ಭೋಪಾಲ್: ಮಧ್ಯಪ್ರದೇಶದ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಕಲ್ಲಿನ ಗುಂಡುಗಳನ್ನು ಜನರು ಕುಲ ದೇವತೆ ಎಂದು ಪೂಜಿಸುತ್ತಾ ಬಂದಿದ್ದು,
ಆ ಕಲ್ಲುಗಳು ಅಸಲಿಗೆ ಕಲ್ಲುಗಳೇ ಅಲ್ಲ, ಡೈನೋಸರ್‌ನ ಮೊಟ್ಟೆಗಳ ಪಳೆಯುಳಿಕೆ ಅನ್ನುವ ವಿಚಾರ ಬಹಿರಂಗಗೊಂಡಿದೆ.
ಧಾರ್ ಜಿಲ್ಲೆಯ ಪದಲ್ಯ ಎಂಬ ಗ್ರಾಮದಲ್ಲಿ ಕುಲದೇವತೆಗಳೆಂದು ಗುಂಡಗಿನ ಆಕಾರದಲ್ಲಿದ್ದ ಶಿಲೆಗಳಂಥ ಆಕೃತಿಗಳನ್ನು “ಕಾಕಾಡ್ ಭೈರವ್’ ಎಂಬ ಹೆಸರಿನಿಂದ ಪೂಜಿಸುತ್ತಾ ಬರಲಾಗುತ್ತಿತ್ತು. ಭಾಗ್ ಪ್ರದೇಶದಲ್ಲಿರುವ ಡೈನೋಸಾರ್ ಪಾರ್ಕ್ ನಲ್ಲಿಯೂ ಅಂಥದ್ದೇ ಕಲ್ಲುಗಳನ್ನು ಕಂಡ ಜನರು ಅಲ್ಲಿಯೂ ಪೂಜೆ ಸಲ್ಲಿಸಲು ಮುಂದಾಗುತ್ತಿದ್ದರು.
ತಜ್ಞರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಅಲ್ಲಿ ಡೈನೋಸಾರ್ ಮೊಟ್ಟೆಗಳ ಪಳೆಯುಳಿಕೆಯನ್ನೇ ದೇವರೆಂದು ಪೂಜಿಸುತ್ತಿರು ವುದು ಗಮನಕ್ಕೆ ಬಂದಿದೆ. ಆ ಬಳಿಕ ತಜ್ಞರು ಈ ವಿಚಾರವನ್ನು ಗ್ರಾಮಸ್ಥರಿಗೆ ತಿಳಿಸಿದ್ದು, ಈಗಾಗಲೇ ಜಿಲ್ಲೆಯಲ್ಲಿ 250ಕ್ಕೂ ಅಧಿಕ ಮೊಟ್ಟೆಗಳ ಪಳೆಯುಳಿಕೆ ಪತ್ತೆಯಾಗಿದೆ ಎಂದಿದ್ದಾರೆ.