Thursday, 12th December 2024

ಜನವರಿ 2024 ರಿಂದ 2ನೇ ಹಂತದ ‘ಭಾರತ್ ಜೋಡೋ ಯಾತ್ರೆ’ ಆರಂಭ

ನವದೆಹಲಿ: ಲೋಕಸಭೆ ಚುನಾವಣೆ ಘೋಷಣೆಗೂ ಮುನ್ನವೇ ಜನವರಿ 2024 ರಿಂದ 2 ನೇ ಹಂತದ ‘ಭಾರತ್ ಜೋಡೋ ಯಾತ್ರೆ’ ಆರಂಭಿಸಲು ಕಾಂಗ್ರೆಸ್ ನಿರ್ಧರಿಸಿದೆ ಎನ್ನಲಾಗಿದೆ.

ಕಾಂಗ್ರೆಸ್ ಪಕ್ಷವು ಭಾರತ್ ಜೋಡೋ ಯಾತ್ರೆಯ ಎರಡನೇ ಹಂತಕ್ಕೆ ತಯಾರಿ ನಡೆಸುತ್ತಿದೆ. ಈ ಬಾರಿ ಯಾತ್ರೆ ಮೊದಲಿನಂತೆಯೇ ಇರಲಿದ್ದು, ಭಾರತ್ ಜೋಡೋ ಯಾತ್ರೆಯ ಎರಡನೇ ಹಂತವನ್ನು ಜನವರಿಯಿಂದ ಆರಂಭಿಸಲು ಕಾಂಗ್ರೆಸ್ ಸಿದ್ದತೆ ನಡೆಸಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಯಾತ್ರೆಯ ನೇತೃತ್ವ ವಹಿಸುವ ನಿರೀಕ್ಷೆಯಿದೆ. ಭಾರತ್ ಜೋಡೋ ಯಾತ್ರೆಯ 2.0 ಆವೃತ್ತಿಯು ಹೈಬ್ರಿಡ್ ಮೋಡ್ ನಲ್ಲಿರಲಿದೆ.

ಮೂಲಗಳ ಪ್ರಕಾರ, ಯಾತ್ರೆಗಾಗಿ ಪ್ರಸ್ತುತ ಎರಡು ಸಂಭಾವ್ಯ ಮಾರ್ಗಗಳು ಪರಿಗಣನೆಯಲ್ಲಿವೆ. ಇದು ಈಶಾನ್ಯ ರಾಜ್ಯದಿಂದ ಪ್ರಾರಂಭವಾಗಲಿದೆ. ಯಾತ್ರೆಯ ಹೊಸ ಆವೃತ್ತಿಯು ನಿರ್ದಿಷ್ಟವಾಗಿ ಉತ್ತರ ಪ್ರದೇಶ, ಬಿಹಾರ ಮತ್ತು ಮಹಾರಾಷ್ಟ್ರದ ಮೇಲೆ ಕೇಂದ್ರೀಕರಿಸುತ್ತದೆ ಎಂದು ಹಿರಿಯ ನಾಯಕ ರೊಬ್ಬರು ತಿಳಿಸಿದ್ದಾರೆ.

ಡಿ.21 ರಂದು ನಡೆಯಲಿರುವ ಸಭೆಯಲ್ಲಿ ಕಾಂಗ್ರೆಸ್ ಯಾತ್ರೆಯ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ.

ಭಾರತ್ ಜೋಡೋ ಯಾತ್ರೆಯ ಮೊದಲ ಹಂತವು ಸೆಪ್ಟೆಂಬರ್ 7, 2022 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾಯಿತು ಮತ್ತು ಸುಮಾರು 4,080 ಕಿ.ಮೀ ದೂರವನ್ನು ಕ್ರಮಿಸಿತು. 2023 ರ ಜನವರಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಯಾತ್ರೆ ಕೊನೆಗೊಂಡಿತು. ಈ ಯಾತ್ರೆಯು 126 ದಿನಗಳಲ್ಲಿ 12 ರಾಜ್ಯಗಳ 75 ಜಿಲ್ಲೆಗಳನ್ನು ಕ್ರಮಿಸಿತ್ತು.