Friday, 22nd November 2024

ಪ್ರಖ್ಯಾತ ವಿಜ್ಞಾನಿಗಳೂ, ಲೆಕ್ಕದಿ ಬರೀ ಸೊನ್ನೆ ಆದವರಿದ್ದರು !

ತಿಳಿರು ತೋರಣ

srivathsajoshi@yahoo.com

ಅಲೆಕ್ಸಾಂಡರ್ ಗ್ರಹಾಂ ಬೆಲ್, ಥಾಮಸ್ ಆಲ್ವಾ ಎಡಿಸನ್, ಮೈಕೇಲ್ ಫ್ಯಾರಡೇ, ಚಾರ್ಲ್ಸ್ ಡಾರ್ವಿನ್… ಮುಂತಾದ ಹೆಸರುಗಳನ್ನು ಕೇಳಿದ ತತ್‌ಕ್ಷಣ ನಮ್ಮ ಮನಸ್ಸಿನಲ್ಲಿ ಮೂಡುವುದು ಮೇಧಾವಿ ವಿಜ್ಞಾನಿಗಳ ಚಿತ್ರಣ. ಅಲ್ಲಿ ಇಲ್ಲಿ ನೋಡಿರಬಹುದಾದ ಅವರ ಕಪ್ಪುಬಿಳುಪು ಭಾವಚಿತ್ರಗಳಲ್ಲಿನ
ಮುಖಚರ್ಯೆ-ಅದರಲ್ಲೂ ಮುಖ್ಯವಾಗಿ ಉದ್ದಕ್ಕೆ ಬಿಟ್ಟ ಗಡ್ಡ, ಕೆದರಿದ ಕೂದಲು, ಒಂದು ರೀತಿಯಲ್ಲಿ ಸೊರಗಿ ಹೋದ ಮುಖ ಅಂತನಿಸಿದರೂ ಅದರಲ್ಲಿ ಹೊಳಪುಳ್ಳ ಕಣ್ಣುಗಳು- ಎಲ್ಲವೂ ಒಮ್ಮೆ ಕಣ್ಮುಂದೆ ಬಂದುಹೋಗುತ್ತವೆ. ಆ ವಿಜ್ಞಾನಿಗಳ ಸಂಶೋಧನೆಯ ಕ್ಷೇತ್ರಗಳಾವುವು, ಸಂಶೋಧಿಸಿದ ವಸ್ತು ಅಥವಾ ವಿಷಯಗಳು ಯಾವುವೆಂದು ನೆನಪಾದರೂ ಆದೀತು. ಜೊತೆಯಲ್ಲೇ, ‘ಅಬ್ಬಾ! ಅಂತಹ ವಿಶ್ವವಿಖ್ಯಾತ ವಿಜ್ಞಾನಿ ಆಗಬೇಕಿದ್ದರೆ ಅವರ ಮಿದುಳು ಅದೆಷ್ಟು ಚುರುಕಿನದಿರಬಹುದು!

ನಮ್ಮಂಥ ಪಾಮರರ ಮಿದುಳಿಗಿಂತ ಯಾವೆಲ್ಲ ರೀತಿಯಲ್ಲಿ ವಿಭಿನ್ನವಾಗಿರಬಹುದು? ಅದನ್ನೊಮ್ಮೆ ಬಗೆದು ನೋಡುವ ಅವಕಾಶವಿದ್ದರೆ ಹೇಗಿರ ಬಹುದು!’  ಎಂಬ ಧಾಟಿಯ ಆಶ್ಚರ್ಯಭಾವವೂ ಒಂದೊಮ್ಮೆ ಸುಳಿದು ಹೋದೀತು. ಪರಂತು ಅವರಲ್ಲಿ ಕೆಲವರಿಗೆ ನಮ್ಮಲ್ಲನೇಕರಿಗಿರುವಂತೆ ಲೆಕ್ಕ ಅಂದ್ರೆ ತಲೆನೋವು ಆಗಿರುತ್ತಿತ್ತು ಎಂದು ಹೇಳಿದರೆ ಮಾತ್ರ ಯಾರೂ ನಂಬಲಿಕ್ಕಿಲ್ಲ. ಅರೆರೆ! ಅದು ಹೇಗೆ ಸಾಧ್ಯ? ಮ್ಯಾಥಮ್ಯಾಟಿಕ್ಸ್ ಇಸ್ ದ ಕ್ವೀನ್ ಆಫ್ ಸೈನ್ಸ್ ಎಂಬ ನಾಣ್ಣುಡಿಯೇ ಇರುವಾಗ ಸೈಂಟಿಸ್ಟುಗಳು ಮ್ಯಾಥಮ್ಯಾಟಿಕ್ಸ್‌ನಲ್ಲಿ ದಡ್ಡರಾಗಿರುತ್ತಾರೆಯೇ? ನಮ್ಮದೇ ತಲೆ ನಮ್ಮೊಡನೆ ವಾದಕ್ಕಿಳಿಯ ಬಹುದು.

ಆದರೂ ಈ ಮಾತು ನಿಜವಾದದ್ದೇ. ಕೆಲವು ವಿಶ್ವವಿಖ್ಯಾತ ವಿಜ್ಞಾನಿಗಳು ಲೆಕ್ಕದ ವಿಷಯಕ್ಕೆ ಬಂದಾಗ ಬರೀ ಸೊನ್ನೆ ಆಗಿದ್ದರಂತೆ. ಅಂದರೆ ‘ಅಗಣಿತ ಗುಣಗಣ’ ಎಂದು ನಾನು ತಮಾಷೆಗೆ ಬಳಸುವ ಪದಪುಂಜ ಈ ವಿeನಿಗಳಿಗೂ ಅನ್ವಯವಾಗುತ್ತದೆ ಅಂತಾಯ್ತು. ಇಲ್ಲಿ ಅಗಣಿತ ಅಂದರೆ ಅಸಂಖ್ಯಾತ ಎಂದಲ್ಲ, ಸಂಖ್ಯೆ-ಸೂತ್ರ- ಸಮೀಕರಣಗಳಿಂದ ಗಾವುದ ದೂರ ಇರಬಯಸುವುದು ಎಂದು. ಗಣಿತವೆಂದರೆ ಕಬ್ಬಿಣದ ಕಡಲೆ, ಅದು ತಲೆಯ ಮೇಲಿನಿಂದ ಹಾರಿ ಹೋಗುತ್ತದೆ, ಗಣಿತ ಎಂದೊಡನೆ ಕೈ-ಕಾಲು ಎದೆ ನಡುಕ ಶುರುವಾಗುತ್ತದೆ, ಲೆಕ್ಕ ಬಿಡಿಸುವುದೊಂದನ್ನು ಬಿಟ್ಟು ಬೇರೇನು ಬೇಕಿದ್ರೂ ಹೇಳಿ, ಕೂಡಲೇ ಮಾಡ್ತೇನೆ… ಎನ್ನುವವರ ಸಾಲಿನಲ್ಲಿ ವಿಜ್ಞಾನಿಗಳನ್ನು ಊಹಿಸುವುದು ಕಷ್ಟ; ಆದರೂ ಅವರ ಬಗೆಗಿನ ವ್ಯಕ್ತಿಚಿತ್ರಣ ಲೇಖನಗಳಲ್ಲಿ, ಅದಕ್ಕಿಂತಲೂ ಹೆಚ್ಚಾಗಿ ಅವರದೇ ಆತ್ಮಚರಿತ್ರೆಗಳಲ್ಲಿ ಆ ರೀತಿಯ ನಿವೇದನೆಗಳು ದಾಖಲೆಯಾಗಿ ಸಿಕ್ಕಿದಾಗ ನಂಬಲೇಬೇಕಾಗುತ್ತದೆ.

ಅಂತಹ ಮೇಧಾವಿಗಳಿಗೇ ಮ್ಯಾಥಮ್ಯಾಟಿಕ್ಸ್ ಅಂದರೆ ಮಂಡೆಬಿಸಿ ಆಗುತ್ತಿತ್ತೆಂದಮೇಲೆ ನಮ್ಮದೇನು ಮಹಾ ಎಂದು ಒಂದು ತೆರನಾದ ಸಮಾಧಾನ ಆಗುವುದೂ ಹೌದೆನ್ನಿ. ಮೈಕೇಲ್ ಫ್ಯಾರಡೇಯಿಂದಲೇ ಈ ಯಾದಿಯನ್ನು ಆರಂಭಿಸೋಣ. ೧೭೯೧ರಲ್ಲಿ ನ್ಯೂಯಿಂಗ್ಟನ್ ಬಟ್ಟ್ಸ್ ಎಂಬಲ್ಲಿ, ಅಂದರೆ
ಈಗಿನ ಲಂಡನ್ ಬರೋ ಆಫ್ ಸೌತ್‌ವಾರ್ಕ್ ಎಂಬ ಪ್ರದೇಶದಲ್ಲಿ ಹುಟ್ಟಿದ ಮೈಕೇಲ್ ಫ್ಯಾರಡೇಯ ತಂದೆ ಆ ಹಳ್ಳಿಯಲ್ಲಿ ಒಬ್ಬ ಕಮ್ಮಾರನಾಗಿದ್ದವನು. ಮೈಕೇಲ್‌ನದು ಬಡತನವಿದ್ದ ಬಾಲ್ಯ. ಉಳಿದ ಮೂವರು ಒಡಹುಟ್ಟಿದವರಂತೆಯೇ ಶಾಲೆಗೆ ಹೋಗಲಿಕ್ಕಾಗದೆ ಸ್ವಂತ ಕಲಿಕೆ.

ಒಂದು ಬುಕ್‌ಬೈಂಡಿಂಗ್/ಬುಕ್‌ಸೆಲ್ಲಿಂಗ್ ಸ್ಟೋರ್‌ನಲ್ಲಿ ಸಹಾಯಕನಾಗಿ ದುಡಿಮೆ. ಆಗ ಹಲವು ಪುಸ್ತಕಗಳನ್ನು ಓದುವ ಅವಕಾಶ. ಅಂತಹ ಮೈಕೇಲ್ ಫ್ಯಾರಡೇ ಬೆಳೆದು ದೊಡ್ಡವನಾಗಿ ‘ಫಾದರ್ ಆಫ್ ಎಲೆಕ್ಟ್ರಿಸಿಟಿ’ ಎಂಬ ಕೀರ್ತಿ ಗಳಿಸಿದನು. ಮೊತ್ತಮೊದಲ ಎಲೆಕ್ಟ್ರಿಕ್ ಮೋಟರ್ ಹಾಗೂ ಮೊತ್ತಮೊದಲ
ಎಲೆಕ್ಟ್ರಿಕ್ ಜನರೇಟರ್‌ಗಳನ್ನು ನಿರ್ಮಿಸಿದನು. ರಬ್ಬರ್ ಬಲೂನ್ ಗಳ ಜನಕನೆನಿಸಿಕೊಂಡನು. ರೆಫ್ರಿಜರೇಷನ್ ತಂತ್ರಜ್ಞಾನಕ್ಕೆ ಅಡಿಗಲ್ಲು ಹಾಕುವ ಬಹಳಷ್ಟು ಸಂಶೋಧನೆಗಳನ್ನು ಮಾಡಿದನು.

ಭೂಮಿಯ ಕಾಂತಶಕ್ತಿಯನ್ನೂ ಪ್ರಯೋಗಗಳ ಮೂಲಕ ತೋರಿಸಿದನು. ಇಷ್ಟೆಲ್ಲ ಸಾಧನೆಗಳ ನಡುವೆಯೂ ಮೈಕೇಲ್ ಫ್ಯಾರಡೇಗೆ ತಾನು ಸರಿಯಾದ ಶಿಕ್ಷಣ ಪಡೆದವನಲ್ಲ ಎಂಬ ಕೊರಗು-ಕೀಳರಿಮೆ ಗಳಿದ್ದುವಂತೆ. ಗಣಿತವಂತೂ ಆತನನ್ನು ಗಡಗಡ ನಡುಗಿಸುತ್ತಿತ್ತಂತೆ. ೧೮೪೬ರಲ್ಲಿ ಮೈಕೇಲ್ ಫ್ಯಾರಡೇಯು ನಮಗೆ ಕಾಣುವ ಬೆಳಕು ಎನ್ನುವುದು ವಿದ್ಯುತ್ಕಾಂತೀಯ ವಿಕಿರಣಗಳ ರೂಪ ಎಂಬ ಸಿದ್ಧಾಂತ ವನ್ನು ಮಂಡಿಸಿದನು. ನಿಜವಾಗಿಯಾದರೆ ಅದು ಏಕ್‌ದಂ ಸರಿಯಾದುದೇ ಆಗಿತ್ತು, ಆದರೆ ಅದನ್ನು ಗಣಿತ ಸೂತ್ರಗಳ ರೀತ್ಯಾ ಪ್ರತಿಪಾದಿಸುವುದು ಮೈಕೇಲ್‌ನಿಂದ ಸಾಧ್ಯವಾಗಲಿಲ್ಲ.

ಹಾಗಾಗಿ ಆ ಸಿದ್ಧಾಂತವನ್ನು ಸಾರ್ವಜನಿಕರು ಬಿಡಿ ಆತನ ಸಹೋದ್ಯೋಗಿಗಳೂ ಪುರಸ್ಕರಿಸಲಿಲ್ಲ. ಆಮೇಲೆ ೧೮ ವರ್ಷಗಳ ಬಳಿಕ ಸ್ಕಾಟ್‌ಲ್ಯಾಂಡ್‌ನ
ಭೌತವಿಜ್ಞಾನಿ ಮತ್ತು ಗಣಿತಪಂಡಿತ ಜೇಮ್ಸ್ ಕ್ಲರ್ಕ್ ಮ್ಯಾಕ್ಸ್‌ವೆಲ್‌ನು ಮೈಕೇಲ್ ಫ್ಯಾರಡೇಯ ಸಿದ್ಧಾಂತಗಳನ್ನು ಸಮೀಕರಣಗಳ ರೂಪದಲ್ಲಿ ಮಂಡಿಸಿ ದನು. ಜಗತ್ತು ಅದನ್ನು ಸ್ವೀಕರಿಸಿತು! ಜೇಮ್ಸ್ ಮ್ಯಾಕ್ಸ್‌ವೆಲ್ ಎಲೆಕ್ಟ್ರಿಕ್ ಫೀಲ್ಡ್ ಥಿಯರಿಯ ಅಧ್ಯಯನ ಆರಂಭಿಸಿದಾಗ ಮಾಡಿಕೊಂಡಿದ್ದ ಮೊದಲ ನಿರ್ಧಾರ ವೆಂದರೆ ಆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಗಣಿತ ವ್ಯಾಖ್ಯಾನಗಳಾವು ವನ್ನೂ ಓದದೇ ನೇರವಾಗಿ ಮೈಕೇಲ್ ಫ್ಯಾರಡೆಯ ಸಿದ್ಧಾಂತಗಳನ್ನಷ್ಟೇ ಓದುವುದು. ಬೇರೆ ಗಣಿತಜ್ಞರೆಲ್ಲ ಅದು ಹುರುಳಿಲ್ಲದ್ದು ಎಂದು ತಿರಸ್ಕರಿಸಿದ್ದರು.

ಮ್ಯಾಕ್ಸ್‌ವೆಲ್ ಮಾತ್ರ ಕ್ರಮಪ್ರಕಾರವಾಗಿ ಮೈಕೇಲ್ ಫ್ಯಾರಡೇಯ ಯೋಚನಾಸರಣಿಯನ್ನು ಅಭ್ಯಸಿಸುತ್ತ ಅವನ ಮಿದುಳಿಗೇ ಕೈ ಹಾಕಿದನೋ ಎಂಬಂತೆ ಅಲ್ಲಿರುವ ವಿಚಾರಧಾರೆಯನ್ನು ಕಂಡುಕೊಂಡನು. ಅದೊಂದು ವಿದ್ಯುದ್ದೀಪಾಲಂಕೃತ ಉದ್ಯಾನದಂತೆ ಅವನಿಗೆ ಕಂಡುಬಂದಿತಂತೆ. ಸಾಮಾನ್ಯವಾಗಿ
ಗಣಿತಜ್ಞರೆಲ್ಲ ಚಿಕ್ಕಚಿಕ್ಕ ಅಂಶಗಳಿಂದ ಆರಂಭಿಸಿ ಬೃಹತ್ ಚಿತ್ರಣದೆಡೆಗೆ ಹೋದರೆ ಮೈಕೇಲ್ ಫ್ಯಾರಡೇ ತದ್ವಿರುದ್ಧ. ಆತ ಬೃಹತ್ ಚಿತ್ರಣದಿಂದಲೇ ಆರಂಭಿಸಿ ಚಿಕ್ಕಚಿಕ್ಕ ವಿವರಗಳನ್ನು ಆಮೇಲೆ ಅವಲೋಕಿಸುತ್ತಿದ್ದ. ಸ್ಪೆಲ್ಲಿಂಗ್‌ಗಳು, ಉಚ್ಚಾರಗಳು ಇತ್ಯಾದಿಯ ಮೇಲೆಲ್ಲ ಯಾವುದೇ ಪ್ರಬುದ್ಧತೆ ಮೈಕೇಲ್ ಫ್ಯಾರಡೇಗೆ ಇರಲಿಲ್ಲ.

ಜ್ಞಾಪಕಶಕ್ತಿ ಆಗಾಗ ಕೈಕೊಡುತ್ತಿತ್ತು. ಅಂಥವನು ಗಣಿತಕೋವಿದ ನಾಗುವುದು ಎಲ್ಲ ದೃಷ್ಟಿಯಿಂದಲೂ ಕಷ್ಟವೇ ಇತ್ತು. ಮೈಕೇಲ್ ಫ್ಯಾರಡೇಯ ಕಥೆ ಹಾಗಾದರೆ, ಜೀವವಿಕಾಸ ಥಿಯರಿಯನ್ನು ಮಂಡಿಸಿದ ಚಾರ್ಲ್ಸ್ ಡಾರ್ವಿನ್‌ನ ಕಥೆಯೂ ಸ್ವಾರಸ್ಯಕರವಾಗಿ ಇದೆ. ಜೀವಿಗಳ ಮಿದುಳು ಹೇಗೆ ಪ್ರಭೇದದಿಂದ
ಪ್ರಭೇದಕ್ಕೆ ಕಾಲಾಂತರದಲ್ಲಿ ವಿಕಸಿತಗೊಳ್ಳುತ್ತ ಹೋಗುತ್ತದೆ, ತಾಕತ್ತುಳ್ಳ ಜೀವಪ್ರಭೇದ ಮಾತ್ರ ಪೃಥ್ವಿಯಲ್ಲಿ ಉಳಿದುಕೊಳ್ಳುತ್ತದೆ ಎಂದು ಚಾರ್ಲ್ಸ್ ಡಾರ್ವಿನ್ ಪರಿಣಾಮಕಾರಿಯಾಗಿ ಪ್ರತಿಪಾದಿಸಿ ದ್ದೇನೋ ಹೌದು. ಆದರೆ ಗಣಿತದ ಮಟ್ಟಿಗೆ ತನ್ನದೇ ಮಿದುಳು ಏನೇನೂ ವಿಕಸಿತಗೊಂಡಿಲ್ಲ ಎಂದು ಆತನೇ ಹೇಳಿಕೊಳ್ಳುತ್ತಿದ್ದನಂತೆ.

‘ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣದ ವೇಳೆ ನಾನು ಗಣಿತ ವನ್ನು ಅರಗಿಸಿಕೊಳ್ಳುವುದರಲ್ಲಿ ಸ್ವಲ್ಪ ಪ್ರಯತ್ನಪಟ್ಟೆ. ಆದರೆ ನನ್ನ ಕಲಿಕೆಯ ವೇಗ ಏನೂ ಸಾಲದಾಯಿತು. ೧೮೨೮ರ ಬೇಸಗೆಯಲ್ಲಿ ಒಬ್ಬಾತನ ಬಳಿ ಟ್ಯೂಷನ್‌ಗೂ ಸೇರಿಕೊಂಡೆ. ಆದರೆ ಆ ಮನುಷ್ಯನೇ ನನಗಿಂತಲೂ ಡಲ್ ವ್ಯಕ್ತಿ ಎಂದು ನನಗನಿಸಿತು. ಆದ್ದರಿಂದ ನನಗೆ ಗಣಿತದ ರುಚಿ ಹತ್ತಲೇ ಇಲ್ಲ. ಆಲ್ಜೀಬ್ರಾ ಸೂತ್ರಗಳಲ್ಲಿನ ಎಕ್ಸ್ ವೈ ಝಡ್‌ಗಳೆಲ್ಲ ನನ್ನನ್ನು ಹೈರಾಣುಗೊಳಿಸಿದುವು. ಕಣ್ಣಿಗೆ ಕಾಣುವ ಭೌತಿಕ ವಸ್ತುಗಳನ್ನಾದರೆ ನೋಡಿ ಕಲಿಯಬಹುದು; ಈ ಎಕ್ಸ್ ವೈ ಝಡ್‌ಗಳನ್ನು ನೋಡುವುದು ಹೇಗೆ? ಅವುಗಳ ಮೌಲ್ಯವನ್ನು
ಕಲ್ಪಿಸಿಕೊಳ್ಳುವುದಾದರೂ ಹೇಗೆ ಎಂದು ನನಗೆ ಅರ್ಥವೇ ಆಗುತ್ತಿರಲಿಲ್ಲ. ಒಂದು ರೀತಿಯ ಅಸಹನೆ ನನ್ನಲ್ಲಿ ಬೆಳೆಯಿತು. ಆದರೆ ಆಮೇಲೆ ನಾನು ಪಶ್ಚಾತ್ತಾಪಪಟ್ಟೆ.

ಸ್ವಲ್ಪ ತಾಳ್ಮೆಯಿಂದ ನಾನು ಆಲ್ಜೀಬ್ರಾ ಸೂತ್ರಗಳನ್ನು ಅರ್ಥಮಾಡಿಕೊಂಡು ಕಲಿತಿದ್ದರೆ ಗಣಿತವೆಂಬ ಗಣಿಯಿಂದ ಫಳಫಳ ಹೊಳೆಯುವ ವಿಚಾರ ರತ್ನಗಳು ನನ್ನ ಬೌದ್ಧಿಕತೆಯನ್ನೂ ಬೆಳಗುತ್ತಿದ್ದವೇನೋ…’ ಎಂಬ ಧಾಟಿಯ ವಾಕ್ಯಗಳು ಚಾರ್ಲ್ಸ್ ಡಾರ್ವಿನ್‌ನ ‘ದ ಲೈಫ್ ಏಂಡ್ ಲೆಟರ್ಸ್ ಆಫ್ ಚಾರ್ಲ್ಸ್ ಡಾರ್ವಿನ್’ ಪುಸ್ತಕದಲ್ಲಿ ಕಂಡುಬರುತ್ತವೆ. ಅಲೆಕ್ಸಾಂಡರ್ ಗ್ರಹಾಂ ಬೆಲ್‌ನ ಕಥೆ ಇನ್ನೂ ಸ್ವಲ್ಪ ಭಿನ್ನವಾದುದು. ಆತನಿಗೆ ಗಣಿತ ತಲೆಯೊಳಗೆ ಹೋಗುತ್ತಿತ್ತು. ಆದರೆ ಒಂಥರದ ಉಡಾಫೆ ಅಸಡ್ಡೆಗಳಿಂದಾಗಿ ಅದು ಆತನಿಗೆ ವಿಜ್ಞಾನದ ರಾಣಿಯಾಗಿ ಭಾಸವಾಗಲಿಲ್ಲ.

ರಾಬರ್ಟ್ ವಿ ಬ್ರೂಸ್ ಎಂಬುವವನು ಬರೆದ ‘ಬೆಲ್: ಅಲೆಕ್ಸಾಂಡರ್ ಗ್ರಹಾಂ ಬೆಲ್ ಏಂಡ್ ದ ಕಾನ್‌ಕ್ವೆಸ್ಟ್ ಆಫ್ ಸಾಲಿಟ್ಯೂಡ್’ ಪುಸ್ತಕದಲ್ಲಿ ಈ ವಿವರ ಗಳು ಬರುತ್ತವೆ. ‘ಗಣಿತವು ಮೆದುಳಿಗೆ ಕಸರತ್ತು ಕೊಡುವುದು ಗ್ರಹಾಂ ಬೆಲ್‌ಗೆ ಇಷ್ಟವಾಗುತ್ತಿತ್ತು, ಆದರೆ ಆತನ ಆಸಕ್ತಿ ಕ್ಷಣಿಕವಾಗಿರುತ್ತಿತ್ತು.
ಎಲ್ಲಿಯವರೆಗೆಂದರೆ ಪ್ರಮೇಯಗಳನ್ನು ಸಾಧಿಸುವಾಗ ಒಂದಿಷ್ಟು ಹಂತಗಳನ್ನು ಸರಿಯಾಗಿಯೇ ಬಿಡಿಸುತ್ತ ಹೋಗುವನು. ಕೊನೆಯ ಮಜಲು ತಲುಪುವ ಮೊದಲೇ ಬಿಟ್ಟುಬಿಡುವನು. ಅದರಿಂದಾಗಿ ಪರೀಕ್ಷೆಗಳಲ್ಲಿ ಅಷ್ಟೇನೂ ಒಳ್ಳೆಯ ಅಂಕಗಳು ಸಿಗಲಿಲ್ಲ.

ಆತನ ಸಹಪಾಠಿಗಳು ಮತ್ತು ಸಹಸಂಶೋಧಕರಲ್ಲಿದ್ದ ಗಣಿತಪ್ರೀತಿ ಗ್ರಹಾಂ ಬೆಲ್‌ಗೆ ಕೊನೆಗೂ ಬರಲೇ ಇಲ್ಲ!’ ಅಂತೆ. ಅಂದಹಾಗೆ ಅಲೆಕ್ಸಾಂಡರ್ ಗ್ರಹಾಂ ಬೆಲ್ ಟೆಲಿಫೋನ್ ಸಂಶೋಧನೆಗೇ ಹೆಸರಾದವನಾದರೂ ಕೆಲವು ಹಾರುಯಂತ್ರ (ಫ್ಲೈಯಿಂಗ್ ಮಷಿನ್)ಗಳ ಪ್ರಯೋಗಗಳನ್ನೂ ಯಶಸ್ವಿಯಾಗಿ ಮಾಡಿದ್ದನಂತೆ. ವೈದ್ಯಕೀಯ ತಂತ್ರಜ್ಞಾನ ಕ್ಷೇತ್ರದಲ್ಲೂ ಮತ್ತೊಂದಿಷ್ಟು ಸಂಶೋಧನೆಗಳನ್ನು ಮಾಡಿದ್ದನು ಎನ್ನಲಾಗಿದೆ.

ಥಾಮಸ್ ಆಲ್ವಾ ಎಡಿಸನ್‌ನ ಗಣಿತ ಪ್ರೀತಿ (ಅಥವಾ ದ್ವೇಷ) ಹೇಗಿತ್ತು? ಎಡಿಸನ್ ವಿದ್ಯಾರ್ಥಿಯಾಗಿದ್ದಾಗ ಐಸಾಕ್ ನ್ಯೂಟನ್‌ನ ‘ಫೌಂಡೇಷನಲ್ ಫಿಲೊಸಫಿ ನ್ಯಾಚುರಲಿಸ್ ಪ್ರಿನ್ಸಿಪಿಯಾ ಮ್ಯಾಥಮ್ಯಾಟಿಕಾ’ ಪುಸ್ತಕವನ್ನು ಹರಸಾಹಸದಿಂದ ಓದಿದ್ದನಂತೆ. ಆದರೆ ‘ಅದು ನನಗೆ ಗಣಿತದ ಬಗ್ಗೆ ಯಾವುದೇ ಅಭಿರುಚಿಯನ್ನು ಮೂಡಿಸಲಿಲ್ಲ, ಆಮೇಲೂ ನಾನು ಗಣಿತದಿಂದ ದೂರವೇ ಇದ್ದೆ’ ಎಂದು ಎಡಿಸನ್ ಉವಾಚ. ಚಾರ್ಲ್ಸ್ ಪ್ರೋಟಿಯಸ್ ಸ್ಟೇನ್ ಮೆಟ್ಜ್ ಎಂಬ ಜರ್ಮನ್ ಗಣಿತಜ್ಞನನ್ನು ಸಹಾಯಕನಾಗಿ ನೇಮಿಸಿದ್ದ ಎಡಿಸನ್ ತನ್ನ ಜನರಲ್ ಎಲೆಕ್ಟ್ರಿಕ್ ಕಂಪನಿಯಲ್ಲೂ ತಾಂತ್ರಿಕ
ಉತ್ಪನ್ನಗಳಿಗೆ ಸಂಬಂಧಿಸಿದ ಲೆಕ್ಕಾಚಾರಗಳಿಗೆಲ್ಲ ಚಾರ್ಲ್ಸ್ ಪ್ರೋಟಿಯಸ್‌ನನ್ನೇ ಅವಲಂಬಿಸಿದ್ದನು.

ನ್ಯೂಯಾರ್ಕ್ ರಾಜ್ಯದ ಸ್ಕೆನೆಕ್ಟಡಿ ಎಂಬಲ್ಲಿಂದ ಕೆಲಸ ಮಾಡುತ್ತಿದ್ದ ಚಾರ್ಲ್ಸ್‌ನನ್ನು ಸಹೋದ್ಯೋಗಿಗಳೆಲ್ಲ ‘ವಿಝಾರ್ಡ್ ಆಫ್ ಸ್ಕೆನೆಕ್ಟಡಿ’ ಎಂದೇ ಗುರುತಿಸಿ ಗೌರವಿಸುತ್ತಿದ್ದರಂತೆ. ಲ್ಯಾಬೊರೇಟರಿಯಲ್ಲಿ ವಿದ್ಯುದ್ದೀಪದ ಅಭಿವೃದ್ಧಿ, ವ್ಯಾಟ್-ಹವರ್ ಮೀಟರ್‌ಗೆ ಸಂಬಂಧಿಸಿದ ಲೆಕ್ಕಗಳನ್ನು ಮಾಡುವು
ದಕ್ಕಾಗಿ ಎಡಿಸನ್ನನು ಇನ್ನೊಬ್ಬ ಗಣಿತಜ್ಞ ಫ್ರಾನ್ಸಿಸ್ ಅಪ್ಟನ್‌ನನ್ನು ನೇಮಿಸಿದ್ದನು. ‘ನಾನು ಗಣಿತಜ್ಞರನ್ನು ಆರಾಮಾಗಿ ಕೆಲಸಕ್ಕೆ ತೆಗೆದುಕೊಳ್ಳಬಲ್ಲೆ; ಅವರು ನನಗ್ಯಾವ ನೌಕರಿಯನ್ನೂ ಕೊಡಲಾರರು’ ಎಂದುಕೂಡ ಎಡಿಸನ್ ಹೇಳುತ್ತಿದ್ದನಂತೆ, ತನ್ನ ಮಂಡೆಯಲ್ಲಿ ಮ್ಯಾಥಮ್ಯಾಟಿಕ್ಸ್ ಇಲ್ಲವೆಂಬುದನ್ನು ಅರಿತುಕೊಂಡೇ.

ಡೈನೊಸಾರ್‌ಗಳ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿರುವ ಇನ್ನೊಬ್ಬ ವಿeನಿ, ಅಮೆರಿಕದ ಜಾಕ್ ಹಾರ್ನರ್. ೧೯೭೦ರ ದಶಕ ದಲ್ಲಿ ಈತ ಭೂಗೋಳದ ಪಶ್ಚಿಮಾರ್ಧದಲ್ಲಿ ಮೊತ್ತಮೊದಲ ಬಾರಿಗೆ ಡೈನೊಸಾರ್ ಮೊಟ್ಟೆಗಳ ಅವಶೇಷಗಳನ್ನು ಪತ್ತೆಹಚ್ಚಿದನು. ಆ ದೈತ್ಯ ಜೀವಿಗಳು ಹೇಗೆ ಬದುಕಿದ್ದುವು ಮತ್ತು ಸಂತಾನೋತ್ಪತ್ತಿ ಮಾಡುತ್ತಿದ್ದುವು ಎಂದು ತಿಳಿದುಕೊಳ್ಳುವುದರಲ್ಲಿ ಅದೊಂದು ನಿರ್ಣಾಯಕ ಸಂಶೋಧನೆ. ಅಮೆರಿಕದ ಮೊಂಟಾನಾ ರಾಜ್ಯದಲ್ಲಿ ಹುಟ್ಟಿ ಬೆಳೆದ ಜಾಕ್ ಹಾರ್ನರ್ ಇನ್ನೂ ಎಲಿಮೆಂಟರಿ ಶಾಲೆಯ ಲ್ಲಿರುವಾಗಲೇ ಡೈನೋಸಾರ್ ಪಳೆಯುಳಿಕೆಗಳ ಬಗ್ಗೆ ಮಾತನಾಡಿ ಟೀಚರರನ್ನು
ದಂಗುಬಡಿಸುತ್ತಿದ್ದನಂತೆ. ಆದರೆ ಬೇರೆಲ್ಲ ಸಬ್ಜೆಕ್ಟ್‌ಗಳ ಓದು-ಬರಹ ದಲ್ಲಿ ಆತ ಹಿಂದೆ. ಗಣಿತವನ್ನಂತೂ ತನ್ನಿಂದ ಅದು ಆಗುವಂಥದ್ದಲ್ಲ ಎಂದು ಕೈಚೆಲ್ಲಿ ಕುಳಿತುಕೊಳ್ಳುತ್ತಿದ್ದನಂತೆ.

ಮುಂದೆ ಹೈಸ್ಕೂಲ್ ಮತ್ತು ಕಾಲೇಜಿನಲ್ಲಿಯೂ ಸರಿಯಾಗಿ ತರಗತಿಗಳಿಗೆ ಹಾಜರಾಗದೆ ಪದವಿ ಗಳಿಸುವುದು ಆತನಿಂದ ಸಾಧ್ಯವಾಗಲೇ ಇಲ್ಲ. ಉದ್ಯೋಗಾ
ವಕಾಶಗಳಿಂದಲೂ ಆತ ವಂಚಿತನಾದ. ಕಂಗಾಲಾದ ಜಾಕ್ ಹಾರ್ನರ್ ಆಮೇಲೆ ಇದ್ದಬಿದ್ದ ಮ್ಯೂಸಿಯಮ್‌ಗಳಿಗೆಲ್ಲ ಪತ್ರ ಬರೆದು ‘ನಿಮ್ಮಲ್ಲಿ ಟೆಕ್ನೀಷಿ ಯನ್‌ನಿಂದ ಹಿಡಿದು ಡೈರೆಕ್ಟರ್ ಹುದ್ದೆಯ ವರೆಗೆ ಯಾವುದೇ ಸ್ಥಳಾವಕಾಶವಿದ್ದರೂ ನಾನೊಬ್ಬ ಅಭ್ಯರ್ಥಿಯಾಗಿದ್ದೇನೆ’ ಎಂದು ಕೇಳಿ ಕೊಂಡನು. ೧೯೭೯ರಲ್ಲಿ ಆತನಿಗೆ ಡಿಸ್ಲೆಕ್ಸಿಯಾ ಇರುವುದೆಂದು ಪತ್ತೆಯಾಗಿ ಅವನು ಶಾಲಾಭ್ಯಾಸದಲ್ಲಿ ಅಷ್ಟೊಂದು ಕಷ್ಟಪಡಲಿಕ್ಕೆ ಅದೇ ಕಾರಣವೆಂದು ತಿಳಿಯಿತು.

‘ಈಗಲೂ ನನಗೆ ಗಣಿತವೆಂದರೆ ತಲೆನೋವೇ. ನನ್ನದೇ ಮಂದಗತಿಯಲ್ಲಿ ಕೆಲವು ಹೊಸ ವಿಚಾರಗಳನ್ನು ಕಲಿಯುತ್ತೇನೆ. ಆಡಿಯೊಬುಕ್ಸ್ ಸಹ ತುಂಬ ಸಹಕಾರಿಯಾಗಿವೆ’ ಎಂದು ಜಾಕ್ ಹಾರ್ನರ್ ಅಭಿಪ್ರಾಯ. ಡೈನೊಸಾರ್ ಸ್ಪೆಷಲಿಸ್ಟ್ ವಿeನಿಯಂತೆಯೇ ಇರುವೆ ತಜ್ಞ ವಿಜ್ಞಾನಿ ಇ.ಒ.ವಿಲ್ಸನ್‌ನಿಗೂ ಗಣಿತವೆಂದರೆ ಕಬ್ಬಿಣದ ಕಡಲೆ. ೨೦೧೩ರಲ್ಲಿ ಪ್ರಕಟವಾದ ‘ಲೆಟರ್ಸ್ ಟು ಎ ಯಂಗ್ ಸೈಂಟಿಸ್ಟ್’ ಪುಸ್ತಕದಲ್ಲಿ ಆತ ಹೀಗೆ ಬರೆದಿದ್ದಾನೆ: ‘ಅಲಬಾಮಾ
ವಿಶ್ವವಿದ್ಯಾಲಯದಲ್ಲಿ ಪದವಿ ಪ್ರಥಮ ವರ್ಷದವರೆಗೂ ನಾನು ಆಲ್ಜೀಬ್ರಾ ಬಗ್ಗೆ ಎಲ್ಲಿಲ್ಲದ ಹೆದರಿಕೆಯಿಟ್ಟುಕೊಂಡಿದ್ದೆ. ಬಹುಶಃ ನಮ್ಮ ಅಲಬಾಮಾ ರಾಜ್ಯ ಸೇರಿದಂತೆ ಸಂಯುಕ್ತ ಸಂಸ್ಥಾನಗಳ ಪೈಕಿ ದಕ್ಷಿಣಭಾಗದಲ್ಲಿರುವ ಕೆಲವು ಆರ್ಥಿಕವಾಗಿ ಹಿಂದುಳಿದವು, ಅಲ್ಲಿನ ಶಾಲೆಗಳು ವಿದ್ಯಾರ್ಥಿಗಳಿಗೆ ಗಣಿತಪ್ರಪಂಚವನ್ನು ಪರಿಚಯಿಸುವುದರಲ್ಲಿ ಹಿಂದೆಬಿದ್ದಿವೆ. ಕಾಲೇಜು ಸೇರಿದಾಗಲೂ ನನಗೆ ಆಲ್ಜೀಬ್ರಾ ಸುಲಭವೆನಿಸಲಿಲ್ಲ. ಆಮೇಲೆ ೩೨ ವರ್ಷ ಪ್ರಾಯದಲ್ಲಿ ನಾನು ಹಾರ್ವರ್ಡ್‌ನಲ್ಲಿ ಪ್ರಾಧ್ಯಾಪಕನಾದೆ, ನನ್ನ ಆಸಕ್ತಿಯ ಸಬ್ಜೆಕ್ಟ್ ಇವೊಲ್ಯುಷನರಿ ಬಯಾಲಜಿಯಲ್ಲಿ.

ಆಗ ನಾನು ಅಲ್ಲಿ ಕ್ಯಾಲ್ಕುಲಸ್ ತರಗತಿಗೆ ಹೋಗಿ ಒಬ್ಬ ವಿಧೇಯ ವಿದ್ಯಾರ್ಥಿಯಾಗಿ ಕುಳಿತುಕೊಳ್ಳುತ್ತಿದ್ದೆ. ಬಹುಮಟ್ಟಿಗೆ ನನಗಿಂತ ಅರ್ಧ ಪ್ರಾಯದ
ಮಕ್ಕಳೆಲ್ಲ ಅಲ್ಲಿ ನನ್ನ ಸಹಪಾಠಿಗಳು. ಅಷ್ಟೇ ಏಕೆ, ನಾನು ಕಲಿಸುತ್ತಿದ್ದ ಬಯಾಲಜಿಯ ಒಂದಿಬ್ಬರು ವಿದ್ಯಾರ್ಥಿಗಳೂ, ಅಂದರೆ ನನ್ನ ಶಿಷ್ಯರೇ, ಆ ಕ್ಲಾಸ್‌ನಲ್ಲಿದ್ದರು. ಸ್ವಾಭಿಮಾನ ಹೆಡೆಯೆತ್ತುತ್ತಿದ್ದರೂ ನುಂಗಿಕೊಂಡು ಕ್ಯಾಲ್ಕುಲಸ್‌ನತ್ತ ಗಮನ ಹರಿಸಲು ಯತ್ನಿಸುತ್ತಿದ್ದೆ. ಅಂತೂ ಕ್ಯಾಲ್ಕುಲಸ್ ಪರೀಕ್ಷೆಯಲ್ಲಿ ಸಿ ಗ್ರೇಡ್‌ನೊಂದಿಗೆ ಉತ್ತೀರ್ಣನಾದೆ.

’ಗಣಿತಕ್ಕೆ ಹೆದರುವ ವಿದ್ಯಾರ್ಥಿಗಳಿಗೆ ವಿಲ್ಸನ್ ಕೊಡುವ ಉಪದೇಶ ‘ಮ್ಯಾಥಮ್ಯಾಟಿಕ್ಸ್‌ನಲ್ಲಿ ನೀವು ಅಲ್ಪಜ್ಞಾನಿ ಅಂತನಿಸಿಕೊಳ್ಳಲಿಕ್ಕೂ ಹೆಚ್ಚು ತಡ ಮಾಡಿದಿರೋ ನಿಮಗೆ ಆ ಗಣಿತ ಭಾಷೆ ಮತ್ತಷ್ಟು ಕಷ್ಟವಾಗುತ್ತಲೇ ಹೋಗುತ್ತದೆ. ಆದ್ದರಿಂದ ಎಷ್ಟು ಬೇಗ ಆಗುತ್ತದೋ ಅಷ್ಟು ಒಳ್ಳೆಯದು, ಗಣಿತದತ್ತ ಒಲವು ಬೆಳೆಸಿಕೊಳ್ಳಿ. ಯಾವುದೇ ವಯಸ್ಸಿನಲ್ಲಾದರೂ ಅದನ್ನು ಅರಗಿಸಿಕೊಳ್ಳುವುದು ಸಾಧ್ಯವಿದೆ, ಕಷ್ಟಪಡುವ ಮನಸ್ಸಿದ್ದರೆ ಮಾತ್ರ.’ ಇವು ಐದಾರು ನಿದರ್ಶನಗಳಷ್ಟೇ. ಹೀಗೆಯೇ ಇನ್ನೂ ಅದೆಷ್ಟು ವಿಜ್ಞಾನಿಗಳು ಗಣಿತಕ್ಕೆ ಹಿಡಿಶಾಪ ಹಾಕಿದವರಿದ್ದಾರೋ.

ಆಗಲೇ ಹೇಳಿದಂತೆ, ಮೇಧಾವಿಗಳು ಎಂದು ನಾವು ಕಲ್ಪಿಸಿಕೊಳ್ಳುವ ವಿಜ್ಞಾನಿ ಗಳಿಗೇ ಹೀಗಾದರೆ ಸಾಮಾನ್ಯರ ಪಾಡೇನು? ಆದರೆ ‘ಸಾಧನೆಗೆ  ಅಸಾಧ್ಯ ವಾದುದು ಯಾವುದೂ ಇಲ್ಲ, ಸಾಧಿಸುವ ಛಲ ಮನುಷ್ಯ ನಿಗೆ ಇರಬೇಕು’ ಎನ್ನುವುದೂ ಗೊತ್ತಿರಬೇಕು. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿರುವಂತೆ ‘ಅಭ್ಯಾಸ ಯೋಗಯುಕ್ತೇನ ಚೇತಸಾ ನಾನ್ಯಗಾಮಿನಾ…’ ಎಲ್ಲವೂ ಸಾಧ್ಯವಾಗುತ್ತದೆ, ಅಲ್ಲವೇ? ಅಷ್ಟಾಗಿ, ಗಣಿತವನ್ನು ಕರತಲಾಮಲಕ ಮಾಡಿಕೊಂಡು ಗಣಿತಜ್ಞನಾಗುವುದೊಂದೇ ಜೀವನದ ಗುರಿ ಅಲ್ಲವಲ್ಲ? ಗಣಿತ ವಿಲ್ಲದೆಯೂ ಮೇಲಿನ ವಿಜ್ಞಾನಿಗಳೆಲ್ಲ ಮಿಂಚಿದ್ದಾರೆ, ಮನುಕುಲಕ್ಕೆ ಉಪಯುಕ್ತರಾಗಿಯೇ ಬಾಳಿದ್ದಾರೆ. ನಾವೂ ಬಾಳಬಹುದು.

ಗಣಿತದ ಬಗ್ಗೆ ಹೆದರಿಕೆ, ಹೇವರಿಕೆ, ಮತ್ತು ಅಂತಹ ವಿಲಕ್ಷಣಗಳ ಹಿಂದಿನ ಕಾರಣ-ಪರಿಣಾಮ ಇತ್ಯಾದಿಗಳ ಹೊರತಾಗಿ ಬೇರೆಯದೇ ಒಂದು ಚಿಂತನೆ ನನಗಿಲ್ಲಿ ಹೊಳೆಯುತ್ತಿದೆ. ಅದೇನೆಂದರೆ ಆಧುನಿಕ ತಂತ್ರಜ್ಞಾನದಿಂದಾಗಿ, ಮತ್ತು ಆ ತಂತ್ರeನಕ್ಕೆ ನಾವು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ಪ್ರಮಾಣ ದಲ್ಲಿ ದಾಸರಾಗಿರುವುದರಿಂದಾಗಿ, ನಮ್ಮ ಗಣಿತಸಾಮರ್ಥ್ಯವನ್ನು ನಾವು ದಿನೇ ದಿನೇ ಕಳೆದುಕೊಳ್ಳುತ್ತಿದ್ದೇವೆಯೇನೋ ಅಂತ. ಈಗ ಕ್ಯಾಲ್ಕುಲೇಟರ್
ಇಲ್ಲದೆ ಅಥವಾ ಮೊಬೈಲ್‌ಫೋನಲಾದರೂ ಕ್ಯಾಲ್ಕುಲೇಟರ್ ಆಪ್ ಬಳಸದೆ ನಮಗೆ ಎರಡಂಕಿಗಳ ಮೂರ್ನಾಲ್ಕು ಸಂಖ್ಯೆಗಳನ್ನು ಮನಸ್ಸಲ್ಲೇ ಕೂಡಿಸಿ ಉತ್ತರ ಹೇಳುವ ಸಾಮರ್ಥ್ಯ ಇಲ್ಲವಾಗಿದೆ!

ಗುಣಿಸುವುದು, ಭಾಗಿಸುವುದೆಲ್ಲ ಆಮೇಲೆ. ಕೂಡಿಸುವ ಲೆಕ್ಕವನ್ನೂ ನಮ್ಮದೇ ಮಿದುಳನ್ನು ಉಪಯೋಗಿಸಿ ಸರಿಯಾಗಿ ಮಾಡಲಾರೆವೆಂದರೆ ಬಾಳಿನಲ್ಲಿ ಏನೇನನ್ನೆಲ್ಲ ಕೂಡಿಸಿಟ್ಟು ಏನು ಪ್ರಯೋಜ.