Thursday, 12th December 2024

ಸಂಭ್ರಮಾಚರಣೆಯೋ, ಕಿಡಿಗೇಡಿತನದ ಅತಿರೇಕವೋ ?

ಕಳಕಳಿ

ರಮಾನಂದ ಶರ್ಮಾ

ಭಾರತೀಯರ ಪಾಲಿಗೆ ಹೊಸವರ್ಷ ಪ್ರಾರಂಭವಾಗುವುದು ಯುಗಾದಿಯಿಂದ. ಇದು ನಮ್ಮ ಸಂಸ್ಕೃತಿ. ವಿಪರ್ಯಾಸವೆಂದರೆ, ಇದನ್ನು ಮರೆತಿರುವ ನಾವು ಪಾಶ್ಚಾತ್ಯರ ಅಂಧಾನುಕರಣೆಯಲ್ಲಿ ಜನವರಿ ೧ನ್ನು ಹೊಸವರ್ಷವೆಂದು ಪರಿಗಣಿಸುತ್ತೇವೆ. ಸ್ವಾಭಿಮಾನ, ಆತ್ಮನಿರ್ಭರತೆ, ಅಸ್ಮಿತೆ, ನಮ್ಮತನವನ್ನೆಲ್ಲ ಮರೆತು/ಬಲಿಗೊಟ್ಟು ವಸಾಹತುಶಾಹಿಗಳನ್ನು ಅನುಸರಿಸುತ್ತೇವೆ.

ಹೊಸ ವರ್ಷದ ಸಂಭ್ರಮಾಚರಣೆಯೆಂದರೆ, ಹಿಂದಿನ ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷವನ್ನು ಆದರದಿಂದ ಬರಮಾಡಿಕೊಳ್ಳುವುದು. ಇದು ಲಾಗಾಯ್ತಿನಿಂದ ನಡೆದುಕೊಂಡು ಬಂದ ಪದ್ಧತಿ. ಹಿಂದಿನ ವರ್ಷದ ಕಹಿಯನ್ನು ಮರೆತು, ಅನುಭವಿಸಿದ ಸಿಹಿಯನ್ನು ನೆನೆಸಿಕೊಂಡು, ಈ ಸಿಹಿ ಮುಂದಿನ ವರ್ಷದಲ್ಲೂ ಮುಂದುವರಿ ಯಲಿ ಎಂದು ಆಶಿಸುವುದು ಮತ್ತು ಭಗವಂತನನ್ನು ಪ್ರಾರ್ಥಿಸುವುದು ಈ ಆಚರಣೆಯ ಹಿಂದಿನ ಉದ್ದೇಶ. ತೀರಾ ಇತ್ತೀಚಿನವರೆಗೆ ಈ ಸಂದರ್ಭದಲ್ಲಿ ಕೆಲವು
ಧಾರ್ಮಿಕ ವಿಽ-ವಿಧಾನಗಳು ನಡೆಯುತ್ತಿದ್ದವು. ಪೂಜೆ ಮಾಡುವ, ಪ್ರಾರ್ಥನೆ ಸಲ್ಲಿಸುವ, ಭಜನೆ ಮತ್ತು ದೇವರ ನಾಮಗಳ ಗಾಯನದಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಸಾಕಷ್ಟಿತ್ತು.

ಇವೆಲ್ಲಾ ಮುಗಿದ ಮೇಲೆ ಸಿಹಿ ತಿಂದು ಲಘು ಮನರಂಜನೆಯನ್ನೋ, ಆರ್ಭಟವಿಲ್ಲದ ಮತ್ತು ನೆರೆಹೊರೆಯವರಿಗೆ ತೊಂದರೆಯುಂಟು ಮಾಡದ ಸಂಗೀತ ಕಾರ್ಯಕ್ರಮಗಳನ್ನೋ ಏರ್ಪಡಿಸುತ್ತಿದ್ದರು. ಮಾರನೆಯ ದಿನ ಕುಟುಂಬಿಕರು, ಬಂಧು-ಮಿತ್ರರ ನಡುವೆ ಶುಭಾಶಯಗಳ ವಿನಿಮಯವಾಗುತ್ತಿತ್ತು. ಹೊಸ
ವರ್ಷಾಚರಣೆಯ ಒಂದು ವಾರದ ತನಕ, ಯಾರಿಂದೆಲ್ಲಾ ಶುಭಾಶಯ ಕಾರ್ಡುಗಳು ಬಂದಿವೆ ಮತ್ತು ಎಷ್ಟು ಬಂದಿವೆ ಎನ್ನುವುದರ ಚರ್ಚೆಯಾಗುತ್ತಿತ್ತು. ಯಾವೆಲ್ಲಾ
ಜ್ಯೋತಿಷಿಗಳು ಹೊಸ ವರ್ಷದ ಒಳಿತು-ಕೆಡುಕುಗಳ ಬಗ್ಗೆ ಏನೇನು ಹೇಳಿದ್ದಾರೆ ಎಂಬುದರ ಕುರಿತು ಬಹುತೇಕರಿಂದ ಕುತೂಹಲ ವ್ಯಕ್ತವಾಗುತ್ತಿತ್ತು; ಮಳೆ-ಬೆಳೆಗಳ ಬಗ್ಗೆ ರೈತ ಮಕ್ಕಳು, ಬೆಲೆಯೇರಿಕೆ-ಇಳಿಕೆಯ ಬಗ್ಗೆ ಶ್ರೀಸಾಮಾನ್ಯರು ಅವರಿಂದ ತಿಳಿಯಲು ಯತ್ನಿಸುತ್ತಿದ್ದರು.

ಬದಲಾವಣೆ ಬದುಕಿನ ನಿಯಮ. ಈ ಬದಲಾವಣೆ ಯಾವುದನ್ನೂ ಯಾರನ್ನೂ ಬಿಟ್ಟಿಲ್ಲ. ಹೊಸನೀರು ಹರಿದು ಹಳೆನೀರನ್ನು ಕೊಚ್ಚಿಕೊಂಡು ಹೋದಂತೆ, ಈ ಎಲ್ಲಾ
ಪರಿಪಾಠಗಳು/ಪರಿಕಲ್ಪನೆಗಳು ಈಗ ಕಾಲಗರ್ಭವನ್ನು ಸೇರಿವೆ. ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯಪ್ರಭಾವವೋ, ಬದಲಾದ ಜೀವನಶೈಲಿಯ
ಪರಿಣಾಮವೋ ಒಟ್ಟಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯು ತನ್ನ ಹಿಂದಿನ ಲಯವನ್ನು ಕಳೆದುಕೊಂಡಿದೆ. ಈಗ ಸಂಭ್ರಮಾಚರಣೆಯೆಂದರೆ ಕಂಠಪೂರ್ತಿ ಮದ್ಯವನ್ನು ಸೇವಿಸುವುದು, ಪಬ್ಬು-ಕ್ಲಬ್ಬು, ಬಾರು-ರೆಸಾರ್ಟುಗಳಲ್ಲಿ, ಐಷಾರಾಮಿ ಹೋಟೆಲುಗಳಲ್ಲಿ ಮೆರೆಯುವುದು.

ಮಾದಕ ದ್ರವ್ಯಕ್ಕೆ ಒಡ್ಡಿಕೊಂಡು, ಮದವೇರಿಸುವ ಹುಚ್ಚು ಇಂಗ್ಲಿಷ್ ಸಂಗೀತ/ಗೀತೆಗಳಿಗೆ ನರ್ತಿಸುವುದು, ಹಾದಿ-ಬೀದಿಯಲ್ಲಿ ಗುಂಪು ಕಟ್ಟಿಕೊಂಡು ಕುಣಿದು ಕೇಕೆ ಹಾಕುವುದು, ಹೆಣ್ಣು ಮಕ್ಕಳನ್ನು ಚುಡಾಯಿಸುವುದು, ಕಂಡಕಂಡಲ್ಲಿ ಕಸ ಒಗೆಯುವುದು, ಕುಡಿದ ಬಾಟಲಿಯನ್ನು ಎಲ್ಲೆಂದರಲ್ಲಿ ಒಡೆದು ಚೂರಾಗಿಸುವುದು, ಕಿವಿಗಡಚಿಕ್ಕುವಂತೆ ಬೊಬ್ಬೆ ಹೊಡೆಯುವುದು, ರಸ್ತೆಗಳಿರುವುದು ತಮಗೊಬ್ಬರಿಗೇ ಎಂಬಂತೆ ವಿಮಾನದ ವೇಗದಲ್ಲಿ ದ್ವಿಚಕ್ರ ವಾಹನ/ ಕಾರುಗಳನ್ನು ಓಡಿಸುವುದು, ಮ್ಯೂಸಿಕ್ ಸಿಸ್ಟಮ್‌ಗಳ ವಾಲ್ಯೂಮ್ ಅನ್ನು ತಾರಕಕ್ಕೇರಿಸುವುದು ಮತ್ತು ಬೆಳಗಿನ ತನಕ ಪಾನಗೋಷ್ಠಿ ನಡೆಸುವುದು. ಇವು ಹೊಸ ವರ್ಷದ
ಸಂಭ್ರಮಾಚರಣೆಯ ಕೆಲವೊಂದು ಝಲಕ್‌ಗಳಷ್ಟೇ!

ಆದರೆ ಭಾರತೀಯರ ಪಾಲಿಗೆ ಹೊಸವರ್ಷ ಪ್ರಾರಂಭವಾಗುವುದು ಯುಗಾದಿಯಿಂದ. ಇದು ನಮ್ಮ ಸಂಸ್ಕೃತಿ. ವಿಪರ್ಯಾಸವೆಂದರೆ, ಇದನ್ನು ಮರೆತಿರುವ
ನಾವು ಪಾಶ್ಚಾತ್ಯರ ಅಂಧಾನುಕರಣೆಯಲ್ಲಿ ಜನವರಿ ೧ನ್ನು ಹೊಸವರ್ಷವೆಂದು ಪರಿಗಣಿಸುತ್ತೇವೆ. ಸ್ವಾಭಿಮಾನ, ಆತ್ಮನಿರ್ಭರತೆ, ಅಸ್ಮಿತೆ, ನಮ್ಮತನವನ್ನೆಲ್ಲ ಮರೆತು/ ಬಲಿಗೊಟ್ಟು ವಸಾಹತುಶಾಹಿಗಳನ್ನು ಅನುಸರಿಸುತ್ತೇವೆ. ಅಚ್ಚರಿಯ ಸಂಗತಿಯೆಂದರೆ, ವಸಾಹತುಶಾಹಿಯನ್ನು ವೃತ್ತಿಪರವಾಗಿ ವಿರೋಧಿಸುವ ಬಲಪಂಥೀಯ ಸಂಘಟನೆಗಳು ಇದನ್ನು ವಿರೋಧಿಸಿದೆ ಜಾಣಮೌನ ಮೆರೆಯುತ್ತವೆ.

ಕೇವಲ ನಗರಗಳು ಮತ್ತು ಪಟ್ಟಣಗಳಿಗೆ ಸೀಮಿತವಾಗಿದ್ದ ಇಂಥ ಆಚರಣೆ ಈಗ ಹಳ್ಳಿ ಹಳ್ಳಿಗೂ, ಗಲ್ಲಿ ಗಲ್ಲಿಗೂ ವ್ಯಾಪಿಸಿದೆ. ಮದ್ಯ ಸೇವಿಸಿ ಮಜಾ ಮಾಡಿದರಷ್ಟೇ ಅದು ಹೊಸವರ್ಷದ ಸಂಭ್ರಮಾಚರಣೆ ಎಂಬ ಅಲಿಖಿತ ನಿಯಮವು ಸ್ವಲ್ಪವೂ ಅಭಿಪ್ರಾಯಭೇದವಿಲ್ಲದೆ ಎಲ್ಲ ಕಡೆಯೂ ವ್ಯಾಪಿಸಿದೆ. ಕಳೆದ ವರ್ಷದ ಡಿಸೆಂಬರ್ ೨೩-೩೧ರ ಅವಧಿಯಲ್ಲಿ ರಾಜ್ಯಾದ್ಯಂತ ೧,೨೬೨ ಕೋಟಿ ರು. ಮೌಲ್ಯದ ಮದ್ಯ ಮಾರಾಟವಾಯಿತಂತೆ. ಈ ಹಣ ಯಾವುದಾದರೂ ರಚನಾತ್ಮಕ ಕೆಲಸಕ್ಕೆ ಖರ್ಚಾಗಬಾರದಿತ್ತೇ ಎಂದು ಪ್ರಜ್ಞಾವಂತರು ಯೋಚಿಸುತ್ತಾರೆ. ಸರಕಾರದ ಬೊಕ್ಕಸಕ್ಕೆ ಶೇ.೨೪ರಷ್ಟು ಆದಾಯ ನೀಡುವ ಮದ್ಯದ ವಲಯದ ನಿಯಂತ್ರಣಕ್ಕೆ ಯಾವ ಸರಕಾರವೂ ಕೈಹಾಕುವುದಿಲ್ಲ. ಕುಡಿತದ ಅಮಲು, ತನ್ಮೂಲಕ ಆದ ಅವಘಡ ಮತ್ತು ಕಿತ್ತಾಟದಲ್ಲಿ ಕಳೆದ ವರ್ಷ ಬೆಂಗಳೂರಿನಲ್ಲಿ ೪ ಮಂದಿ
ಜೀವ ತೆತ್ತಿದ್ದಾರೆ.

ಬೆಂಗಳೂರಿನಲ್ಲಿ ಹೊಸವರ್ಷದ ಸಂಭ್ರಮಾಚರಣೆಯು ಲಾಗಾಯ್ತಿನಿಂದಲೂ ಇದೆ. ಆದರೆ ಇಲ್ಲಿ ಐಟಿ ಉದ್ಯಮವು ಬೃಹತ್ ಪರಿಣಾಮದಲ್ಲಿ ‘ಲಾಗ್ ಇನ್’ ಆದ ನಂತರ, ಸಂಬಂಧಿತ ದೃಶ್ಯಾವಳಿಯಯಲ್ಲಿ ಭಾರಿ ಬದಲಾವಣೆಯಾಗಿದೆ ಎಂಬುದು ಹಿರಿಯರ ಅಂಬೋಣ. ಈ ಸಂಭ್ರಮಾಚರಣೆಯು ವರ್ಷದಿಂದ ವರ್ಷಕ್ಕೆ ಕುಡುಕರ, ಕಾಮುಕರ, ಕಿಡಿಗೇಡಿಗಳ ಮತ್ತು ಪುಂಡರ ಆಡುಂಬೊಲವಾಗಿ ಮಾರ್ಪಡುತ್ತಿದ್ದು, ಪ್ರಜ್ಞಾವಂತರು ಮನೆಯಿಂದ ಹೊರಬಂದು ಭಾಗವಹಿಸಲು ಹಿಂದೇಟು ಹಾಕುತ್ತಿದ್ದಾರೆ. ಐಷಾರಾಮಿ ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಕೋರಮಂಗಲ, ಎಂ.ಜಿ. ರಸ್ತೆಗಳು ಮೋಜು-ಮಸ್ತಿಯ ತಾಣಗಳಾಗಿಬಿಟ್ಟಿದ್ದು, ಅಲ್ಲಿಗೆ ಆ
ದಿನ ಬಂದು ಮಜಾ ಉಡಾಯಿಸದಿದ್ದರೆ ಜೀವನ ನಿರರ್ಥಕ ಎನ್ನುವ ಭಾವನೆ ಯುವಪೀಳಿಗೆಯಲ್ಲಿ ಹರಳುಗಟ್ಟುತ್ತಿದೆ. ಅಂದು ಅಕಸ್ಮಾತ್ ಅಲ್ಲಿಗೆ ಹೋಗಲಾಗದಿದ್ದರೆ, ಬದುಕಿನ ಹಳಿಯೇ ತಪ್ಪಿದಂತೆ, ಅಮೂಲ್ಯವಾದ ಏನನ್ನೋ ಕಳೆದುಕೊಂಡಂತೆ ಹಳಹಳಿಸುವವರೂ ಇದ್ದಾರೆ!

ಲಭ್ಯವಿರುವ ಸ್ಥಳದಲ್ಲಿ ವಾಸ್ತವಿಕ ಸಾಮರ್ಥ್ಯಕ್ಕಿಂತ ೩ ಪಟ್ಟು ಹೆಚ್ಚು ಜನರ ದಟ್ಟಣೆ ಏರ್ಪಡುತ್ತದೆ. ಅರೆಬರೆ ಉಡುಪು ತೊಟ್ಟವರ ಮೋಹಕ ದಂಡು, ತಲೆಗೇರಿದ
ಮದ್ಯದ ನಶೆಯಿಂದಾಗಿ ಹುಚ್ಚುಖೋಡಿ ಮನಸ್ಸು ಮಾಡಬಾರದ್ದನ್ನು ಮಾಡುತ್ತದೆ. ಇಂಥ ಸ್ಥಳ ಹೆಣ್ಣು ಮಕ್ಕಳಿಗೆ ಸರಿಯಾದುದಲ್ಲ ಎಂಬ ಸತ್ಯವನ್ನು
ಪ್ರತಿವರ್ಷವೂ ದಪ್ಪಕ್ಷರದಲ್ಲಿ ನಿವೇದಿಸಿದರೂ, ಕಾನೂನು ಮತ್ತು ಸುವ್ಯವಸ್ಥೆಯ ರಕ್ಷಕರು ಈ ನಿಟ್ಟಿನಲ್ಲಿ ಎಚ್ಚರಿಸಿದರೂ, ಈ ಹುಚ್ಚಿನ ಮತ್ತು ಉದ್ವೇಗದ ಜಾತ್ರೆಗೆ
ಬರುವ ಹೆಣ್ಣು ಮಕ್ಕಳಿದ್ದಾರೆ. ಸ್ವಾತಂತ್ರ್ಯದ ಹೆಸರಲ್ಲಿ ಅವರು ತಮ್ಮ ಹಕ್ಕನ್ನು ಜೋರುದನಿಯಲ್ಲಿ ಪ್ರತಿಪಾದಿಸುತ್ತಾರೆ.

ಆಧುನಿಕ ವಿಚಾರಧಾರೆಯವರು, ಪ್ರಗತಿಪರರು ಎನಿಸಿಕೊಂಡವರು ಅವರಿಗೆ ದನಿಗೂಡಿಸುತ್ತಾರೆ. ಮಹಿಳಾ ಸ್ವಾತಂತ್ರ್ಯವನ್ನು ಮೊಟಕುಗೊಳಿಸಬಾರದು ಎಂದು
ಬೊಬ್ಬೆಹಾಕುತ್ತಾರೆ. ಆದರೆ ಅಹಿತಕರ ಘಟನೆಯೇ ನಾದರೂ ಸಂಭವಿಸಿದಲ್ಲಿ ಏರುದನಿಯಲ್ಲಿ ಪೊಲೀಸರನ್ನು ದೂರುವುದು ಇವರೇ! ತಮ್ಮ ಕರ್ತವ್ಯ ಮಾಡುವ ಪೊಲೀಸರಿಗೂ ಇತಿಮಿತಿಗಳು ಇರುತ್ತವೆ ಎನ್ನುವ ವಾಸ್ತವವನ್ನು ಇವರು ತಿಳಿಯುವ ಪ್ರಯತ್ನ ಮಾಡುವುದಿಲ್ಲ. ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ ಪ್ರತಿ ಯೊಬ್ಬರಿಗೂ ವೈಯಕ್ತಿಕವಾಗಿ ರಕ್ಷಣೆ ಕೊಡಲು ಸಾಧ್ಯವಿಲ್ಲ; ತಂತಮ್ಮ ರಕ್ಷಣೆಯ ಜವಾಬ್ದಾರಿ ಅವರದ್ದೇ ಆಗಿರುತ್ತದೆ. ಈ ನೆಲೆಗಳಲ್ಲಿ ಕಾಣಬರುವ ಹೊಸವರ್ಷದ ಸಂಭ್ರಮಾಚರಣೆಯ ಮತ್ತೊಂದು ಗಮನಾರ್ಹ ಅಂಶವೆಂದರೆ, ಈ ನಾಡಿನ ನುಡಿ-ಸಂಸ್ಕೃತಿಯ ಗಂಧ-ಗಾಳಿ ಗೊತ್ತಿಲ್ಲದ ವಲಸಿಗರೇ ಅಲ್ಲಿ ಹೆಚ್ಚಿರುತ್ತಾರೆ ಎಂಬುದು; ಸ್ಥಳೀಯರು ಇದ್ದರೂ ಅವರ ಸಂಖ್ಯೆ ಗಮನಾರ್ಹವಾಗಿರುವುದಿಲ್ಲ.

ಇದಕ್ಕಿಂತಲೂ ಹೆಚ್ಚು ಜನಸಂದಣಿ ಕಾಣಬರುವ ಸಾಗರ-ಶಿರಸಿ ಜಾತ್ರೆ, ಹುಬ್ಬಳ್ಳಿಯ ಸಿದ್ಧಾರೂಢರ ತೇರು, ಉಳವಿ-ಸವದತ್ತಿಗಳಲ್ಲಿನ ಜಾತ್ರೆ, ಬೆಂಗಳೂರಿನ
ಬಸವನಗುಡಿ ಕಡಲೇಕಾಯಿ ಪರಿಷೆ, ನಗರ ದೇವತೆ ಅಣ್ಣಮ್ಮನ ಉತ್ಸವ ಮುಂತಾದ ಸಂದರ್ಭಗಳಲ್ಲಿ ಕಾಣಬರದ ಅಹಿತಕರ ಘಟನೆಗಳು, ಸುಶಿಕ್ಷಿತರೇ (!)
ಹೆಚ್ಚುವ ಸೇರುವ ಹೊಸ ವರ್ಷದ ಸಂಭ್ರಮಾಚರಣೆಯ ವೇಳೆ ನಡೆಯುವುದು, ಅವು ಬ್ರೇಕಿಂಗ್ ನ್ಯೂಸ್ ಮತ್ತು ಹೆಡ್‌ಲೈನ್ ಆಗುವುದು ಆಶ್ಚರ್ಯಕರ. ಈ
ಸಂಭ್ರಮಾಚರಣೆಯ ವೇಳೆ ಕಾಣಬರುವ ಮತ್ತೊಂದು ವಿಶೇಷವೆಂದರೆ, ಐಷಾರಾಮಿ ಹೋಟೆಲ್‌ಗಳಲ್ಲಿ ರೂಮು ಮತ್ತು ಟೇಬಲ್ ಕಾದಿರಿಸುವುದು, ಡಾನ್ಸ್ -ರ್‌ನಲ್ಲಿ ಹೆಜ್ಜೆಹಾಕುವುದು. ಸಾಮಾನ್ಯ ದಿನಗಳಲ್ಲೇ ಇವುಗಳು ಕೈಗೆಟುಕುವಂತಿರುವುದಿಲ್ಲ.

ಹೊಸ ವರ್ಷದ ವೇಳೆ ಯಂತೂ ಅಲ್ಲಿನ ದರಗಳನ್ನು ಕೇಳಿದರೆ ಶ್ರೀಸಾಮಾನ್ಯರು ಮೂರ್ಛೆ ಹೋಗುವಷ್ಟು ತಾರಕಕ್ಕೇರಿರುತ್ತದೆ. ಹೊಸವರ್ಷದ ಆಚರಣೆಯ ವೇಳೆ ನಡೆದ ಕುಕೃತ್ಯಗಳು, ವಾಹನ ಅಪಘಾತಗಳು ಮತ್ತು ಹೊಡೆದಾಟ- ಬಡಿದಾಟಗಳ ವಿವರವನ್ನು ಮರುದಿನ ಮಾಧ್ಯಮಗಳಲ್ಲಿ ಕಂಡಾಗ, ಈ ಭಾಗ್ಯಕ್ಕೆ ಈ ಸಂಭ್ರಮಾಚರಣೆ ಬೇಕಿತ್ತೇ? ಎಂದು ಪ್ರಜ್ಞಾವಂತರು ವಿಷಾದಿಸುತ್ತಾರೆ. ಹಲವರು ಸರಕಾರವನ್ನು, ಪೊಲೀಸರನ್ನು ತರಾಟೆಗೆ ತೆಗೆದುಕೊಂಡು ಕಾನೂನು-ಸುವ್ಯವಸ್ಥೆಯನ್ನು ಮನಸ್ವೀ ಟೀಕಿಸುತ್ತಾರೆ.

ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂದು ಪುಕ್ಕಟೆ ಸಲಹೆಯನ್ನು ಕೊಡುತ್ತಾರೆ. ಆದರೆ ಸಮಸ್ಯೆಯ ಮೂಲವನ್ನರಿತು ಅದನ್ನು ಹೋಗಲಾಡಿಸುವ ಚಿಂತನೆ
ನಡೆಯುವುದಿಲ್ಲ. ಮುಂದಿನ ವರ್ಷ ಇಂಥ ಘಟನೆಗಳು ಪುನರಾವರ್ತನೆಯಾದಾಗಲೇ, ಇಂಥ ಸಲಹೆಗಳು ಮತ್ತು ಚಿಂತನೆ ಮುನ್ನೆಲೆಗೆ ಬರುತ್ತವೆ. ಈ ಬಾರಿಯ ಹೊಸ ವರ್ಷದ ಸಂಭ್ರಮಾಚರಣೆಯಾದರೂ ಕಿಡಿಗೇಡಿಗಳ ಉತ್ಸವ ಆಗದಿರಲಿ ಎಂಬುದು ಪ್ರಜ್ಞಾವಂತರ ಆಶಯ.

(ಲೇಖಕರು ಬ್ಯಾಂಕಿಂಗ್ ತಜ್ಞರು, ರಾಜಕೀಯ
ವಿಶ್ಲೇಷಕರು)