Thursday, 12th December 2024

ನಾಲ್ವಡಿಯವರ ಹೆಸರಿಡಿ

ಸದಾಶಯ

ಅನಿಲ್ ಕುಮಾರ್‌, ನಂಜನಗೂಡು

ಕರ್ನಾಟಕದ ನಾಲ್ಕು ವಿಮಾನ ನಿಲ್ದಾಣಗಳಿಗೆ ರಾಜ್ಯದ ಮಹಾನ್ ಸಾಧಕರ ಹೆಸರಿಡಲು ವಿಧಾನಸಭೆ ಮತ್ತು ಪರಿಷತ್‌ನಲ್ಲಿ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿ, ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲು ತೀರ್ಮಾನಿಸಲಾಗಿದೆ. ಆದರೆ ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅಥವಾ ಟಿಪ್ಪು ಸುಲ್ತಾನ್ ಹೆಸರಿಡುವ ವಿಷಯದಲ್ಲಿ ತಾಕಲಾಟಗಳು ತಲೆದೋರಿದಂತಿದೆ. ಈ ವಿಷಯದಲ್ಲಿ ವಿವಿಧ ವಲಯಗಳ ಗಣ್ಯರಿಂದ ಸಾಕಷ್ಟು
ಪರ-ವಿರೋಧದ ಅಭಿಪ್ರಾಯಗಳೂ ವ್ಯಕ್ತವಾಗಿವೆ.

ಆದರೆ ಬಹುತೇಕರ ಅಭಿಮತದಂತೆ ಇದಕ್ಕೆ ‘ರಾಜಶ್ರೀ’ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರೇ ಅತ್ಯಂತ ಸೂಕ್ತವಾದುದು. ಮೈಸೂರು ಸಂಸ್ಥಾನದ ‘ಒಡೆಯರ್’ ರಾಜಸಂತತಿಯ ೨೪ನೇ ರಾಜರಾದ ಇವರ ಆಳ್ವಿಕೆ ೧೯೦೨ರಿಂದ ೧೯೪೦ರವರೆಗೆ ನಡೆಯಿತು. ಈ ಅವಧಿಯಲ್ಲಿ ಇಡೀ ಭರತಖಂಡದ ಯಾವ ಸಂಸ್ಥಾನವೂ ಕಾಣದ ಅಭಿವೃದ್ಧಿಯನ್ನು ಮೈಸೂರು ಸಂಸ್ಥಾನ ಕಂಡಿದ್ದರಿಂದ ಇದಕ್ಕೆ ‘ಮಾದರಿ ಮೈಸೂರು’ ಎಂಬ ಶ್ಲಾಘನೆಯು ಆಗಿನ ಕಾಲದಲ್ಲೇ ಮಹಾತ್ಮ ಗಾಂಧಿಯವರಿಂದ ಸಿಕ್ಕಿತ್ತು.

ಇಡೀ ದೇಶವೇ ಬರಗಾಲಕ್ಕೆ ಸಿಲುಕಿ ತೀವ್ರವಾಗಿ ತತ್ತರಿಸಿದ್ದಂಥ ಸಂದರ್ಭದಲ್ಲೂ ಮೈಸೂರು ಸಂಸ್ಥಾನ ಮಾತ್ರ ಯಾವುದೇ ತೊಂದರೆಗೊಳಗಾಗದೆ ಜನರಿಗೆ ಇನ್ನಷ್ಟು ಹತ್ತಿರವಾಗಿ ಜನಸ್ನೇಹಿ ಆಡಳಿತ ನೀಡಿ ಮಾದರಿಯಗಿತ್ತು. ಇದನ್ನರಿತ ಗಾಂಧೀಜಿ, ನಾಲ್ವಡಿ ಕೃಷ್ಣರಾಜ ಒಡೆಯರ್‌ರಿಗೆ ‘ರಾಜಶ್ರೀ’ ಎಂಬ ಬಿರುದು ನೀಡಿದ್ದರ ಜತೆಗೆ, ‘ಜನರಿಗೆ ಅನುಕೂಲ ವಾಗುವಂತೆ ಆಡಳಿತ ನಡೆಸುವ ಮೈಸೂರು ಸಂಸ್ಥಾನದ ನಾಲ್ವಡಿಯವರ ರೀತಿಯಲ್ಲಿ ಮಿಕ್ಕವರೂ ಕಾರ್ಯನಿರ್ವಹಿಸಬೇಕು’ ಎಂದಿದ್ದರು.

ಇದು ನಾಲ್ವಡಿಯವರ ನಿಸ್ವಾರ್ಥ ಸೇವೆಗೆ ಹಿಡಿದ ಕೈಗನ್ನಡಿ. ಇವರ ತ್ಯಾಗ ಮನೋಭಾವಕ್ಕೆ ಅನೇಕ ನಿದರ್ಶನಗಳಿವೆ. ಕೆಆರ್ ಎಸ್ ಅಣೆಕಟ್ಟು ನಿರ್ಮಾಣದ ವೇಳೆ ಆರ್ಥಿಕ ಮುಗ್ಗಟ್ಟು ತಲೆದೋರಿದಾಗ, ತಮ್ಮ ತಾಯಿ ಮತ್ತು ಹೆಂಡತಿಯ ಒಡವೆಗಳನ್ನು ಮುಂಬೈಗೆ ಒಯ್ದು ಮಾರಿ ಹಣ ಹೊಂದಿಸಿಕೊಟ್ಟಿದ್ದು ಈ ಪೈಕಿ ಎದ್ದುಕಾಣುವಂಥದ್ದು. ಮಾತ್ರವಲ್ಲದೆ, ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಕಟ್ಟಡ, ಜಗನ್ಮೋಹನ ಅರಮನೆ, ಲಲಿತ ಮಹಲ್ ಇಂಥ ಅನೇಕ ನಿರ್ಮಿತಿಗಳ ಹಿಂದೆ ನಾಲ್ವಡಿಯವರ ದೂರದೃಷ್ಟಿಯಿದೆ, ಪರಿಶ್ರಮವಿದೆ.

ಲಂಡನ್ ನಗರದಲ್ಲಿನ ಕಟ್ಟಡಗಳೊಂದಿಗೆ ಇವುಗಳ ಸಾಮ್ಯತೆಯಿದೆ ಎಂಬುದು ಗಮನಾರ್ಹ ಸಂಗತಿ. ಇಂಥ ಅದ್ವಿತೀಯ ಸಾಧಕ ನಾಲ್ವಡಿಯವರು ನಿಜಾರ್ಥದಲ್ಲಿ ‘ಜನಪ್ರಿಯ’ರೂ, ದಕ್ಷ ಆಡಳಿತಗಾರರೂ ಆಗಿದ್ದವರು ಎಂಬುದಕ್ಕೆ ಅವರು ಕೈಗೊಂಡ ಸಾಕಷ್ಟು ಜನಪರ ಯೋಜನೆಗಳೇ ಸಾಕ್ಷಿ. ಆದರೆ ರಾಜಾಡಳಿತದ ತರುವಾಯ ಬಂದ ಯಾವುದೇ ಸರಕಾರಗಳು ನಾಲ್ವಡಿಯವರಿಗೆ ಕೃತಜ್ಞರಾಗಿ, ಅವರ ಹೆಸರು ಸದಾ ನೆನಪಲ್ಲಿ ಉಳಿಯುವಂಥ ಕೆಲಸಕ್ಕೆ
ಮುಂದಾಗದಿರುವುದು ವಿಷಾದನೀಯ.

ಮೈಸೂರು ಸಂಸ್ಥಾನದಲ್ಲಿ ದಿವಾನರುಗಳಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್, ಶೇಷಾದ್ರಿ ಅಯ್ಯರ್, ಪೂರ್ಣಯ್ಯ, ರಂಗಾಚಾರ್ಲು ಇಂಥ ಮಹನೀಯರನ್ನು ನೆನೆಯುತ್ತೇವೆ: ಆದರೆ ಇವರಿಗೆಲ್ಲ ಒತ್ತಾಸೆಯಾಗಿ ನಿಂತಿದ್ದವರು ನಾಲ್ವಡಿಯವರು ಎಂಬುದು ಎಷ್ಟು ಜನರಿಗೆ ಗೊತ್ತು? ರಾಜವೈಭವದ ಇತಿಹಾಸವಿರುವ ಮೈಸೂರನ್ನು ಕಲೆ, ಸಂಗೀತ, ಸಾಹಿತ್ಯ, ಸಂಸ್ಕೃತಿಗಳ ತವರೂರು, ಶೈಕ್ಷಣಿಕ ಮತ್ತು ಅರಮನೆಗಳ ನಗರಿಯಾಗಿ ರೂಪಿಸಿದ ಕೀರ್ತಿ ನಾಲ್ವಡಿಯವರಿಗೆ ಸಲ್ಲುತ್ತದೆ. ಬೆಂಗಳೂರನ್ನು ಹೊರತುಪಡಿಸಿದರೆ ಎಲ್ಲಾ ವಲಯಗಳಲ್ಲೂ ಮೈಸೂರು ಇಡೀ ರಾಜ್ಯದಲ್ಲೇ ಅತ್ಯಂತ ಜನಪ್ರಿಯ ನಗರವಾಗಿದ್ದು ವಿಶ್ವಮಟ್ಟದಲ್ಲೂ ಮಾನ್ಯತೆ ಪಡೆದಿದ್ದರೆ ಅದಕ್ಕೆ ನಾಲ್ವಡಿಯವರ ಪರಿಶ್ರಮವೇ ಕಾರಣ. ಬೆಂಗಳೂರಿಗರು ಕೆಂಪೇಗೌಡರ ಹೆಸರನ್ನು ಸ್ಮರಿಸುವಂತೆಯೇ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಧನೆಗಳ ಸ್ಮರಣಾರ್ಥವಾಗಿ ಮೈಸೂರಿನ ವಿಮಾನ ನಿಲ್ದಾಣಕ್ಕೆ ಅವರ ಹೆಸರಿಡುವುದೇ ಸೂಕ್ತ.

ಸರಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡರೆ, ಮುಂದಿನ ಪೀಳಿಗೆಯವರೂ ನಾಲ್ವಡಿಯವರ ಅಜರಾಮರ ಕಾರ್ಯಗಳನ್ನು ನೆನೆದು ಗೌರವಿಸಲು ಸಾಧ್ಯವಾಗುತ್ತದೆ.

(ಲೇಖಕರು ಹವ್ಯಾಸಿ ಬರಹಗಾರರು)