ಲಖನೌ: 14 ಜನರನ್ನು ಬಲಿತೆಗೆದುಕೊಂಡ 2005ರ ಶ್ರಮಜೀವಿ ಎಕ್ಸ್‌ಪ್ರೆಸ್ ಸ್ಫೋಟ ಪ್ರಕರಣದಲ್ಲಿ ಇಬ್ಬರನ್ನು ಅಪರಾಧಿಗಳೆಂದು ಉತ್ತರಪ್ರದೇಶದ ಜೌನ್‌ಪುರ ನ್ಯಾಯಾಲಯ ತೀರ್ಪು ನೀಡಿದೆ.
ಪ್ರಕರಣದಲ್ಲಿ ನಫಿಕುಲ್ ವಿಶ್ವಾಸ್ ಮತ್ತು ಹಿಲಾಲ್ ತಪ್ಪಿತಸ್ಥರು ಎಂದು ಘೋಷಿಸಲಾಗಿದೆ. ಶಿಕ್ಷೆಯ ಪ್ರಮಾಣವನ್ನು ಜನವರಿ 2 ರಂದು ಪ್ರಕಟಿಸಲಾಗುವುದು.
ಜುಲೈ 28, 2005 ರಂದು ಸಂಜೆ ಉತ್ತರ ಪ್ರದೇಶದ ಜೌನ್‌ಪುರ ನಿಲ್ದಾಣದ ಬಳಿ ಪಾಟ್ನಾ-ನವದೆಹಲಿ ರೈಲಿನ ಕೋಚ್‌ನಲ್ಲಿ ಸ್ಫೋಟ ನಡೆಸಲಾಗಿತ್ತು. ಈ ಸ್ಪೋಟದಲ್ಲಿ 14 ಜನರು ಸಾವನ್ನಪ್ಪಿ, 62 ಜನರು ಗಾಯಗೊಂಡಿದ್ದರು.
ರೈಲು ಹರಿಹರಪುರ ರೈಲ್ವೆ ಕ್ರಾಸಿಂಗ್‌ಗೆ ತಲುಪುತ್ತಿದ್ದಂತೆ ಭಾರಿ ಸ್ಫೋಟ ಸಂಭವಿಸಿತ್ತು. ಸ್ಪೋಟಕ್ಕೆ ಬಳಸಲಾದ ಆರ್‌ಡಿಎಕ್ಸ್ ಅನ್ನು ರೈಲಿನ ಶೌಚಾಲಯದಲ್ಲಿ ಇರಿಸಲಾಗಿತ್ತು.
ಇಬ್ಬರು ಯುವಕರು ಬಿಳಿ ಬಣ್ಣದ ಸೂಟ್‌ಕೇಸ್‌ನೊಂದಿಗೆ ಜೌನ್‌ಪುರದಲ್ಲಿ ರೈಲು ಹತ್ತಿದ್ದರು. ಸ್ವಲ್ಪ ಸಮಯದ ನಂತರ ಇಬ್ಬರೂ ಚಲಿಸುತ್ತಿದ್ದ ರೈಲಿನಿಂದ ಹಾರಿದ್ದರು. ಇದಾಗಿ ಕೆಲವೇ ಹೊತ್ತಿನಲ್ಲಿ ಸ್ಪೋಟ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಸಾಕ್ಷ್ಯ ಹೇಳಿದ್ದರು.