Sunday, 15th December 2024

ಸ್ನೇಹ ಮತ್ತು ಸಹಕಾರ ಪ್ರವೃತ್ತಿಯ ಸಾಕಾರರೂಪವೇ ಪಿಆರ್‌ಒ

ಅನುಭವಾಮೃತ

ಜಯಪ್ರಕಾಶ್ ಪುತ್ತೂರು

ಸಂಸ್ಥೆಯೊಂದರ ಪ್ರತಿಯೊಬ್ಬ ಸಿಬ್ಬಂದಿಯೂ ಅದರ ಪ್ರತಿನಿಧಿಯೇ; ಕಾರಣ ಸಂಸ್ಥೆಯ ಪ್ರತಿಷ್ಠಾವರ್ಧನೆಯು (ಇಮೇಜ್ ಬಿಲ್ಡಿಂಗ್) ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಂಘಟಿತ ಯತ್ನಗಳಿಂದ ಆಗುವಂಥದ್ದು. ವ್ಯಾವಹಾರಿಕ ಕಾರಣಗಳಿಗಾಗಿ ಸಂಸ್ಥೆಯೊಂದರಲ್ಲಿ ನಿರ್ದೇಶಕ, ಪ್ರಧಾನ ವ್ಯವಸ್ಥಾಪಕ,
ಅಧ್ಯಕ್ಷ ಹೀಗೆ ವಿವಿಧ ಸ್ತರಗಳ ಅಧಿಕೃತ ಪ್ರತಿನಿಧಿಗಳನ್ನು ಸೃಷ್ಟಿಸಬೇಕಾದ್ದು ಅನಿವಾರ್ಯ.

ಹಾಗಾದರೆ ವಾಸ್ತವದಲ್ಲಿ ಸಂಸ್ಥೆಯ ‘ಸಾರ್ವಜನಿಕ ಸಂಪರ್ಕಾಧಿಕಾರಿ’ (ಪಿಆರ್‌ಒ) ಎಂಬಾತ ಯಾರು? ಆತನ ಜವಾಬ್ದಾರಿಗಳೇನು? ಎಂಬ ಪ್ರಶ್ನೆಗಳು ಹೊಮ್ಮುವುದು ಸಹಜ. ಸಂಸ್ಥೆಯ ಗ್ರಹಿಕೆಯನ್ನು ಸಾರ್ವಜನಿಕರ ಮನದಲ್ಲಿ ಸ್ಪಷ್ಟವಾಗಿ ಛಾಪೊತ್ತುವ ಪಿಆರ್‌ಒ, ಕರ್ತವ್ಯದ ವೇಳೆ ಮಾತ್ರವಲ್ಲದೆ ದಿನ ವಿಡೀ ಸಂಸ್ಥೆಯ ಪ್ರತಿನಿಧಿಯಾಗಿರುತ್ತಾನೆ. ಹೊರಗಿನವರು ಸಂಸ್ಥೆಯೊಂದಿಗೆ ವ್ಯವಹರಿಸಬೇಕಾಗಿ ಬಂದಾಗ ಅವರಿಗೆ ಸುಲಭ ಲಭ್ಯನಾಗುವುದು ಈತನೇ.

ಲಘು ಯುದ್ಧ ವಿಮಾನ (ಎಲ್‌ಸಿಎ) ಯೋಜನೆಯಲ್ಲಿ ನಡೆಯುವ ವಿನ್ಯಾಸ ಮತ್ತು ಅಭಿವೃದ್ಧಿಯಿಂದ ಹಿಡಿದು, ಎಚ್‌ಎಎಲ್‌ನಲ್ಲಿ ಜೋಡಣೆ ಮುಗಿಸಿ ಕೊಂಡು ಕ್ರಮೇಣ ಪರೀಕ್ಷಾ ಹಾರಾಟ ನಡೆಸುವವರೆಗಿನ ಸಮನ್ವಯ ಕಾರ್ಯದಲ್ಲಿ ಅನೇಕ ಪ್ರತಿಷ್ಠಿತ ಸಂಸ್ಥೆಗಳು, ಹೊರಗಿನ ೩೦೦ಕ್ಕೂ ಮಿಕ್ಕಿದ
ಖಾಸಗಿ ಕಂಪನಿಗಳಲ್ಲದೆ, ವಿಶ್ವವಿದ್ಯಾಲಯಗಳೊಂದಿಗಿನ ಸಾಮರಸ್ಯ ಹಾಗೂ ವ್ಯವಹಾರದ ದೊಡ್ಡ ಚಟುವಟಿಕೆಗಳೂ ಡಿಆರ್‌ಡಿಒದಲ್ಲಿ ಇರುತ್ತಿದ್ದವು. ಎಚ್‌ಎಎಲ್ ಸಂಸ್ಥೆಯು ನಮ್ಮ ದೊಡ್ಡ ಪಾಲುದಾರನಾಗಿ ಎಲ್‌ಸಿಎ ಉತ್ಪಾದನಾ ಕಾರ್ಯದಲ್ಲಿ ಮುಖ್ಯವಾಗಿ ಗುರುತಿಸಿಕೊಳ್ಳುತ್ತಿದ್ದ ಕಾಲಘಟ್ಟವದು.

ಎಚ್‌ಎಎಲ್‌ನಲ್ಲಿ ಹಾಗೂ ಎಲ್‌ಸಿಎ ಉತ್ಪಾದನಾ ಕಾರ್ಯದಲ್ಲಿ ನೇರವಾಗಿ ತೊಡಗಿದ್ದ ಕಾರ್ಖಾನೆಯ ಮುಖ್ಯ ನಿರ್ದೇಶಕರು, ಇಡೀ ಸಂಸ್ಥೆಯ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕರಾಗಿ ಆಯ್ಕೆಯಾದರು. ಮಾಧ್ಯಮಗಳಿಂದ ಈ ಸುದ್ದಿ ತಿಳಿದ ನಾನು ಎಚ್‌ಎಎಲ್ ಪ್ರಧಾನ ಕಚೇರಿ ಕಡೆಗೆ ಕಾರ್ಯನಿಮಿತ್ತ ಹೋದೆ. ಹೂಗುಚ್ಛದೊಂದಿಗೆ ನೂತನ ಅಧ್ಯಕ್ಷರನ್ನು ಮುಖಾಮುಖಿ ಅಭಿನಂದಿಸಿದೆ. ಅದನ್ನವರು ಸ್ವೀಕರಿಸಿ ಕೃತಜ್ಞತಾಪೂರ್ವಕವಾಗಿ, ‘ಹೀಗೆ ಹೊರಗಿ ನಿಂದ ಆಗಮಿಸಿ ಸಂಸ್ಥೆಯ ಪರವಾಗಿ ಅಭಿನಂದಿಸಿದವರಲ್ಲಿ ನೀವು ಮೊದಲಿಗರು. ನಿಮ್ಮ ನಿರ್ದೇಶಕರಿಗೆ ನನ್ನ ವಂದನೆ ತಿಳಿಸಿ’ ಎಂದು ಸಡಗರ-ಸಂತೋಷದಿಂದ ಹೇಳಿದರು.

ಒಂದೊಳ್ಳೆ ಸಮಯೋಚಿತ ಕಾರ್ಯ ಕೈಗೊಂಡಿದ್ದಕ್ಕೆ ನಮ್ಮ ಸಂಸ್ಥೆಗೂ ಒಳೆಯ ಹೆಸರು ಲಭಿಸಿದಂತಾಯಿತೆಂದು ನನಗೆ ಖುಷಿಯೋ ಖುಷಿ. ಆದರೆ ನಂತರ ನಮ್ಮ ನಿರ್ದೇಶಕರ ಕಚೇರಿಗೆ ಸಾಗಿ ಈ ಘಟನೆಯನ್ನು ತಿಳಿಸಿದಾಗ ಅರೆಕ್ಷಣದಲ್ಲೇ ಕುಪಿತರಾದ ಅವರು, ‘ಅಧಿಕ ಪ್ರಸಂಗಿ… ಈ ಕೆಲಸ ಮಾಡಲು ನಿನಗಾರು ಹೇಳಿದ್ದು? ಈ ನಿನ್ನ ನಡೆ ಬೇರೆಯದೇ ಅರ್ಥವನ್ನು ತಂದುಕೊಡುತ್ತದೆ’ ಎಂದು ಕೂಗಾಡಿದರು. ಪೆಚ್ಚುಮೋರೆ ಹಾಕಿ ಹೊರಬಂದ ನನಗೆ ಇಂದಿಗೂ ಆ ‘ಅಧಿಕ ಪ್ರಸಂಗ’ ಏನೆಂಬುದು ತಿಳಿದಿಲ್ಲ!

ಕೆಲ ವರ್ಷಗಳ ಹಿಂದೆ, ವೈಮಾನಿಕ ತಂತ್ರಜ್ಞಾನ ಮತ್ತು ವಿಜ್ಞಾನ ಸಂಬಂಧಿತ ವರದಿ/ಲೇಖನಗಳನ್ನು ವಸ್ತುನಿಷ್ಠವಾಗಿ ಬರೆಯುತ್ತ ನಮ್ಮ ರಾಷ್ಟ್ರೀಯ ನಿರ್ಮಾಣ ಸಂಸ್ಥೆಗಳಿಗೆ ನೈತಿಕ ಬೆಂಬಲ ನೀಡುತ್ತಿದ್ದ ಪತ್ರಕರ್ತ ಮಿತ್ರರೊಬ್ಬರು ಬೆಂಗಳೂರಿನ ಅಂಧಶಾಲೆಯೊಂದರ ಮಕ್ಕಳನ್ನು ಕರೆತಂದು, ಏಕವ್ಯಕ್ತಿ
ಚಾಲಿತ ವಿಮಾನವನ್ನು ಅವರು ಸ್ಪರ್ಶಿಸಿ ಆನಂದಿಸುವ ಕಾರ್ಯಕ್ರಮಕ್ಕೆ ನನ್ನ ನೆರವು ಬಯಸಿದ್ದರು. ನಾನೂ ಒಪ್ಪಿದ್ದೆ. ಅಂತೆಯೇ ಪುಟಾಣಿ ವಿಮಾನ ವನ್ನು ಹೊರತಂದು ಮಕ್ಕಳಿಗೆ ಸವಿವರವಾಗಿ ತಿಳಿಸಿ, ಬಳಿಕ ಸರದಿ ಪ್ರಕಾರ ಕಾಕ್‌ಪಿಟ್ ಒಳಗೆ ಕೂರಿಸಿ, ನಂತರ ಒಂದು ಸುತ್ತು ಮೇಲೆ ಹಾರಿಸುವ
ಕಾರ್ಯಕ್ರಮ ಅದಾಗಿತ್ತು. ಹೀಗೆ ಎಲ್ಲವೂ ಚೆನ್ನಾಗಿ  ನಡೆದರೂ, ಕೊನೆಗೆ ಅನಿರೀಕ್ಷಿತ ಘಟನೆಯೊಂದು ನಡೆದುಹೋಯಿತು.

ರನ್‌ವೇಗೆ ತಾಗಿಕೊಂಡು ಡಿಆರ್‌ಡಿಒ ಕಡೆಯಿಂದ ಒಂದು ರಸ್ತೆಯಿತ್ತು. ಆ ಕಡೆಯಿಂದ ಧಾವಿಸಿ ಬಂದ ಭದ್ರತಾ ಸಿಬ್ಬಂದಿ ನಮ್ಮನ್ನುದ್ದೇಶಿಸಿ ದನಿಯೇರಿಸಿ
ಮಾತಾಡತೊಡಗಿದರು. ‘ಈ ಪ್ರವೇಶಕ್ಕಾಗಿ ಮೊದಲೇ ಅನುಮತಿ ಪಡೆದಿದ್ದೇವೆ’ ಎಂದು ಎಷ್ಟೇ ಸಮಜಾಯಿಷಿ ನೀಡಿದರೂ ಬೊಬ್ಬೆ ನಿಲ್ಲಿಸದ ಅವರು, ‘ನಿಮ್ಮ ಮಕ್ಕಳು ಈ ಪ್ರದೇಶಕ್ಕೆ ಅತಿಕ್ರಮವಾಗಿ ನುಗ್ಗಿದ್ದು ತಪ್ಪಲ್ಲವೇ?’ ಎಂದು ವಾದಕ್ಕಿಳಿದರು. ನಿಜವಾಗಿ ನಡೆದ ಘಟನೆಯೆಂದರೆ, ಡಿಆರ್ ಡಿಒ ಕಡೆ ಯಿಂದ ಆ ಪುಟ್ಟ ವಿಮಾನವನ್ನು ಚಲಾಯಿಸಿಕೊಂಡು ಬರುವ ವೇಳೆ, ಅರ್ಧಂಬರ್ಧ ದೃಷ್ಟಿಯಿದ್ದ ಮಕ್ಕಳು ಕುತೂಹಲ ತಡೆಯಲಾರದೆ ಅದರ ಹ್ಯಾಂಗರ್ ಕಟ್ಟಡದೆಡೆಗೆ ಸಾಗಿದ್ದರು. ಈ ಸಣ್ಣ ವಿಷಯವನ್ನು ದೊಡ್ಡದಾಗಿಸಲು ಭಟ್ಟಂಗಿಗಳಿಗೆ ನೆಪ ಸಿಕ್ಕಿತ್ತು.

ತಕ್ಷಣವೇ ಪ್ರಯೋಗಾಲಯದ ನಿರ್ದೇಶಕರನ್ನು ಕಾಣುವಂತೆ ನಮ್ಮಿಬ್ಬರಿಗೂ ಬುಲಾವ್ ಬಂತು. ಅವರ ಚೇಂಬರ್ ಒಳಗೆ ಹೋದಾಗ ಆ ಅಧಿಕಾರಿ
ನನ್ನನ್ನು ನಿಂದಿಸತೊಡಗಿ ‘ನೀನೊಬ್ಬ ನಿರುಪಯುಕ್ತ ಪಿಆರ್‌ಒ’ ಎಂದುಬಿಟ್ಟರು. ನಾನು ವಿಚಲಿತನಾಗದೆ, ‘ನಿಮ್ಮದೇ ಸಂಸ್ಥೆಯ ಕೇಂದ್ರ ಕಚೇರಿಯ ಹಿರಿಯ ಅಧಿಕಾರಿಯೊಬ್ಬರನ್ನು ಓರ್ವ ಪತ್ರಕರ್ತರೆದರು ನಿಂದಿಸುತ್ತಿದ್ದೀರಿ ಎಂಬ ಪರಿಜ್ಞಾನ ನಿಮಗಿದೆಯೇ?’ ಎಂದು ಕೇಳಿದೆ. ಇದರಿಂದ ಮತ್ತಷ್ಟು
ಕೆರಳಿದ ಆತ, ಜತೆಗಿದ್ದ ಪತ್ರಕರ್ತರನ್ನೂ ನಿಂದಿಸಲು ಶುರುಮಾಡಿದರು. ಆಗ ಆ ಪತ್ರಕರ್ತರು, ‘ಈತನಿಗೆ ತಕ್ಕ ಶಾಸ್ತಿ ಮಾಡುತ್ತೇನೆ’ ಎಂದು ನನ್ನಲ್ಲಿ ಹೇಳಿ ನಡೆದ ಘಟನೆಯ ಬಗ್ಗೆ ತಮ್ಮ ಮಾಧ್ಯಮ ಮಿತ್ರರಿಗೆ ತಿಳಿಸಲು ಮುಂದಾದರು.

ಆಗ ನಾನು, ‘ನೋಡಿ, ಡಿಆರ್‌ಡಿಒನ ಅಭಿಮಾನಿಯಾಗಿರುವ ನೀವು ನಮ್ಮ ಸಂಸ್ಥೆಯ ಪ್ರತಿಷ್ಠೆಗೆ ಹಾನಿಮಾಡಬಾರದು’ ಎಂದು ಸ್ನೇಹದಿಂದಲೇ ವಿನಂತಿಸಿಕೊಂಡೆ. ಅದಕ್ಕೆ ಆ ಸನ್ಮಿತ್ರರು ಒಪ್ಪಿದರೂ, ಡಿಆರ್‌ಡಿಒ ಮುಖ್ಯಸ್ಥರಿಗೆ ದೂರು ಸಲ್ಲಿಸುತ್ತೇನೆ ಎಂದು ಹಠ ಮಾಡಿದರು. ಅಂತೆಯೇ ಈ ಸುದ್ದಿ ನಮ್ಮ ವರಿಷ್ಠಾಧಿಕಾರಿವರೆಗೂ ಮುಟ್ಟಿತು. ಅವರು ಆ ನಿರ್ದೇಶಕರಿಗೆ ಚೆನ್ನಾಗಿ ಛೀಮಾರಿ ಹಾಕಿದ್ದರ ಜತೆಗೆ, ಸಾರ್ವಜನಿಕರೊಂದಿಗೆ ಅದರಲ್ಲೂ ಪತ್ರಕರ್ತರೊಂದಿಗೆ ತೋರಬೇಕಾದ ಸೌಜನ್ಯ, ಸಹೋದ್ಯೋಗಿಗಳಿಗೆ ನೀಡಬೇಕಾದ ಗೌರವ, ಅಂಧಮಕ್ಕಳ ಬಗ್ಗೆ ತೋರಬೇಕಾದ ಮಾನವೀಯತೆ ಮತ್ತು ಕರುಣೆಯ ಬಗ್ಗೆ ಉಪದೇಶ ನೀಡಿದರು. ಯಾವುದೇ ಸಮಾಜಮುಖಿ ಕಾರ್ಯಕ್ರಮದಿಂದ ನಮ್ಮ ಸಂಸ್ಥೆಗೆ ಲಭಿಸಬಹುದಾದ ಪ್ರತಿಷ್ಠೆ ಮತ್ತು ಪ್ರಚಾರದ ಬಗ್ಗೆ ಆತನಿಗೆ ಮನದಟ್ಟು ಮಾಡಿಸಿದರು. ದೊಡ್ಡ ರಾದ್ಧಾಂತವಾಗಬಹುದಾದ ಘಟನೆ ಸುಖಾಂತ್ಯಗೊಂಡಿತು; ಆದರೆ ಅನವಶ್ಯಕವಾಗಿ ಅಪಮಾನಿತ ನಾದ ನನ್ನನ್ನು ಯಾರೂ ಇಂದಿಗೂ ಕ್ಷಮೆ ಕೇಳಿಲ್ಲ!

ಒಮ್ಮೆ ಬೆಂಗಳೂರಿನ ಮುಖ್ಯ ಪಾಸ್‌ಪೋರ್ಟ್ ಅಧಿಕಾರಿ ಅಚಾನಕ್ಕಾಗಿ ಡಿಆರ್‌ಡಿಒ ಸಮುಚ್ಚಯದ ಮುಂದಿನಿಂದ ಬೇರೆಲ್ಲಿಗೋ ಹೋಗು ವವರಿದ್ದರು. ಅವರನ್ನು ಸ್ವಾಗತಿಸಿ ಸತ್ಕರಿಸಲು ನಾನು ಸಜ್ಜಾದಾಗ, ನಮ್ಮ ವಿಭಾಗದ ವಿವಿಧ ಸ್ತರದ ಅಧಿಕಾರಿಗಳಿಗೂ ಈ ವಿಷಯ ತಿಳಿದು, ‘ಹೇಗಿದ್ದರೂ ಇಂದು ಭಾನುವಾರ, ನಾವೂ ಬರುತ್ತೇವೆ’ ಎಂದು ಉತ್ಸಾಹ ತೋರಿದರು. ಆ ಹಿರಿಯ ಅಧಿಕಾರಿ ನಮಗೆಲ್ಲರಿಗೂ ಬೇಕಾದ ವ್ಯಕ್ತಿಯಾಗಿದ್ದರು. ಏಕೆಂದರೆ, ನಮ್ಮ ವಿಜ್ಞಾನಿಗಳು ಮತ್ತಿತರ ಅಧಿಕಾರಿಗಳು ಆಗಾಗ ವಿದೇಶಯಾತ್ರೆ ಕೈಗೊಳ್ಳುತ್ತಿದ್ದುದರಿಂದ, ಅಧಿಕೃತ ಕಾರ್ಯನಿಮಿತ್ತ ಬಹಳ ಸಲ ಅವರನ್ನು ಭೇಟಿಯಾಗ ಬೇಕಾಗುತ್ತಿತ್ತು.

ಇಂಥ ವೇಳೆ ಅವರು ಅಗತ್ಯ ನೆರವು ಮತ್ತು ಸಹಕಾರವನ್ನು ನೀಡುತ್ತಿದ್ದರು. ಹೀಗಾಗಿ ನಾವೆಲ್ಲ ಜತೆಯಾಗಿ ಆ ಅಧಿಕಾರಿ ಮತ್ತು ಅವರ ಕುಟುಂಬಿಕರನ್ನು ಸ್ವಾಗತಿಸಿ ಉಪಾಹಾರ-ಚಹಾ ನೀಡಿ ಸತ್ಕರಿಸಿದೆವು. ಆತಿಥೇಯನಾಗಿದ್ದ ಕಾರಣ ಶಿಷ್ಟಾಚಾರದಂತೆ ಆ ಬಿಲ್ ಅನ್ನು ನಾನು ಖುಷಿಯಿಂದ ಕೊಟ್ಟೆ. ಆದರೆ ಮರುದಿನ ಶಿಷ್ಟಾಚಾರದ ಈ ಅಽಕೃತ ವೆಚ್ಚವನ್ನು ಕಚೇರಿಯಿಂದ ಪಡೆಯಲು ಸಂಬಂಧಿತ ದಾಖಲೆಗಳೊಂದಿಗೆ ಪ್ರಸ್ತಾವ ಸಲ್ಲಿಸಿದೆ. ಆದರೆ ಅದು ತಿರಸ್ಕೃತಗೊಂಡಾಗ ನನಗೆ ಆಘಾತವಾಯಿತು. ನಾನು ಫೈಲ್ ಹಿಡಿದು ಸಂಬಂಧಿತ ಅಧಿಕಾರಿಯ ಬಳಿಗೆ ಹೋದಾಗ ಅವರು ಮುಖ ಕೆಂಪಾಗಿಸಿಕೊಂಡು, ‘ಏನಿದು ಈ ಬಿಲ್‌ನ ಕಥೆ? ನಾನು ಕೂಡ ನನ್ನ ಸ್ವಂತ ದುಡ್ಡಿನಲ್ಲಿ ಉಪಾಹಾರಕ್ಕಾಗಿ ಇಷ್ಟೊಂದು ವೆಚ್ಚಮಾಡಲಾರೆ’ ಎನ್ನಬೇಕೆ? ತರುವಾಯ ಈ
ವಿಷಯವಿಟ್ಟುಕೊಂಡು ನಮ್ಮ ಕಾರ್ಯಕ್ರಮ ನಿರ್ದೇಶಕರನ್ನು ಭೇಟಿಯಾದಾಗ ಅಲ್ಲೂ ಅದೇ ಅವಮಾನವಾಯಿತು.

ಹೆಚ್ಚೇನೂ ಮಾತಾಡದೆ ಸುಮ್ಮನಾದೆ. ಆದರೆ, ಮುಂದಿನ ವರ್ಷ ಮತ್ತೊಂದು ವಿಶೇಷ ಘಟನೆ ನಡೆಯಿತು. ಈ ಹಿಂದೆ ಎಚ್‌ಎಎಲ್ ಪ್ರಸಂಗದಲ್ಲಿ
ಅವಮಾನಿಸಿದ ಮತ್ತು ಡಿಆರ್‌ಡಿಒ ಮೆಸ್ ಬಿಲ್ ನಿರಾಕರಿಸಿದ ಅದೇ ನಿರ್ದೇಶಕರ ಪುತ್ರಿಯ ಪಾಸ್‌ಪೋರ್ಟ್ ನೀಡಿಕೆಯ ವಿಷಯದಲ್ಲಿ ಸಮಸ್ಯೆ ಉದ್ಭವ ವಾಗಿತ್ತು. ಆಕೆ ತುಂಬು ಗರ್ಭಿಣಿ ಬೇರೆ, ಹಾಗಾಗಿ ವಾಸ್ತವ್ಯದ ಹೈದರಾಬಾದ್‌ನಿಂದ ಯಾವ ಕಾರಣಕ್ಕೂ ಈ ಕಡೆಗೆ ಬರಲಾರದಾಗಿದ್ದಳು. ಆದರೆ ಕಾಯಿದೆ ಪ್ರಕಾರ ಪಾಸ್‌ಪೋರ್ಟನ್ನು ಅಽಕೃತ ಅರ್ಜಿದಾರರಿಗೆ ಮಾತ್ರ ಅವರ ಅಧಿಕೃತ ವಿಳಾಸದಲ್ಲಿ ಅವರಿಗೇ ನೀಡಬೇಕೇ ವಿನಾ ಬೇರೆಯವರಿಗೆ ನೀಡಲಾಗು ವುದಿಲ್ಲ. ‘ಸಂಕಟ ಬಂದಾಗ ವೆಂಕಟರಮಣ’ ಎನ್ನುವಂತೆ ಚೇಂಬರ್‌ಗೆ ನನ್ನನ್ನು ಕರೆಸಿಕೊಂಡ ಅದೇ ನಿರ್ದೇಶಕರು ನನ್ನೊಂದಿಗೆ ನಗುತ್ತಾ, ಈ ಕಾರ್ಯ ನಿಮಿತ್ತ ನೆರವಾಗುವಂತೆ ಗೋಗರೆದರು. ಅನ್ಯಾಯವಾಗಿ ವರ್ತಿಸಿದವರಿಗೆ ಭಗವಂತ ಕೆಲವೊಮ್ಮೆ ಎಂಥ ಸನ್ನಿವೇಶವನ್ನು ನೀತಿಪಾಠವಾಗಿ ತಂದೊಡ್ಡು ತ್ತಾನೆ ಎಂಬುದಕ್ಕೆ ಸಾಕ್ಷಿ ಸಿಕ್ಕಿತ್ತು.

ಆದರೆ ಆ ನಿರ್ದೇಶಕರಿಗೆ ನನ್ನನ್ನು ೨ ಬಾರಿ ಕೆಟ್ಟದಾಗಿ ನಡೆಸಿಕೊಂಡ ಪ್ರಸಂಗಗಳೇ ಅಂದು ನೆನಪಾಗಲಿಲ್ಲ! ‘ಇದೇ ವ್ಯಕ್ತಿಯಲ್ಲವೇ ಎರಡು ಬಾರಿ ನನ್ನನ್ನು ಅವಮಾನಿಸಿದ್ದು’ ಎಂದು ಮನಸ್ಸು ಅರೆಕ್ಷಣ ನನಗೆ ಕುಟುಕಿದ್ದು ನಿಜ. ಆದರೂ ಮನಸ್ಸನ್ನು ಕಹಿಮಾಡಿಕೊಳ್ಳದೆ, ಹೊರಗೇನೂ ತೋರಿಸಿ ಕೊಳ್ಳದೆ ‘ಆಗಲಿ ಸರ್’ ಎಂದೆ ಸಹಜದನಿಯಲ್ಲಿ. ಸರ್ವೇಸಾಧಾರಣವಾಗಿ, ಮುಖ್ಯ ಪಾಸ್‌ಪೋರ್ಟ್ ಅಧಿಕಾರಿ ಹೀಗೆ ನಿಯಮವನ್ನು ಬದಿಗೆ ಸರಿಸಿ ಪಾಸ್‌ ಪೋರ್ಟ್ ನೀಡುವಂತಿಲ್ಲ. ಆದರೆ ಇಲ್ಲಿ ಹಾಗಾಗಲಿಲ್ಲ. ಇವೆಲ್ಲ ಪಿಆರ್ ಒಗಳು ಮಾಡುವ ಮೋಡಿ!

ನಾನು ತಡಮಾಡದೆ ಸಂಬಂಧಿತ ದಾಖಲೆ ಹಿಡಿದು ನಿರ್ದೇಶಕರ ವಿನಂತಿ ಪತ್ರದೊಂದಿಗೆ ಪಾಸ್‌ಪೋರ್ಟ್ ಕಚೇರಿಗೆ ಧಾವಿಸಿದೆ. ಹಿಂದೆ ಸತ್ಕಾರ ಸ್ವೀಕರಿ ಸಿದ್ದ ಮತ್ತು ನಮ್ಮ ಮಿತ್ರರೂ ಆಗಿದ್ದ ಮುಖ್ಯ ಪಾಸ್‌ಪೋರ್ಟ್ ಅಧಿಕಾರಿಗಳು ಮುಗುಳ್ನಗುತ್ತಲೇ ‘ಏನು ಸಹಾಯ ಬೇಕು ಹೇಳಿ?’ ಎಂದರು. ನಿರ್ದೇಶಕರ ಮಗಳ ಸಂಕಷ್ಟವನ್ನು ನಾನು ವಿವರಿಸಿದಾಗ, ‘ಇದ್ಯಾವ ದೊಡ್ಡ ಕೆಲಸ ಜೆ.ಪಿ.ಯವರೇ? ಏನೂ ಸಮಸ್ಯೆಯಿಲ್ಲ. ಅಂದು ಡಿಆರ್‌ಡಿಒ ಸಮುಚ್ಚಯಕ್ಕೆ ಬಂದ ನಮ್ಮನ್ನು ನೀವು ಸ್ವಾಗತಿಸಿ ಸತ್ಕರಿಸಿದ್ದನ್ನು ಎಂದಿಗೂ ಮರೆಯಲಾರೆ’ ಎನ್ನುತ್ತಾ ಪಾಸ್‌ಪೋರ್ಟ್ ತರಿಸಿ ನನಗಿತ್ತು, ಸಂತಸದಿಂದಲೇ ಹಸ್ತಲಾಘವ ನೀಡಿ ಬೀಳ್ಕೊಟ್ಟರು.

ನಮ್ಮ ನಿರ್ದೇಶಕರ ಕೋರಿಕೆ ನೆರವೇರಿಸಿದ ಖುಷಿಯಲ್ಲೇ ಮರಳಿದ ನಾನು ಪಾಸ್‌ಪೋರ್ಟನ್ನು ಅವರಿಗೆ ನೀಡುತ್ತಾ, ‘ಅಂದು ನಾವು ಉಪಾಹಾರ ನೀಡಿ ಸತ್ಕರಿಸಿದ್ದು ಈ ಅಽಕಾರಿಯನ್ನೇ ಸರ್’ ಎಂದುಬಿಟ್ಟೆ. ಅರೆಕ್ಷಣ ಪೆಚ್ಚಾದ ಅವರು ಅಸಹಾಯಕರಾಗಿ, ಉಗುಳು ನುಂಗುತ್ತಾ, ‘ಥ್ಯಾಂಕ್ಸ್ ಪಿಆರ್‌ಒ…’ ಎಂದರು ನಮ್ರರಾಗಿ!

(ಲೇಖಕರು ಮಾಜಿ ಸಾರ್ವಜನಿಕ ಸಂಪರ್ಕಾಧಿಕಾರಿ, ಡಿಆರ್‌ಡಿಒ)