆ ಪಕ್ಷಕ್ಕೆ ಮುಜುಗರವಾಗುವಂಥ ಹಲವು ಸ್ಟೇಟ್ಮೆಂಟುಗಳನ್ನು ಕೊಡುತ್ತಿದ್ದಾರೆ. ಇವತ್ತು ನಾವು ತಳಮಟ್ಟದಿಂದ ಪಕ್ಷ ಸಂಘಟಿಸಲು ಪ್ರಯತ್ನ ಮಾಡುತ್ತಿರುವಾಗ ಇವರು ಹೀಗೆ ಮಾತನಾಡುತ್ತಾ ಹೋದರೆ ಪಕ್ಷದ ಇಮೇಜಿಗೆ ಡ್ಯಾಮೇಜ್ ಆಗುವುದಿಲ್ಲವೇ? ಎಲ್ಲಕ್ಕಿಂತ ಮುಖ್ಯವಾಗಿ ಅವರು ಇಷ್ಟೆಲ್ಲ ಮಾತನಾಡುತ್ತಿದ್ದರೂ ಹೈಕಮಾಂಡ್ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಪ್ರಶ್ನೆ ಹಲವು ಕಡೆಗಳಿಂದ ಕೇಳುತ್ತಿದೆ. ಹೀಗಾಗಿ ನೀವು ತಡ ಮಾಡದೆ ಈ ವಿಷಯವನ್ನು ಸೆಟ್ಲ್ ಮಾಡಬೇಕು ಸರ್’ ಅಂತ ಹೇಳಿದಾಗ ನಡ್ಡಾ ಅರೆಕ್ಷಣ ಮೌನವಾಗಿದ್ದರಂತೆ.
ತದನಂತರ ಮಾತನಾಡಿದ ಅವರು, ‘ಈ ಎಲ್ಲವನ್ನೂ ನಾವು ಗಮನಿಸುತ್ತಲೇ ಇದ್ದೇವೆ. ಆದರೆ ಇಂಥ ವಿಷಯಗಳಲ್ಲಿ ಏಕಾಏಕಿ ಕ್ರಮ ಕೈಗೊಳ್ಳುವ ಮಟ್ಟಕ್ಕೆ ಹೋಗುವುದು ಬೇಡ. ಹಾಗಂತ ಅವರು ಈ ರೀತಿ ಮಾತನಾಡುತ್ತಿದ್ದರೆ ಅದನ್ನು ಸಹಿಸಿಕೊಳ್ಳುತ್ತೇವೆ ಅಂತಲೂ ಅಲ್ಲ’ ಎಂದಿದ್ದಾರೆ. ಮುಂದುವರಿದ ನಡ್ಡಾ, ‘ಯತ್ನಾಳ್ ವಿಷಯವಿರಲಿ, ಸೋಮಣ್ಣ ಅವರ ವಿಷಯವೇ ಇರಲಿ, ಸದ್ಯದಲ್ಲೇ ಅದನ್ನು ಸರಿ ಮಾಡುತ್ತೇವೆ. ಆದರೆ ಅವರು ಮಾತನಾಡಿದರು ಅಂತ
ಯಾವ ಕಾರಣಕ್ಕೂ ನೀವು ದುಡುಕಲು ಹೋಗಬೇಡಿ. ಕೌಂಟರ್ ಸ್ಟೇಟ್ಮೆಂಟುಗಳನ್ನು ಕೊಡಬೇಡಿ’ ಎಂದಿದ್ದಾರೆ. ಹೀಗೆ ನಡ್ಡಾ ಅವರು ನೀಡಿದ ಭರವಸೆಯನ್ನು ನೆಚ್ಚಿಕೊಂಡು ಕರ್ನಾಟಕಕ್ಕೆ ಮರಳಿದ ವಿಜಯೇಂದ್ರ ತಮಗೆ ತಲೆನೋವಾಗಿ ರುವ ಯತ್ನಾಳ್ ಮತ್ತು ಸೋಮಣ್ಣ ಎಪಿಸೋಡನ್ನು ವರಿಷ್ಠರು ಹೇಗೆ ಸೆಟ್ಲ್ ಮಾಡುತ್ತಾರೆ ಅಂತ ಕಾಯತೊಡಗಿದ್ದಾರೆ.
ಬಿಜೆಪಿ ವರಿಷ್ಠರ ಚಿಂತೆ ಏನು?
ಅಂದ ಹಾಗೆ, ರಾಜ್ಯ ಬಿಜೆಪಿಯನ್ನು ಸಂಘಟಿಸುವ ವಿಷಯದಲ್ಲಿ ತಮಗಿರುವ ಅಡ್ಡಿಯೇನು? ಅಂತ ನಡ್ಡಾ ಅವರಿಗೆ ವಿಜಯೇಂದ್ರ ಹೇಳಿರುವುದೇನೋ ಸರಿ. ಆದರೆ
ಯತ್ನಾಳ್ ಮತ್ತು ಸೋಮಣ್ಣ ಎಪಿಸೋಡನ್ನು ಸರಳವಾಗಿ ಬಗೆಹರಿಸುವ ದಾರಿ ವರಿಷ್ಠರಿಗೂ ಕಾಣಿಸುತ್ತಿಲ್ಲ. ಕಾರಣ? ಪಕ್ಷದ ಪವರ್ಗೆ ಅಂಟಿಕೊಂಡ ನಾಯಕರಾಗಿದ್ದರೆ ‘ಎಲ್ಲ ಮರೆತು ಸುಮ್ಮನಿರಿ’ ಎಂದು ಯತ್ನಾಳ್ ಮತ್ತು ಸೋಮಣ್ಣ ಅವರಿಗೆ ಕಂಡೀಷನ್ ಹಾಕಬಹುದಿತ್ತು. ಆದರೆ ಸ್ವಪ್ರಯತ್ನಗಳಿಂದ ಇಮೇಜು ಬೆಳೆಸಿಕೊಂಡಿರುವ ಅವರನ್ನು ಕಂಡೀಷನ್ನು ಹಾಕಿ ಕಂಟ್ರೋಲಿಗೆ ತೆಗೆದುಕೊಳ್ಳುವುದು ಕಷ್ಟ ಎಂಬುದು ಬಿಜೆಪಿ ವರಿಷ್ಠರಿಗೆ ಗೊತ್ತು. ಈ ಪೈಕಿ ಯತ್ನಾಳ್ ಯಾವ ಮಟ್ಟಿಗೆ ಎಮರ್ಜ್ ಆಗಿದ್ದಾರೆಂದರೆ, ಕರ್ನಾಟಕದಲ್ಲಿ ಬೇರೆ ಯಾವುದೇ ನಾಯಕರಿಗಿಂತ ದೊಡ್ಡ ಮಟ್ಟದಲ್ಲಿ ಅವರಿಗೆ ‘ಹಿಂದೂ ಹುಲಿ’ ಎಂಬ ಇಮೇಜು ಇದೆ. ಅದೇ
ರೀತಿ ಸಂಘಟನೆಯ ಮಟ್ಟದಲ್ಲಿ ಯತ್ನಾಳ್ ಅವರಿಗೆ ಜನಪ್ರಿಯತೆ ಹೆಚ್ಚು.
ಹೀಗಾಗಿ ‘ಪಕ್ಷವಿರೋಧಿ ಚಟುವಟಿಕೆ ಮಾಡಿದರೆ ನಿಮ್ಮ ವಿರುದ್ಧ ಉಗ್ರಕ್ರಮ ಕೈಗೊಳ್ಳುತ್ತೇವೆ’ ಎನ್ನುವ ಲೆವೆಲ್ಲಿನಲ್ಲಿ ಯತ್ನಾಳ್ ಇಲ್ಲ. ಹಾಗೇನಾದರೂ
ಹೇಳಲು ಹೋದರೆ ನಿಶ್ಚಿತವಾಗಿ ಪಾರ್ಲಿಮೆಂಟ್ ಚುನಾವಣೆಯಲ್ಲಿ ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆ ಎಂಬುದು ವರಿಷ್ಠರಿಗೆ ಗೊತ್ತು. ಮಾಜಿ ಸಚಿವ ವಿ.ಸೋಮಣ್ಣ ಅವರ ವಿಷಯದಲ್ಲೂ ಅಷ್ಟೇ. ಕರ್ನಾಟಕದ ಲಿಂಗಾಯತ ಕೋಟೆಯಲ್ಲಿ ಸ್ವಪ್ರಯತ್ನದಿಂದ ಬೆಳೆದು ನಿಂತಿರುವ ಸೋಮಣ್ಣ ಅವರಿಗೆ ಪಕ್ಷದ ಶಿಸ್ತಿನ ವಿಷಯ ಹೇಳಲು ಹೋದರೆ ಮತ್ತು ಇದರಿಂದ ಕೆರಳಿ ಅವರು ಪಕ್ಷ ಬಿಟ್ಟರೆ, ರಾಜ್ಯದ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಕ್ಯಾಂಡಿಡೇಟುಗಳಿಗೆ ಹೊಡೆತ ಬೀಳುತ್ತದೆ ಎಂಬ ರಿಪೋರ್ಟು ದಿಲ್ಲಿ ನಾಯಕರ ಕೈಲಿದೆ. ಹೀಗಾಗಿ ಯತ್ನಾಳ್ ಮತ್ತು ಸೋಮಣ್ಣ ವಿಷಯದಲ್ಲಿ ವರಿಷ್ಠರು ತಾವು ದುಡುಕಿ ತೀರ್ಮಾನ ತೆಗೆದುಕೊಳ್ಳುವ ಸ್ಥಿತಿಯಲಿಲ್ಲ.
ಎಲ್ಲಕ್ಕಿಂತ ಮುಖ್ಯವಾಗಿ ಯತ್ನಾಳ್ ಮತ್ತು ಸೋಮಣ್ಣ ಹೇಳುತ್ತಿರುವುದೆಂದರೆ, ‘ನೀವು ಹೇಳಿದಂತೆ ಕೇಳಲು ನಾವು ರೆಡಿ. ಆದರೆ ಅದಕ್ಕೂ ಮುನ್ನ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನು ದಿಲ್ಲಿಗೆ ಕರೆಸಿ, ಅವರ ಜತೆ ನಮ್ಮನ್ನೂ ಕೂರಿಸಿ. ಏನೇನಾಗಿದೆ ಎಂದು ನಾವು ಹೇಳುತ್ತೇವೆ. ನಂತರ ನೀವೇ ಒಂದು ತೀರ್ಮಾನ ತೆಗೆದುಕೊಳ್ಳಿ’ ಎಂಬುದು. ಈ ವಾದಕ್ಕೆ ಏನು ಉತ್ತರ ಹೇಳಬೇಕೆಂಬುದು ಬಿಜೆಪಿ ವರಿಷ್ಠರಿಗೆ ಗೊತ್ತಾಗುತ್ತಿಲ್ಲ. ಎಲ್ಲಿಯವರೆಗೆ ಅವರಿಗೆ ಗೊತ್ತಾಗುವುದಿಲ್ಲವೋ, ಅಲ್ಲಿಯವರೆಗೂ ಯತ್ನಾಳ್ ಮತ್ತು ಸೋಮಣ್ಣ ಎಪಿಸೋಡು ರಾಜ್ಯ ಬಿಜೆಪಿಯ ಇಮೇಜನ್ನು ಕುಗ್ಗಿಸುತ್ತಲೇ ಹೋಗುತ್ತದೆ.
ಕುಮಾರಸ್ವಾಮಿಗೆ ದಿಲ್ಲಿ ಆಫರ್?
ಈ ಮಧ್ಯೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮತ್ತೊಮ್ಮೆ ದಿಲ್ಲಿ ಆಫರ್ ಬಂದಿದೆ. ಇತ್ತೀಚೆಗೆ ಕುಮಾರಸ್ವಾಮಿ ಅವರೊಂದಿಗೆ ಸತತ ಸಂಪರ್ಕದಲ್ಲಿರುವ ಗೋವಾದ ಮುಖ್ಯಮಂತ್ರಿ ಸಾವಂತ್ ಅವರು, ‘ನೀವು ಸೆಂಟ್ರಲ್ ಕ್ಯಾಬಿನೆಟ್ಟಿನಲ್ಲಿರಬೇಕು ಅಂತ ಪ್ರಧಾನಿಯವರು ಬಯಸುತ್ತಿದ್ದಾರೆ’ ಎಂದಿದ್ದಾರೆ. ಕರ್ನಾಟಕದ ರಾಜಕಾರಣದಲ್ಲಿ ಮರಳಿ ತಲೆ ಎತ್ತಲು ಬಯಸುತ್ತಿರುವ ಕುಮಾರಸ್ವಾಮಿಯವರಿಗೆ ಇದು ತುಂಬಾ ಇಷ್ಟದ ಪ್ರಪೋಸಲ್ಲು ಅಲ್ಲವಾದರೂ, ಸಾವಂತ್ ಅವರು ಹೇಳಿದ ಮಾತು ಕುತೂಹಲಕಾರಿಯಾಗಿತ್ತಂತೆ.
ಅಂದ ಹಾಗೆ, ಮುಂಬರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿಯ ಟೀಮು ೩ ಸುತ್ತಿನ ಸರ್ವೆ ನಡೆಸಿ ರಿಪೋರ್ಟು ಕೊಟ್ಟಿದೆಯಲ್ಲ? ಈ ರಿಪೋರ್ಟು ಮೈತ್ರಿಪಕ್ಷ ಜೆಡಿಎಸ್ನ ಕ್ಯಾಂಡಿಡೇಟುಗಳು ಎಲ್ಲೆಲ್ಲಿ ಗೆಲ್ಲಬಹುದು? ಅಂತಲೂ ಹೇಳಿದೆಯಂತೆ. ಅದರ ಪ್ರಕಾರ, ಚಿಕ್ಕಬಳ್ಳಾಪುರ ಇಲ್ಲವೇ
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಗಳ ಪೈಕಿ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ ಜೆಡಿಎಸ್ ಗೆಲ್ಲುವ ಸಾಧ್ಯತೆ ಜಾಸ್ತಿ. ಅದರಲ್ಲೂ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾದರೆ ಹಂಡ್ರೆಡ್ ಪಸೆಂಟ್ ಗೆಲ್ಲುತ್ತೇವೆ ಎಂಬುದು ಈ ಸರ್ವೇ ಟೀಮಿನ ವರದಿ. ಈ ವರದಿಯ ವಿವರ ಗೊತ್ತಾದ ನಂತರ ಸಾವಂತ್ ಅವರು ಕುಮಾರಸ್ವಾಮಿಯವರ ಜತೆ ಮಾತನಾಡಿದ್ದಾರೆ.
‘ನೀವು ಪಾರ್ಲಿಮೆಂಟಿಗೆ ಸ್ಪರ್ಧಿಸಿದರೆ ಗೆಲ್ಲುವುದು ಗ್ಯಾರಂಟಿ. ಹೀಗೆ ನೀವು ಗೆದ್ದು ಪಾರ್ಲಿಮೆಂಟಿಗೆ ಹೋದರೆ ನಿಮ್ಮನ್ನು ತಮ್ಮ ಕ್ಯಾಬಿನೆಟ್ಟಿಗೆ ತೆಗೆದುಕೊಳ್ಳುವ ಇಚ್ಛೆ ಪ್ರಧಾನಿಯವರಿಗಿದೆ’ ಎಂದು ಹೇಳಿದ್ದಾರೆ. ಅವರು ಹೇಳಿದ್ದಕ್ಕೆ ಕುಮಾರಸ್ವಾಮಿ ಪಾಸಿಟಿವ್ ಆಗಿ ಉತ್ತರಿಸದಿದ್ದರೂ ಮುಂದೆ ನೋಡೋಣ ಸರ್’ ಎಂದಿದ್ದಾ ರಂತೆ. ಅಂದ ಹಾಗೆ, ಡಿಸೆಂಬರ್ ೨೦ರ ನಂತರ ದಿಲ್ಲಿಗೆ ಹೋಗಲಿರುವ ಕುಮಾರಸ್ವಾಮಿ, ಪಾರ್ಲಿಮೆಂಟ್ ಚುನಾವಣೆಯಲ್ಲಿ ಮೈತ್ರಿಕೂಟ ಮಾಡಬೇಕಿರುವು ದೇನು ಎಂಬ ಬಗ್ಗೆ ಬಿಜೆಪಿ ನಾಯಕರಿಗೆ ವಿವರಿಸಿ ಬರಲಿದ್ದಾರೆ. ಆ ಸಂದರ್ಭದಲ್ಲಿ ದಿಲ್ಲಿಗೆ ಬರುವ ಬಗ್ಗೆ, ಮೋದಿಯವರ ಕ್ಯಾಬಿನೆಟ್ಟಿನಲ್ಲಿ ಮಂತ್ರಿಯಾಗುವ ಬಗ್ಗೆ ಬಿಜೆಪಿ ನಾಯಕರು ಮತೊಂದು ಸುತ್ತಿನ ಆಹ್ವಾನ ಕೊಡುತ್ತಾರಾ ಅಂತ ಕಾದುನೋಡಬೇಕು.
ಸೆಟ್ಲ್ ಮಾಡುತ್ತಾರಂತೆ ಸಿದ್ದರಾಮಯ್ಯ
ಇನ್ನು ಸೋಮವಾರ ದಿಲ್ಲಿಗೆ ದೌಡಾಯಿಸಲಿರುವ ಸಿಎಂ ಸಿದ್ದರಾಮಯ್ಯ, ನಿಗಮ-ಮಂಡಳಿಗಳ ಮೊದಲ ಕಂತಿನ ಅಧ್ಯಕ್ಷರ ಪಟ್ಟಿಯನ್ನು ಕ್ಲಿಯರ್ ಮಾಡಿಸಿ ಕೊಂಡು ಬರಲಿದ್ದಾರೆ. ಮೊದಲ ಕಂತಿನಲ್ಲಿ ಶಾಸಕರಿಗೆ ಮಾತ್ರ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನ ಅಂತ ಕಾಂಗ್ರೆಸ್ ವರಿಷ್ಠರು ಹೇಳಿದ್ದಾರಾದರೂ ಸಿದ್ದರಾ ಮಯ್ಯ ಮಾತ್ರ, ‘ಶಾಸಕರಿಗಷ್ಟೇ ಅಲ್ಲ,
ಪಕ್ಷದ ಕಾರ್ಯಕರ್ತರಿಗೂ ಪ್ರಾಮಿನೆನ್ಸು ಕೊಡಬೇಕು’ ಅಂತ ಹೇಳಿದ್ದಾರಂತೆ. ಇವತ್ತು ಮಂತ್ರಿಗಳಾಗಬೇಕಿದ್ದ ಶಾಸಕರಿಗೆ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನ ಕೊಡುವುದು ಅನಿವಾರ್ಯವೇನೋ ಹೌದು. ಆದರೆ ಅದೇ ಕಾಲಕ್ಕೆ ಕರ್ನಾಟಕದಲ್ಲಿ ಪಕ್ಷ ಅಽಕಾರಕ್ಕೆ ಬರಲು ದುಡಿದಿರುವ ಕಾರ್ಯಕರ್ತರಿಗೂ ಪ್ರಾಮಿನೆನ್ಸು
ನೀಡುವುದು ಸೂಕ್ತ. ಹೀಗೆ ಶಾಸಕರ ಜತೆಜತೆಗೆ ಕಾರ್ಯಕರ್ತರನ್ನೂ ನಿಗಮ-ಮಂಡಳಿಗಳ ಅಧ್ಯಕ್ಷರನ್ನಾಗಿ ನೇಮಕ ಮಾಡಿದರೆ ಒಂದು ಪಾಸಿಟಿವ್ ಮೆಸೇಜು
ಹೋಗುತ್ತದೆ. ಪಕ್ಷಕ್ಕಾಗಿ ದುಡಿದವರಿಗೆ ಬೆಲೆ ಇದೆ ಎಂಬ ಭಾವನೆ ಬರುತ್ತದೆ ಎಂಬುದು ಸಿದ್ದರಾಮಯ್ಯ ಅವರ ವಾದ.
ಈ ಮಧ್ಯೆ, ನಿಗಮ-ಮಂಡಳಿಗಳಿಗೆ ಬೇಗ ಅಧ್ಯಕ್ಷರನ್ನು ನೇಮಕ ಮಾಡಬೇಕು ಎಂಬ ವಿಷಯದಲ್ಲಿ ದಿನೇ ದಿನೆ ಒತ್ತಡ ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲ, ಅಧಿಕಾರಕ್ಕೆ ಬಂದು ೭ ತಿಂಗಳಾಗುತ್ತಿದ್ದರೂ ಈ ನೇಮಕ ನಡೆಯದಿರುವುದಕ್ಕೆ ಸರಕಾರದಲ್ಲಿರುವ ಹಲವು ಸಚಿವರೇ ಕಾರಣ ಎಂಬ ಮಾತು ಕಾರ್ಯಕರ್ತರ ಮಟ್ಟದಲ್ಲಿ ಕೇಳಿಬರುತ್ತಿದೆ. ಇವತ್ತು ಸಚಿವರಾಗಿರುವ ಬಹುತೇಕರ ಕೈ ಕೆಳಗೆ ನಾಲ್ಕೈದು ನಿಗಮ-ಮಂಡಳಿಗಳು ಬರುತ್ತವೆ. ಹೀಗಾಗಿ ವಿಧಾನಸೌಧ ಮತ್ತು ವಿಕಾಸಸೌಧ ಕ್ಕಿಂತ ಹೆಚ್ಚಾಗಿ ನಿಗಮ-ಮಂಡಳಿಗಳ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವುದೇ ಈ ಸಚಿವರಿಗೆ ಫ್ಯಾಷನ್ ಆಗಿಹೋಗಿದೆ.
ಒಂದು ವೇಳೆ, ನಿಗಮ-ಮಂಡಳಿಗಳಿಗೆ ಅಧ್ಯಕ್ಷರು ನೇಮಕವಾದರೆ ಈ ಸಚಿವರಿಗೆ ಎಕ್ಸ್ಟ್ರಾ ಆಫೀಸುಗಳು ತಪ್ಪುತ್ತವೆ. ಇದೇ ಕಾರಣಕ್ಕಾಗಿ ಬರಗಾಲ ಅಂತಲೋ, ಸರಕಾರ ಹಣದ ಕೊರತೆಯಿಂದ ಬಳಲುತ್ತಿದೆ ಅಂತಲೋ, ಮತ್ತೇನೋ ನೆಪ ಹೇಳುತ್ತಾ ಇವರೇ ನಿಗಮ-ಮಂಡಳಿಗಳ ನೇಮಕಾತಿಗೆ ಅಡ್ಡಿ ಯಾಗಿದ್ದಾರೆ ಎಂಬುದು ಹಲವರ ವಾದ. ಸೋಮವಾರ ದಿಲ್ಲಿಗೆ ದೌಡಾಯಿಸಲಿರುವ ಸಿದ್ದರಾಮಯ್ಯ ಈ ವಾದಕ್ಕೆ ತೆರೆ ಎಳೆದು ಬರಲಿದ್ದಾರೆ ಎಂಬುದು ಅವರ ಆಪ್ತರ ಮಾತು. ಮುಂದೇನು ಕತೆಯೋ?