Sunday, 15th December 2024

ಬೌಲರೇ ಇಲ್ಲದ ಭಾರತದ ಪಾರ್ಲಿಮೆಂಟ್ !

ಸಂಗತ

ವಿಜಯ್ ದರಡಾ 

ಭಾರತದ ನೂತನ ಸಂಸತ್ ಭವನದಲ್ಲಿ ನಡೆದ ಸಂಸತ್ತಿನ ಚಳಿಗಾಲದ ಅಽವೇಶನದಲ್ಲಿ ಕಳೆದ ವಾರ ಆರು ಅತ್ಯಂತ ಪ್ರಮುಖ ಮಸೂದೆಗಳು ಅಂಗೀಕಾರ ಗೊಂಡವು. ವಿಶೇಷ ಏನೆಂದರೆ, ವಿರೋಧ ಪಕ್ಷಗಳ ಬಹುತೇಕ ಸಂಸದರನ್ನು ಆ ಸಮಯದಲ್ಲಿ ಸಂಸತ್ತಿನಿಂದ ಅಮಾನತು ಮಾಡಲಾಗಿತ್ತು. ಅವರ ಅನುಪಸ್ಥಿತಿ ಯಲ್ಲಿ ಬಿಲ್ ಗಳು ಪಾಸಾದವು. ವಿರೋಧ ಪಕ್ಷಗಳ ಸಂಸದರು ಮಾಡಿದ ಗದ್ದಲಕ್ಕೂ, ಅವರನ್ನು ಅಮಾನತುಗೊಳಿಸಿದ ಕ್ರಮಕ್ಕೂ ವಿರೋಧ ಪಕ್ಷಗಳು ಹಾಗೂ ಆಡಳಿತ ಪಕ್ಷದ ವಲಯದಲ್ಲಿ ಅವರದೇ ಆದ ಸಮರ್ಥನೆಗಳಿದ್ದವು.

ಸರ್ಕಾರ ಏಕಪಕ್ಷೀಯವಾಗಿ, ಸರ್ವಾಧಿಕಾರಿ ಧೋರಣೆಯಿಂದ ನಡೆದುಕೊಳ್ಳುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದವು. ಅದಕ್ಕೆ ಪ್ರತಿಯಾಗಿ, ವಿಪಕ್ಷಗಳು ಅರಾಜಕ ಧೋರಣೆಯನ್ನು ಪ್ರದರ್ಶಿಸುತ್ತಿವೆ ಎಂದು ಆಡಳಿತ ಪಕ್ಷ ಆರೋಪಿಸಿತು. ಒಂದೇ ಅಧಿವೇಶನದಲ್ಲಿ ೧೪೬ ಸಂಸದರನ್ನು ಅಮಾನತುಗೊಳಿಸಿರುವುದು
ಭಾರತದ ಸಂಸದೀಯ ಇತಿಹಾಸದಲ್ಲೇ ಮೊದಲು. ಅವರಲ್ಲಿ ೧೦೦ ಸಂಸದರು ಲೋಕಸಭೆಯ ಸದಸ್ಯರಾಗಿದ್ದರೆ, ಇನ್ನುಳಿದ ೪೬ ಮಂದಿ ರಾಜ್ಯಸಭಾ ಸದಸ್ಯರು. ಈ ಹಿಂದೆ ೧೯೮೯ರಲ್ಲಿ ಲೋಕಸಭೆಯಿಂದ ೬೩ ಸಂಸದರನ್ನು ಅಮಾನತು ಮಾಡಲಾಗಿತ್ತು. ಅವರು ಇಂದಿರಾ ಗಾಂಽ ಹತ್ಯೆ ತನಿಖೆಯ ವರದಿ ಯನ್ನು ಸಂಸತ್ತಿನಲ್ಲಿ ಮಂಡಿಸಬೇಕು ಎಂದು ಆಗ್ರಹಿಸಿ ಅಮಾನತುಗೊಂಡಿದ್ದರು.

ಈ ಬಾರಿಯ ವಿಚಾರ ಬೇರೆ. ಸಂಸತ್ ಭವನದೊಳಗೆ ಕೆಲ ದುಷ್ಕರ್ಮಿಗಳು ನುಸುಳಿ, ಸ್ಮೋಕ್ ಕ್ಯಾನಿಸ್ಟರ್‌ಗಳನ್ನು ಸಿಡಿಸುವ ಮೂಲಕ ಉಂಟುಮಾಡಿದ ಗಂಭೀರವಾದ ಭದ್ರತಾ ಲೋಪದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಸದನದಲ್ಲಿ ಹೇಳಿಕೆ ನೀಡಬೇಕು ಎಂದು ಆಗ್ರಹಿಸಿ ವಿಪಕ್ಷಗಳ ಸಂಸದರು ಧರಣಿ ನಡೆಸಿದ್ದರು. ಆದರೆ ಆಡಳಿತ ಪಕ್ಷವು ಅದಕ್ಕೆ ಒಪ್ಪಲಿಲ್ಲ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿರುವುದರಿಂದ ಅದರ ನಡುವೆ ಪ್ರಧಾನಿ ಅಥವಾ ಗೃಹ ಸಚಿವರು ಹೇಳಿಕೆ ನೀಡುವ ಅಗತ್ಯವಾದರೂ ಏನು ಎಂಬುದು ಆಡಳಿತ ಪಕ್ಷದ ವಾದವಾಗಿತ್ತು. ಅದರಿಂದಾಗಿ ಉಭಯ ಪಕ್ಷಗಳ ನಡುವೆ ತೀವ್ರ ಸಂಘರ್ಷ ಏರ್ಪಟ್ಟು, ಸಂಸತ್ತಿನಲ್ಲಿ ಕೋಲಾಹಲ ಉಂಟಾಯಿತು.

ಸದನವನ್ನು ಸರಿದಾರಿಗೆ ತರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಉಭಯ ಸದನಗಳ ಮುಖ್ಯಸ್ಥರು ದೊಡ್ಡ ಸಂಖ್ಯೆಯಲ್ಲಿ ವಿಪಕ್ಷಗಳ ಸಂಸದರನ್ನು ಅಮಾನತು ಗೊಳಿಸಿದರು. ಬೇರೆ ಬೇರೆ ಹಂತದಲ್ಲಿ, ಮೂರು ದಿನಗಳಲ್ಲಿ, ಗುಂಪುಗುಂಪಾಗಿ ಸಂಸದರನ್ನು ಚಳಿಗಾಲದ ಅಧಿವೇಶನದ ಇನ್ನುಳಿದ ಅವಧಿಗೆ ಅಮಾನತು ಗೊಳಿಸಲಾಯಿತು. ಅದನ್ನು ನೋಡಿ ಯಾರೋ ಹೇಳಿದ್ದು ಮಾರ್ಮಿಕವಾಗಿತ್ತು- ‘ಬೌಲರ್ ಹಾಗೂ ಫೀಲ್ಡರ್‌ಗಳೇ ಇಲ್ಲದೆ ಸೆಂಚುರಿ ಬಾರಿಸಲು ಹೊರಟ ಬ್ಯಾಟರ್ ರೀತಿಯಲ್ಲಿ ಸರ್ಕಾರ ವರ್ತಿಸುತ್ತಿದೆ.

ನಾನು ೧೮ ವರ್ಷಗಳ ಕಾಲ ಸಂಸತ್ತಿನ ಸದಸ್ಯನಾಗಿದ್ದೆ. ಆ ಅವಧಿಯಲ್ಲಿ ಸಾಕಷ್ಟು ವಿಷಯಗಳ ಬಗ್ಗೆ ಬಹಳ ತೀಕ್ಷ್ಣವಾದ ವಾಗ್ಯುದ್ಧಗಳು ನಡೆದಿರುವುದನ್ನು ನೋಡಿದ್ದೇನೆ. ಸದನದಲ್ಲಿ ತಾರಕಕ್ಕೇರಿದ ಜಗಳಗಳು, ಕೋಲಾಹಲಕರ ಸನ್ನಿವೇಶಗಳು ಏರ್ಪಟ್ಟಿದ್ದಕ್ಕೆ ಸಾಕ್ಷಿಯಾಗಿದ್ದೇನೆ. ಆದರೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸದಸ್ಯರನ್ನು ಅಮಾನತುಗೊಳಿಸಿದ್ದನ್ನು ಯಾವತ್ತೂ ನೋಡಿಲ್ಲ. ಇದು ನಿಜಕ್ಕೂ ಅಚ್ಚರಿಯ ಸಂಗತಿ. ವಿಪಕ್ಷಗಳೇ ಇಲ್ಲದ ಸಂಸತ್ತನ್ನು ಊಹಿಸಿಕೊಳ್ಳಲು ಸಾಧ್ಯವೇ? ಖಂಡಿತ ಇಲ್ಲ. ಏಕೆಂದರೆ ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷಗಳಿಗೆ ಬಹಳ ಮುಖ್ಯವಾದ ಸ್ಥಾನವಿದೆ. ದೇಶದ ಮೊದಲ ಪ್ರಧಾನಿ ಪಂ.ಜವಾಹರಲಾಲ್ ನೆಹರು ಅವರು ಅದ್ಭುತ ಬಹುಮತ ದೊಂದಿಗೆ, ಬಹಳ ಅಽಕಾರಯುತವಾಗಿ ದೇಶವನ್ನು ಆಳುತ್ತಿದ್ದರು.

ಆಗಲೂ ವಿರೋಧ ಪಕ್ಷ ಬಹಳ ದುರ್ಬಲವಾಗಿತ್ತು. ಆದರೂ ಅವರು ವಿರೋಧ ಪಕ್ಷಕ್ಕೆ ಬಹಳ ಮಹತ್ವ ನೀಡುತ್ತಿದ್ದರು. ಎಷ್ಟೆಂದರೆ, ತಮ್ಮ ಕಟು ಟೀಕಾಕಾರರಾದ ರಾಮ ಮನೋಹರ ಲೋಹಿಯಾ, ಅಟಲ್ ಬಿಹಾರಿ ವಾಜಪೇಯಿ ಯಂತಹ ಸದಸ್ಯರು ಎಲ್ಲಾ ಸಮಯದಲ್ಲೂ ಸದನದಲ್ಲಿ ಇರಬೇಕೆಂದು ಅವರು ಬಯಸುತ್ತಿದ್ದರು.
ಇವತ್ತು ಕೇಂದ್ರದಲ್ಲಿ ಅಽಕಾರದಲ್ಲಿರುವ ಬಿಜೆಪಿ ಈ ಹಿಂದೆ ಬಹಳ ಸುದೀರ್ಘ ಕಾಲ ವಿರೋಧ ಪಕ್ಷವಾಗಿತ್ತು. ಜನರ ಆಶೋತ್ತರಗಳಿಗೆ ಧ್ವನಿಯಾಗಲು ಬಿಜೆಪಿ ಕೂಡ ಸಾಕಷ್ಟು ಸಲ ತುಂಬಾ ಕಠಿಣ ನಿಲುವುಗಳನ್ನು ತೆಗೆದುಕೊಂಡಿದೆ. ಆಡಳಿತ ಪಕ್ಷದ ಸದಸ್ಯರು ಹಾಗೂ ಸರ್ಕಾರದ ಮೇಲೆ ಹಗರಣಗಳ ಆರೋಪ ಬಂದಾಗ ಸಂಸತ್ತಿನಲ್ಲಿ ಬಿಜೆಪಿ ಸದಸ್ಯರು ಕೋಲಾಹಲ ಸೃಷ್ಟಿಸಿದ್ದಾರೆ.

ಕಾಮನ್ವೆಲ್ತ್ ಗೇಮ್ಸ್ ಹಗರಣ, ೨ಜಿ ಹಗರಣ, ಕಲ್ಲಿದ್ದಲು ಹಗರಣ, ಮುಂಬೈನ ಆದರ್ಶ ಸೊಸೈಟಿ ಹಗರಣಗಳು ಬೆಳಕಿಗೆ ಬಂದಾಗ ಸಂಸತ್ತಿನ ಉಭಯ
ಸದನಗಳಲ್ಲಿ ಬಿಜೆಪಿ ಸದಸ್ಯರು ತೀವ್ರ ಪ್ರತಿಭಟನೆ ನಡೆಸಿದ್ದರು. ಇಂತಹ ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯವಲ್ಲದೆ, ಕೆಲ ಸ್ಥಳೀಯ ಅಥವಾ ಕಡಿಮೆ ಪ್ರಾಮುಖ್ಯತೆಯ ವಿಚಾರಗಳಿಗೆ ಸಂಬಂಧಿಸಿದಂತೆಯೂ ಬಿಜೆಪಿ ಬಹಳ ಕಠಿಣ ನಿಲುವು ತಾಳಿದ್ದಿದೆ. ಇಂದು ದೇಶದಲ್ಲಿ ಡಿಜಿಟಲ್ ಪಾವತಿ ಹಾಗೂ ಭದ್ರತೆ ವಿಷಯದಲ್ಲಿ ಕ್ರಾಂತಿಯನ್ನೇ ಮಾಡಿರುವ ಆಧಾರ್‌ಗೆ ಈ ಹಿಂದೆ ಬಿಜೆಪಿ ತೀವ್ರ ವಿರೋಧ ಪ್ರದರ್ಶಿಸಿತ್ತು.

ಇನ್ನೂ ಅನೇಕ ಸಣ್ಣಪುಟ್ಟ ವಿಷಯಗಳನ್ನು ಹಾಗೂ ಸ್ಥಾಯಿ ಸಮಿತಿಯ ಸಭೆಯಲ್ಲಿ ಬಗೆಹರಿಸಿಕೊಳ್ಳಬಹುದಾದ ವಿಚಾರಗಳನ್ನು ಬಿಜೆಪಿ ಬಹಳ ದೊಡ್ಡದು ಮಾಡಿ ಸಂಸತ್ತಿನಲ್ಲಿ ಬಿಸಿ ಬಿಸಿ ಚರ್ಚೆ ನಡೆಸಿದ್ದಿದೆ. ಅಣ್ಣಾ ಹಜಾರೆಯವರ ಲೋಕಪಾಲ ಚಳವಳಿ ಉಪವಾಸ ಸತ್ಯಾಗ್ರಹದ ಬಗ್ಗೆ ಸಂಸತ್ತಿನಲ್ಲಿ ರಾತ್ರಿಯಿಡೀ ಚರ್ಚೆ
ನಡೆದಿತ್ತು. ೨೬/೧೧ ಮುಂಬೈ ದಾಳಿಯ ಬಳಿಕ ನಡೆದ ತುರ್ತು ಸಭೆಗೆ ಅಂದಿನ ಕೇಂದ್ರ ಗೃಹ ಸಚಿವ ಶಿವರಾಜ ಪಾಟೀಲ್ ತಡವಾಗಿ ಬಂದಾಗ, ಅವರು ಸೂಟ್ ಬದಲಿಸುವುದರಲ್ಲಿ ಬ್ಯುಸಿಯಾಗಿದ್ದರು ಎಂಬ ಆರೋಪ ಕೇಳಿಬಂದಿತ್ತು. ಆ ವಿಚಾರ ಸದನದಲ್ಲಿ ದೊಡ್ಡ ಕೋಲಾಹಲಕ್ಕೆ ಕಾರಣವಾಗಿತ್ತು!

ವಿರೋಧ ಪಕ್ಷಗಳ ಸಂಸದರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಅನೇಕ ಸಂದರ್ಭಗಳು ನನ್ನ ಮನಸ್ಸಿನಲ್ಲಿ ಅಚ್ಚೊತ್ತಿವೆ. ಆದರೆ ಯಾವತ್ತೂ, ಯಾವ ಕಾರಣಕ್ಕೂ, ಇಷ್ಟೊಂದು ದೊಡ್ಡ ಸಂಖ್ಯೆಯ ಸಂಸದರನ್ನು ಸದನದಿಂದ ಅಮಾನತು ಮಾಡಿದ್ದನ್ನು ನಾನು ನೋಡಿಲ್ಲ! ವಿರೋಧ ಪಕ್ಷಗಳು ಇರುವುದೇ ಜನರ ಧ್ವನಿಯನ್ನು ಸಂಸತ್ತಿನಲ್ಲಿ ಎತ್ತುವುದಕ್ಕಾಗಿ. ಪ್ರಜಾಪ್ರಭುತ್ವದ ದೇಗುಲ ಸಂಸತ್ತು. ಸರ್ಕಾರ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ವಿಪಕ್ಷಗಳ ಸಂಸದರಿಗೆ ಅನ್ನಿಸಿದರೆ ಅವರು ಪ್ರತಿಭಟನೆ ನಡೆಸಲೇಬೇಕು! ಎಲ್ಲಾ ದೇಶಗಳಲ್ಲೂ ಹೀಗೇ ಇದೆ. ಎಲ್ಲಾ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ವಿರೋಧ ಪಕ್ಷಗಳು ಸದಾ
‘ದಾಳಿಗೆ ಸನ್ನದ್ಧರಾಗಿಯೇ ಇರುತ್ತವೆ.

ಬ್ರಿಟನ್, ಅಮೆರಿಕ, ಫ್ರಾನ್ಸ್‌ನಂತಹ ದೇಶದಲ್ಲಿ ವಿಪಕ್ಷಗಳು ನಮ್ಮ ದೇಶಕ್ಕಿಂತ ಹೆಚ್ಚು ಉಗ್ರವಾಗಿ ನಡೆದುಕೊಳ್ಳುತ್ತವೆ. ಹಾಗಂತ ವಿರೋಧ ಪಕ್ಷಗಳು ಯಾವಾಗಲೂ ಸಂಸತ್ತಿನಲ್ಲಿ ಕೋಲಾಹಲ ಎಬ್ಬಿಸುತ್ತಿರಬೇಕೆಂದು ನಾನು ಹೇಳುತ್ತಿಲ್ಲ. ವಿಪಕ್ಷಗಳು ಕೂಡ ತಮ್ಮ ಜವಾಬ್ದಾರಿ ಏನೆಂಬುದನ್ನು ಅರ್ಥ ಮಾಡಿ ಕೊಂಡಿರಬೇಕು. ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಯಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳೆರಡನ್ನೂ ಒಂದೇ ದೃಷ್ಟಿಯಿಂದ ನೋಡಬೇಕಾಗುತ್ತದೆ.
ಏಕೆಂದರೆ ಅವೆರಡೂ ಪಕ್ಷಗಳು ಜನಸಾಮಾನ್ಯರ ಒಳಿತಿಗಾಗಿಯೇ ಕೆಲಸ ಮಾಡುತ್ತವೆ. ನಾಲ್ಕು ಚಕ್ರಗಳು ಸರಿಯಾಗಿ ಕೆಲಸ ಮಾಡದೆ ಇದ್ದರೆ ಪ್ರಜಾಪ್ರಭುತ್ವದ ಗಾಡಿ ಮುಂದೆ ಹೋಗುವುದಾದರೂ ಹೇಗೆ? ನೆನಪಿಡಿ, ದೇಶ ಹೆಚ್ಚೆಚ್ಚು ಅಭಿವೃದ್ಧಿ ಹೊಂದಿದಷ್ಟೂ ಶತ್ರುಗಳ ದಾಳಿ ಕೂಡ ಹೆಚ್ಚುತ್ತದೆ!

ಅವರ ವಿರುದ್ಧ ನಾವು ಒಗ್ಗಟ್ಟಿನಿಂದ ಹೋರಾಡಬೇಕು. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳ ಜವಾಬ್ದಾರಿಗಳು ಹಾಗೂ ಪಾತ್ರಗಳು ಜನರ ಭಾವನೆಗಳಿಗೆ ತಕ್ಕಂತೆ ಬದಲಾಗುತ್ತಲೇ ಇರುತ್ತವೆ. ಹಿಂದೊಂದು ಕಾಲವಿತ್ತು. ಆಗ ಜನರು ಪಂ.ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರನ್ನು ತುಂಬಾ ನಂಬುತ್ತಿದ್ದರು. ಅವರು ಏನು ಹೇಳಿದರೂ ಪಾಲಿಸುತ್ತಿದ್ದರು. ಇಂದು ಜನರು ಅದೇ ರೀತಿಯ ನಂಬಿಕೆಯನ್ನು ಪ್ರಧಾನಿ
ನರೇಂದ್ರ ಮೋದಿಯವರಲ್ಲಿ ಇರಿಸಿದ್ದಾರೆ. ನಮ್ಮ ದೇಶದಲ್ಲಿ ಜನರು ನೇರವಾಗಿ ಪ್ರಧಾನ ಮಂತ್ರಿಯನ್ನು ಆಯ್ಕೆ ಮಾಡುವ ವ್ಯವಸ್ಥೆಯಿಲ್ಲ. ಜನರಿಂದ ಆಯ್ಕೆಯಾದ ಸಂಸದರು ಪ್ರಧಾನಿಯನ್ನು ಆಯ್ಕೆ ಮಾಡುತ್ತಾರೆ. ಆದರೆ ರಾಜಕೀಯ ಪಕ್ಷಗಳು ತಮ್ಮ ನಾಯಕನ ಮುಖವನ್ನು ಜನರೆದುರು ತೋರಿಸುವ ಅವಕಾಶವಂತೂ ಇದ್ದೇ ಇದೆ. ಪ್ರಧಾನಿ ನರೇಂದ್ರ ಮೋದಿ ಅಂತಹ ಮುಖ. ಬಿಜೆಪಿಗೆ ಅವರೇ ಮುಖ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ ೩೭೦ನೇ ವಿಽಯನ್ನು ರದ್ದುಪಡಿಸಿದ ಬಳಿಕ ಅಮಿತ್ ಶಾ ಅವರ ಇಮೇಜ್ ಕೂಡ ಜನರ ಮನಸ್ಸಿನಲ್ಲಿ ಬಹಳ ಗಟ್ಟಿಯಾಗಿದೆ. ಇದು ಮಾತ್ರವಲ್ಲ, ಇನ್ನೂ ಸಾಕಷ್ಟು ವಿಷಯಗಳಲ್ಲಿ ಅಮಿತ್ ಶಾ ಅವರ ಕಠಿಣ ನಿಲುವುಗಳನ್ನು ಜನರು ಮೆಚ್ಚಿಕೊಳ್ಳುತ್ತಾರೆ.
ನಾನೇನು ಹೇಳುತ್ತಿದ್ದೇನೆಂದರೆ, ಪ್ರಜಾಪ್ರಭುತ್ವದಲ್ಲಿ ಜನರು ಒಬ್ಬ ನಾಯಕನನ್ನು ಆರಾಧಿಸಲು ಆತ ಅಧಿಕಾರದಲ್ಲೇ ಇರಬೇಕು ಎಂದೇನಿಲ್ಲ. ಇದನ್ನು ನಾವು ಯಾವಾಗಲೂ ನೆನಪಿಟ್ಟುಕೊಳ್ಳಬೇಕು.

ಉಪ ರಾಷ್ಟ್ರಪತಿಗಳನ್ನು ಅಣಕಿಸುವುದು ಅಪರಾಧವಲ್ಲ. ಆದರೆ ಅಂತಹ ನಡತೆ ಸಂಸದರಿಗೆ ಹೊಂದುವುದಿಲ್ಲ. ಸಂಸತ್ತು ಎಂಬುದು ಮಿಮಿಕ್ರಿ ಮಾಡುವ ಜಾಗವಲ್ಲ. ಇದು ದೇಶದ ನೀತಿಗಳನ್ನು ರೂಪಿಸುವ ಜಾಗ. ದೇಶದ ಭವಿಷ್ಯವನ್ನು ನಿರ್ಧರಿಸುವ ಬಹಳ ಪ್ರಮುಖವಾದ ಸ್ಥಳವಿದು. ಸಾಂವಿಧಾನಿಕ ಹುದ್ದೆಯಲ್ಲಿ ಇರುವವರನ್ನು ಹಾಗೂ ಚುನಾಯಿತ ಪ್ರತಿನಿಧಿಗಳನ್ನು ಗೌರವಿಸುವುದು ನಮ್ಮ ಕರ್ತವ್ಯ. ಇಷ್ಟಾಗಿಯೂ, ಸಂಸದರನ್ನೆಲ್ಲ ಸಂಸತ್ತಿನಿಂದ ಉಚ್ಚಾಟಿಸಿದರೆ
ಸಂಸದೀಯ ಚಟುವಟಿಕೆಗಳು ಹೇಗೆ ನಡೆಯುತ್ತವೆ ಎಂಬ ಪ್ರಶ್ನೆಗೆ ನಮಗೆ ಉತ್ತರ ಸಿಗಲಿಲ್ಲ.

ಪ್ರಜಾಪ್ರಭುತ್ವದಲ್ಲಿ ಕೆಲವೇ ಸಂಸದರು ಯಾವುದಾದರೂ ವಿಷಯದ ಬಗ್ಗೆ ಧ್ವನಿ ಎತ್ತಿದರೂ ಕೂಡ ಅದನ್ನು ಕೇಳಿಸಿಕೊಳ್ಳಬೇಕು. ಏಕೆಂದರೆ ಒಬ್ಬ ಸಂಸದ
ಲಕ್ಷಾಂತರ ಜನರ ಪ್ರತಿನಿಧಿ. ಅವನು ಮಾತನಾಡುತ್ತಾನೆ ಅಂದರೆ ಲಕ್ಷಾಂತರ ಜನರು ಆ ವಿಷಯದ ಬಗ್ಗೆ ಮಾತನಾಡುತ್ತಿದ್ದಾರೆಂದು ಅರ್ಥ. ಅವರ ಕೂಗಿಗೆ ಬೆಲೆಯಿಲ್ಲವೇ? ಇದ್ದೇ ಇದೆ. ಕೇರಳದ ಆರ್‌ಎಸ್‌ಪಿಯಿಂದ ಒಬ್ಬನೇ ಒಬ್ಬ ಸಂಸದರಿದ್ದಾರೆ. ಅವರು ಎನ್.ಕೆ.ಪ್ರೇಮಚಂದ್ರನ್. ಅವರು ಮಾತನಾಡಲು ಎದ್ದುನಿಂತರೆ ಎಲ್ಲರೂ ಕಿವಿಗೊಟ್ಟು ಕೇಳಿಸಿಕೊಳ್ಳುತ್ತಾರೆ.

ಮಾಜಿ ಪ್ರಧಾನಿ ಚಂದ್ರಶೇಖರ್, ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಮಾಜಿ ಸಂಸದ ಸೀತಾರಾಂ ಯೆಚೂರಿ ಅಥವಾ ಡಿ.ರಾಜಾ ಅವರು ಮಾತ ನಾಡಲು ಶುರುಮಾಡಿದರೆ ಎಲ್ಲರೂ ತದೇಕಚಿತ್ತದಿಂದ ಆಲಿಸುತ್ತಿದ್ದರು. ರಾಜ್ಯಸಭಾ ಸದಸ್ಯ, ಡಿಎಂಕೆಯ ತಿರುಚ್ಚಿ ಶಿವ ಕೂಡ ಅಂತಹ ಇನ್ನೊಬ್ಬ ವ್ಯಕ್ತಿ. ಹಾಗಾಗಿ ಸಂಖ್ಯಾಬಲವನ್ನು ಯಾವತ್ತೂ ಅಸ್ತ್ರವಾಗಿ ಬಳಸಲೇಬಾರದು. ನಾನಿದನ್ನು ಈ ಹಿಂದೆಯೂ ಹೇಳಿದ್ದೇನೆ, ಗಲೂ ಹೇಳುತ್ತಿದ್ದೇನೆ, ಮುಂದೆಯೂ ಹೇಳುತ್ತೇನೆ; ಯಾವುದೇ ಸಂಗತಿಯನ್ನಾದರೂ ಅದರ ಮಿತಿಯನ್ನು ಮೀರಿ ಎಳೆಯಬಾರದು. ವಿರೋಧ ಪಕ್ಷಗಳಿಗೆ ತಮ್ಮನ್ನು ಶತ್ರುಗಳಂತೆ ನೋಡುತ್ತಿದ್ದಾರೆಂಬ ಭಾವನೆ ಬರುವಂತೆ ನಡೆದುಕೊಳ್ಳುವುದು ಪ್ರಜಾಪ್ರಭುತ್ವಕ್ಕೆ ಶೋಭೆಯಲ್ಲ. ಸಂಸದೀಯ ವ್ಯವಹಾರಗಳ ಸಚಿವಾಲಯವು ಈ ವಿಷಯ ಇಷ್ಟೊಂದು ಉಲ್ಬಣ ಗೊಳ್ಳಲು ಅವಕಾಶ ನೀಡಬಾರದಿತ್ತು.

ನೆನಪಿಡಿ, ಸಂಸದೀಯ ಪ್ರಜಾಪ್ರಭುತ್ವದಕ್ಕೆ ಅದರದೇ ಆದ ಸಂಪ್ರದಾಯಗಳು ಹಾಗೂ ಮೌಲ್ಯಗಳಿವೆ. ಶಿಕ್ಷೆ ಯಾವತ್ತೂ ಹದ್ದು ಮೀರಬಾರದು.