ಸದಾಶಯ
ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ
‘ಎಲ್ಲಕ್ಕೂ ಮೊದಲು ವಿಶ್ವಶಾಂತಿಯ ರಕ್ಷಣೆಯು ವಿಶ್ವಸಂಸ್ಥೆಯ ಮೂಲೋದ್ದೇಶವಾಗಬೇಕು, ಆದ್ಯತೆಯಾಗಬೇಕು; ಆದರೆ ಪ್ರಪಂಚವೆಲ್ಲಾ ಮುಂದೆ ಹೋದರೂ, ವಿಶ್ವಸಂಸ್ಥೆ ಇನ್ನೂ ೪೦ ವರ್ಷಗಳ ಹಿಂದಿನ ಕಾಲದ ಸುಳಿಯಲ್ಲೇ ಸಿಲುಕಿಕೊಂಡಿದೆ’ ಎನ್ನುತ್ತಿದ್ದರು ವಿಶ್ವಸಂಸ್ಥೆಯಲ್ಲಿ ಅಮೆರಿಕದ ರಾಯಭಾರಿಯಾಗಿದ್ದ ಜಾನ್ ಬೋಲ್ಟನ್. ಈ ಮಾತು ನಿಜ. ವಿಶ್ವಸಂಸ್ಥೆಯ ರಾಜತಾಂತ್ರಿಕರು ತುಕ್ಕುಹಿಡಿದ ನಿಯಮಗಳನ್ನೇ ಪಠಿಸುತ್ತಾ, ಸಭೆಯ ಮೇಲೆ ಸಭೆ ನಡೆಸುತ್ತಾ, ಹೊರಗೇನಾಗು ತ್ತಿದೆ ಎಂದು ನೋಡುವುದಕ್ಕೂ ಸಮಯ, ಸಂಯಮವಿಲ್ಲದೆ ಕೂತಿರುವ ಹಾಗಿದೆ.
ಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವವನ್ನು ಕೊಡಿಸಲು ರಷ್ಯಾ ಪಟ್ಟ ಪ್ರಯತ್ನ ಅಷ್ಟಿಷ್ಟಲ್ಲ. ಚೀನಿಯರಿಗೆ ಯಾವಾಗಲೂ ‘ಚೀನಾ ಮೊದಲು’. ಹಾಗೆಯೇ ಕಾಯಂ ಸದಸ್ಯತ್ವವನ್ನು ಚೀನಾಕ್ಕೆ ದಾನ ಮಾಡಿದರು ಎನ್ನುವುದಕ್ಕಿಂತ ಧಾರೆಯೆರೆದು ಕೊಟ್ಟರು ಅಂದಿನ ಪ್ರಧಾನಿ ನೆಹರು. ಅವರಿಗೂ ಆಗ ‘ಚೀನಾ ಮೊದಲು’ ಎನಿಸಿತ್ತು. ಅದೇ ಚೀನಾ ಇಲ್ಲಿಯವರೆಗೆ ಭಾರತದ ಕಾಯಂ ಸದಸ್ಯತ್ವಕ್ಕೆ ಅಡ್ಡಿಮಾಡುತ್ತಲೇ ಬಂದಿದೆ.
ಆದರೆ ಭಾರತಕ್ಕೀಗ ಈ ಬಾಬತ್ತಿನಲ್ಲಿ ಅಷ್ಟೊಂದು ಆಸಕ್ತಿ ಇದ್ದಂತಿಲ್ಲ; ಭದ್ರತಾ ಮಂಡಳಿಯ ಪ್ರಭಾವ, ಗೌರವ, ಮೌಲ್ಯಗಳು ಕಡಿಮೆಯಾಗುತ್ತಾ ಬಂದಿವೆ. ‘ವಿಟೋ ಪವರ್’ ಹೊಂದಿರುವ ರಾಷ್ಟ್ರಗಳು ಒಂದಕ್ಕೊಂದು ತದ್ವಿರುದ್ಧವಾಗಿ ನಡೆದುಕೊಂಡು, ಅದರ ಕಾರ್ಯವೈಖರಿ ಸುಗಮವಾಗಿಲ್ಲ. ಅಂದಹಾಗೆ, ಈ ವಿಟೋ ರಾಷ್ಟ್ರಗಳೇ ಒಂದನೇ ಮತ್ತು ಎರಡನೇ ಮಹಾಯುದ್ಧದ ಸಮಯದಲ್ಲಿನ ಹತ್ಯಾಕಾಂಡಗಳಿಗೆ ನೇರಕಾರಣವಾಗಿದ್ದು. ಭದ್ರತಾ ಮಂಡಳಿಯಲ್ಲಿರುವ ೧೫ ಸದಸ್ಯ ರಾಷ್ಟ್ರಗಳನ್ನು ಆಡಳಿತದ ಶಕ್ತಿಶಾಲಿ ಘಟಕವೆಂದೇ ಪರಿಗಣಿಸಿದರೂ, ಇವುಗಳ ಮಾತಿಗೆ ಕಿಂಚಿತ್ ಬೆಲೆಯಿಲ್ಲ.
ವಿಶ್ವಸಂಸ್ಥೆ ಇಲ್ಲಿಯವರೆಗೂ ಯಾವ ಯುದ್ಧವನ್ನೂ ತಡೆದಿಲ್ಲ, ಯಾವ ಸರ್ವಾಧಿಕಾರಿಯನ್ನೂ ಮಣಿಸಿಲ್ಲ. ಉಗ್ರ ಸಂಘಟನೆಯನ್ನು ಹತ್ತಿಕ್ಕುವುದಿರಲಿ, ಮಾನವ ಹಕ್ಕುಗಳ ರಕ್ಷಣೆಯೂ ಅದರಿಂದ ಸಾಧ್ಯವಾಗಿಲ್ಲ. ಪರಿಸ್ಥಿತಿ ಹೀಗೇ ಮುಂದುವರಿದರೆ, ಮೊದಲ ಮಹಾಯುದ್ಧದ ನಂತರದಲ್ಲಿ ಶಾಂತಿ ಕಾಪಾಡಲೆಂದು ಹುಟ್ಟಿ, ಕೊನೆಗೆ ಸೋತು, ಎರಡನೇ ಮಹಾಯುದ್ಧದ ಆರಂಭದಲ್ಲಿ ಅಂತ್ಯವಾದ ‘ಲೀಗ್ ಆಫ್ ನೇಷನ್ಸ್’ನ ಸ್ಥಿತಿಯೇ ವಿಶ್ವಸಂಸ್ಥೆಗೂ ಬರಬಹುದು. ಅಷ್ಟು ದೊಡ್ಡ ಸಂಸ್ಥೆಯ ಅದಕ್ಷತೆಯ ಮುಂದೆ, ಸಣ್ಣಪುಟ್ಟ ಎನ್ ಜಿಒಗಳೇ ಪರವಾಗಿಲ್ಲ ಎನಿಸುತ್ತದೆ; ಕಾರಣ, ತಮ್ಮ ಸೀಮಿತ ವ್ಯಾಪ್ತಿಯಲ್ಲೇ ಅವು ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿವೆ.
ಆದರೆ ವಿಶ್ವಸಂಸ್ಥೆ ಮಾತ್ರ ವಾಸ್ತವತೆಯಿಂದ ದೂರವುಳಿದು, ಅದೇ ‘ಖಂಡಿಸುವ’ ಖಾಲಿ ಪದಗಳ ಪದರದಡಿಯಲ್ಲಿ ಪಳೆಯುಳಿಕೆಯಾಗಷ್ಟೇ ಉಳಿಯುವ ಲಕ್ಷಣಗಳು ಕಾಣಿಸುತ್ತಿವೆ.
ಅದರ ಅಗತ್ಯ ಈಗಿನ ಜಗತ್ತಿಗಿದೆಯೇ? ಇಲ್ಲ ಎಂದರೆ ತಪ್ಪಾದೀತೇ? ಅದು ೧೯೪೩ನೇ ಇಸವಿ, ೨ನೇ ಮಹಾಯುದ್ಧದ ಕಾಲ. ಬಲಿಷ್ಠ ಜರ್ಮನಿ ಹಾಗೂ ಅದರ ಸಹವರ್ತಿ ದೇಶಗಳನ್ನು ಮಣಿಸಲು ಮಿತ್ರರಾಷ್ಟ್ರಗಳು ಒದ್ದಾಡುತ್ತಿದ್ದಾಗ ಬಂಗಾಳದಲ್ಲಿ ಬರಗಾಲ. ಇನ್ನೊಂದೆಡೆ, ಭಾರತೀಯರನ್ನು ತೀವ್ರವಾಗಿ ದ್ವೇಷಿಸುತ್ತಿದ್ದ ಬ್ರಿಟನ್ ಪ್ರಧಾನಿ ಚರ್ಚಿಲ್, ಯಾರ ಮಾತೂ ಕೇಳದೆ, ಉಪವಾಸದಿಂದ ಸಾಯುತ್ತಿದ್ದ ಬಂಗಾಳಿಗಳನ್ನು ಲೆಕ್ಕಿಸದೆ, ನಾಜಿಗಳ ವಿರುದ್ಧ ಹೋರಾಡುತ್ತಿದ್ದ
ಮಿತ್ರರಾಷ್ಟ್ರದವರಿಗಾಗಿ ಬಂಗಾಳದಲ್ಲಿನ ಎಲ್ಲಾ ಆಹಾರ ಧಾನ್ಯಗಳನ್ನು ತರಿಸಿಕೊಂಡರು.
ಬಂಗಾಳದಲ್ಲಿ ಅಕ್ಕಿಯನ್ನು ದಾಸ್ತಾನು ಮಾಡುವಂತಿರಲಿಲ್ಲ. ಇದ್ದ ದಾಸ್ತಾನೆಲ್ಲವನ್ನೂ ಮುಟ್ಟುಗೋಲು ಹಾಕಿಕೊಂಡ ಪರಿಣಾಮ, ಹಸಿವಿನಿಂದ ಕಂಗೆಟ್ಟು ಹಳ್ಳಿ ಗಳಿಂದ ಕೋಲ್ಕತ್ತಾಗೆ ಬರುತ್ತಿದ್ದ ಸಾವಿರಾರು ಜನರು ರಸ್ತೆಗಳಲ್ಲಿ ಮಲಗಿ ಸಾಯುತ್ತಿದ್ದರು. ಹಸಿದು ಅಳುತ್ತಿರುವ ಕಂದಮ್ಮಗಳನ್ನು ನೋಡಲಾಗದೆ ಅಪ್ಪ-ಅಮ್ಮಂದಿರು ಅವನ್ನು ಕೆರೆ-ಬಾವಿಗಳಿಗೆ ಎಸೆಯುತ್ತಿದ್ದರು. ಅಂತ್ಯಸಂಸ್ಕಾರಕ್ಕೆ ಸಂಬಂಧಿಕರಿರಲ್ಲ, ಅಳಲೂ ಕಣ್ಣಲ್ಲಿ ನೀರಿರಲಿಲ್ಲ. ಅದೇ ವೇಳೆಗೆ, ಭಾರತದಿಂದ ತರಿಸಿಕೊಂಡ ಭಾರಿ ಪ್ರಮಾಣದ ಆಹಾರ ಪದಾರ್ಥಗಳು ಬ್ರಿಟನ್‌ನಲ್ಲಿ ಕೊಳೆಯುತ್ತಿದ್ದವು.
ಆಗ ಇದೇ ಚರ್ಚಿಲ್, ‘ಅರೆಹೊಟ್ಟೆ ಉಣ್ಣುವ ಭಾರತೀಯರು ಸಾಯಲಿ’ ಎಂದಿದ್ದರಂತೆ. ಪತ್ರಕರ್ತೆ ಮಧುಶ್ರೀ ಮುಖರ್ಜಿ ತಮ್ಮ ‘”Churchill’s Secret War’’ ಎಂಬ ಪುಸ್ತಕದಲ್ಲಿ ಇದನ್ನು ದಾಖಲಿಸಿದ್ದಾರೆ. ಚರ್ಚಿಲ್‌ರಿಗೆ ಲಕ್ಷಾಂತರ ಜನರ ಪ್ರಾಣಕ್ಕಿಂತ ಭಾರತೀಯರ ಮೇಲಿನ ದ್ವೇಷ ಮುಖ್ಯವಾಗಿದ್ದರೆ, ಅಮೆರಿಕದ ಅಧ್ಯಕ್ಷ ರೂಸ್‌ವೆಲ್ಟ್‌ರಿಗೆ ಚರ್ಚಿಲ್‌ರನ್ನು ಮೆಚ್ಚಿಸುವುದೇ ಮುಖ್ಯವಾಗಿತ್ತು. ಬಲಿಷ್ಠ ರಾಷ್ಟ್ರಗಳ ಚಾಳಿ ಈಗಲೂ ಹೀಗೆಯೇ. ಇತಿಹಾಸದ ಪುಟಗಳನ್ನೊಮ್ಮೆ ತಿರುವಿ ಹಾಕಿದರೆ ಆಘಾತಕಾರಿ ಸತ್ಯಗಳು ಕಣ್ಣಿಗೆ ರಾಚುತ್ತವೆ. ಹಿಟ್ಲರ್ ಮಾತ್ರವೇ ಯೆಹೂದಿಗಳ ಹತ್ಯಾಕಾಂಡ ನಡೆಸಲಿಲ್ಲ; ಅವನ ಸಹವರ್ತಿ ರಾಷ್ಟ್ರಗಳಾದ ರೊಮೇ ನಿಯಾ, ಬಲ್ಗೇರಿಯಾ, ಝೆಕಸ್ಲೋವಾಕಿಯಾ, ಇಟಲಿ ಮತ್ತು ಹಂಗರಿ ಕೂಡ ಸುಮಾರು ೨ ಲಕ್ಷ ಯೆಹೂದಿಗಳನ್ನು ಸಾವಿರಾರು ಮನೆಗಳಲ್ಲಿ ಬಂಧಿಸಿಟ್ಟಿದ್ದುಂಟು.
ಹಂಗರಿಯಲ್ಲಿ ಅಂಥ ಮನೆಗಳೆದುರು ಹಳದಿ ನಕ್ಷತ್ರವೊಂದನ್ನು ಅಂಟಿಸಲಾಗುತ್ತಿತ್ತು. ಕೊಟ್ಟಿಗೆಯಲ್ಲಿ ದನಗಳನ್ನು ತುಂಬುವಂತೆ ಆ ಮನೆಗಳ ಒಳಗೆ ಯೆಹೂದಿಗಳನ್ನು ತುಂಬಲಾಗುತ್ತಿತ್ತು. ಅಲ್ಲಿಂದ ಅವರ ಪಯಣ ಜರ್ಮನಿಯ ಶಿಬಿರಗಳೆಡೆಗೆ ಅರ್ಥಾತ್ ಸಾವಿನೆಡೆಗೆ ಸಾಗುತ್ತಿತ್ತು. ಆಗ ಅಮೆರಿಕದ ಅಧ್ಯಕ್ಷರಾಗಿದ್ದ ಫ್ರಾಂಕ್ಲಿನ್ ಡಿ.ರೂಸ್‌ವೆಲ್ಟ್ ಮತ್ತು ಇದೇ ಚರ್ಚಿಲ್‌ರ ಕನಸಿನ ಕೂಸು ಎನಿಸಿಕೊಂಡಿದ್ದೇ, ಈಗ ಜಗತ್ತಿನ ಅತಿದೊಡ್ಡ ಎನ್‌ಜಿಒ ಆಗಿ ಉಳಿದಿರುವ ವಿಶ್ವಸಂಸ್ಥೆ! ಅದು ಹುಟ್ಟಿದ್ದೇ ೨ನೇ ಮಹಾಯುದ್ಧದ ಸಮಯದಲ್ಲಿ, ಜರ್ಮನಿ ಮತ್ತದರ ಸಹವರ್ತಿ ದೇಶಗಳ ಭೀಕರ ದಾಳಿಗೆ ದಿಕ್ಕುತಪ್ಪಿ ಕಕ್ಕಾಬಿಕ್ಕಿಯಾಗಿದ್ದ ಮಿತ್ರರಾಷ್ಟ್ರಗಳನ್ನು ಒಗ್ಗೂಡಿಸಿ ಹೋರಾಡಲು. ಈಗ ಮಾತ್ರ ಅದರ ಉದ್ದೇಶ ‘ಶಾಂತಿಯನ್ನು ಕಾಪಾಡಿಕೊಳ್ಳುವಿಕೆ’ ಅಲ್ಲ, ಬದಲಿಗೆ ‘ಶಾಂತಿಮಂತ್ರ ಜಪಿಸಲು’ ಎಂದರೆ ತಪ್ಪುಂಟೇ?
ಬಲಿಷ್ಠ ರಾಷ್ಟ್ರಗಳ ಮೂಗಿನಡಿಯಲ್ಲಿಯೇ ಹಿಟ್ಲರ್ ಸುಮಾರು ೧ ಕೋಟಿ ೨೦ ಲಕ್ಷ ಯೆಹೂದಿಗಳ, ಸ್ಲಾವ್‌ಗಳ, ಸಲಿಂಗಕಾಮಿಗಳ, ರೋಮಾ ಜಿಪ್ಪಿಗಳ ಹತ್ಯಾಕಾಂಡ ನಡೆಸಿಯೇಬಿಟ್ಟ.
ಯುದ್ಧಾಪರಾಧ ಆಯೋಗವು ಈ ನರಮೇಧದ ಬಗ್ಗೆ ರಹಸ್ಯ ತನಿಖೆ ನಡೆಸಿತು; ಆದರೆ ಅದು ನಾಜಿಗಳ ಬಾಂಬುಗಳ ಸದ್ದು ಲಂಡನ್ನನ್ನು ತಲುಪಿದ ಮೇಲೆಯೇ. ಹಿಟ್ಲರ್ ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ಅದು ತನಿಖೆ ನಡೆಸಿದ್ದರೆ ಅದರ ಹೆಸರಿಗೆ, ಈ ವಿಶ್ವಸಂಸ್ಥೆಯ ರಚನೆಗೆ ಒಂದು ಅರ್ಥ ಬರುತ್ತಿತ್ತು. ಆದರೆ ಯೆಹೂದಿ ಗಳ ಹತ್ಯೆಯ ಬಗ್ಗೆ ಇಲ್ಲಿಯವರೆಗೂ ವಿಶ್ವಸಂಸ್ಥೆಯಿಂದ ಹೊರಬಿದ್ದಿದ್ದು ಬರೀ ಬಾಯಿಮಾತಿನ ‘ಖಂಡನೆ’. ಇದು ವಿಪರ್ಯಾಸವಲ್ಲವೇ? ಇಂದಿಗೂ ವಿಶ್ವಸಂಸ್ಥೆಯು ದೊಡ್ಡ ರಾಷ್ಟ್ರಗಳ ತಪ್ಪನ್ನು ಬೇಗನೆ ಕ್ಷಮಿಸುತ್ತದೆ.
ತನ್ನ ಕಾಯಂ ಸದಸ್ಯತ್ವವನ್ನು ಪಡೆದು ವಿಟೋ ಅಧಿಕಾರವನ್ನು ಹೊಂದಿರುವ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ರಷ್ಯಾ ಮತ್ತು ಚೀನಾದ ಯಾವುದೇ ಅತಿರೇಕದ ನಡವಳಿಕೆಯನ್ನೂ ವಿಶ್ವಸಂಸ್ಥೆ ನಿಯಂತ್ರಿಸುವುದಿಲ್ಲ. ಈ ಐದೂ ರಾಷ್ಟ್ರಗಳು ಪ್ರತಿಯೊಂದು ಯುದ್ಧವನ್ನೂ ತಮ್ಮದೇ ದೃಷ್ಟಿಕೋನದಲ್ಲಿ ನೋಡುತ್ತಿವೆ, ತಮ್ಮದೇ ಆದ ಹಿತಾಸಕ್ತಿಗಳಿಗೆ ಆದ್ಯತೆ ನೀಡುತ್ತಿವೆ. ಒಟ್ಟಾರೆ ಹೇಳುವುದಾದರೆ ಈ ವಿಟೋ ಸದಸ್ಯ ರಾಷ್ಟ್ರಗಳು ತಮ್ಮ ಮೂಗಿನ ನೇರಕ್ಕೆ ನಡೆದುಕೊಳ್ಳುವ ಮೂಲಕ ವಿಶ್ವಸಂಸ್ಥೆಯನ್ನು ನಿಯಂತ್ರಿಸುತ್ತಿವೆ. ಈ ಸಂಸ್ಕೃತಿಯನ್ನು ನಿಲ್ಲಿಸದಿದ್ದರೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಸ್ವತಂತ್ರವಾಗಿ ಕಾರ್ಯನಿರ್ವಹಿಸಲಾಗದು.
ಇಸ್ರೇಲ್-ಹಮಾಸ್ ಉಗ್ರರ ನಡುವಿನ ಯುದ್ಧ ೩ನೇ ತಿಂಗಳಿಗೆ ಕಾಲಿಟ್ಟಿದೆ.
ಹಮಾಸ್‌ಗಳ ನಿರ್ನಾಮಕ್ಕೆ ಸಂಕಲ್ಪಿಸಿರುವ ಇಸ್ರೇಲ್ ಪಡೆಗಳು, ಅಮೆರಿಕದ ಎಚ್ಚರಿಕೆ ಮತ್ತು ಅಂತಾರಾಷ್ಟ್ರೀಯ ಸಮುದಾಯದ ಒತ್ತಡದ ನಡುವೆಯೂ ಗಾಜಾಪಟ್ಟಿ ಪ್ರದೇಶಗಳ ಮೇಲಿನ ದಾಳಿಯನ್ನು ಮುಂದುವರಿಸಿವೆ. ವಿಶ್ವಸಂಸ್ಥೆ ಎಂದಿನಂತೆ ‘ಖಂಡನೆ’ಗೆ ಮಾತ್ರ ಸೀಮಿತವಾಗಿದ್ದು ಯುದ್ಧವನ್ನು ನೋಡುತ್ತಾ ಕೂತಿದೆ. ಒಟ್ಟಾರೆ ಹೇಳುವುದಾದರೆ, ವಿಶ್ವಸಂಸ್ಥೆಯು ಹಲ್ಲಿಲ್ಲದ ಹಾವಿನಂತೆ ಹೆಡೆಯೆತ್ತಿ ನೋಡುತ್ತಿದೆ.
೧೯೪೮ರಲ್ಲೇ ಯೆಹೂದಿಗಳ ರಾಷ್ಟ್ರ ರಚನೆಯಾದರೂ, ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ನಿರಂತರ ಉದ್ವಿಗ್ನತೆಯಿದೆ. ಆದರೆ ಅದನ್ನು ಭದ್ರತಾ ಮಂಡಳಿ ಯು ಶಮನಗೊಳಿಸಲಿಲ್ಲ. ಅಲ್ಲದೆ ಅದರ ಮಾತನ್ನು ಯಾರೂ ಕೇಳುತ್ತಿಲ್ಲ. ಇರಾನ್-ಇರಾಕ್ ಯುದ್ಧದಲ್ಲಿ ಸುಮಾರು ೧೦ ಲಕ್ಷ ಮಂದಿ ಅಸುನೀಗಿದರೂ ವಿಶ್ವಸಂಸ್ಥೆ ಸ್ಪಂದಿಸಲಿಲ್ಲ. ವಿಶ್ವ ವ್ಯಾಪಾರ ಸಂಸ್ಥೆ, ವಿಶ್ವ ಹಣಕಾಸು ಸಂಸ್ಥೆ, ವಿಶ್ವಬ್ಯಾಂಕ್‌ನಂಥ ಜಾಗತಿಕ ಸಂಸ್ಥೆಗಳು ಶ್ರೀಮಂತ ರಾಷ್ಟ್ರಗಳ ಆಣತಿಯಂತೆ
ನಡೆಯುವುದು ಇನ್ನಾದರೂ ನಿಲ್ಲಬೇಕು. ವಿಟೋ ಅಧಿಕಾರವನ್ನು ತೆಗೆದು ವಿಶ್ವಸಂಸ್ಥೆಗೆ ಸ್ವಯಮಾಧಿಕಾರವನ್ನು ನೀಡಬೇಕು ಹಾಗೂ ಅದನ್ನು ವಿಶ್ವಸಂಸ್ಥೆಯು ಸಮರ್ಥವಾಗಿ ನಿಭಾಯಿಸುವಂತಾಗಬೇಕು.
ಎಲ್ಲಾ ೧೯೩ ಸದಸ್ಯ ರಾಷ್ಟ್ರಗಳ ಅಭಿಪ್ರಾಯವನ್ನು ವಿಶ್ವಸಂಸ್ಥೆ ಗೌರವಿಸಬೇಕು. ವಿಶ್ವದ ಯಾವೊಂದು ರಾಷ್ಟ್ರಕ್ಕೂ ಬಲಿಷ್ಠ ರಾಷ್ಟ್ರದಿಂದ ವಿನಾಕಾರಣ ಹಾನಿ ಯಾಗುವುದನ್ನು ವಿಶ್ವಸಂಸ್ಥೆ ತಪ್ಪಿಸಬೇಕು. ವಿಶ್ವಸಂಸ್ಥೆಗೆ ಇಂಥದೊಂದು ಕಾಯಕಲ್ಪವಾಗಬೇಕಿರುವುದು ಈ ಕ್ಷಣದ ಜರೂರತ್ತು.
(ಲೇಖಕರು ವಿಜಯಾ ಬ್ಯಾಂಕ್‌ನ ನಿ.ಮುಖ್ಯ ಪ್ರಬಂಧಕರು)