Monday, 25th November 2024

ತೆರಿಗೆ ಪಾವತಿಸದ ‘ಮಂತ್ರಿ ಮಾಲ್’ಗೆ ಬೀಗ: ಬಿಬಿಎಂಪಿ ಕಠಿಣ ಕ್ರಮ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ತೆರಿಗೆ ಪಾವತಿಸದ ನಗರದ ‘ಮಂತ್ರಿ ಮಾಲ್’ಗೆ ಬೀಗ ಜಡಿದಿದ್ದಾರೆ. ಈ ಮೂಲಕ ತೆರಿಗೆ ಪಾವತಿಸದ ಬಾಕಿದಾರರ ವಿರುದ್ಧ ಬಿಬಿಎಂಪಿ ಕಠಿಣ ಕ್ರಮವನ್ನು ಮುಂದುವರಿಸಿದೆ.
ಮಾಲ್ ಒಳಗಿದ್ದ ಸುಮಾರು 200 ಅಂಗಡಿಗಳನ್ನು ಸಹ ಬಂದ್ ಮಾಡಲಾಗಿದೆ. ಸುಮಾರು ತಿಂಗಳುಗಳಿಂದ ಮಂತ್ರಿ ಮಾಲ್ ತೆರಿಗೆ ಪಾವತಿ ಮಾಡಿರ ಲಿಲ್ಲ. ಒಟ್ಟು ಸುಮಾರು 51 ಕೋಟಿ ತೆರಿಗೆ ಹಣವನ್ನು ಮಂತ್ರಿ ಮಾಲ್ ನಿಂದ ಬಿಬಿಎಂಪಿಗೆ ತೆರಿಗೆ ಪಾವತಿ ಆಗಿರಲಿಲ್ಲ. ಈ ನಿಮಿತ್ತ ಬಿಬಿಎಂಪಿ ಅಧಿಕಾರಿ ಗಳು ಮಂತ್ರಿ ಮಾಲ್‌ಗೆ ಹಲವು ಭಾರಿ ನೋಟಿಸ್ ನೀಡಿದ್ದರು. ಇದರೊಂದಿಗೆ ಮಂತ್ರಿ ಒಳಗಿನ ಎಲ್ಲ ಮಳಿಗೆಗಳಿಗೆ ಬಿಬಿಎಂಪಿಯಿಂದ ನೋಟಿಸ್ ಜಾರಿ ಆಗಿತ್ತು. ಆದರೆ ಈ ಮಳಿಗೆಗಳಾಗಲಿ, ಇಲ್ಲವೇ ಮಂತ್ರಿ ಮಾಲ್ ಮಾಲೀಕರಾಗಿ ನೋಟಿಸ್‌ಗೆ ಉತ್ತರ ಕೊಡದೇ ನಿರ್ಲಕ್ಷಿಸಿದ್ದರು. ಅಲ್ಲದೇ ತೆರಿಗೆಯನ್ನು ಕಾಲ ಕಾಲಕ್ಕೆ ಕಟ್ಟಿರಲಿಲ್ಲ.
ಈ ಕುರಿತು ಪ್ರತಿಕ್ರಿಯಿಸಿರುವ ಮಾಲ್ ಮಾಲೀಕರಾದ ಬಾಕಿ ಬಿಲ್ ಫಾವತಿ ಕುರಿತು ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಈ ಮಧ್ಯೆ ಬಿಬಿಎಂಪಿ ಅಧಿಕಾರಿಗಳು ಮಾಲ್‌ಗೆ ಬೀಗ ಹಾಕಿಸುವುದು ಸರಿಯಲ್ಲ. ಅಧಿಕಾರಿಗಳು ಯಾವುದೇ ಮಾಹಿತಿ ನೀಡದೇ ಹೀಗೆ ಮಾಡಿದ್ದಾರೆ ಎಂದು ಮಂತ್ರಿ ಮಾಲ್ ಮಾಲೀಕರು ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿದು ಬಂದಿದೆ.
ಆರ್‌ ಆರ್ ನಗರದಲ್ಲಿ ಸಹ ಬಹುಕಾಲದಿಂದಲೂ ತೆರಿಗೆ ಪಾವತಿಸದೇ ನಡೆಸುತ್ತಿದ್ದ ವಾಣಿಜ್ಯ ಕಟ್ಟಡಗಳು, ಆಸ್ತಿಗಳ ವಿರುದ್ಧ ಬಿಬಿಎಂಪಿ ಅಧಿಕಾರಿಗಳು ಸಮರ ಸಾರಿದ್ದರು.