Thursday, 21st November 2024

ಜನವರಿ 14 ರಿಂದ ಮಣಿಪುರದಿಂದ ಮುಂಬೈಗೆ ಭಾರತ್‌ ಜೋಡೋ ಯಾತ್ರೆ

ವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಈಗ ಪೂರ್ವ-ಪಶ್ಚಿಮ ಭಾಗಗಳಲ್ಲಿ ಯಾತ್ರೆ ಮಾಡಲು ಸಜ್ಜಾಗಿದ್ದಾರೆ. ಜನವರಿ 14 ರಿಂದ ಮಣಿಪುರದಿಂದ ಮುಂಬೈಗೆ 6,200 ಕಿಮೀ ಪಾದಯಾತ್ರೆ ಕೈಗೊಳ್ಳಲಿದ್ದಾರೆ.

‘ಭಾರತ ನ್ಯಾಯ ಯಾತ್ರೆ’ಯು ಲೋಕಸಭೆ ಚುನಾವಣೆಗೆ ಮುನ್ನ ಮಾರ್ಚ್ 20 ರಂದು ಮುಕ್ತಾಯಗೊಳ್ಳಲಿದೆ.

ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ನಾಯಕರು, ಕಾರ್ಯಕರ್ತರು ಯಾತ್ರೆ ಕೈಗೊಳ್ಳಲಿದ್ದಾರೆ. ಯಾತ್ರೆಯಲ್ಲಿ 14 ರಾಜ್ಯಗಳು ಮತ್ತು 85 ಜಿಲ್ಲೆ ಗಳನ್ನು ಸುತ್ತಲಿದ್ದಾರೆ ಎಂದು ಕಾಂಗ್ರಸ್‌ ಹೇಳಿದೆ. ಮಣಿಪುರ, ನಾಗಾಲ್ಯಾಂಡ್, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ಬಿಹಾರ, ಒಡಿಶಾ, ಛತ್ತೀಸ್‌ಗಢ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಪಾದಯಾತ್ರೆ ನಡೆಯಲಿದೆ.

ರಾಹುಲ್‌ ಗಾಂಧಿಯವರು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕನ್ಯಾಕುಮಾರಿಯಿಂದ ಭಾರತ್ ಜೋಡೋ ಯಾತ್ರೆ ಕೈಗೊಂಡಿದ್ದರು. ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ವಿರೋಧ ಪಕ್ಷದ ನಾಯಕರು ಭಾಗವಹಿಸಿದ್ದ ಐದು ತಿಂಗಳ ಪಾದಯಾತ್ರೆ ಜನವರಿಯಲ್ಲಿ ಶ್ರೀನಗರದಲ್ಲಿ ಕೊನೆಗೊಂಡಿತ್ತು.

ಕರ್ನಾಟಕ ಮತ್ತು ತೆಲಂಗಾಣದಲ್ಲಿ ಪಕ್ಷದ ಚುನಾವಣಾ ಸಾಧನೆಯ ಹಿಂದಿನ ಯಾತ್ರೆಗೆ ಕಾಂಗ್ರೆಸ್ ನಾಯಕರು ವ್ಯಾಪಕವಾಗಿ ಮನ್ನಣೆ ನೀಡಿದ್ದರು. ಈ ವರ್ಷ ನಡೆದ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಮತ್ತು ತೆಲಂಗಾಣದಲ್ಲಿ ಬಿಆರ್‌ಎಸ್‌ನಿಂದ ಕಾಂಗ್ರೆಸ್ ಅಧಿಕಾರವನ್ನು ಕಸಿದುಕೊಂಡಿತು. ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮತ್ತೆ ಪಾದಯಾತ್ರೆ ಕೈಗೊಳ್ಳಲು ರಾಹುಲ್‌ ಗಾಂಧಿ ಮುಂದಾಗಿದ್ದಾರೆ. ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್‌ ನಾಯಕರು, ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ.