ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆಯಿಂದ ಮತ್ತು ರಾಜ್ಯಸಭೆಯಿಂದ ಅಮಾನತುಗೊಂಡ ಒಟ್ಟು 141 ಸಂಸದರು ಸಂಸತ್ತಿನ ಚೇಂಬರ್, ಲಾಬಿ ಮತ್ತು ಗ್ಯಾಲರಿಗಳಿಗೆ ಪ್ರವೇಶಿಸದಂತೆ ಲೋಕಸಭೆ ಸಚಿವಾಲಯ ಸುತ್ತೋಲೆ ಹೊರಡಿಸಿದೆ.
ಸಂಸತ್ ಭವನದಲ್ಲಿ ಡಿ. 13ರಂದು ಉಂಟಾದ ಭದ್ರತಾ ಲೋಪ ಕುರಿತು ಚರ್ಚೆಗೆ ಒತ್ತಾಯಿಸಿ, ಹಾಗೂ ಘಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ಪ್ರತಿಕ್ರಿಯೆ ನೀಡುವಂತೆ ಪಟ್ಟು ಹಿಡಿದು ಉಭಯ ಸದನಗಳಲ್ಲಿ ಅಶಿಸ್ತಿನ ವರ್ತನೆ ತೋರಿದ್ದಕ್ಕೆ ವಿವಿಧ ಪಕ್ಷಗಳ ಸದಸ್ಯರನ್ನು ಲೋಕಸಭೆ ಹಾಗೂ ರಾಜ್ಯಸಭೆ ಸೇರಿ ಉಭಯ ಸದನಗಳಿಂದ ಅಮಾನತುಗೊಳಿಸಲಾಗಿತ್ತು.
ಸಚಿವಾಲಯ ಸುತ್ತೋಲೆ ಹೊರಡಿಸಿದ್ದು, ಅಮಾನತುಗೊಂಡ ಎಲ್ಲ ಸಂಸದರು ಈ ಅವಧಿಯಲ್ಲಿ ಸಂಸತ್ತಿ ಗ್ಯಾಲರಿ ಮತ್ತು ಕೋಣೆಗಳಿಗೆ ಪ್ರವೇಶಿಸಲು ನಿಷೇಧವಿದೆ ಎಂದು ತಿಳಿಸಿದೆ.
ಅಮಾನತ್ತಿನ ಅವಧಿಯಲ್ಲಿ ಯಾವುದೇ ಸಂಸದೀಯ ಸಮಿತಿಯ ಸಭೆಗೆ ಹಾಜರಾಗುವಂತಿಲ್ಲ. ತಮ್ಮ ಅಮಾನತು ಅವಧಿಯಲ್ಲಿ ನಡೆದ ಸಮಿತಿಗಳಿಗೆ ಯಾವುದೇ ಚುನಾವಣೆಯಲ್ಲಿ ಮತ ಚಲಾಯಿಸುವಂತಿಲ್ಲ. ಅಧಿವೇಶನದ ಉಳಿದ ಅವಧಿಗೆ ಅವರನ್ನು ಸದನದ ಸೇವೆಯಿಂದ ಅಮಾನತುಗೊಳಿಸಿದರೆ, ಅವರು ಅಮಾನತು ಅವಧಿಯಲ್ಲಿ ದೈನಂದಿನ ವೇತನದ ಭತ್ಯೆಗೆ ಅರ್ಹರಾಗಿರುವುದಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಸಂಸದರ ಅಮಾನತು ಖಂಡಿಸಿರುವ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಡಿ.22 ರಂದು ರಾಷ್ಟ್ರವ್ಯಾಪಿ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.