Sunday, 15th December 2024

ಸೇನಾಪಡೆ ಸಿಬ್ಬಂದಿಗೆ ವಿಶೇಷ ರಿಯಾಯ್ತಿ ಪ್ರಕಟಿಸಿದ ಪ್ರಾವಿಡೆಂಟ್ ಹೌಸಿಂಗ್

ಬೆಂಗಳೂರು: ಮಧ್ಯಮ ವಿಭಾಗದ ವಸತಿ ಯೋಜನೆಗಳ ಮೇಲೆ ಗಮನ ಕೇಂದ್ರೀಕರಿಸಿರುವ ಪುರವಂಕರ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿರುವ ಪ್ರಾವಿಡೆಂಟ್ ಹೌಸಿಂಗ್ ಲಿಮಿಟೆಡ್, ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮತ್ತು ನಿವೃತ್ತ ಸಿಬ್ಬಂದಿಯು ಸ್ವಂತ ಮನೆ ಹೊಂದು ವುದಕ್ಕೆ ನೆರವಾಗಲು ಅನನ್ಯ ಯೋಜನೆಯೊಂದನ್ನು ಪ್ರಕಟಿಸಿದೆ. ನಿರ್ಮಾಣ ಹಂತದಲ್ಲಿ ಇರುವ ತನ್ನ ವಿವಿಧ ವಸತಿ ಯೋಜನೆಗಳಲ್ಲಿ ಸಶಸ್ತ್ರ ಪಡೆಗಳ ಅರ್ಹ ಸಿಬ್ಬಂದಿಗೆ ಶೇಕಡಾ 2 ರಷ್ಟು ವಿಶೇಷ ರಿಯಾಯ್ತಿ ನೀಡಲಿದೆ.

ಇತ್ತೀಚಿನ ವರದಿಗಳ ಪ್ರಕಾರ, ಭಾರತವು ಸುಮಾರು 1.4 ದಶಲಕ್ಷದಷ್ಟು ಸೇನಾ ಸಿಬ್ಬಂದಿಯನ್ನು ಮತ್ತು ಅಂದಾಜು 2.6 ದಶಲಕ್ಷದಷ್ಟು ನಿವೃತ್ತ ಸೇನಾ ಸಿಬ್ಬಂದಿಯನ್ನು ಹೊಂದಿದೆ. ಪ್ರಾವಿಡೆಂಟ್ ಸಮುದಾಯದಲ್ಲಿ ಮನೆ ಹೊಂದಲು ಇವರಿಗೆಲ್ಲ ಸಹಾಯ ಮಾಡುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಈ ನಿಟ್ಟಿನಲ್ಲಿ ಪ್ರಾವಿಡೆಂಟ್ ಹೌಸಿಂಗ್‌ ಹೊಂದಿರುವ ವಿಶೇಷ ಬದ್ಧತೆಯನ್ನು ಕರ್ನಾಟಕ ಮತ್ತು ಕೇರಳ ಸಬ್ ಏರಿಯಾದ ಎವಿಎಸ್‌ಎಂ ಜನರಲ್ ಆಫೀಸರ್ ಕಮಾಂಡಿಂಗ್ (ಜಿಒಸಿ) ಮೇಜರ್ ಜನರಲ್ ರವಿ ಮುರುಗನ್ ಅವರಿಗೆ ಅವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಹಸ್ತಾಂತರಿಸುವ ಮೂಲಕ ಕಾರ್ಯಗತಗೊಳಿಸಲಾಗಿದೆ.

‘ವಸತಿ ನಿರ್ಮಾಣ ಉದ್ಯಮದಲ್ಲಿ ಪ್ರಥಮ ಬಾರಿಗೆ ಹಲವಾರು ವಿಶಿಷ್ಟ ಉಪಕ್ರಮಗಳನ್ನು ಕಾರ್ಯಗತಗೊಳಿಸಿರುವ ಹೆಗ್ಗಳಿಕೆ ಹೊಂದಿರುವ ಪ್ರಾವಿಡೆಂಟ್‌ ಹೌಸಿಂಗ್‌, ಸಶಸ್ತ್ರ ಪಡೆಗಳ ಸಿಬ್ಬಂದಿಯು, ದೇಶಬಾಂಧವರಿಗೆ ಒದಗಿಸುವ ರಕ್ಷಣೆಗಾಗಿ ನಮ್ಮ ಗೌರವ ತೋರಿಸಲು ನಾವು ಬಯಸುತ್ತೇವೆ. ನಮ್ಮ ಉದ್ಯೋಗಿಗಳು ಕಂಪನಿಗೆ ಸೇವೆ ಸಲ್ಲಿಸುವಂತೆಯೇ, ನಮ್ಮ ಸೈನಿಕರು ನಮ್ಮ ದೇಶಕ್ಕೆ ಹೆಮ್ಮೆಯಿಂದ ಮತ್ತು ವಿಭಿನ್ನ ರೀತಿಯಲ್ಲಿ ಸೇವೆ ಸಲ್ಲಿಸುತ್ತಾರೆ. ಸೇನಾ ಸಿಬ್ಬಂದಿಗೆ ನಮ್ಮ ಕೃತಜ್ಞತೆ ವ್ಯಕ್ತಪಡಿಸುವ ಉದ್ದೇಶಕ್ಕೆ, ಅವರನ್ನು ಪ್ರಾವಿಡೆಂಟ್ ಹೋಮ್‌ಗೆ ಆಹ್ವಾನಿಸುವ ಆಲೋಚನೆ ರೂಪುಗೊಂಡಿದೆ’ ಎಂದು ಪ್ರಾವಿಡೆಂಟ್ ಹೌಸಿಂಗ್‌ನ ಸಿಇಒ ಮಲ್ಲಣ್ಣ ಸಾಸಲು ಅವರು ಹೇಳಿದ್ದಾರೆ.

ಸೇನೆ, ನೌಕಾಪಡೆ ಮತ್ತು ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲ ಸಿಬ್ಬಂದಿ ಮತ್ತು ನಿವೃತ್ತ ಸೈನಿಕರ ಸದಸ್ಯರು, ಸೇವೆ ಸಲ್ಲಿಸುತ್ತಿರುವ ಮತ್ತು ನಿವೃತ್ತ ಸದಸ್ಯರ ಬಾಳಸಂಗಾತಿ, ಮಕ್ಕಳು ಮತ್ತು ಅಲ್ಪಾವಧಿ ಸೇವೆಯ (ಶಾರ್ಟ್‌ ಸರ್ವೀಸ್‌ ಕಮಿಷನ್‌) ಅವಧಿ ಪೂರ್ಣಗೊಳಿಸಿದ ಅಧಿಕಾರಿಗಳು ಈ ರಿಯಾಯ್ತಿ ಪಡೆಯಲು ಅರ್ಹರಾಗಿದ್ದಾರೆ. ಸೇನೆಯಲ್ಲಿ ಐದು ವರ್ಷಕ್ಕಿಂತ ಕಡಿಮೆ ಸೇವೆ ಹೊಂದಿರುವ ವ್ಯಕ್ತಿಗಳು ಈ ರಿಯಾಯ್ತಿಗೆ ಅರ್ಹ ರಾಗಿರುವುದಿಲ್ಲ.

ದೇಶದ ಪ್ರಮುಖ ಒಂಬತ್ತು ನಗರಗಳಲ್ಲಿ ಪ್ರಾವಿಡೆಂಟ್ ಹೌಸಿಂಗ್ 12 ವಸತಿ ನಿರ್ಮಾಣ ಯೋಜನೆಗಳನ್ನು ಹೊಂದಿದೆ. 2024ರ ಡಿಸೆಂಬರ್ 31ರವರೆಗೆ ಜಾರಿಯಲ್ಲಿ ಇರುವ ಮತ್ತು ಹೊಸದಾಗಿ ಆರಂಭಿಸುವ ಯೋಜನೆಗಳಲ್ಲಿ ರಿಯಾಯ್ತಿಗಳನ್ನು ನೀಡಲಾಗುವುದು. ತದನಂತರ ಈ ರಿಯಾಯ್ತಿಯನ್ನು ಮತ್ತೊಮ್ಮೆ ಪರಿಶೀಲಿಸಲಾಗುವುದು.