Saturday, 23rd November 2024

ಮುಂದಿನ ವಿಧಾನಸಭೆ ಚುನಾವಣೆ ನನಗೆ ಕೊನೆದ್ದು: ಶಾಸಕ ಯತ್ನಾಳ

ವಿಜಯಪುರ: ರಾಜ್ಯ ರಾಜಕಾರಣದಲ್ಲಿ ವಂಶಪರಂಪರೆ ರಾಜಕೀಯ ಮುಗಿಯಬೇಕಿದೆ. ಹೀಗಾಗಿ, ಮುಂದಿನ ವಿಧಾನಸಭೆ ಚುನಾವಣೆ ನನ್ನ ಕೊನೆ ಚುನಾವಣೆ ಆಗಲಿದೆ ಎಂದು ವಿಜಯಪುರದ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ರಾಜ್ಯದಲ್ಲಿ ಪ್ರಾಮಾಣಿಕ ರಾಜಕಾರಣ ಅಸಾಧ್ಯವಾಗಿದೆ. ಅಪ್ಪಾಜಿ ಎನ್ನಬೇಕು, ಹಣ ಬಲ ಬೇಕು, ಮೇಲಿನವರ ಇಷ್ಟಾರ್ಥ ಸಿದ್ಧಿಗಳನ್ನು ಈಡೇರಿಸಬೇಕು. ಹೀಗಾಗಿ 2028 ರ ವಿಧಾನಸಭೆ ಚುನಾವಣೆ ಬಳಿಕ ಪರೋಕ್ಷವಾಗಿ ಸಕ್ರಿಯ ರಾಜಕೀಯ ನಿವೃತ್ತಿ ಎಂದು ಘೋಷಿಸಿದರು.

ಬಾಗಲಕೋಟೆ ಕ್ಷೇತ್ರದಲ್ಲಿ ಹಾಲಿ ಸಂಸದ ಪಿ.ಸಿ.ಗದ್ದೀಗೌಡರ ಸಮರ್ಥರಿದ್ದು, ಬರುವ ಲೋಕಸಭೆ ಚುನಾವಣೆಯಲ್ಲಿ ನಾನು ಅಲ್ಲಿನ ಬಿಜೆಪಿ ಟಿಕೆಟ್ ಆಕಾಂಕ್ಷಿಯಲ್ಲ. ಬೀದರ ಕ್ಷೇತ್ರದಿಂದಲೂ ಸ್ಪರ್ಧಿಸಲು ಕೆಲವರು ಮನವಿ ಮಾಡಿದ್ದು, ಅಲ್ಲಿಯೂ ಸಮರ್ಥರಿದ್ದಾರೆ ಎಂದು ಇಂಥ ಸುದ್ದಿಗಳಿಗೆ ಸಮಜಾ ಯಿಸಿ ನೀಡಿದರು.

ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಯಲಬುರ್ಗಾದ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಹೇಳಿರುವುದು ನೂರಕ್ಕೆ ನೂರ ರಷ್ಟು ಸತ್ಯ. ಆಳಂದ ಶಾಸಕ ಬಿ.ಆರ್.ಪಾಟೀಲ ಕೂಡ ಸತ್ಯವನ್ನೇ ಹೇಳಿದ್ದಾರೆ. ಇವರೆಲ್ಲ ಮೌಲ್ಯಾಧಾರಿತ ರಾಜಕೀಯದ ಹಿನ್ನೆಲೆ ಇರುವವರು. ಹೀಗಾಗಿ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರೂ ಭ್ರಷ್ಟರೇ ಇದ್ದಾರೆ ಎಂದಲ್ಲ, ಅಲ್ಲೂ ಒಳ್ಳೆಯವರಿದ್ದಾರೆ. ಎಲ್ಲ ಪಕ್ಷಗಳಲ್ಲಿ ಒಳ್ಳೆಯವರು, ಕೆಟ್ಟವರು ಎರಡೂ ವರ್ಗದ ಜನರಿದ್ದಾರೆ ಎಂದರು.

ಪ್ರಸ್ತುತ ಸಂದರ್ಭದಲ್ಲಿ ಯಾವುದೇ ಸಚಿವರು ಕಮಿಷನ್ ಇಲ್ಲದೆ ಒಂದೂ ಕೆಲಸ ಮಾಡುವುದಿಲ್ಲ. ಸರ್ಕಾರದ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ವ್ಯಾಪಕ ವಾಗಿದ್ದು, ಸಿದ್ಧರಾಮಯ್ಯರಿಂದ ನಿಯಂತ್ರಣ ಅಸಾಧ್ಯ ಎನ್ನುಷ್ಟರ ಮಟ್ಟಿಗೆ ಅವರ ಕೈ ಮೀರಿದೆ.

ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಹಿಂಪಡೆಯುವ ಮೂಲಕ ಸಿದ್ಧರಾಮಯ್ಯ ಅವರು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಸ್ಲಿಂ ತುಷ್ಟೀ ಕರಣಕ್ಕೆ ಮುಂದಾಗಿದ್ದಾರೆ. ಇದರೊಂದಿಗೆ ಎರಡನೇ ಟಿಪ್ಪು ಸುಲ್ತಾನ ಆಗಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು