Thursday, 12th December 2024

ಸಾರ್ವಜನಿಕರ ತೆರಿಗೆ ಹಣ ಗ್ಯಾರಂಟಿ ಯೋಜನೆಗೆ ವ್ಯಯ: ಶಾಸಕ ಎಂ.ಟಿ.ಕೃಷ್ಣಪ್ಪ 

ಗುಬ್ಬಿ: ಸರ್ಕಾರ ಐದು ಗ್ಯಾರಂಟಿ ಯೋಜನೆಗೆ ವ್ಯಯ ಮಾಡುತ್ತಿರುವ ಹಣ ಸಾರ್ವಜನಿಕರ ತೆರಿಗೆ ಎಂದು ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಟೀಕೆ ಮಾಡಿದರು.
ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಚೀರನಹಳ್ಳಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ನಾಲ್ಕು ಕೋಟಿ ರೂಗಳ ಮರು ಡಾಂಬರೀಕರಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ಅಕ್ಕಿ ನೀಡುವ ಯೋಜನೆ ಹೊರತು ಪಡಿಸಿ ಎಲ್ಲವೂ ಅಪ್ರಯೋಜಕ. ಮುಂದಿನ ಲೋಕಸಭಾ ಚುನಾವಣೆವರೆಗೆ ಮಾತ್ರ ಈ ಗ್ಯಾರಂಟಿ ನಡೆಯುತ್ತೆ ಎಂದ ಅವರು, ಸರ್ಕಾರ ಗ್ಯಾರಂಟಿ ಯೋಜನೆಗೆ ಬಳಸುವ ಹಣದ ಬಗ್ಗೆ ಸದನದಲ್ಲಿ ಸುದೀರ್ಘ ಚರ್ಚೆ ಮಾಡಿದ್ದೇವೆ. ಗುತ್ತಿಗೆದಾರರ ಹಣ ನೀಡದೆ ಅಭಿವೃದ್ದಿ ಕೆಲಸಗಳು ನಿಂತು ಹೋಗಿವೆ. ಈ ಬಗ್ಗೆ ನಿಗಾವಹಿಸದ ಸರ್ಕಾರ ರೈತರ ಬಗ್ಗೆ ಕೂಡಾ ನಿರ್ಲಕ್ಷ್ಯ ತಾಳಿದೆ. ಸಚಿವ ಶಿವಾನಂದ ಪಾಟೀಲ್ ರೈತರ ಬಗ್ಗೆ ಅಸಂಬದ್ಧ ಹೇಳಿಕೆ ನೀಡಿದ್ದಾರೆ. ಬರಗಾಲ ಬಯಸುತ್ತಾರೆ ಎಂಬ ಹುಚ್ಚು ಹೇಳಿಕೆ ನೀಡಿದ ಮನುಷ್ಯ ಒಂದಡೆಯಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಜಾಬ್ ಬಗ್ಗೆ ಅರ್ಥ ಇಲ್ಲದಂತೆ ಮಾತಾಡುತ್ತಾರೆ. ಶಾಲಾ ಪರಿಮಿತಿಯ ಸಮವಸ್ತ್ರ ವಿಚಾರವನ್ನು ಮತೀಯ ಗಲಭೆಗೆ ಮುನ್ನುಡಿ ಹಾಡುತ್ತಿದ್ದಾರೆ. ಒಟ್ಟಾರೆ ತಲೆ ಕೆಟ್ಟ ಸರ್ಕಾರ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಹೋಬಳಿ ಅಧ್ಯಕ್ಷ ಜಗದೀಶ್, ಯುವ ಜೆಡಿಎಸ್ ಅಧ್ಯಕ್ಷ ನವೀನ್, ಗುತ್ತಿಗೆದಾರ ರಾಮಲಿಂಗೇಗೌಡ, ಮುಖಂಡರಾದ ವೀರಣ್ಣಗುಡಿ ರಾಮಣ್ಣ, ಮೂರ್ತಣ್ಣ, ಚಂಗಾವಿ ರಾಘು, ಕುಮಾರಣ್ಣ, ರಾಮಣ್ಣ, ಲೋಕೋಪಯೋಗಿ ಇಲಾಖೆ ಎಇಇ ವೆಂಕಟೇಶ್, ಜೆಇ ಸ್ವಾಮಿ, ಪಿಡಿಓ ಮಂಜಮ್ಮ ಇತರರು ಇದ್ದರು.